ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಎಕರೆ ಭೂಮಿಗೆ ಸಾವಿರ ಉದ್ಯೋಗ ಸೃಷ್ಟಿಸಿ

ಉದ್ಯಮಿಗಳಿಗೆ ರಾಜ್ಯ ಸರ್ಕಾರದಿಂದ ಷರತ್ತು ್ಣ ಕರ್ನಾಟಕ ಐ4 ನೀತಿ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ

Srinivasa Murthy VN
Updated On : 23 Oct 2013, 12:15 pm

ಕ.ಪ್ರ.ವಾರ್ತೆ, ಬೆಂಗಳೂರು, ಅ.22-
ಉದ್ಯಮಿಗಳಿಗೆ ರಾಜ್ಯದಲ್ಲಿ ಇನ್ನು ಮುಂದೆ ಒಂದು ಎಕರೆ ಭೂಮಿ ಬೇಕಾದರೆ ಒಂದು ಸಾವಿರ ಉದ್ಯೋಗ ಅವಕಾಶ ಸೃಷ್ಟಿಸಬೇಕು!
ಬೆಂಗಳೂರನ್ನು 2020ರೊಳಗೆ ಜಾಗತಿಕ ಮಾಹಿತಿ ತಂತ್ರಜ್ಞಾನದ ರಾಜಧಾನಿಯನ್ನಾಗಿಸುವ ಕನಸನ್ನು ಹೊತ್ತಿರುವ 'ಕರ್ನಾಟಕ ಐ4' ನೀತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಿದ್ದಾರೆ. ಈ ನೀತಿಯಲ್ಲಿ ಭೂಮಿ ಹಂಚಿಕೆ ಹಾಗೂ ಉದ್ಯೋಗ ಸೃಷ್ಟಿಗೆ ನೇರ ಸಂಬಂಧ ಕಲ್ಪಿಸಲಾಗಿದೆ.
ಬೆಂಗಳೂರನ್ನು ಜಾಗತಿಕ ಮಟ್ಟದಲ್ಲಿ ಸಿಲಿಕಾನ್ ವ್ಯಾಲಿಯನ್ನಾಗಿ ಪರಿವರ್ತಿಸುವ ಹಾಗೂ ರಾಜ್ಯದ ಇತರೇ ನಗರಗಳಲ್ಲಿ ಐಟಿ ಕಂಪನಿಗಳ ಸ್ಥಾಪನೆಗೆ ಆದ್ಯತೆ ನೀಡುವ ದೃಷ್ಟಿಯಿಂದ ಹೊಸ ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗುತ್ತಿದೆ. ಐಟಿ, ಐಟೀಸ್, ಇನೊವೇಷನ್ ಹಾಗೂ ಇನ್ಸೆಂಟೀವ್ಸ್‌ಗಳನ್ನು ಗಮನದಲ್ಲಿಟ್ಟುಕೊಂಡಿರುವ 'ಕರ್ನಾಟಕ ಐ4' ನೀತಿಯನ್ನು ನಗರದಲ್ಲಿ ಮಂಗಳವಾರ ನಡೆದ ಬೆಂಗಳೂರು ಐಟಿಇ ಬಿಝ್ ಸಮಾವೇಶದಲ್ಲಿ ಸಿಎಂ ಅನಾವರಣಗೊಳಿಸಿದರು.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಿಂದ ಬೆಂಗಳೂರಿನಲ್ಲಿ ಈಗಾಗಲೇ 9 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ದೇಶದ ಐಟಿ ಕ್ಷೇತ್ರದ  ಶೇ.25ರಷ್ಟು ಆದಾಯವನ್ನು ರಾಜ್ಯ ನೀಡುತ್ತಿದೆ. 2020 ರೊಳಗೆ 20 ಲಕ್ಷ ನೇರ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ. ಇದಲ್ಲದೇ ಆ್ಯನಿಮೇಷನ್ ಹಾಗೂ ಗೇಮಿಂಗ್ ತಂತ್ರಜ್ಞಾನದಿಂದ ಮುಂದಿನ ಆರ್ಥಿಕ ವರ್ಷದಲ್ಲಿ 10 ಸಾವಿರ ಕೋಟಿ ಆದಾಯ ಬರುವ ನಿರೀಕ್ಷೆಯಿದೆ.
ಈ ನೂತನ ನೀತಿಯಿಂದ ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರ ನಗರಗಳಲ್ಲಿಯೂ ಕಂಪನಿ ಪ್ರಾರಂಭಿಸಲು ಅವಕಾಶ ಹಾಗೂ ಆದ್ಯತೆ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಂದರ್ಭದಲ್ಲಿ ಹೇಳಿದರು.

ಹೈಟೆಕ್ ಉದ್ಘಾಟನೆ
ಬೆಂಗಳೂರು ಐಟಿಇ ಬಿಝ್-2013ಕ್ಕೆ ಹೈಟೆಕ್ ರೂಪದಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಲೇಸರ್ ತಂತ್ರಜ್ಞಾನದ ಮೂಲಕ ಟ್ಯಾಬ್ಲೆಟ್‌ನಲ್ಲಿ ಒಂದು ಬಟನ್ ಒತ್ತಿ ಕೂತಲ್ಲಿಂದಲೇ ದೀಪದ ಜ್ಯೋತಿ ಹೊತ್ತಿಸಿದರು. ಮುಖ್ಯಮಂತ್ರಿ ಹಾಗೂ ಸಚಿವ ಜೈಪಾಲ್ ರೆಡ್ಡಿ ಅವರು ಕಾರ್ಯಕ್ರಮ ಆಯೋಜಕರ ಈ ನೂತನ ಉದ್ಘಾಟನೆ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಬೆಂಗಳೂರಿನ ಐಟಿ ಭವಿಷ್ಯವನ್ನು ಈ ಪ್ರಯತ್ನವೇ ಪ್ರದರ್ಶಿಸುತ್ತದೆ ಎಂದು ಸಚಿವ ಜೈಪಾಲ್ ರೆಡ್ಡಿ ಹೇಳಿದರು. ಇದಲ್ಲದೇ ರಾಜ್ಯದ ಸಂಸ್ಕೃತಿ ಹಾಗೂ ಮಾಹಿತಿ ತಂತ್ರಜ್ಞಾನದ ಉತ್ಕೃಷ್ಟತೆಯನ್ನು ತೋರಿಸುವ ನಿಟ್ಟಿನಲ್ಲಿ ಗಣ್ಯರನ್ನು ವೇದಿಕೆಗೆ ಯಕ್ಷಗಾನ ವೇಷಧಾರಿಯ 3-ಡಿ ರೂಪವು ಆಹ್ವಾನಿಸಿತು.

ಕರ್ನಾಟಕ ಐ4 ನೀತಿಯಲ್ಲೇನಿದೆ?
ಕೈಗಾರಿಕೆ ಸ್ಥಾಪಿಸುವ ನಿಟ್ಟಿನಲ್ಲಿ ರಿಯಲ್ ಎಸ್ಟೇಟ್ ಕಂಪನಿಗಳು ಭೂಮಿ ಪಡೆಯುವುದಕ್ಕೆ ಕಡಿವಾಣ ಹಾಕಲಾಗುವುದು. ಭೂಮಿ ಪಡೆಯುವ ಪ್ರತಿ ಕಂಪನಿಯು ಒಂದು ಎಕರೆಗೆ ಒಂದು ಸಾವಿರ ಉದ್ಯೋಗ ಸೃಷ್ಟಿಸುವ ಮುಚ್ಚಳಿಕೆಯನ್ನು ಸಂಸ್ಥೆಗಳು ಬರೆದುಕೊಡಬೇಕು. ಇದಲ್ಲದೇ ಉದ್ಯೋಗಿಗಳಿಗೆ ಕನಿಷ್ಠ 10 ಸಾವಿರ ವೇತನವನ್ನು ನೀಡಲೇಬೇಕು. ಸರ್ಕಾರ ನೀಡುವ ಸಬ್ಸಿಡಿ ಕೂಡ ಸಂಸ್ಥೆಯ ಉದ್ಯೋಗ ಸೃಷ್ಟಿ ಮೇಲೆ ಅವಲಂಬಿತವಾಗಿರುತ್ತದೆ ಎಂದು ನೂತನ ನೀತಿಯಲ್ಲಿ ಹೇಳಲಾಗಿದೆ.
ರಾಜ್ಯದಲ್ಲಿ ಬಂಡವಾಳ ಹೂಡಲು ಬಯಸುವ ಕಂಪನಿಗಳಿಗೆ ಅನುಮತಿ ನೀಡುವ ನಿಟ್ಟಿನಲ್ಲಿ ಏಕಗವಾಕ್ಷಿ ವ್ಯವಸ್ಥೆಯನ್ನು ಪರಿಣಾಮಕಾರಿಗೊಳಿಸಲು ನೀತಿಯಲ್ಲಿ ಆದ್ಯತೆ ನೀಡಲಾಗಿದೆ. ಇವೆಲ್ಲ ಐಟಿ ಕಂಪನಿಗಳಿಗೆ ಸಾರ್ವ ಜನಿಕ ಬಂದ್‌ಗಳಿಂದಲೂ ವಿನಾಯಿತಿ ನೀಡಲಾಗಿದೆ. ಐಟಿ ಕಂಪನಿಗಳಲ್ಲಿ ಉದ್ಯೋಗ ಪಡೆದವರಿಗೆ ಪ್ರಾರಂಭಿಕ 2 ವರ್ಷಗಳಲ್ಲಿ ತಿಂಗಳಿಗೆ 2 ಸಾವಿರ ಭವಿಷ್ಯ ನಿಧಿಯನ್ನು ರಾಜ್ಯ ಸರ್ಕಾರವೇ ಭರಿಸಿಕೊಡಲಿದೆ. ಮುದ್ರಾಂಕ ಶುಲ್ಕ ಶೇ.75ರಷ್ಟು ವಿನಾಯಿತಿ ನೀಡಲಾಗುವುದು ಎಂದು ನೀತಿಯಲ್ಲಿ ಪ್ರಕಟಿಸಲಾಗಿದೆ.

ದೇಶದ ಉತ್ತಮ ಸಿಎಂಗಳಲ್ಲಿ ಒಬ್ಬರು!
ಭಾರತದಲ್ಲಿರುವ ಹಾಲಿ ಇರುವ ಉತ್ತಮ ಮುಖ್ಯಮಂತ್ರಿಗಳಲ್ಲಿ ಸಿದ್ದರಾಮಯ್ಯ ಕೂಡ ಒಬ್ಬರು. ಅಧಿಕಾರಕ್ಕೆ ಬಂದ 5 ತಿಂಗಳಲ್ಲಿ ಉತ್ತಮ ಆಡಳಿತದ ನಿಶಾನೆ ತೋರಿದ್ದಾರೆ. ಸಾಮಾಜಿಕ ಹೋರಾಟಗಳಿಂದ ಬಂದಿರುವ ಸಿದ್ದರಾಮಯ್ಯ ಸಮಾಜದ ಎಲ್ಲ ವಿಭಾಗದ ಅಭಿವೃದ್ಧಿಗೆ ಪಣ ತೊಟ್ಟಿರುವುದು ಶ್ಲಾಘನೀಯ ಎಂದು ಕೇಂದ್ರ  ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಸ್.ಜೈಪಾಲ್ ರೆಡ್ಡಿ ಹೇಳಿದರು.
ವ್ಯವಸ್ಥಿತ ನಗರಾಭಿವೃದ್ಧಿಯಾಗದೆ ಅಭಿವೃದ್ಧಿ ಅಸಾಧ್ಯ ಎನ್ನುವುದನ್ನು ಮುಖ್ಯಮಂತ್ರಿ ಮರೆಯಬಾರದು. ಮಾಹಿತಿ ತಂತ್ರಜ್ಞಾನದ ಅಭಿವೃದ್ಧಿಯಿಂದ ದೇಶದ ಅನಕ್ಷರಸ್ಥ ಸಮಸ್ಯೆ ನಿವಾರಿಸಬಹುದಾಗಿದೆ. ಇಂತಹ ಸೂಕ್ಷ್ಮಗಳನ್ನು ಪ್ರತಿ ಸರ್ಕಾರಗಳು ಅರಿತುಕೊಳ್ಳಬೇಕು. ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಗೂ ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ವಲಯ ಉತ್ತಮ ಕೊಡುಗೆ ನೀಡುತ್ತಿದೆ ಭವಿಷ್ಯದಲ್ಲಿಯೂ ಇದು ಮತ್ತಷ್ಟು ಹೆಚ್ಚಾಗುವಂತಾಗಲಿ ಎಂದು ಜೈಪಾಲ್ ರೆಡ್ಡಿ ಅಭಿಪ್ರಾಯಪಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement