ಕನ್ನಡ ಕಡ್ಡಾಯಕ್ಕೆ ರಾಷ್ಟ್ರಪತಿ ಅಂಕಿತ ಅಗತ್ಯ
ಹೈಕೋರ್ಟ್ ಸೇರಿದಂತೆ ನ್ಯಾಯಾಂಗದ ಎಲ್ಲಾ ವ್ಯವಹಾರಗಳಲ್ಲಿ ಕನ್ನಡ ಕಡ್ಡಾಯವಾಗಬೇಕಿದೆ. ಆದರೆ, ಇದಕ್ಕೆ ರಾಷ್ಟ್ರಪತಿಯವರ...
ಬೆಂಗಳೂರು: ಹೈಕೋರ್ಟ್ ಸೇರಿದಂತೆ ನ್ಯಾಯಾಂಗದ ಎಲ್ಲಾ ವ್ಯವಹಾರಗಳಲ್ಲಿ ಕನ್ನಡ ಕಡ್ಡಾಯವಾಗಬೇಕಿದೆ. ಆದರೆ, ಇದಕ್ಕೆ ರಾಷ್ಟ್ರಪತಿಯವರ ಒಪ್ಪಿಗೆ ಬೇಕಿದ್ದು, ರಾಜ್ಯ ಸರ್ಕಾರ ಅವರಿಂದ ಅನುಮತಿ ಪಡೆಯಲು ಮುಂದಾಗಲಿ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎನ್.ಕುಮಾರ್ ಹೇಳಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಕನ್ನಡದಲ್ಲಿ ತೀರ್ಪು ನೀಡಿದ ನ್ಯಾಯಾಧೀಶರಿಗೆ ಗೌರವ ಸಮರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಚೆಂಡು ಸರ್ಕಾರದ ಅಂಗಳದಲ್ಲಿ: 1963ರಲ್ಲಿ ಕೇಂದ್ರ ಸರ್ಕಾರ ರೂಪಿಸಿದ ಅಧಿಕೃತ ಭಾಷಾ ಕಾಯ್ದೆ ಪ್ರಕಾರ ದೇಶಾದ್ಯಂತ ನ್ಯಾಯಾಂಗ ವ್ಯವಹಾರ ಇಂಗ್ಲಿಷ್ನಲ್ಲೇ ಇರಬೇಕು. ಆದರೆ, ರಾಜ್ಯದ ನ್ಯಾಯಾಂಗ ವ್ಯವಸ್ಥೆಯಲ್ಲಿ ಕನ್ನಡ ಕಡ್ಡಾಯಗೊಳಿಸಲು ಸರ್ಕಾರ ರಾಜ್ಯಪಾಲರ ಮೂಲಕ ರಾಷ್ಟ್ರಪತಿ ಅವರನ್ನು ಸಂಪರ್ಕಿಸಬೇಕು. ಅವರ ಮನವೊಲಿಸಿ ಒಪ್ಪಿಗೆ ಪಡೆಯಬೇಕು. ಹೀಗಾಗಿ ಕನ್ನಡ ಕಡ್ಡಾಯಕ್ಕೆ ಸಂಬಂಧಿಸಿದ ಚೆಂಡು ಸರ್ಕಾರದ ಅಂಗಳದಲ್ಲಿದೆ ಎಂದರು.
ರಾಷ್ಟ್ರಪತಿ ಅನುಮತಿ ಅಗತ್ಯ: ಕೇಂದ್ರ ಸರ್ಕಾರ ರೂಪಿಸಿದ ಅಧಿಕೃತ ಭಾಷಾ ಕಾಯ್ದೆ ಪ್ರಕಾರ, ಅಂದರೆ, ಸಂವಿಧಾನದ 3ನೇ ಅಧ್ಯಾಯದಲ್ಲಿ ಹೇಳಿರುವಂತೆ ನ್ಯಾಯಾಲಯದ ವ್ಯವಹಾರಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ನಡೆಸಬಹುದು. ಹಾಗೆಂದು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ನಲ್ಲಿ ಪ್ರಾದೇಶಿಕ ಭಾಷೆಯನ್ನು ಕಡ್ಡಾಯಗೊಳಿಸಲಾಗದು. ಇದಕ್ಕೆ ರಾಷ್ಟ್ರಪತಿ ಅನುಮತಿ ಅಗತ್ಯ. ಆದರೆ, ಅವರು ಈ ವಿಚಾರದಲ್ಲಿ ಈವರೆಗೂ ಯಾವ ರಾಜ್ಯಕ್ಕೂ ಅನುಮತಿ ನೀಡಿಲ್ಲ. ನಾವು ಅನುಮತಿ ಪಡೆಯಲು ಪ್ರಯತ್ನಿಸಬಹುದು ಎಂದೂ ನ್ಯಾ.ಕುಮಾರ್ ನುಡಿದರು.
ಇಷ್ಟರ ಮಧ್ಯೆಯೂ ನ್ಯಾಯಾಧೀಶರು ನ್ಯಾಯಾಂಗದ ವ್ಯವಹಾರದಲ್ಲಿ ಸಾಧ್ಯವಾದಷ್ಟು ಕನ್ನಡ ಬಳಸುತ್ತಿದ್ದೇವೆ. ಇದನ್ನು ಉತ್ತೇಜಿಸಲು ಸರ್ಕಾರದಿಂದ ಇನ್ನಷ್ಟು ಪ್ರಯತ್ನ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಕೆಳ ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ತೀರ್ಪು ನೀಡಿದ 48 ನ್ಯಾಯಾಧೀಶರಿಗೆ ಗೌರವ ಸಿಕ್ಕಿದೆ. ಅದೇ ರೀತಿ ಇನ್ನೂ 600 ನ್ಯಾಯಾಧೀಶರಿದ್ದು, ಅವರೂ ಕನ್ನಡ ಬಳಕೆ ಮಾಡಿ ಸನ್ಮಾನಕ್ಕೆ ಪಾತ್ರರಾಗುತ್ತಾರೆ. ಈ ಮೂಲಕ ಕೆಲವೇ ವರ್ಷಗಳಲ್ಲಿ ಶೇ.70ರಷ್ಟು ತೀರ್ಪುಗಳು ಕನ್ನಡದಲ್ಲೇ ಬರುವಂತಾಗುತ್ತದೆ ಎಂದರು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜಯಚಂದ್ರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಕಾರ್ಯದರ್ಶಿ ಮುರಳಿಧರ್ ಮತ್ತಿತರರು ಹಾಜರಿದ್ದರು.
ಕರಡು ಪ್ರತಿ ಕನ್ನಡದಲ್ಲೇ ಸಿದ್ಧವಾಗಲಿ: ಸಿಎಂ
ಬೆಂಗಳೂರು: ರಾಜ್ಯದಲ್ಲಿ ಕಾನೂನು ರಚಿಸುವಾಗ ಅದರ ಕರಡು ಪ್ರತಿಗಳು ಕನ್ನಡದಲ್ಲೇ ಸಿದ್ಧಗೊಳುವಂತೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯದಲ್ಲಿ ಕಾಯ್ದೆ, ಕಾನೂನು ರಚನೆ ಇಂಗ್ಲಿಷ್ನಲ್ಲೇ ಆಗುತ್ತಿದೆ. ಇದನ್ನು ಕನ್ನಡದಲ್ಲಿ ಮಾಡಬೇಕೆಂದು ಸಂಬಂಧಿಸಿದ ಇಲಾಖೆಗೆ ಸೂಚಿಸಿದ್ದೇವೆ. ಇದೇರೀತಿ ರಾಜ್ಯದಲ್ಲಿ ಕನ್ನಡ ಶೀಘ್ರಲಿಪಿಗಾರರು, ಬೆಳರಚ್ಚುಗಾರರ ಕೊರತೆ ಇದೆ.
ಇದಕ್ಕಿಂತ ಮುಖ್ಯವಾಗಿ ಕನ್ನಡ ತಂತ್ರಾಂಶದ ಕೊರತೆ ಇದೆ. ಇವುಗಳಲ್ಲಿ ತುರ್ತಾಗಿ ಕನ್ನಡ ತಂತ್ರಾಂಶ ಕೊರತೆ ಸರಿಪಡಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೂಚಿಸಿದ್ದೇನೆ. ಇಲಾಖೆ ಕೂಡ ಸದ್ಯದಲ್ಲೇ ಸೂಕ್ತ ತಂತ್ರಾಂಶ ಅಭಿವೃದ್ಧಿಪಡಿಸಿ ಕನ್ನಡ ಬಳಕೆ ಉತ್ತೇಜಿಸಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು. ನ್ಯಾಯಾಂಗ ವ್ಯವಸ್ಥೆಯಲ್ಲಿ ಕನ್ನಡ ಬಳಕೆ ಹೆಚ್ಚಾಗುವ ಅಗತ್ಯವಿದ್ದು, ಇದರಿಂದ ಕಕ್ಷಿದಾರರಿಗೆ ಅನುಕೂಲವಾಗುತ್ತದೆ. ಅನೇಕ ಕಡೆ ವಕೀಲರು ಇಂಗ್ಲೀಷ್ ಗೊತ್ತಿಲ್ಲದಿದ್ದರೂ ವಾದ ಮಂಡಿಸುತ್ತಾರೆ. ಇಂಗ್ಲಿಷ್ ಬಗ್ಗೆ ಇಷ್ಟೊಂದು ವ್ಯಾಮೋಹ ಬೇಡ. ಇದರ ಅಗತ್ಯವಿಲ್ಲ ಎಂದು ಅವರು ಸಲಹೆ ನೀಡಿದರು.
ಹುಚ್ಚ ನ್ಯಾಯಾಲಯ!
ಸರಿಯಾಗಿ ಕನ್ನಡ ಕಲಿಯದ ಸರ್ಕಾರಿ ನೌಕರರಿಂದ ಉಚ್ಛ ನ್ಯಾಯಾಲಯ ಹುಚ್ಚ ನ್ಯಾಯಾಲಯ ಎನ್ನುವಂತಾಗಿತ್ತು ಎಂದು ನ್ಯಾ.ಎನ್.ಕುಮಾರ್ ತಮ್ಮ ಅನುಭವ ಹಂಚಿಕೊಂಡರು. ಒಮ್ಮೆ ನಾನು ತೀರ್ಪು ನೀಡಿದಾಗ ಅದಕ್ಕೆ ಸಂಬಂಧಿಸಿದಂತೆ ಗ್ರಾಮ ಲೆಕ್ಕಿಗನೊಬ್ಬ ಪತ್ರ ಬರೆದಿದ್ದರು. ಅದರಲ್ಲಿ ಉಚ್ಛ ನ್ಯಾಯಾಲಯದ ತೀರ್ಪು ಎನ್ನುವ ಬದಲಿಗೆ ಹುಚ್ಚ ನ್ಯಾಯಾಲಯ ತೀರ್ಪು ಎಂದು ಇತ್ತು. ಆಗ ಇವರಿಗೆ ಕನ್ನಡ ಬರದಿದ್ದರೆ ನಮ್ಮನ್ನೇಕೆ ಹುಚ್ಚರನ್ನಾಗಿ ಮಾಡಿದ್ದಾರೆ ಎಂದು ಭಾಷಾದೋಷ ಸ್ಮರಿಸಿದರು.
ಅನೇಕರಿಗೆ ಕನ್ನಡವೇ ಬರುವುದಿಲ್ಲ: ಕೋರ್ಟ್ನಲ್ಲಿರುವ ಅನೇಕ ಶೀಘ್ರಲಿಪಿಗಾರರಿಗೆ ಕನ್ನಡವೇ ಬರುವುದಿಲ್ಲ. ಅವರು ಒಂದು ಪುಟದಲ್ಲಿ ಕನಿಷ್ಠ 30 ತಪ್ಪು ಮಾಡಿರುತ್ತಾರೆ. ಇಂಥವರಿಗೆ ಇಡೀ ನ್ಯಾಯಾಂಗ ವ್ಯವಸ್ಥೆ 30ವರ್ಷಗಳ ವರೆಗೂ ಪರದಾಡುವಂತಾಗುತ್ತದೆ. ಆದ್ದರಿಂದ ಸರ್ಕಾರ ನೌಕರರಿಗೆ ಕಡ್ಡಾಯವಾಗಿ ಕನ್ನಡ ಕಲಿಸುವ ಕೆಲಸ ಮಾಡಬೇಕಿದೆ ಎಂದು ಕುಮಾರ್ ವಿವರಿಸಿದರು.
ಕನ್ನಡ ತೀರ್ಪಿಗೆ ಗೌರವ
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡದಲ್ಲೇ ತೀರ್ಪು ನೀಡಿದ ನ್ಯಾಯಾಧೀಶರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗೌರವಾರ್ಪಣೆ ಮಾಡಿದರು. ಹೈಕೋರ್ಟ್ ನ್ಯಾಯಾಧೀಶ ಎನ್.ಕುಮಾರ್, ಕಾನೂನು ಸಚಿವ ಜಯಚಂದ್ರ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಇದ್ದರು.