ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಾರಾಗೃಹದಲ್ಲೇ ಬಾರ್, ರಿಯಲ್ ಎಸ್ಟೇಟ್ ದಂಧೆ!

ಕೈದಿಗಳನ್ನು ಹದ್ದುಬಸ್ತಿನಲ್ಲಿಡಲು ಜೈಲು ಅಧಿಕಾರಿಗಳಿರುತ್ತಾರೆ. ಆದರೆ, ತುಮಕೂರು ಹೊರವಲಯದಲ್ಲಿರುವ ಉಪ ಕಾರಾಗೃಹ...

Srinivasa Murthy VN
Updated On : 19 Oct 2013, 12:16 pm

ಕನ್ನಡಪ್ರಭ ವಾರ್ತೆ, ತುಮಕೂರು, ಅ.18-
ಕೈದಿಗಳನ್ನು ಹದ್ದುಬಸ್ತಿನಲ್ಲಿಡಲು ಜೈಲು ಅಧಿಕಾರಿಗಳಿರುತ್ತಾರೆ. ಆದರೆ, ತುಮಕೂರು ಹೊರವಲಯದಲ್ಲಿರುವ ಉಪ ಕಾರಾಗೃಹ ಮಾತ್ರ ಇದಕ್ಕೆ ಹೊರತಾಗಿದೆ. ಇಲ್ಲಿನ ಕೈದಿಗಳಿಗೆ ಮದ್ಯ, ಗಾಂಜಾ ಸೇವನೆ ಸೇರಿದಂತೆ ಇನ್ನಿತರ ಅಕ್ರಮ ಚಟುವಟಿಕೆಗಳಿಗೆ ಅಧಿಕಾರಿಗಳೇ ಬೆನ್ನೆಲುಬಾಗಿ ನಿಂತಿದ್ದು, ಈ ಉಪ ಕಾರಾಗೃಹ ಬಾರ್ ಆ್ಯಂಡ್ ರೆಸ್ಟೋರೆಂಟ್ ಆಗಿದೆ!
ಈ ಜೈಲಿನಲ್ಲಿ ಮದ್ಯ, ಗಾಂಜಾ, ಚಿಕನ್, ಮಟನ್ ಅಷ್ಟೇಕೆ ರಿಯಲ್ ಎಸ್ಟೇಟ್ ದಂಧೆಗೂ ಮುಕ್ತ ಅವಕಾಶವಿದೆ. ಕೈದಿಗಳ ಮೇಲೆ ಹದ್ದಿನ ಕಣ್ಣಿಡಬೇಕಿದ್ದ ಅಧಿಕಾರಿಗಳು ಮಾತ್ರ ಅವರೊಂದಿಗೆ ಶಾಮೀಲಾಗಿ ತಮ್ಮ ಕರ್ತವ್ಯ ಮರೆತಿದ್ದಾರೆ. ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ನಡೆದ ದಾಳಿ ವೇಳೆ ಈ ಮಾಹಿತಿ ಬಹಿರಂಗವಾಗಿದೆ.
ಈ ಉಪ ಕಾರಾಗೃಹದ 5 ಸೆಲ್ ಹಾಗೂ 8 ಬ್ಯಾರಕ್‌ಗಳಲ್ಲಿ ಸುಮಾರು 330 ಕೈದಿಗಳಿದ್ದಾರೆ. 10 ಪೊಲೀಸ್ ಅಧಿಕಾರಿಗಳು ಮತ್ತು 50 ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ, ಮದ್ಯದ ಬಾಟಲ್‌ಗಳು, ಗಾಂಜಾ ಸೊಪ್ಪು, ಚಿಕನ್, ಮಟನ್, ಕಾಫಿ, ಟೀ, ಸಕ್ಕರೆ, ಮೊಬೈಲ್‌ಗಳು, ಜಮೀನಿನ ಪತ್ರಗಳನ್ನು ವಶಪಡಿಸಿಕೊಂಡಿಸಿದೆ.  ಅಡುಗೆ ಕೋಣೆಪರಿಶೀಲಿಸಿದಾಗ, ಚಿಮಣಿ ಒಲೆಯಲ್ಲಿ ಇದ್ದಂಥ 5 ಮೊಬೈಲ್ ಹ್ಯಾಂಡ್‌ಸೆಟ್‌ಗಳು ಹಾಗೂ 6 ಮೊಬೈಲ್ ಚಾರ್ಜರ್‌ಗಳನ್ನು ವಶಪಡಿಸಿಕೊಳ್ಳಲಾಯಿತು.

ಗ್ರಂಥಾಲಯ ಹೊಟೇಲ್!: ನಂತರ ಗ್ರಂಥಾಲಯ ಕೊಠಡಿ ಪರಿಶೀಲನೆ ವೇಳೆ, ಗ್ರಂಥಾಲಯದಲ್ಲಿನ ಔಷಧಾಲಯವನ್ನು ಡಾಬಾ - ಹೊಟೇಲ್ ರೀತಿ ಪರಿವರ್ತಿಸಲಾಗಿದ್ದು ಕಂಡು ಬಂತು. ರಿಫೈಂಡ್ ಆಯಿಲ್, ಲೈಫ್ ಬಾಯ್ ಸೋಪ್ ರಿನ್ ಬಟ್ಟೆ ಸೋಪ್, ಸಿಗರೇಟ್‌ಗಳನ್ನು ಪೊಲೀಸ್ ತಂಡ ವಶಪಡಿಸಿಕೊಂಡಿತು. ಕ್ಯಾಷ್‌ಬಾಕ್ಸ್‌ನಲ್ಲಿದ್ದ 17200 ವಶಪಡಿಸಿಕೊಳ್ಳಲಾಗಿದೆ. ಕೈದಿಗಳಿಗೆ ಬಿರ್ಯಾನಿ, ಚಿಕನ್ ಮಸಾಲಾ, ಆಮ್ಲೆಟ್, ಎಣ್ಣೆ ಇತ್ತು. ಅಲ್ಲದೆ, ದಿನಬಳಕೆ ವಸ್ತುಗಳು ಸೇರಿದಂತೆ ಬೀಡಿ, ಸಿಗರೇಟು, ಸೋಪು ಕೈದಿಗಳಿಗೆ ಮಾರಾಟ ಮಾಡಿ ಈ ಹಣ ಅದರಲ್ಲಿಡಲಾಗಿತ್ತು.  ಅಡುಗೆ ಕೋಣೆಯಲ್ಲಿ ಕೈದಿಗಳಿಗೆ ಮೊಬೈಲ್  ಕರೆ ಮಾಡಲು ವ್ಯವಸ್ಥಿತವಾಗಿ ಮೊಬೈಲ್ ಫೋನ್‌ಗಳನ್ನು ಒದಗಿಸಲಾಗುತ್ತಿತ್ತು.
ಕಾರಾಗೃಹದ ಜೈಲರ್‌ಗಳು ಮತ್ತು ಸಿಬ್ಬಂದಿ ಕೈದಿಗಳಿಗೆ ವಿಲಾಸಿ, ವೈಭವದ ಜೀವನ ನಡೆಸಲು ಅನುಕೂಲ ಮಾಡಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ, ಹೊರಗಿನವರ ಜತೆ ಕೈದಿಗಳು ಸಂಪರ್ಕ ಕಲ್ಪಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಮಾದಕ ದ್ರವ್ಯ ಕಾಯ್ದೆ ಮತ್ತು ಕೋಟ್ಪಾ ಕಾಯ್ದೆ ಅನ್ವಯ ಪ್ರಕರಣವನ್ನು ದಾಖಲು ಮಾಡಿಕೊಂಡು, ತನಿಖೆ ನಡೆಸಲಾಗುತ್ತಿದೆ. ಜಿಲ್ಲಾ ಎಸ್ಪಿ ರಮಣಗುಪ್ತ ಮಾರ್ಗದರ್ಶನದಲ್ಲಿ ಎಎಸ್ಪಿ ಲಕ್ಷ್ಮಣ್, ಎಲ್. ಜಗದೀಶ್, ರಾಘವೇಂದ್ರ, ಅಬ್ದುಲ್ ಖಾದರ್, ಗಿರಿ ಅವರು ದಾಳಿಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement