ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಜೈನ ದೇಗುಲಕ್ಕೆ ಕಳ್ಳರ ಲಗ್ಗೆ ಚಿನ್ನಾಭರಣ, ನಗದು ಲೂಟಿ

ಅಕ್ಕಿಪೇಟೆ ಮುಖ್ಯರಸ್ತೆಯಲ್ಲಿರುವ ಶ್ರೀವಸುಪೂಜ್ಯ ಜೈನ ದೇವಸ್ಥಾನದಲ್ಲಿ ಭದ್ರತಾ ಸಿಬ್ಬಂದಿಯ ಪ್ರಜ್ಞೆ ತಪ್ಪಿಸಿ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ...

Srinivasa Murthy VN
Updated On : 21 Oct 2013, 11:54 am

ಬೆಂಗಳೂರು: ಅಕ್ಕಿಪೇಟೆ ಮುಖ್ಯರಸ್ತೆಯಲ್ಲಿರುವ ಶ್ರೀವಸುಪೂಜ್ಯ ಜೈನ ದೇವಸ್ಥಾನದಲ್ಲಿ ಭದ್ರತಾ ಸಿಬ್ಬಂದಿಯ ಪ್ರಜ್ಞೆ ತಪ್ಪಿಸಿ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿರುವ ಘಟನೆ ನಡೆದಿದೆ.
ಶನಿವಾರ ರಾತ್ರಿಯಿಂದ ಭಾನುವಾರ ನಸುಕಿನ ವೇಳೆಯಲ್ಲಿ ದರೋಡೆ ನಡೆದಿದೆ. 4-5 ದುಷ್ಕರ್ಮಿಗಳು ಈ ಕೃತ್ಯ ಎಸಗಿರುವ ಶಂಕೆ ಇದೆ.
ಐವರು ಭದ್ರತಾ ಸಿಬ್ಬಂದಿ, 16 ಸಿಸಿಟಿವಿ ಕ್ಯಾಮರಾಗಳಿದ್ದರೂ ರಾಜಾರೋಷವಾಗಿ ನಡೆದಿರುವ ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸುತ್ತಮುತ್ತ ಎರಡರಿಂದ ಮೂರಂತಸ್ತಿನ ಮನೆಗಳಿದ್ದರೂ ದರೋಡೆಕೋರರು ಹಲವು ತಾಸುಗಳವರೆಗೂ ದೇವಸ್ಥಾನದಲ್ಲಿದ್ದು ದರೋಡೆ ನಡೆಸಿದ್ದಾರೆ.

ರಾತ್ರಿ 11 ಗಂಟೆ ಸುಮಾರಿಗೆ: ಅಕ್ಕಿಪೇಟೆ ಓಬಯ್ಯ ಲೈನ್‌ನಲ್ಲಿರುವ ದೇಗುಲಕ್ಕೆ ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಹಿಂಬದಿ ಗೇಟ್‌ನಿಂದ ನುಗ್ಗಿರುವ ದರೋಡೆಕೋರರು ಕಚೇರಿಯ ಬಳಿ ಭದ್ರತೆಗಿದ್ದ ಇಬ್ಬರಿಗೆ ಕ್ಲೋರೋಫಾರ್ಮ್‌ನಿಂದ ಪ್ರಜ್ಞೆ ತಪ್ಪಿಸಿದ್ದಾರೆ. ಬಳಿಕ ಮೊದಲನೇ ಮಹಡಿಯಲ್ಲಿದ್ದ ಒರ್ವ ಭದ್ರತಾ ಸಿಬ್ಬಂದಿಯ ಪ್ರಜ್ಞೆ ತಪ್ಪಿಸಿದ್ದಾರೆ.
ಕಚೇರಿಯ ಬೀಗ ಒಡೆದು ಒಳನುಗ್ಗಿರುವ ದರೋಡೆಕೋರರು ಬೀರುವಿನಲ್ಲಿಟ್ಟಿದ್ದ ರು. 3 ಲಕ್ಷ ನಗದು, ಬೇರೆ ಬೇರೆ ಕಡೆ ಇರಿಸಲಾಗಿದ್ದ ಹುಂಡಿಗಳಲ್ಲಿದ್ದ ಅಂದಾಜು ರು. 2 ಲಕ್ಷ ನಗದು, ವಿಗ್ರಹಗಳಿಗೆ ಹಾಕಲಾಗಿದ್ದ ಚಿನ್ನಾಭರಣಗಳನ್ನು ದೋಚಿದ್ದಾರೆ.
ವಿಗ್ರಹಗಳಿಗೆ ಅಳವಡಿಸಲಾಗಿದ್ದ ಚಿನ್ನದ ಕಣ್ಣುಗಳು, 10 ಗ್ರಾಂನ 6 ತಿಲಕಗಳು ಹೀಗೆ ಕೈಗೆ ಸಿಕ್ಕ ವಸ್ತುಗಳನ್ನೆಲ್ಲಾ ದೋಚಿದ್ದಾರೆ. ಚಿಲ್ಲರೆಯನ್ನು ಹುಂಡಿಯಲ್ಲೇ ಬಿಟ್ಟಿದ್ದಾರೆ. ಹಗಲು ಪಾಳಿಯಲ್ಲಿದ್ದ ಇಬ್ಬರು ಭದ್ರತಾ ಸಿಬ್ಬಂದಿ ದೇವಸ್ಥಾನದ ಮೇಲಿರುವ ಕೊಠಡಿಯಲ್ಲಿ ಮಲಗಿದ್ದರು. ಎಲ್ಲವನ್ನು ದೋಚಿದ ದುಷ್ಕರ್ಮಿಗಳು ಬಳಿಕ ಮೇಲೆ ಮಲಗಿದ್ದ ಇಬ್ಬರು ಭದ್ರತಾ ಸಿಬ್ಬಂದಿಯ ಪ್ರಜ್ಞೆ ತಪ್ಪಿಸಿ ಪರಾರಿಯಾಗಿದ್ದಾರೆ.
ಬೆಳಿಗ್ಗೆ 5 ಗಂಟೆ ಸುಮಾರಿಗೆ  ಅರ್ಚಕ ಸುರೇಶ್ ಎಂಬುವವರು ಬಂದಾಗ ದೇವಸ್ಥಾನದ ಬಾಗಿಲು ತೆಗೆದಿತ್ತು. ಅಲ್ಲದೇ ಭದ್ರತಾ ಸಿಬ್ಬಂದಿಗಳು ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದರು. ದೇವಸ್ಥಾನದ ಒಳಗೆ ಹುಂಡಿಗಳು, ಡ್ರಾಯರ್, ಬೀರು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಇದರಿಂದ ಗಾಬರಿಗೊಂಡ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಭದ್ರತಾ ಸಿಬ್ಬಂದಿ ಎಚ್ಚರಗೊಳ್ಳುತ್ತಿದ್ದಂತೆ ವಾಂತಿ ಮಾಡಿಕೊಂಡಿದ್ದಾರೆ. ತಕ್ಷಣ ಎಲ್ಲರನ್ನು ವಿಕ್ಟೋರಿಯಾ ಅಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

ಸಿಸಿಟಿವಿ ಧ್ವಂಸ: ದೇವಸ್ಥಾನದ ವಿವಿಧೆಡೆ ಒಟ್ಟು 16 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಪೈಕಿ 6 ಕ್ಯಾಮರಾಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಕೆಲವು ಕ್ಯಾಮರಾಗಳ ವೈರ್ ಕಟ್ ಮಾಡಿದ್ದಾರೆ. ಮತ್ತೆ ಕೆಲವು  ಕ್ಯಾಮರಾಗಳನ್ನು ಗೋಡೆ ಕಡೆ ತಿರುಗಿಸಿ ತಮ್ಮ ಕೃತ್ಯ ಅದರಲ್ಲಿ ಸೆರೆಯಾಗದಂತೆ ನೋಡಿಕೊಂಡಿದ್ದಾರೆ. ಆದರೂ ದರೋಡೆಕೋರರ ಗಮನಕ್ಕೆ ಬಾರದ ಕೆಲವು ಸಿಸಿಟಿವಿಗಳಲ್ಲಿ ಚಲನವಲನ ದಾಖಲಾಗಿದೆ. ಎಲ್ಲರೂ ಮುಖಕ್ಕೆ ಕರವಸ್ತ್ರ ಧರಿಸಿ ಕೃತ್ಯ ಎಸಗಿದ್ದಾರೆ.
ದೇವಸ್ಥಾನದ ಬಗ್ಗೆ ಮಾಹಿತಿ ಇರುವವರೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಮುಖಕ್ಕೆ ಬಟ್ಟೆ, ಕ್ಲೋರೋಫಾರ್ಮ್ ಹೀಗೆ ಎಲ್ಲದರೊಂದಿಗೆ ಸಿದ್ದರಾಗಿ ಬಂದಿರುವುದರಿಂದ ಪೊಲೀಸರಿಗೆ ಈ ಅನುಮಾನ ಉಂಟಾಗಿದೆ.
ಭದ್ರತೆಗಿದ್ದ ಸಿಬ್ಬಂದಿಯಾದ ನಾಗವೀರ ಬಹದ್ದೂರ್, ಜಂಗ್‌ವೀರ್ ಬಹದ್ದೂರ್, ಲಾಲ್ ಬಹದ್ದೂರ್, ಕಾಮೇಶ್ ಬಹದ್ದೂರ್ ಹಾಗೂ ಪ್ರಕಾಶ್ ಬಹದ್ದೂರ್ ಅವರನ್ನು ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಘಟನೆ ಸ್ಥಳಕ್ಕೆ ಸಚಿವ ದಿನೇಶ್ ಗುಂಡುರಾವ್, ಹೆಚ್ಚುವರಿ ಪೊಲೀಸ್ ಆಯುಕ್ತ ಕಮಲ್ ಪಂಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮುಖಕ್ಕೆ ಕರವಸ್ತ್ರ ಧರಿಸಿಕೊಂಡ ಬಂದ ತಂಡದಿಂದ ಈ ಕೃತ್ಯ ನಡೆದಿದೆ. ಮೇಲ್ನೋಟಕ್ಕೆ ದೇವಸ್ಥಾನದ ಬಗ್ಗೆ ಮಾಹಿತಿ ಇರುವ ದುಷ್ಕರ್ಮಿಗಳೇ ಈ ಕೃತ್ಯ ಎಸಗಿರಬಹುದು. ಭದ್ರತಾ ಸಿಬ್ಬಂದಿ ವಿಚಾರಣೆ ನಡೆಸಿ ತನಿಖೆ ನಡೆಸುತ್ತಿದ್ದೇವೆ.
-ಕಮಲ್ ಪಂಥ್,  ಹೆಚ್ಚುವರಿ ಪೊಲೀಸ್ ಆಯುಕ್ತ

ದೇವಸ್ಥಾನ ಸಂಜೆ 4.30 ರಿಂದ 8.30ರ ವರೆಗೆ ತೆರೆದಿರುತ್ತದೆ. ರಾತ್ರಿ 10.30ರವರೆಗೂ ಕಚೇರಿಗೆ ಸಿಬ್ಬಂದಿ ಹಾಗೂ ಟ್ರಸ್ಟಿಗಳು ಬಂದು ಹೋಗುತ್ತಿರುತ್ತಾರೆ. ಹೀಗಾಗಿ ರಾತ್ರಿ 11 ಗಂಟೆ ಬಳಿಕ ಈ ದರೋಡೆ ನಡೆದಿರಬಹುದು. ನಗದು ಸೇರಿ ಸುಮಾರು ರು. 15 ರಿಂದ ರು. 20 ಲಕ್ಷ ದರೋಡೆಯಾಗಿದೆ.
-ಕಾಂತಿಲಾಲ್ ಜೈನ್, ಟ್ರಸ್ಟಿ, ವಸುಪೂಜ್ಯ ಜೈನ ದೇವಸ್ಥಾನ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement