ತಿರುಮಲ ಬುಡದಲ್ಲಿ ಇಸ್ಲಾಮಿಕ್ ಕಾಲೇಜು
ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರವಾದ ತಿರುಪತಿ ಸಮೀಪ ತಲೆ ಎತ್ತಿರುವ ಅಂತಾರಾಷ್ಟ್ರೀಯ ಇಸ್ಲಾಮಿಕ್ ಮಹಿಳಾ ಕಾಲೇಜೊಂದು...
ಹೈದರಾಬಾದ್: ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರವಾದ ತಿರುಪತಿ ಸಮೀಪ ತಲೆ ಎತ್ತಿರುವ ಅಂತಾರಾಷ್ಟ್ರೀಯ ಇಸ್ಲಾಮಿಕ್ ಮಹಿಳಾ ಕಾಲೇಜೊಂದು ಈಗ ಸ್ಥಳೀಯರ ನೆಮ್ಮದಿ ಕೆಡಿಸಿದೆ. ಸದ್ದಿಲ್ಲದೆ ಎದ್ದುನಿಂತಿರುವ ಈ ಕಾಲೇಜು ಹಿಂದೂಗಳು ಮಾತ್ರವಲ್ಲದೆ ಮುಸ್ಲಿಮರಲ್ಲೂ ಅನುಮಾನ, ಆತಂಕಕ್ಕೆ ಕಾರಣವಾಗುತ್ತಿದೆ.
ಆರು ಅಂತಸ್ತಿನ ಈ ಅಂತಾರಾಷ್ಟ್ರೀಯ ಮಹಿಳಾ ಅರೇಬಿಕ್ ಕಾಲೇಜನ್ನು ಚಂದ್ರಗಿರಿ ಗ್ರಾಮದಲ್ಲಿ ನಿರ್ಮಿಸಲಾಗಿದೆ. ಮುಸ್ಲಿಂ ಮಹಿಳೆಯರಿಗೆ ಆಧುನಿಕ ಶಿಕ್ಷಣ, ಸ್ವಉದ್ಯೋಗ ಹಾಗೂ ಮತಬೋಧನೆ ಉದ್ದೇಶದಿಂದ ಈ ಕಾಲೇಜು ಆರಂಭಿಸಲಾಗಿದೆ ಎನ್ನುತ್ತಾರೆ ಸಂಸ್ಥಾಪಕರು. ಆದರೆ, ಕಾಲೇಜಿನ ಸುತ್ತ ಹಾಕಲಾಗಿರುವ ನಾಲ್ಕು ಮೀಟರ್ ಎತ್ತರದ ಕಾಂಪೌಂಡ್, ಇದರ ಜತೆಗೆ ಕಾಲೇಜು ಸಂಸ್ಥಾಪಕಿ ನೌಹಿರಾ ಶೇಖ್ ಹಿನ್ನೆಲೆ ಸ್ಥಳೀಯರ ನಿದ್ದೆಗೆಡಿಸಿದೆ.
ಅಪಸ್ವರ: ಈ ಕಾಲೇಜಿಗೆ ಹಿಂದೂಗಳು ಮಾತ್ರವಲ್ಲದೆ ಮುಸ್ಲಿಂ ಮುಖಂಡರಿಂದಲೂ ಅಪಸ್ವರ ವ್ಯಕ್ತವಾಗಿದೆ. ಸಾಮರಸ್ಯದ ಗೂಡಾಗಿರುವ ದೇಗುಲ ನಗರಿಯಲ್ಲಿ ಈ ಕಾಲೇಜಿನಿಂದಾಗಿ ವಿವಿಧ ಧಾರ್ಮಿಕ ಗುಂಪುಗಳ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಯಾಗಬಹುದು ಎಂದು ಹಲವು ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ.
ತಿರುಪತಿಯ ಪ್ರಮುಖ ಮುಸ್ಲಿಂ ವ್ಯಾಪಾರಿ ಶಮೀರ್ ಬಾಷಾ ಕೂಡ ಈ ಶಿಕ್ಷಣ ಸಂಸ್ಥೆಯ ಕುರಿತು ಆಕ್ಷೇಪ ವ್ಯಕ್ತಪಡಿಸುತ್ತಾರೆ. ನೌಹಿರಾ ಶೇಖ್ ತಾವು ಚಿತ್ತೂರು ಮೂಲದವರು ಎನ್ನುತ್ತಾರೆ.
ಆದರೆ, ಕಾಲೇಜು ಆರಂಭ ಮಾಡುವವರೆಗೆ ಅವರ ಕುರಿತು ಸ್ಥಳೀಯರಿಗೆ ಮಾಹಿತಿಯೇ ಇರಲಿಲ್ಲ. ಹಾಗಾಗಿ ಈ ಕಾಲೇಜು ವಿವಾದ ರಾಮಮಂದಿರ- ಬಾಬರಿ ಮಸೀದಿ ವಿವಾದಕ್ಕಿಂತಲೂ ಗಂಭೀರವಾಗುವ ಸಾಧ್ಯತೆ ಇದೆ ಎಂದು ಬಾಷಾ ಎಚ್ಚರಿಸಿದ್ದಾರೆ.
ಈ ಕಾಲೇಜಿನಿಂದಾಗಿ ಪೂರ್ವ ಏಷ್ಯಾದಿಂದ ಸಾಕಷ್ಟು ಮಂದಿ ಇಲ್ಲಿಗೆ ಆಗಮಿಸಬಹುದು. ಹೀಗೆ ಬರುವವರು ಯಾರು? ಎಲ್ಲಿಯವರು? ಎನ್ನುವ ಕುರಿತು ಯಾರಿಗೂ ಅರಿವಿರುವುದಿಲ್ಲ. ತಿರುಪತಿಗೆ ಈಗಾಗಲೇ ಅನೇಕ ಉಗ್ರ ಸಂಘಟನೆಗಳಿಂದ ಬೆದರಿಕೆ ಇದೆ. ಇಂಥ ಪರಿಸ್ಥಿತಿಯಲ್ಲಿ ಈ ಕಾಲೇಜಿನಿಂದಾಗಿ ಆ ರೀತಿಯ ಆತಂಕವನ್ನು ಇನ್ನಷ್ಟು ಹೆಚ್ಚಿಸಲಿದೆ ಎನ್ನುತ್ತಾರೆ ಎಂದು ಪಯೋನಿರ್ ಪತ್ರಿಕೆ ವರದಿ ಮಾಡಿದೆ.
ದೇವಸ್ಥಾನದ ಜಾಗ: ಸದ್ಯ ಕಾಲೇಜು ತಲೆ ಎತ್ತಿರುವ ಜಾಗ ತಿಮ್ಮಾಪುರಂ ವೆಂಕಟೇಶ್ವರ ದೇವಸ್ಥಾನಕ್ಕೆ ಸೇರಿದ್ದು ಎನ್ನುವುದು ಇತಿಹಾಸಕಾರ ಸೊರಕಾಯಲ ಕೃಷ್ಣ ರೆಡ್ಡಿ ಅಭಿಪ್ರಾಯ.
ಈ ದೇವಸ್ಥಾನವನ್ನು 1542ರಲ್ಲಿ ಪ್ರಸಿದ್ಧ ಸಂತ ಆಚಾರ್ಯ ಅವರ ಮೊಮ್ಮಗ ನಿರ್ಮಿಸಿದ್ದರು. 1782ರಲ್ಲಿ ಹೈದರಾಲಿ ಈ ದೇಗುಲವನ್ನು ಹಾಳುಗೆಡವಿದ್ದ. ವೆಂಕಟೇಶ್ವರನ 14.5 ಅಡಿ ಎತ್ತರದ ಮೂಲವಿಗ್ರಹ ಈ ದೇವಸ್ಥಾನದ ಜಾಗದಲ್ಲಿ ಹಲವು ವರ್ಷ ಇತ್ತು ಎಂದು ಅವರು ತಿಳಿಸಿದ್ದಾರೆ.
ಆಗಿನ ಕಾಲದ ಆಡಳಿತಗಾರರು ಈ ದೇವಸ್ಥಾನದ ಜಾಗವನ್ನು ಪೂಜಾರಿಯೊಬ್ಬರಿಗೆ ನೀಡಿದ್ದರು. ಈ ಭೂಮಿ ಈಗ ನೌಹಿರಾ ಶೇಖ್ ಕೈಗೆ ಹೇಗೆ ಬಂತು ಅನ್ನುವುದೇ ಕುತೂಹಲದ ವಿಚಾರ. ಈ ಕುರಿತು ತನಿಖೆಯಾಗಬೇಕು ಎಂದು ರೆಡ್ಡಿ ಆಗ್ರಹಿಸಿದ್ದಾರೆ.
10 ವರ್ಷದಲ್ಲಿ ಅಪಾರ ಸಂಪತ್ತು: ಹೊಟ್ಟೆಪಾಡಿಗಾಗಿ ಅರಬ್‌ದೇಶಗಳಿಗೆ ತೆರಳಿದ ನೌಹಿರಾ ಕಳೆದ 10 ವರ್ಷಗಳಲ್ಲಿ ಬೆಳೆದ ರೀತಿಯ ಕುರಿತು ತಿರುಪತಿಯ ಹಿರಿಯ ಗುಪ್ತಚರ ಅಧಿಕಾರಿಯೊಬ್ಬರು ಅಚ್ಚರಿ ವ್ಯಕ್ತಪಡಿಸುತ್ತಾರೆ. ನೌಹಿರಾ ಎರಡು ಮದುವೆಯಾಗಿದ್ದು, ಸದ್ಯ ಪೂರ್ವ ಏಷ್ಯಾದಲ್ಲಿ ನೆಲೆಸಿದ್ದಾರೆ. 2007ರ ವರೆಗೆ ನೌಹಿರಾ ಯಾರೆಂದೇ ಗೊತ್ತಿರಲಿಲ್ಲ. ಆಕೆ ಕೈಗೆ ಅಷ್ಟೊಂದು ಪ್ರಮಾಣದ ಆಸ್ತಿ ಹೇಗೆ ಬಂತು ಎನ್ನುವ ಕುರಿತು ಸರಿಯಾದ ಮಾಹಿತಿಯೂ ಇಲ್ಲ ಎನ್ನುತ್ತಾರೆ ಅವರು.
ಆದರೆ, ನೌಹಿರಾ ಅವರು ತಮ್ಮ ವಿರುದ್ಧದ ಆರೋಪವನ್ನು ತಳ್ಳಿಹಾಕಿದ್ದಾರೆ. ಬಿಜೆಪಿ ಮುಖಂಡರು ಹೊಟ್ಟೆಕಿಚ್ಚಿನಿಂದಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಚಿತ್ತೂರಿನಲ್ಲಿ 3.5 ಲಕ್ಷ ಮುಸ್ಲಿಂ ಮತದಾರರಿದ್ದಾರೆ, ಆರು ಲಕ್ಷ ಮುಸ್ಲಿಂ ಹೆಣ್ಣುಮಕ್ಕಳಿದ್ದಾರೆ. ಅವರಿಗೆ ಆಧುನಿಕ ಶಿಕ್ಷಣ ನೀಡುವುದು ನನ್ನ ಗುರಿ ಎನ್ನುತ್ತಾರೆ ನೌಹಿರಾ.
ವೆಬ್‌ಸೈಟ್‌ಗಳಲ್ಲಿ ಇರುವ ಮಾಹಿತಿ ಪ್ರಕಾರ, ನೌಹಿರಾ ಅವರು ಹೀರಾ ಗ್ರೂಪ್‌ನ ಮುಖ್ಯ ಎಕ್ಸಿಕ್ಯೂಟಿವ್ ಆಫೀಸರ್. ಚೀನಾ ಸೇರಿ ಐದು ದೇಶಗಳಲ್ಲಿ ಈ ಸಂಸ್ಥೆ ಕಾರ್ಯಾಚರಣೆ ನಡೆಸುತ್ತಿದೆ. ನೌಹಿರಾ ಅವರು ರೇಣುಗುಂಟಾ ಸಮೀಪ ಮದರಸಾವೊಂದನ್ನೂ ನಡೆಸುತ್ತಿದ್ದಾರೆ.
ಕಾಲೇಜಿನ ಬಗ್ಗೆ
- ತಿರುಪತಿಯಿಂದ 10 ಕಿ.ಮೀ. ದೂರದಲ್ಲಿರುವ ಚಂದ್ರಗಿರಿಯ ತೊಂಡವಾಡದಲ್ಲಿ
- ಸುಮಾರು 1.09 ಎಕರೆ ಜಾಗದಲ್ಲಿ ನಿರ್ಮಾಣ
- 2007ರಲ್ಲಿ ಈ ಕಾಲೇಜಿಗಾಗಿ ಭೂಮಿ ಖರೀದಿ
- ಈ ಜಾಗ ವಿಷ್ಣು ದೇಗುಲಕ್ಕೆ ಸಂಬಂಧಿಸಿದ ಜಾಗ ಎನ್ನುವುದು ಸ್ಥಳೀಯರ ಆರೋಪ