ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮುಗಿಲೀರುಳ್ಳಿ

ಎರಡು ವಾರಗಳ ಹಿಂದೆ ಕೆ.ಜಿ.ಗೆ 30ಕ್ಕೆ ಮಾರಾಟವಾಗುತ್ತಿದ್ದ ಈರುಳ್ಳಿ ಬೆಲೆ ಈಗ 60-70..

Srinivasa Murthy VN
Updated On : 23 Oct 2013, 12:41 pm

-ಶಿವಕುಮಾರ್ ಬೆಳ್ಳಿತಟ್ಟೆ
ಬೆಂಗಳೂರು:
ರಾಜ್ಯದ ಮಾರುಕಟ್ಟೆ ಸೇರಿದಂತೆ ನವದೆಹಲಿ, ಕೋಲ್ಕತ್ತಾ, ಮುಂಬೈ ದೇಶದ ಪ್ರಮುಖ ನಗರಗಳಲ್ಲಿ ಈರುಳ್ಳಿ ದರ ಗಗನಕ್ಕೇರಿದ್ದು ಗ್ರಾಹಕರು ಕಂಗಾಲಾಗುವಂತೆ ಮಾಡಿದೆ. ಎರಡು ವಾರಗಳ ಹಿಂದೆ ಕೆ.ಜಿ.ಗೆ 30ಕ್ಕೆ  ಮಾರಾಟವಾಗುತ್ತಿದ್ದ ಈರುಳ್ಳಿ ಬೆಲೆ ಈಗ 60-70 ವರೆಗೂ ಏರಿಕೆಯಾಗಿದೆ.
ರಾಜ್ಯದಲ್ಲಿ ಈ ಬಾರಿ ಸುರಿದ ಭಾರೀ ಮಳೆಯಿಂದಾಗಿ ಅನೇಕ ಜಿಲ್ಲೆಗಳಲ್ಲಿ ಈರುಳ್ಳಿ ಮೊಳಕೆ ಹಂತದಲ್ಲೇ ನಾಶವಾಗಿದೆ. ಚಿತ್ರದುರ್ಗ, ಬೆಳಗಾವಿ, ಬಳ್ಳಾರಿ, ಚಿಕ್ಕಮಗಳೂರು, ಧಾರವಾಡ, ಬಿಜಾಪುರ, ದಾವಣಗೆರೆ ಜಿಲ್ಲೆಗಳಲ್ಲಿ ಸತತ ಮಳೆಯಿಂದಾಗಿ ಈರುಳ್ಳಿ ಬೆಳೆ ನೆಲಕಚ್ಚಿದೆ.
ಮಜ್ಜಿಗೆ ರೋಗ ಮತ್ತು ಡೌನಿಮಿಲ್ಡೇವ್ ರೋಗವೂ ಬೆಳೆನಾಶಕ್ಕೆ ಕಾರಣವಾಗಿದೆ. ಉತ್ತರದ ಅನೇಕ ರಾಜ್ಯಗಳಲ್ಲೂ ಮಳೆ ಹೆಚ್ಚಾಗಿ ಈರುಳ್ಳಿ ಬೆಳೆ ನಾಶವಾಗಿದೆ. ಪರಿಣಾಮ ಕೊರತೆ ಭಾರಿ ಪ್ರಮಾಣದಲ್ಲಿ ತಲೆದೋರಿದೆ. ಇದನ್ನೇ ಬಂಡವಾಳವಾಗಿ ಮಾಡಿಕೊಂಡಿರುವ ಕಾಳಸಂತೆಕೋರರು ಹಲವೆಡೆ ಕೃತಕ ಅಭಾವ ಸೃಷ್ಟಿ ಮಾಡಿದ್ದಾರೆ.

ಹೀಗಾಗಿ ಈ ಋತುವಿನಲ್ಲಿ ಕೆ.ಜಿ.ಗೆ 20ರಿಂದ 25ರವರೆಗೆ ಮಾರಾಟವಾಗುತ್ತಿದ್ದ ಈರುಳ್ಳಿ ಬೆಲೆ ದಿಢೀರ್  70ಕ್ಕೇರಿದೆ. ಈರುಳ್ಳಿ ಬೆಲೆ ಇನ್ನೂ ಎರಡು ತಿಂಗಳು ಇದೇ ರೀತಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಹಾಪ್‌ಕಾಮ್ಸ್‌ನ ತರಕಾರಿ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ.
ಸತತ ಮಳೆ ತಂದ ಆಪತ್ತು: ರಾಜ್ಯದಲ್ಲಿ ಈ ಬಾರಿ ಮುಂಗಾರು ಹಂಗಾಮಿನಲ್ಲಿ 1ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗಿತ್ತು. ಚಿತ್ರದುರ್ಗ, ಬೆಳಗಾವಿ, ಬಳ್ಳಾರಿ, ಚಿಕ್ಕಮಗಳೂರು, ಧಾರವಾಡ, ಬಿಜಾಪುರ, ದಾವಣಗೆರೆ ಜಿಲ್ಲೆಗಳಲ್ಲಿ ಬಿತ್ತನೆ ಚನ್ನಾಗಿಯೇ ಆಗಿತ್ತು. ಅಕ್ಟೋಬರ್ ವೇಳೆಗೆ ಬೆಳೆ ಕೈಗೆ ಸಿಗುವ ನಿರೀಕ್ಷೆಯೂ ಇತ್ತು. ಅಷ್ಟೇ ಅಲ್ಲ. ಈ ವರ್ಷ ಸುಮಾರು 12ಲಕ್ಷ ಟನ್ ಈರುಳ್ಳಿ ಉತ್ಪಾದನೆಯಾಗುವ ಸಾಧ್ಯತೆಯೂ ಕಂಡಿತ್ತು. ಆದರೆ, ಮುಂಗಾರು ಕೊನೆ ದಿನಗಳಲ್ಲಿ ವ್ಯಾಪಕವಾಗಿ ಮಳೆ ಭಾರಿ ಪ್ರಮಾಣದಲ್ಲಿ ಸುರಿದಿದ್ದರಿಂದ ಹೊಲಗಳಲ್ಲಿ ನೀರು ನಿಲ್ಲುವಂತಾಗಿ ಬೆಳೆ ನಾಶದ ಹಾದಿ ಹಿಡಿಯಿತು. ಇದರಿಂದಾಗಿ ಈರುಳ್ಳಿ ಹೆಕ್ಟೇರ್‌ಗೆ 10-12 ಟನ್ ಸಿಗುವ ಬದಲು 7ಟನ್‌ವರೆಗೆ ಸಿಗುವಂತಾಗಿದೆ. ಇದರಿಂದ ಅಭಾವ ತಲೆದೋರಿ ಬೇಡಿಕೆ ಹೆಚ್ಚಾಗಿದೆ.
ರಾಜ್ಯದ ಈರುಳ್ಳಿ ಉತ್ತರಕ್ಕೆ: ಹಾಗೆ ನೋಡಿದರೆ, ಕರ್ನಾಟಕದಿಂದ ಹೊರ ರಾಜ್ಯಗಳಿಗೆ ಈರುಳ್ಳಿ ರಫ್ತಾಗುವುದಿಲ್ಲ. ಬೇರೆ ರಾಜ್ಯಗಳಿಂದ ಆಮದು ಮಾಡಿಕೊಳ್ಳುವುದು ಕಡಿಮೆ. ಏಕೆಂದರೆ, ರಾಜ್ಯದಲ್ಲಿ ಬೆಳೆಯುವ ಈರುಳ್ಳಿಯನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ತಮಿಳುನಾಡು, ಕೇರಳ ರಾಜ್ಯದವರು ಖರೀದಿಸುತ್ತಾರೆ. ಮಹಾರಾಷ್ಟ್ರದ ನಾಸಿಕ್ ಸುತ್ತಮುತ್ತಲಿನ ಬೆಳೆಗಾರರು ರಾಜ್ಯಕ್ಕೆ ಈರುಳ್ಳಿ ತಂದು ಮಾರುತ್ತಾರೆ. ಅಲ್ಲಿಂದ ನಿತ್ಯ 60 ಟ್ರಕ್‌ಗಳಷ್ಟು ಈರುಳ್ಳಿ ಬಂದು ಬೀಳುತ್ತಿತ್ತು. ಕಳೆದ ಎರಡು ವಾರಗಳಿಂದ ನಾಸಿಕ್‌ನಿಂದ ಬರುತ್ತಿದ್ದ ಈರುಳ್ಳಿ ಟ್ರಕ್‌ಗಳು ನಾಪತ್ತೆಯಾಗಿವೆ. ಅಂದರೆ, ಬೆಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಳೆಗಾರರು ಉತ್ತರ ರಾಜ್ಯಗಳಿಗೆ ಈರುಳ್ಳಿ ಪೂರೈಸುತ್ತಿದ್ದಾರೆ.
ಅದೇರೀತಿ ರಾಜ್ಯದ ಬೆಳೆಗಾರರು ಹೆಚ್ಚಿನ ಬೆಲೆಗಾಗಿ ಉತ್ತರದ ರಾಜ್ಯಗಳಿಗೆ ಈರುಳ್ಳಿ ಪೂರೈಸುತ್ತಿದ್ದು, ಇದರಿಂದ ಅಭಾವ ಹೆಚ್ಚಾಗಿ ಬೆಲೆ ಏರುತ್ತಿದೆ ಎಂದು ಎಪಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.
ಕೃಷಿಗೋ, ತೋಟಗಾರಿಕೆಗೋ: ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ ಈರುಳ್ಳಿ ಬೆಳೆ ವಿಚಾರ ನಮ್ಮ ಇಲಾಖೆಗೇ ಬರುವುದಿಲ್ಲ ಎಂದಿದ್ದಾರೆ. ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಈರುಳ್ಳಿ ವಿಚಾರ ನನ್ನ ವ್ಯಾಪ್ತಿಗೆ ಬರುವುದಿಲ್ಲ. ಅದೇನಿದ್ದರೂ ಕೃಷಿ ಇಲಾಖೆಗೇ ಬರುತ್ತದೆ. ಈರುಳ್ಳಿ ಬೆಲೆ ಏರಿಕೆಯಾಗಲಿ, ಕಡಿಮೆಯಾಗಲಿ ನಮ್ಮ ಇಲಾಖೆ ಗಮನ ಹರಿಸುವುದಿಲ್ಲ ಎಂದಿದ್ದಾರೆ. ಈ ಬಗ್ಗೆ ಕೃಷಿ ಸಚಿವರನ್ನು ಸಂಪರ್ಕಿಸಿದಾಗ, ಈರುಳ್ಳಿ ತೋಟಗಾರಿಕೆ ಬೆಳೆ. ಇದೇನಿದ್ದರೂ ತೋಟಗಾರಿಕೆ ಸಚಿವರೇ ನೋಡಿಕೊಳ್ಳುತ್ತಾರೆ ಎಂದು ಹೇಳಿದರು.
ದೆಹಲಿ ಚುನಾವಣೆ ಮೇಲೆ ಪರಿಣಾಮ: 1998ರಲ್ಲಿ ಈರುಳ್ಳಿ ಬೆಲೆ ನಿಯಂತ್ರಿಸದೇ ಇದ್ದುದರಿಂದಲೇ ಆಗ ದೆಹಲಿಯಲ್ಲಿ ಆಡಳಿತ ನಡೆಸುತ್ತಿದ್ದ ಬಿಜೆಪಿ ನೆಲಕಚ್ಚಿದ್ದು. ಇದೀಗ ಅಂಥದ್ದೇ ಪರಿಸ್ಥಿತಿ ಕಾಂಗ್ರೆಸ್‌ನ ಮುಂದೆಯೂ ನಿಂತಿದೆ. ಸದ್ಯದಲ್ಲೇ ದೆಹಲಿ ರಾಜ್ಯದ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಈರುಳ್ಳಿ ಬೆಲೆ ನಿಯಂತ್ರಣ ಕೇಂದ್ರ ಸರ್ಕಾರಕ್ಕೆ ಸವಾಲಿನದ್ದಾಗಿದೆ.

-ರಫ್ತು ನಿಷೇಧಕ್ಕೆ ಚಿಂತನೆ
ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ರಫ್ತು ನಿಷೇಧದಂಥ ಕ್ರಮಕ್ಕೆ ಮುಂದಾಗಿದೆ. ದೆಹಲಿ ಸೇರಿದಂತೆ ದೇಶ ಪೂರ್ತಿ ಈರುಳ್ಳಿ ಬೆಲೆ 60 ರಿಂದ 100ರ ವರೆಗೆ ಇದೆ. ಹೀಗಾಗಿ ದೇಶೀಯವಾಗಿ ಬೇಡಿಕೆ ಈಡೇರಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ ರಫ್ತು ನಿಷೇಧಕ್ಕೆ ಮುಂದಾಗಿದೆ. ಈ ಸಂಬಂಧ ಕೇಂದ್ರ ಆಹಾರ ಸಚಿವ ಕೆ.ವಿ. ಥಾಮಸ್ ಅವರೇ ಮಾಹಿತಿ ನೀಡಿದ್ದಾರೆ.

-ಆಮದಿಗೆ ಮುಂದಾದ ಸರ್ಕಾರ
ಈರುಳ್ಳಿ ಕೊರತೆ ಕಾಡುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ, ಚೀನಾ ಮತ್ತು ಈಜಿಪ್ಟ್‌ನಿಂದ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ದೇಶದಲ್ಲಿ ಪ್ರತಿ ತಿಂಗಳು 9 ರಿಂದ 10 ಲಕ್ಷ ಟನ್ ಈರುಳ್ಳಿ ಬೇಕು. ಹೀಗಾಗಿ 3 ರಾಷ್ಟ್ರಗಳಿಂದ ತರಿಸಿಕೊಳ್ಳುವ ಮೂಲಕ ದೇಶೀಯವಾಗಿ ಈರುಳ್ಳಿ ಪೂರೈಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಈರುಳ್ಳಿ ಬೆಲೆ ಏರಿಕೆಯಾಗಿರುವ ವಿಚಾರ ನನಗೆ ಗೊತ್ತಿಲ್ಲ. ಬೆಲೆ ಕಡಿಮೆಯಾದಾಗ ಮಾತ್ರ ಚಿಂತಿಸುತ್ತೇವೆ. ಇಲ್ಲವಾದರೆ ಅದಕ್ಕೂ ನಮಗೂ ಸಂಬಂಧವೇ ಇರುವುದಿಲ್ಲ.
-ವಸ್ತ್ರದ್, ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ದೇಶಕ

ಬೆಲೆ ಹೆಚ್ಚಳಕ್ಕೆ ಕಾರಣ
ಮಹಾರಾಷ್ಟ್ರ, ಕರ್ನಾಟಕದಲ್ಲಿ ಮಳೆ ಹೆಚ್ಚಳ
ಈ ರಾಜ್ಯಗಳಿಂದ ದೇಶಕ್ಕೆ ಶೇ.45 ರಷ್ಟು ಈರುಳ್ಳಿ ಪೂರೈಕೆ
ಮಹಾರಾಷ್ಟ್ರದಲ್ಲಿ ಈರುಳ್ಳಿ ಬೆಳೆದಿದ್ದೇ ಕಡಿಮೆ, ಇದರಿಂದಲೂ ಕೊರತೆ
ಈಗ ಖಾರೀಫ್ ಬೆಳೆ ಸಮಯ, ಆದರೆ ಕಟಾವಿನ ವೇಳೆಯಲ್ಲಿ ಭಾರಿ ಮಳೆ
ಈರುಳ್ಳಿ ಕೊರತೆ ಸೃಷ್ಟಿಸುತ್ತಿರುವ ಕಾಳಸಂತೆಕೋರರು
ಮಹಾರಾಷ್ಟ್ರದಲ್ಲಿ ಈರುಳ್ಳಿಯನ್ನು ಮೂರು ಬಾರಿ ಬೆಳೆಯಲಾಗುತ್ತದೆ
ಆದರೆ ಈ ಬಾರಿ ಎರಡೇ ಬೆಳೆ, ಇದಕ್ಕೂ ನಾನಾ ಹಾನಿ
ಸದ್ಯದಲ್ಲೇ ದೀಪಾವಳಿ ಇರುವುದರಿಂದ ಬೇಡಿಕೆ ಹೆಚ್ಚಳ

ಈರುಳ್ಳಿ ದರ (ಪ್ರತಿ ಕೆಜಿಗೆ ರು. ಗಳಲ್ಲಿ)
ದೆಹಲಿ-80 - 100
ಚೆನ್ನೈ-20 - 60
ಮುಂಬೈ-60 - 80
ಕೋಲ್ಕತಾ-60 - 80
ಪಟನಾ-80 - 100

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement