ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರಸ್ತೆ ಗುಂಡಿ ಮುಚ್ಚಲು 1000 ಕೋಟಿ ವೆಚ್ಚ

ರಾಜ್ಯ ಹೆದ್ದಾರಿ, ಪ್ರಮುಖ ಜಿಲ್ಲಾ ರಸ್ತೆಗಳ ಗುಂಡಿ ಮುಚ್ಚಲು ಸರ್ಕಾರ 1000 ಕೋಟಿ ವೆಚ್ಚ ಮಾಡಲಿದೆ.

Srinivasa Murthy VN
Updated On : 23 Oct 2013, 11:34 am

ಬೆಂಗಳೂರು: ರಾಜ್ಯ ಹೆದ್ದಾರಿ, ಪ್ರಮುಖ ಜಿಲ್ಲಾ ರಸ್ತೆಗಳ ಗುಂಡಿ ಮುಚ್ಚಲು ಸರ್ಕಾರ 1000 ಕೋಟಿ ವೆಚ್ಚ ಮಾಡಲಿದೆ. ಇದಕ್ಕಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದು, ಜನವರಿ-ಫೆಬ್ರವರಿ ವೇಳೆಗೆ ಕಾಮಗಾರಿ ಮುಗಿಯಲಿದೆ ಎಂದು ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ.
ರಾಜ್ಯದಲ್ಲಿ ಸುಮಾರು 177 ಕಿಮೀ ರಾಜ್ಯ ಹೆದ್ದಾರಿ ರಸ್ತೆ ಸಂಪೂರ್ಣ ಹಾಳಾಗಿದೆ. ಅಲ್ಲದೆ, ಜಿಲ್ಲಾ ಪ್ರಮುಖ ರಸ್ತೆಗಳನ್ನು 1000 ಕಿಮೀ ದುರಸ್ತಿ ಮಾಡಬೇಕಾಗಿದೆ. ಇದಕ್ಕಾಗಿ ಮುಖ್ಯಮಂತ್ರಿ ಅವರನ್ನು ಮನವಿ ಮಾಡಿಕೊಳ್ಳಲಾಗಿತ್ತು. ಹಣಕಾಸು ಇಲಾಖೆ 1000 ಕೋಟಿ ನೀಡಲು ಸಮ್ಮತಿಸಿದೆ. ಹೀಗಾಗಿ ಕ್ರಿಯಾಯೋಜನೆ ರೂಪಿಸಲಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಹೇಳಿದರು. ರಾಜ್ಯದ ರಸ್ತೆಗಳ ನಿರ್ಮಾಣ ಹಾಗೂ ಅಭಿವೃದ್ಧಿಯಲ್ಲಿ ಯಾವುದೇ ರಾಜಿ ಇಲ್ಲ. ರಸ್ತೆಗಳು ಹಾಳಾದರೆ ಅದಕ್ಕೆ ಗುತ್ತಿಗೆದಾರರನ್ನೇ ಹೊಣೆ ಮಾಡಲಾಗುತ್ತದೆ. ಟೆಂಡರ್‌ನಲ್ಲಿರುವ ನಿಯಮಗಳಂತೆ ಕಾರ್ಯನಿರ್ವಹಿಸಲಾಗುತ್ತದೆ. ಇದರಲ್ಲಿ ಎಂಜಿನಿಯರ್ ಅವರನ್ನೂ ಜವಾಬ್ದಾರರನ್ನಾಗಿಸಿ ಕ್ರಮ ಕೈಗೊಳ್ಳಲಾಗುತ್ತದೆ. ರಸ್ತೆಗಳ ಗುಣಮಟ್ಟ ಕಾಪಾಡಿಕೊಳ್ಳಲು ಕಾಮಗಾರಿ ನಿರ್ವಹಣೆಗೆ ವಿಚಕ್ಷಣ ದಳ ರಚಿಸಲಾಗುತ್ತದೆ. ಕಾಮಗಾರಿಗಳಿಗೆ ಸಮಯ ನಿಗದಿ ಮಾಡಿ ಅದನ್ನು ಪೂರ್ಣಗೊಳಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಕೇಂದ್ರದ ಜತೆ ಚರ್ಚೆ: ರಾಜ್ಯ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಗೆ ಉನ್ನತೀಕರಿಸುವ ಅಥವಾ ಸೇರ್ಪಡೆಗೊಳಿಸುವ ಬಗ್ಗೆ ಕೇಂದ್ರ ಭೂಸಾರಿಗೆ ಸಚಿವರೊಂದಿಗೆ ಮುಖ್ಯಮಂತ್ರಿ ಸೇರಿದಂತೆ ನಾನೂ ಮಾತುಕತೆ ನಡೆಸಿದ್ದೇನೆ. ಈ ಬಗೆಗಿನ ಆದೇಶ ಶೀಘ್ರವೇ ಹೊರಬೀಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಂತ್ರಿಕ ಕಾರ್ಯಾಗಾರ: ರಾಜ್ಯದಲ್ಲಿ ರಸ್ತೆ ನಿರ್ಮಾಣ ಹಾಗೂ ಅಭಿವೃದ್ಧಿ ವಿಚಾರದಲ್ಲಿ ತಂತ್ರಜ್ಞಾನಗಳು, ಸುರಕ್ಷತಾ ಸಂಚಾರ ವ್ಯವಸ್ಥೆಯ ಅನುಭವ ವಿನಿಮಯ, ಪ್ರಾದೇಶಿಕ ಹಾಗೂ ದೇಶೀಯ ಸಂಬಂಧಗಳ ವೃದ್ಧಿಗೆ ಅನುಕೂಲವಾಗುವ ದೃಷ್ಟಿಯಿಂದ ನಗರದಲ್ಲಿ ತಾಂತ್ರಿಕ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಮಹದೇವಪ್ಪ ಇದೇ ವೇಳೆ ತಿಳಿಸಿದರು.

ಇಂದಿನಿಂದ ಕಾರ್ಯಾಗಾರ: ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ್‌ದಲ್ಲಿ ನಡೆಯುವ ತಾಂತ್ರಿಕ ಕಾರ್ಯಾಗಾರವನ್ನು ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಕೆ ಇಲಾಖೆ ಹಾಗೂ ಇಂಡಿಯನ್ ರೋಡ್ಸ್ ಕಾಂಗ್ರೆಸ್ ಸಹಭಾಗಿತ್ವದಲ್ಲಿ ಅ.23 ಮತ್ತು 25ರಂದು ಆಯೋಜಿಸಲಾಗಿದೆ ಎಂದರು.
ರಸ್ತೆ ನಿರ್ಮಾಣದಲ್ಲಿ ಹೊಸ ಆವಿಷ್ಕಾರಗಳಾದ ಜಿಯೊಸೆಲ್, ಜಿಯೊಗ್ರಿಡ್ ಮತ್ತು ಜಿಯೊ ಮೆಬ್ರೈನ್ ಸಾಮಗ್ರಿಗಳ ಬಳಕೆಯಿಂದ ರಸ್ತೆ ದೃಢತೆ ಹಾಗೂ ಸಾಮರ್ಥ್ಯ ವೃದ್ಧಿಯಾಗುತ್ತದೆ. ಸಂಸ್ಕರಿಸಿದ ಡಾಂಬರುಗಳಿಂದ ರಸ್ತೆ ಮೇಲ್ಪದರದ ಬಾಳಿಕೆ ಹೆಚ್ಚುತ್ತದೆ. ಪರಿಸರ ಕಾಪಾಡಲು, ಡಾಂಬರು ಪುನರ್ಬಳಕೆ ಹಾಗೂ ಕೇಂದ್ರೀಕೃತ ಡಾಂಬರು ಪುನರ್‌ಬಳಕಾ ಸ್ಥಾವರದ ಅಗತ್ಯ ಇದೆ. ಇದರಿಂದ ಹೆಚ್ಚಿನ ಆರ್ಥಿಕ ಹೊರೆ ತಪ್ಪಿಸಬಹುದು. ಇದೆಲ್ಲದರ ಬಗ್ಗೆಯೂ ತಜ್ಞರಿಂದ ಸಮಾಲೋಚನೆ ಹಾಗೂ ಯೋಜನೆಗಳು ಈ ಕಾರ್ಯಾಗಾರದಲ್ಲಿ ಚರ್ಚೆಯಾಗಲಿವೆ ಎಂದರು. ಕಾರ್ಯಾಗಾರದಲ್ಲಿ ಮಹಾರಾಷ್ಟ್ರ, ಕೇರಳ, ಛತ್ತೀಸ್‌ಗಢದ ಎಂಜಿನಿಯರ್‌ಗಳು ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement