16,000 ಕೋಟಿ ಕೊಡಿ
ಹನ್ನೆರಡನೇ ಪಂಚವಾರ್ಷಿಕ ಯೋಜನೆ ಆಶಯ ಈಡೇರಿಸಲು ರಾಜ್ಯಕ್ಕೆ 16,000 ಕೋಟಿ ಅಭಿವೃದ್ಧಿ ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ..
ಕ.ಪ್ರ.ವಾರ್ತೆ, ಬೆಂಗಳೂರು, ಅ. 24-
ಹನ್ನೆರಡನೇ ಪಂಚವಾರ್ಷಿಕ ಯೋಜನೆ ಆಶಯ ಈಡೇರಿಸಲು ರಾಜ್ಯಕ್ಕೆ 16,000 ಕೋಟಿ ಅಭಿವೃದ್ಧಿ ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಹಣಕಾಸು ಆಯೋಗಕ್ಕೆ ಮನವಿ ಮಾಡಿದ್ದಾರೆ.
ಎರಡು ದಿನಗಳ ಭೇಟಿಗಾಗಿ ರಾಜ್ಯಕ್ಕೆ ಆಗಮಿಸಿದ್ದ 14ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ.ವೈ.ವಿ. ರೆಡ್ಡಿ ನೇತೃತ್ವದ ನಿಯೋಗವನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಈ ಮನವಿ ಸಲ್ಲಿಸಿದ್ದಾರೆ.
ಮೂಲ ಸೌಕರ್ಯ, ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿನ ಅಂತರವನ್ನು ಕಡಿಮೆ ಮಾಡಿ 12ನೇ ಪಂಚವಾರ್ಷಿಕ ಯೋಜನೆಯ ಆಶಯ ಈಡೇರಿಕೆ ಮತ್ತು ಸುಸ್ಥಿರ ಅಭಿವೃದ್ಧಿಯ ಗುರಿ ಸಾಧಿಸಲು ಈ ಮೊತ್ತವನ್ನು ಬಿಡುಗಡೆ ಮಾಡುವ ಅಗತ್ಯವಿದೆ ಎಂದು ಸಿದ್ದರಾಮಯ್ಯ ಬಲವಾಗಿ ಪ್ರತಿಪಾದಿಸಿದರು.
ರಾಜ್ಯ ಸರ್ಕಾರದ ತರ್ಕಬದ್ಧ ಹಾಗೂ ಆರ್ಥಿಕ ಸಮರ್ಥನೆಗಳನ್ನು ಒಳಗೊಂಡ ಈ ಕೋರಿಕೆಗೆ ಆಯೋಗದಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯುವುದೆಂಬ ನಂಬಿಕೆ ಇದೆ. ರಾಜ್ಯದ ಅಭಿವೃದ್ಧಿ ಕಾರ್ಯಸೂಚಿಯನ್ನು ಉತ್ಸಾಹದಿಂದ ಮುಂದುವರಿಸಲು ಇದರಿಂದ ಅನುಕೂಲವಾಗುತ್ತದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ವಹಿಸಲಾದ ಆರ್ಥಿಕ ಜವಾಬ್ದಾರಿ ನಿಭಾಯಿಸಲು, ಕೇಂದ್ರ- ರಾಜ್ಯಗಳ ಆರ್ಥಿಕ ಸಂಬಂಧದ ಕುರಿತು ಬಹುಕಾಲದಿಂದ ನಡೆಯುತ್ತಿರುವ ಚರ್ಚೆಗೆ ನ್ಯಾಯ ಸಮ್ಮತ ಪರಿಹಾರ ಕಲ್ಪಿಸಲು ಇದರಿಂದ ಸಾಧ್ಯವಾಗುತ್ತದೆ ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ.
ಮೆಗಾ ಸಿಟಿ ಅಭಿವೃದ್ಧಿ: ಮೆಗಾ ಸಿಟಿಗಳ ಅಭಿವೃದ್ಧಿ ಬಗ್ಗೆ ಗಮನ ಹರಿಸಬೇಕಾದ ತುರ್ತು ಅವಶ್ಯಕತೆ ಇದೆ. ಇವು ದೇಶದ ಆರ್ಥಿಕ ಬೆಳವಣಿಗೆಯ ಚಾಲನಾ ಶಕ್ತಿಗಳು. ಹೀಗಾಗಿ ಇವುಗಳ ಅಭಿವೃದ್ಧಿ ರಾಷ್ಟ್ರೀಯ ಜವಾಬ್ದಾರಿ ಎಂದು ಪರಿಗಣಿಸಬೇಕು. ಜನಸಂಖ್ಯೆ ಆಧಾರದ ಮೇಲೆ ಹಂಚುವ ಅಭಿವೃದ್ಧಿ ನಿಧಿಯ ಶೇ.1ರಷ್ಟನ್ನು ಇಂಥ ನಗರಗಳಿಗೆ ನಿಗದಿಪಡಿಸಬೇಕು ಎಂದರು.
ವಿಭಜಿಸಬಹುದಾದ ಕ್ರೋಢೀಕೃತ ನಿಧಿಯ ಶೇ.5ರಷ್ಟನ್ನು ಪಂಚಾಯಿತ್ ರಾಜ್ ಸಂಸ್ಥೆಗಳಿಗೆ ಹಾಗೂ ಶೇ.3ರಷ್ಟನ್ನು ನಗರ ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕು. ಸ್ಥಳೀಯ ಸಂಸ್ಥೆಗಳಿಗೆ ಸಂಪನ್ಮೂಲವನ್ನು ಪೂರೈಸಲು ಅನುವಾಗುವಂತೆ ರಾಜ್ಯಗಳ ಆರ್ಥಿಕ ತಳಹದಿಯನ್ನು ಸಶಕ್ತಗೊಳಿಸುವುದಕ್ಕೆ ಆಯೋಗಕ್ಕೆ ಅಧಿಕಾರವಿದೆ ಎಂದು ಅಭಿಪ್ರಾಯಪಟ್ಟರು.
ಅಧಿಕಾರ ವಿಕೇಂದ್ರಿಕರಣ ತತ್ವಜಾರಿಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಸುದೀರ್ಘ ಇತಿಹಾಸವನ್ನು ನಾವು ಹೊಂದಿದ್ದೇವೆ. ಆಯೋಗದ 11ನೇ ಅನುಸೂಚಿಯಲ್ಲಿ ಪಟ್ಟಿ ಮಾಡಿದ 29 ವಿಷಯಗಳನ್ನು ಮೂರು ಸ್ತರದ ಪಂಚಾಯಿತಿಗಳಿಗೆ ನೀಡಲಾಗಿದೆ. ರಾಜ್ಯ ಹಾಗೂ ಕೇಂದ್ರ ಪುರಸ್ಕೃತ 400ಕ್ಕೂ ಹೆಚ್ಚು ಯೋಜನೆಗಳನ್ನು ಅವುಗಳಿಗೆ ವರ್ಗಾಯಿಸಲಾಗಿದೆ ಎಂದರು.
ಸೆಸ್: ಹಂಚಿಕೆ ಮಾಡಿಕೊಳ್ಳಲಾಗದ ಗಳಿಕೆಗಳಾದ ಸೆಸ್ ಮತ್ತು ಸರ್‌ಚಾರ್ಜ್ ವಿಧಿಸುವ ಕೇಂದ್ರದ ಕ್ರಮದಿಂದ ಭಾಗಶಃ ವಿತ್ತೀಯ ಕೊರತೆ ಉಂಟಾಗುತ್ತಿದೆ. ಇದನ್ನು ನಿವಾರಿಸಲು ಮೂರು ವರ್ಷಗಳಿಗೂ ಹೆಚ್ಚು ಕಾಲದಿಂದ ಇರುವ ಸೆಸ್‌ಗಳು ಮತ್ತು ಸರ್‌ಚಾರ್ಜ್‌ಗಳನ್ನು ವಿಭಜಿಸಬಹುದಾದ ರಾಶಿ ಮೊತ್ತದ ಭಾಗವಾಗಿಸಬೇಕು ಎಂದು ಹೇಳಿದರು.
ಕೇಂದ್ರ ಯೋಜನಾ ವೆಚ್ಚದ ಮೂರನೇ ಎರಡರಷ್ಟು ಪಾಲು ರಾಜ್ಯ ವ್ಯಾಪ್ತಿಯಲ್ಲಿರುವ ವಲಯದಲ್ಲಿದೆ. ಹೀಗಾಗಿ ಕೇಂದ್ರದ ತೆರಿಗೆಯಲ್ಲಿನ ರಾಜ್ಯದ ಪಾಲನ್ನು ಈಗಿರುವ ಶೇ.32ರಿಂದ ಶೇ.40ಕ್ಕೆ ಹೆಚ್ಚಿಸಬೇಕು. ಆಯೋಗ ಈ ಶಿಫಾರಸು ಮಾಡುವ ಮೂಲಕ ಶಾಸನಬದ್ಧ ವರ್ಗಾವಣೆಯ ಪಾರಮ್ಯವನ್ನು ಉಳಿಸಬೇಕು ಎಂದು ಮನವಿ ಮಾಡಿದರು.
ಸಾಲ ಪರಿಷ್ಕರಣೆ: ಕರ್ನಾಟಕದಂತಹ ರಾಜ್ಯಗಳು ಹೆಚ್ಚಿನ ಮಟ್ಟದ ಸಾಲವನ್ನು ಭರಿಸುವ ಹಾಗೂ ಆ ಮೂಲಕ ಹೂಡಿಕೆ ಮಟ್ಟವನ್ನು ಹೆಚ್ಚಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ರಾಜಸ್ವ ಸ್ವೀಕೃತಿಗೂ ಬಡ್ಡಿ ಪಾವತಿಗೂ ಇರುವ ಅನುಪಾತ ಶೇ.9ರ ಆಸುಪಾಸಿನಲ್ಲಿದ್ದು, ಕೇಂದ್ರ ನಿಗದಿ ಮಾಡಿದ ಶೇ.15ಕ್ಕಿಂತ ಕಡಿಮೆ ಅನುಪಾತದಲ್ಲಿದೆ. ಸಾಲವನ್ನು ಜಾಣ್ಮೆಯಿಂದ ಹೂಡಿಕೆಯಲ್ಲಿ ತೊಡಗಿಸುವುದರಿಂದ ಹೆಚ್ಚಿನ ತೆರಿಗೆ ಸಂಗ್ರಹ ಸಾಧ್ಯ. ಆದ್ದರಿಂದ ಇಂತಹ ರಾಜ್ಯಗಳಿಗೆ ನೀಡುವ ಸಾಲದ ಮಿತಿಯನ್ನು ಪರಿಷ್ಕರಿಸುವ ಅಗತ್ಯವಿದೆ ಎಂದು ವ್ಯಾಖ್ಯಾನಿಸಿದರು.
ಪರಿಹಾರ ನಿಧಿ: ತೀವ್ರ ಪ್ರಾಕೃತಿಕ ವಿಕೋಪ ಎದುರಿಸುತ್ತಿದ್ದರೂ ರಾಜ್ಯದ ಪರಿಹಾರ ನಿಧಿಯ ಗಾತ್ರ ಕಡಿಮೆ ಇದೆ. ಇದರಿಂದ ತನ್ನ ಸ್ವಂತ ಸಂಪನ್ಮೂಲವನ್ನು ರಾಜ್ಯ ಸರ್ಕಾರ ವಿನಿಯೋಗಿಸಬೇಕಾಗುತ್ತಿದೆ. ಈ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ವಿಭಜಿಸಬಹುದಾದ ಮೊತ್ತದ ಶೇ.1ರಷ್ಟನ್ನು ಪ್ರಕೋಪ ಪರಿಹಾರ ನಿಧಿಗೆ ಹಂಚಿಕೆ ಮಾಡುವಂತೆ ಸಲಹೆ ನೀಡಿದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.