ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅಧಿಖಾರ ದರ್ಬಾರ್‌ಗೆ ಕ್ರಿಮಿನಲ್ ಕೇಸ್

ಸರ್ಕಾರಿ ಅಧಿಕಾರಿಗಳ ಮೇಲೆ ಒತ್ತಡ ತಂದರೆ ಅಥವಾ ಅವರನ್ನು ಬೆದರಿಸಿದರೆ ಹುಷಾರ್! ಕ್ರಿಮಿನಲ್ ಮೊಕದ್ದಮೆ...

Srinivasa Murthy VN
Updated On : 22 Oct 2013, 12:57 pm

- ತಮಗೆ ಬೇಕಾದಂತೆ ಕಡತ ಸಿದ್ಧಪಡಿಸಲು ಅಧಿಕಾರಿಗಳಿಗೆ ಕೆಲವರ ಬೆದರಿಕೆ
- ನೌಕರರ ಸಂಘದ ಅಧ್ಯಕ್ಷ ಬೈರಪ್ಪ ಮೇಲೆ ಮೊಕದ್ದಮೆ ದಾಖಲು ಸಾಧ್ಯತೆ
- ಕೆಲಸ ಮಾಡಿಸಿಕೊಳ್ಳಲು ಅಧಿಕಾರಿಗಳ ಮೇಲೆ ಹೆಚ್ಚುತ್ತಿರುವ ಒತ್ತಡ

ಕನ್ನಡಪ್ರಭ ವಾರ್ತೆ, ಬೆಂಗಳೂರು, ಅ.21
-
ಸರ್ಕಾರಿ ಅಧಿಕಾರಿಗಳ ಮೇಲೆ ಒತ್ತಡ ತಂದರೆ ಅಥವಾ ಅವರನ್ನು ಬೆದರಿಸಿದರೆ ಹುಷಾರ್! ಕ್ರಿಮಿನಲ್ ಮೊಕದ್ದಮೆ ಎದುರಿಸಬೇಕಾದೀತು...
ಸಾರ್ವಜನಿಕರಲ್ಲ, ಸರ್ಕಾರಿ ಅಧಿಕಾರಿಗಳೇ ಒತ್ತಡ ತಂದರೂ ಅಥವಾ ಬೆದರಿಸಿದರೆ ಶಿಸ್ತಿನ ಕ್ರಮದ ಜತೆಗೆ ಕ್ರಿಮಿನಲ್ ಮೊಕದ್ದಮೆಯೂ ದಾಖಲಾಗುತ್ತದೆ. ಅನುಕೂಲಕ್ಕೆ ತಕ್ಕಂತೆ ಕಡತ ನಿರ್ವಹಿಸಿಕೊಡಿ ಎಂದು ಬೆದರಿಸಿದರೆ ಕಂಬಿ ಹಿಂದೆ ಸೇರಬೇಕಾದೀತು ಎಚ್ಚರ.
ಏಕೆಂದರೆ, ಸರ್ಕಾರಿ ಅಧಿಕಾರಿಗಳೇ ಸರ್ಕಾರಿ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ, ಬೆದರಿಸುತ್ತಿದ್ದಾರೆ.
ಹೌದು, ಕಡತಗಳ ಹಿಂದೆ ಬಿದ್ದು, ವೈಯಕ್ತಿಕವಾಗಿ ಅದರ ಬಗ್ಗೆ ಗಮನಹರಿಸಿ ಅದಕ್ಕೆ ಸಂಬಂಧಿಸಿದ ಅಧೀನ ಕಾರ್ಯದರ್ಶಿಗಳಿಗೆ ಸರ್ಕಾರಿ ಅಧಿಕಾರಿಗಳೇ ತಮ್ಮಂತೆ ಕಡತ ಸಿದ್ಧಪಡಿಸಲು ಒತ್ತಡ ಹಾಕುತ್ತಿದ್ದಾರೆ. ಇಂತಹ 'ಒತ್ತಡ ಅಧಿಕಾರಿಗಳ' ಮೇಲೆ ಇನ್ನು ಮುಂದೆ ಕ್ರಿಮಿನಲ್ ಮೊಕದ್ದಮೆ ಹೂಡಲು ಅನಿವಾರ್ಯ ಕ್ರಮ ಕೈಗೊಳ್ಳಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಸಿಆಸುಇ) ಸೇವೆಗಳ ವಿಭಾಗ ನಿರ್ಧರಿಸಿದೆ.
ಇದಕ್ಕೆ ಪ್ರಥಮ ಎಂಬಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬೈರಪ್ಪ ಅವರ ಮೇಲೆಯೇ ಮೊಕದ್ದಮೆ ದಾಖಲಾಗುವ ಸಾಧ್ಯತೆ ಹೆಚ್ಚಾಗಿದೆ. ಏಕೆಂದರೆ, ಬೈರಪ್ಪ ಅವರು ಅಧೀನ ಕಾರ್ಯದರ್ಶಿ ಮೇಲೆ ಒತ್ತಡ ಹಾಕಿದ್ದಾರೆ. ಅಲ್ಲದೆ, ಕೆಲಸ ಮಾಡಿಕೊಡದಿದ್ದರೆ ಮುಷ್ಕರ ಹೂಡುವ ಬೆದರಿಕೆಯನ್ನೂ ಹಾಕಿದ್ದಾರೆ.
ಇದು ಸರ್ಕಾರಿ ನೌಕರರ ಸಂಘಕ್ಕೆ ಮಾತ್ರ ಸೀಮಿತವಾಗಿಲ್ಲ. ಸಚಿವಾಲಯದ ಅಧಿಕಾರಿಗಳ ಸಂಘಕ್ಕೂ ಅನ್ವಯ. ಇದೆಲ್ಲವನ್ನೂ ಸಿಆಸುಇ ಉಪ ಕಾರ್ಯದರ್ಶಿಯವರು ಹೊರಡಿಸಿರುವ ಸುತ್ತೋಲೆಯಲ್ಲೇ ನಮೂದಿಸಲಾಗಿದೆ.

ಶಿಸ್ತು ಕ್ರಮ: ಇನ್ನು ಮುಂದೆ ಯಾವುದೇ ಅಧಿಕಾರಿಗಳು ಅಧಿಕೃತ ಕೆಲಸಗಳಿಗೆ ಅನವಶ್ಯವಾಗಿ ಒತ್ತಡ ತಂದರೆ ಅಥವಾ ಬೆದರಿಸಿದರೆ ಅಂತಹ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ, ಕ್ರಿಮಿನಲ್ ಇಂಟಿಮಿಡೇಷನ್ ರೀತಿ ಪೊಲೀಸ್ ಕ್ರಮ ಜರುಗಿಸುವುದು ಅನಿವಾರ್ಯ. ಆದ್ದರಿಂದ ಇಂತಹ ಘಟನೆಗಳು ಸಂಭವಿಸಿದಲ್ಲಿ ಸಂಬಂಧಪಟ್ಟ ಅಧೀನ ಕಾರ್ಯದರ್ಶಿಗಳು ಮೇಲಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸಿಆಸುಇಯು  ಕಾರ್ಯದರ್ಶಿ ಅವರು ಎಲ್ಲ ಸಿಆಸುಇ ಅಧೀನ ಕಾರ್ಯದರ್ಶಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.
ಪ್ರಮುಖವಾಗಿ ರಜೆ, ಬಡ್ತಿ, ವಿದೇಶ ಪ್ರವಾಸ, ವರ್ಗಾವಣೆ ವಿಷಯಗಳ ಬಗ್ಗೆ ಕೆಲವೊಂದು ಅಧಿಕಾರಿಗಳು ಅವರಿಗೆ ಅನುಕೂಲವಾಗುವ ಕಡತಗಳನ್ನು ಹಿಂಬಾಲಿಸಿ, ಅಧೀನ ಕಾರ್ಯದರ್ಶಿಗಳ ಬಳಿಗೆ ಧಾವಿಸಿ ತುರ್ತಾಗಿ ಆ ಕಡತ ನಿರ್ವಹಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಇದು ಸಿಆಸುಇ ಗಮನಕ್ಕೆ ಬಂದಿದೆ. ಅದನ್ನು ಮೂರು ಉದಾಹರಣೆಗಳಾಗಿಯೂ ಸುತ್ತೋಲೆಯಲ್ಲಿ ವಿವರಣೆ ನೀಡಲಾಗಿದೆ.

ಏರಿದ ಧ್ವನಿ: ರಾಜ್ಯ ಸರ್ಕಾರಿ ನೌಕರರ ಅಧ್ಯಕ್ಷ ಬೈರಪ್ಪ ಅವರು ವಿದೇಶ ಪ್ರವಾಸಕ್ಕೆ ಸಂಬಂಧಿಸಿದ ವಿಧಿ- ವಿಧಾನಗಳನ್ನು ತಮಗೆ ಸಿಆಸುಇ ಅಧೀನ ಕಾರ್ಯದರ್ಶಿ (ಸೇವೆಗಳು-1) ಸರಿಯಾಗಿ ತಿಳಿಸಿಲ್ಲ ಎಂದು ಅವರ ಕೊಠಡಿಗೆ ಬಂದು ಏರಿದ ಧ್ವನಿಯಲ್ಲಿ ಮಾತನಾಡಿರುವುದು. ಸಿಆಸುಇ ಅಧೀನ ಕಾರ್ಯದರ್ಶಿ (ಸೇವೆಗಳು-2) ಕೆಲವೊಂದು ಕೆಎಎಸ್ ಅಧಿಕಾರಿಗಳು ಅವರಿಗೆ ಅನುಕೂಲವಾಗುವಂತೆ ಕಡತ ಮಂಡಿಸುವಂತೆ ಒತ್ತಾಯಿಸುತ್ತಿದ್ದಾರೆ.
ಸಿಆಸುಇ ಅಧೀನ ಕಾರ್ಯದರ್ಶಿ (ಸೇವೆಗಳು-6)  ಅವರಿಗೆ ಸಚಿವಾಲಯದ ಅಧಿಕಾರಿಗಳು ಅವರಿಗೆ ಅನುಕೂಲವಾಗುವಂತೆ ಕಡತ ಮಂಡಿಸದಿದ್ದಲ್ಲಿ ಮುಷ್ಕರಕ್ಕೆ ಕರೆ ನೀಡುವುದಾಗಿ ಬೆದರಿಸುತ್ತಿರುವುದು.
ಈ ಎಲ್ಲ ಪ್ರಕರಣಗಳು ನಡೆದಿದ್ದರೂ ಅಧೀನ ಕಾರ್ಯದರ್ಶಿಗಳು ತಮ್ಮ ಮೇಲಧಿಕಾರಿಗಳಾದ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಉಪ ಕಾರ್ಯದರ್ಶಿ ಅವರ ಗಮನಕ್ಕೆ ತಂದಿಲ್ಲ. ಇನ್ನು ಮುಂದೆ ಈ ರೀತಿ ಆಗಬಾರದು. ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತರಬೇಕು. ಒತ್ತಡ ಹಾಗೂ ಬೆದರಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಹಾಗೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದು ಸುತ್ತೋಲೆಯಲ್ಲಿ ಅಧೀನ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ.
ಸರ್ಕಾರಿ ಅಧಿಕಾರಿಗಳ ಮೇಲೆ ರಾಜಕಾರಣಿಗಳು ಮತ್ತಿತರರು ಒತ್ತಡ ಹಾಕುವುದು, ಬೆದರಿಸುವುದು, 'ಸಹಜ' ಪ್ರಕ್ರಿಯೆ ಎಂಬುದು ವಾಡಿಕೆ. ಆದರೆ, ಸರ್ಕಾರಿ ಅಧಿಕಾರಿಗಳೇ ಸರ್ಕಾರಿ ಅಧಿಕಾರಿಗಳ ಮೇಲೆ ಒತ್ತಡ ಹಾಗೂ ಬೆದರಿಕೆ ಹಾಕುವ ಪ್ರಕರಣಗಳು ಸರ್ಕಾರದ ಶಕ್ತಿಕೇಂದ್ರ ವಿಧಾನಸೌಧದಲ್ಲೇ ನಡೆಯುತ್ತದೆ ಎಂಬುದು ಮಾತ್ರ ಅಚ್ಚರಿ.
ಅದರಲ್ಲೂ ಇಂತಹ ಪ್ರಕರಣಗಳಿಗೆ ಕಾರಣವಾದ 'ಒತ್ತಡ ಅಧಿಕಾರಿಗಳ' ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವ ಬಗ್ಗೆ ಸುತ್ತೋಲೆ ಹೊರಡಿಸಿರುವುದು ಘಟನೆಗಳ ಗಂಭೀರತೆ ಹಾಗೂ ಸೂಕ್ಷ್ಮತೆಯನ್ನು ನಿರೂಪಿಸುತ್ತವೆ. ಇಂತಹ ಸುತ್ತೋಲೆ ಹೊರಡಿಸುವ ಅನಿವಾರ್ಯ ಒದಗಿ ಬಂದಿರುವುದಂತೂ ದುರದೃಷ್ಟಕರ.

- ಕೆರೆ ಮಂಜುನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement