ಅಂದು ಕಾಂಚಾಣ; ಇಂದು ತನಿಖೆಯ ತಲ್ಲಣ
ಬಳ್ಳಾರಿ: ಅಕ್ರಮ ಅದಿರು ರಫ್ತು ಪ್ರಕರಣ (ಏಳು ಬಂದರುಗಳ ಮೂಲಕ)ವನ್ನು ಸಿಬಿಐ ತನಿಖೆಗೆ ವಹಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ನಿರ್ಧರಿಸಿರುವುದು ಇಡೀ ಗಣಿ ವಲಯವನ್ನು ತಲ್ಲಣಗೊಳಿಸಿದೆ.
ಅಕ್ರಮ ಗಣಿಗಾರಿಕೆ ಕುರಿತು ಸಿಬಿಐ ತನಿಖೆ ಇಷ್ಟಕ್ಕೆ ನಿಲ್ಲುತ್ತದೆ ಎಂದು ತನಿಖೆಯ ವ್ಯಾಪ್ತಿಯಿಂದ ದೂರವಿದ್ದು ನಿಟ್ಟುಸಿರು ಬಿಟ್ಟ ಅದಿರು ರಫ್ತುದಾರರು, ಅದಿರು ಸಾಗಾಣಿಕೆದಾರರು, ಗಣಿ ಮಾಲೀಕರು, ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸಚಿವ ಸಂಪುಟದ ನಿರ್ಧಾರ ನಿದ್ದೆಗೆಡಿಸಿದೆ. ಅಂದು ಕೈಯಲ್ಲಿ ಝಣ ಝಣ ಕಾಂಚಾಣ, ಇಂದು ಮನದಲ್ಲಿ ತನಿಖೆಯ ತಲ್ಲಣ ಎನ್ನುವಂತಾಗಿದೆ. ಇನ್ನು ಲಾಡ್ ಸಹೋದರರ ಜಗಳದಲ್ಲಿ ನಾವು ಬಲಿಪಶುವಾದೆವು ಎಂದು ಪರಿತಪಿಸುವ ಮಾತುಗಳೂ ಗಣಿ ವಲಯದಲ್ಲಿ ಕೇಳಿಬರುತ್ತಿವೆ.
ಈ ಹಿಂದೆ ಆಂಧ್ರದಲ್ಲಿ ಜನಾರ್ದನ ರೆಡ್ಡಿ ಪಾಲುದಾರಿಕೆಯ ಓಎಂಸಿ ಕಂಪನಿ ಅಕ್ರಮ ಪ್ರಕರಣವನ್ನು ಆಂಧ್ರ ಸರ್ಕಾರ ಸಿಬಿಐಗೆ ವಹಿಸಿದ್ದರೆ, ರಾಜ್ಯದಲ್ಲಿ ಡೆಕ್ಕನ್ ಮೈನಿಂಗ್ ಸಿಂಡಿಕೇಟ್, ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ, ಎಎಂಸಿ ಸೇರಿದಂತೆ ನಾಲ್ಕೈದು ಪ್ರಕರಣಗಳನ್ನು ಮಾತ್ರ ಸಿಬಿಐಗೆ ವಹಿಸಲಾಗಿತ್ತು. ಎರಡು ವರ್ಷಗಳಿಂದ ಇವುಗಳ ತನಿಖೆ ನಡೆದಿದ್ದು, ಬೇಲೆಕೇರಿ ಅದಿರು ನಾಪತ್ತೆ ಪ್ರಕರಣವೊಂದರಲ್ಲೇ ಇದೀಗ ನಾಲ್ಕು ಶಾಸಕರು, ಅಧಿಕಾರಿಗಳು ಸೇರಿದಂತೆ ಬಂಧಿಸಲ್ಪಟ್ಟವರ ಸಂಖ್ಯೆ 25ರ ಗಡಿ ದಾಟಿದೆ. ತನಿಖೆ ಪ್ರಗತಿ ಹಂತದಲ್ಲಿದ್ದು ಇನ್ನೂ ಸಿಬಿಐ ಕೆಂಗಣ್ಣಿಗೆ ಯಾರ್ಯಾರು ಗುರಿಯಾಗುತ್ತಾರೆ ಎಂಬ ಆತಂಕವಿದೆ. ಇದೀಗ ದೇಶದ ಏಳು ಬಂದರುಗಳಲ್ಲಿ ಅಕ್ರಮ ಅದಿರು ರಫ್ತು ಸಿಬಿಐ ತನಿಖೆಗೆ ವಹಿಸುವುದರಿಂದ ಬಂಧನದ ಮಹಾಪರ್ವವೇ ಆರಂಭವಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.
ಸಂಪುಟದ ನಿರ್ಧಾರದಿಂದ ದಿಗ್ಭ್ರಮೆ: ಹೊನ್ನು, ಮಣ್ಣಿನ ಸಹವಾಸ ತೀರಾ ಸೂಕ್ಷ್ಮ. ಅತಿಯಾದರೆ, ಸ್ವಲ್ಪ ಏಮಾರಿದರೂ ಫಜೀತಿ ತಪ್ಪಿದ್ದಲ್ಲ ಎನ್ನುವುದಕ್ಕೆ ಮಣ್ಣಿನ ವಿಷಯದಲ್ಲಿ ಗಣಿ ಮಾಲೀಕರು, ಟ್ರಾನ್ಸ್ಪೋರ್ಟ್ಗಳು, ಎಕ್ಸ್ಪೋರ್ಟ್ಗಳು ಇದೀಗ ಎದುರಿಸುತ್ತಿರುವ ಸಿಬಿಐ ತನಿಖೆ ಹಾಗೂ ಬಂಧನ ಭೀತಿಯೇ ಉದಾಹರಣೆ. ಈ ಮೊದಲು ಕೇವಲ ನಾಲ್ಕೈದು ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಿಕೊಟ್ಟಿದ್ದರಿಂದ ಸಾಕಷ್ಟು ಭೀತಿ ಇತ್ತು, ಇದೀಗ ಇಡೀ ಅದಿರು ರಫ್ತು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವುದರಿಂದ ಹುಟ್ಟಿರುವ ಭೀತಿ ಹೇಳತೀರದು. ಸಚಿವ ಸಂಪುಟದ ನಿರ್ಧಾರ ಹೊರಬಿದ್ದ ತಕ್ಷಣವೇ ಅದಿರು ಎಕ್ಸ್ಪೋರ್ಟ್ಸ್, ಟ್ರಾನ್ಸ್ಪೋಟರ್ಸ್ಗಳು, ಗಣಿ ಮಾಲೀಕರು ದಿಗ್ಭ್ರಮೆಗೊಂಡಿದ್ದಾರೆ. ಕೆಲವರು ಒಬ್ಬರಿಗೊಬ್ಬರು ಫೋನಾಯಿಸುವ ಮೂಲಕ ಇದೇನು ಬಂತು ಫಜೀತಿ ಎಂದು ಆತಂಕ ವ್ಯಕ್ತಪಡಿಸಿದ ಉದಾಹರಣೆಗಳು ಜಿಲ್ಲೆಯಲ್ಲಿ ಕೇಳಿಬಂದಿವೆ.
3.04 ಕೋಟಿ ಮೆಟ್ರಿಕ್ ಟನ್ ಅದಿರು ಅಕ್ರಮ ರಫ್ತು: ರಾಜ್ಯದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರಿನಿಂದ ದೇಶದ ಏಳು ಬಂದರುಗಳಿಂದ 2003-04ರಿಂದ 2009-10ರವರೆಗೆ ಪರವಾನಗಿ ಇಲ್ಲದೆ ರಫ್ತು ಮಾಡಿದ್ದ ಕುಖ್ಯಾತಿ ರಾಜ್ಯದ ಅದಿರು ಗಣಿಗಾರಿಕೆಗೆ ಇದೆ. ಏಳು ವರ್ಷಗಳ ಅವಧಿಯಲ್ಲಿ 3.04 ಕೋಟಿ ಮೆಟ್ರಿಕ್ ಟನ್ ಅದಿರನ್ನು ಅಕ್ರಮವಾಗಿ ರಫ್ತು ಮಾಡಲಾಗಿದೆ. 10 ವರ್ಷಗಳಿಂದ ಅದಿರು ಅಕ್ರಮ ರಫ್ತು ನಡೆದಿತ್ತು ಎಂಬುದು ಸಿಇಸಿ ವರದಿಯಿಂದ ಬಯಲಾಗಿದೆ. 2003-04ರಿಂದ 2009-10ರವರೆಗೆ 7 ವರ್ಷಗಳಲ್ಲಿ ಕೇವಲ 4,70,43,196 ಮೆಟ್ರಿಕ್ ಟನ್ ಅದಿರಿಗೆ ಮಾತ್ರ ಪರವಾನಗಿ ನೀಡಿದ್ದರೆ, ರಫ್ತುದಾರರು 7,75,33,925 ಮೆಟ್ರಿಕ್ ಟನ್ ಅದಿರನ್ನು ವಿವಿಧ ಬಂದರುಗಳ ಮೂಲಕ ರಫ್ತು ಮಾಡಿದ್ದರು. ಅಂದರೆ ಸುಮಾರು 3,04,90,729 ಮೆಟ್ರಿಕ್ ಟನ್ ಅದಿರು ಪರವಾನಗಿ ಇಲ್ಲದೆ ದೇಶದಿಂದ ರಫ್ತಾಗಿರುವುದು ಎಂಥವರಿಗೂ ಆಶ್ಚರ್ಯ ಮೂಡಿಸದೆ ಇರಲಾರದು.
ಅಧಿಕಾರಿಗಳಿಗೂ ಬಂತು ಕುತ್ತು: ಈ ನಿರ್ಧಾರ 280ಕ್ಕೂ ಹೆಚ್ಚು ಎಕ್ಸ್ಪೋರ್ಟ್ಗಳ ಆತಂಕಕ್ಕೆ ಕಾರಣವಾಗಿದ್ದು, ಅದಿರನ್ನು ಬಂದರುಗಳ ಮೂಲಕ ನೇರವಾಗಿ ಸಾಗಿಸಲು ಎಕ್ಸ್ಪೋರ್ಟ್ಗಳ ಪಾತ್ರ, ಅದಿರನ್ನು ಬಂದರಿಗೆ ಸಾಗಿಸುವಲ್ಲಿ ಟ್ರಾನ್ಸ್ಪೋರ್ಟ್ಗಳ ಪಾತ್ರ, ಟ್ರಾನ್ಸ್ಪೋರ್ಟ್ಗಳಿಗೆ ಗಣಿ ಮಾಲೀಕರು ಮಾರಾಟ ಮಾಡಿದ್ದರಿಂದ ಗಣಿ ಮಾಲೀಕರಿಗೂ ಭೀತಿ ಎದುರಾಗಿದೆ. ಇಷ್ಟಕ್ಕೆ ಸಿಬಿಐ ತನಿಖೆ ಮುಗಿಯುವುದಿಲ್ಲ, ಈಗಾಗಲೇ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಅದಿರು ಸಾಗಾಣಿಕೆ ತಡೆಯುವಲ್ಲಿ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಗಣಿ, ಅರಣ್ಯ, ಪೊಲೀಸ್ ಇಲಾಖೆ ಅಧಿಕಾರಿಗಳ ವಿಚಾರಣೆ ನಡೆಸುವುದರಿಂದ, ಇದೀಗ ಬಂದರು ಮೂಲಕ ಅದಿರು ಸಾಗಿಸುವ ಪ್ರಕರಣದಲ್ಲಿ ಈ ಮೂರು ಇಲಾಖೆ ಅಧಿಕಾರಿಗಳಿಗೂ ತನಿಖೆ ಭೀತಿ ಎದುರಾಗುವುದರಲ್ಲಿ ಎರಡು ಮಾತಿಲ್ಲ.
- ಶಶಿಧರ ಮೇಟಿ