ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸುಪ್ರೀಂನಲ್ಲಿ ಪ್ರಾಣಭಿಕ್ಷೆ ಅರ್ಜಿ ವಿಚಾರಣೆ ಶುರು

ಪ್ರಾಣಭಿಕ್ಷೆ ಕೋರಿ ಕರ್ನಾಟಕದ ಎಂಟು ಜನರು ಸೇರಿದಂತೆ ಗಲ್ಲು ಶಿಕ್ಷೆಗೆ ಒಳಗಾಗಿರುವ ಅಪರಾಧಿಗಳು ಸಲ್ಲಿಸಿರುವ ಅರ್ಜಿಗಳ...

Srinivasa Murthy VN
Updated On : 23 Oct 2013, 11:59 am

ನವದೆಹಲಿ: ಪ್ರಾಣಭಿಕ್ಷೆ ಕೋರಿ ಕರ್ನಾಟಕದ ಎಂಟು ಜನರು ಸೇರಿದಂತೆ ದೇಶಾದ್ಯಂತ ಗಲ್ಲು ಶಿಕ್ಷೆಗೆ ಒಳಗಾಗಿರುವ ಅಪರಾಧಿಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರದಿಂದ ಆರಂಭಿಸಿದೆ.
ಆದರೆ, ಈ ಅರ್ಜಿಗಳ ವಿಚಾರಣೆಗೆ 'ತಂದೂರಿ ಪ್ರಕರಣ'ದ ತೀರ್ಪನ್ನು ಮಾದರಿಯಾಗಿಟ್ಟುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಜತೆಗೆ ಪ್ರಕರಣಗಳ ವಿಲೇವಾರಿ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಅಪರಾಧಿಗಳು ಅನುಭವಿಸಿರುವ ನೋವನ್ನು ಗಮನಕ್ಕೆ ತೆಗೆದುಕೊಳ್ಳಬಹುದು ಎಂದೂ ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ಸದಾಶಿವಂ, ನ್ಯಾ. ರಂಜನ್ ಗೊಗೋಯ್, ನ್ಯಾ. ಶಿವಕೀರ್ತಿ ಸಿಂಗ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ, ಕರ್ನಾಟಕದ ಎಂಟು ಅಪರಾಧಿಗಳು ಸೇರಿದಂತೆ ದೇಶಾದ್ಯಂತ ಗಲ್ಲು ಶಿಕ್ಷೆಗೆ ಒಳಗಾಗಿರುವ ಅಪರಾಧಿಗಳು ಮರಣ ದಂಡನೆ ಶಿಕ್ಷೆ ರದ್ದುಗೊಳಿಸಿ, ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಬೇಡಿ ಸಲ್ಲಿಸಿರುವ ಅರ್ಜಿ ವಿಚಾರಣೆ ಆರಂಭಿಸಿತು.
ಕರ್ನಾಟಕದ ಕೊಳ್ಳೇಗಾಲದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅಪರಾಧಿಗಳೆಂದು ಘೋಷಿಸಿರುವ ಶಿವು ಮತ್ತು ಜಡೆಸ್ವಾಮಿ, ನರಹಂತಕ ವೀರಪ್ಪನ್‌ನ ಸಹಚರರಾದ ಬಿಲ್ವೆಂದ್ರನ್, ಜ್ಞಾನಪ್ರಕಾಶ್, ಸೈಮನ್, ಮೀಸೆಕಾರ್ ಮಾದಯ್ಯ, ಮಂಗಳೂರು ವಾಮಂಜೂರಿನ ನರಹಂತಕ ಪ್ರವೀಣ್‌ಕುಮಾರ್, ಪತ್ನಿ ಮತ್ತು ಮಗು ಕೊಲೆ ಮಾಡಿದ ಸಾಯಿಬಣ್ಣ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಯಲಿದೆ. ಈ ಎಲ್ಲಾ ಅಪರಾಧಿಗಳ ಕ್ಷಮಾದಾನ ಅರ್ಜಿಯನ್ನು ಇತ್ತೀಚೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಿರಸ್ಕರಿಸಿದ್ದರು.

ತಂದೂರಿ ಪ್ರಕರಣ ಮಾದರಿ ಅಲ್ಲ: ಅಕ್ಟೋಬರ್ 8 ರಂದು ಸುಪ್ರೀಂ ಕೋರ್ಟ್ ತಂದೂರಿ ಕೊಲೆ ಪ್ರಕರಣದ ಅಪರಾಧಿ ಸುಶೀಲ್ ಶರ್ಮನಿಗೆ ಕೆಳ ನ್ಯಾಯಾಲಯ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ರದ್ದು ಮಾಡಿ, ಜೀವಾವಧಿ ಶಿಕ್ಷೆ ವಿಧಿಸಿತ್ತು. ವೈಯಕ್ತಿಕ ಸಂಬಂಧದ ಹಿನ್ನೆಲೆಯಲ್ಲಿ ಸುಶೀಲ್ ಶರ್ಮ ತನ್ನ ಪತ್ನಿ ನೈನಾ ಸಾಹ್ನಿ ಕೊಲೆ ಮಾಡಿದ್ದು, ಆತ ಪರಿವರ್ತನೆಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲವಾದ್ದರಿಂದ ಮರಣ ದಂಡನೆ ಬದಲಿಗೆ ಜೀವಾವಧಿ ಶಿಕ್ಷೆ ನೀಡಬಹುದು ಎಂದು ಮುಖ್ಯ ನ್ಯಾಯಮೂರ್ತಿ ಪಿ.ಸದಾಶಿವಂ ಅವರೇ ತೀರ್ಪು ನೀಡಿದ್ದರು. ಈ ಹಿನ್ನೆಲೆಯಲ್ಲಿ ಎರಡು ವಾರಗಳ ಹಿಂದಷ್ಟೆ ನೀಡಿದ ತೀರ್ಪನ್ನು ಮಾನದಂಡವಾಗಿ ಪರಿಗಣಿಸಲಾಗದು ಎಂದು ವಿಚಾರಣೆ ಆರಂಭದಲ್ಲೇ ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ಸ್ಪಷ್ಟಪಡಿಸಿದರು. ಮಂಗಳವಾರ ಉತ್ತರಪ್ರದೇಶದ ಪ್ರಕರಣಗಳ ವಿಚಾರಣೆ ನಡೆದಿದ್ದು, ಕರ್ನಾಟಕದ ಪ್ರಕರಣಗಳಿನ್ನು ವಿಚಾರಣೆಗೆ ಬರಬೇಕಿದೆ.

ರಾಜ್ಯದವರು ಯಾರು?

- ಕನ್ನಡಪ್ರಭ ಪ್ರತಿನಿಧಿಯಿಂದ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement