ನೆರವಿಗೆ ಬಾರದ ಸಚಿವರು; ಸಿಎಂ ಗರಂ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಮೊದಲ ಬಾರಿಗೆ ತಮ್ಮ ಸಂಪುಟದ ಸದಸ್ಯರು ಹಾಗೂ ಕಾಂಗ್ರೆಸ್ನಲ್ಲಿನ ತಮ್ಮ ಬೆಂಬಲಿಗರ...
- ಆಪ್ತರ ಬಳಿ ಆಕ್ರೋಶ ವ್ಯಕ್ತಪಡಿಸಿದ ಮುಖ್ಯಮಂತ್ರಿ
- ಸರ್ಕಾರದ ವಿರುದ್ಧದ ಟೀಕೆ ಬಗ್ಗೆ ಮೌನ ಯಾಕೆ?
- ಕೃಷ್ಣರ ನೆರವಿಗೆ ಸಚಿವರು ತೆರಳುತ್ತಿದ್ದಂತೆ ತಮ್ಮ ನೆರವಿಗೆ ಬಾರದ್ದಕ್ಕೆ ಸಿದ್ದರಾಮಯ್ಯ ಅತೃಪ್ತಿ
ಕನ್ನಡಪ್ರಭ ವಾರ್ತೆ, ಬೆಂಗಳೂರು, ಅ.24-
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಮೊದಲ ಬಾರಿಗೆ ತಮ್ಮ ಸಂಪುಟದ ಸದಸ್ಯರು ಹಾಗೂ ಕಾಂಗ್ರೆಸ್ನಲ್ಲಿನ ತಮ್ಮ ಬೆಂಬಲಿಗರ ವಿರುದ್ಧ ಗರಂ ಆಗಿದ್ದಾರೆ. ಮುಖ್ಯಮಂತ್ರಿಗಳ ಈ ಸಿಟ್ಟಿಗೆ ಕೆಲ ಸಚಿವರ ಕಾರ್ಯ ವೈಖರಿ ಮಾತ್ರ ಕಾರಣವಲ್ಲ, ಸರ್ಕಾರದ ಸಮರ್ಥನೆಗೆ ಸಚಿವರು ತೋರುವ ನಿರಾಸಕ್ತಿಯ ವಿರುದ್ಧ ಕುಪಿತಗೊಂಡಿದ್ದಾರೆ.
ಕಳೆದ ಕೆಲ ದಿನಗಳಿಂದ ಪ್ರತಿಪಕ್ಷ ಅದರಲ್ಲೂ ವಿಶೇಷವಾಗಿ ಬಿಜೆಪಿ ಮುಖಂಡರು ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದಾರೆ. ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬೆಂಗಳೂರಿನಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ವೈಯಕ್ತಿಕ ಮಟ್ಟದ ಹಾಗೂ ಏಕವಚನದಲ್ಲಿ ದಾಳಿ ನಡೆಸಿದ್ದಾರೆ. ಆದರೂ ಸಂಪುಟ ಸಹೋದ್ಯೋಗಿಗಳು ತಮ್ಮ ನೆರವಿಗೆ ಧಾವಿಸಿಲ್ಲ. ಇದು ಸಿದ್ದರಾಮಯ್ಯ ಅವರನ್ನು ಇನ್ನಿಲ್ಲದಂತೆ ಕೆರಳಿಸಿದೆ.
ಸರ್ಕಾರದ ವಿರುದ್ದ ಇಷ್ಟೊಂದು ಪ್ರಮಾಣದಲ್ಲಿ ಪ್ರಹಾರ ನಡೆಯುತ್ತಿದೆ. ಜತೆಗೆ ಅಕ್ರಮ ಗಣಿಗಾರಿಕೆ ವಿರುದ್ಧ ಹಲವು ಕ್ರಮ ಕೈಗೊಂಡಿದ್ದರೂ ಬಿಜೆಪಿ ಮುಖಂಡರು ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಸಂಪುಟದ ಹಿರಿಯ ಸಚಿವರು ಹಾಗೂ ಕಟ್ಟಾ ಬೆಂಬಲಿಗರು ಪಕ್ಷದ ಮುಖಂಡರು ಈ ಸಂಬಂಧ ಮೌನಕ್ಕೆ ಶರಮಾಗಿದ್ದಾರೆ. ಸರ್ಕಾರದ ಪರ ಒಂದೇ ಒಂದು ಹೇಳಿಕೆ ನೀಡಿಲ್ಲ. ತಮ್ಮನ್ನು ಸಮರ್ಥಿಸಿಕೊಂಡಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೆ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಟೀಕಿಸಿದಾಗ ಸಂಪುಟ ಸಹೋದ್ಯೋಗಿಗಳು ಅವರ ಸಮರ್ಥನೆಗೆ ಧಾವಿಸುತ್ತಿದ್ದರು. ಮಾತ್ರವಲ್ಲ ಪ್ರತಿಪಕ್ಷಗಳ ವಿರುದ್ಧ ಹರಿಹಾಯುತ್ತಿದ್ದರು. ಆದರೆ ತಮ್ಮ ವಿಚಾರದಲ್ಲಿ ಮಾತ್ರ ಆ ರೀತಿ ಆಗಿಲ್ಲ ಎಂದು ಆಪ್ತರ ಬಳಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಘಟನೆಯಾದ ನಂತರ ತಮ್ಮನ್ನು ಭೇಟಿ ಮಾಡಲು ಬಂದ ಕೆಲ ಸಚಿವರನ್ನು ಸಿದ್ದರಾಮಯ್ಯ ಅವರು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ವರ್ಗಾವಣೆ ಅವಧಿ ಮುಗಿದರೂ ನಿಮ್ಮ ಕೆಲಸಕ್ಕಾಗಿ ಬರುತ್ತೀರಿ.
ಆದರೆ ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಸಂದರ್ಭ ಬಂದಾಗ ಮೌನಕ್ಕೆ ಶರಣಾಗುತ್ತೀರಿ ಎಂದು ಸಿಡಿಮಿಡಿ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ತಮ್ಮ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅನೇಕ ಜನಪರ ಯೋಜನೆಗಳನ್ನು ಘೋಷಿಸಿದೆ. ಇವುಗಳು ಸಮರ್ಪಕವಾಗಿ ಅನುಷ್ಠಾನವಾಗುತ್ತಿವೆ. ಆ ಯೋಜನೆಗಳ ಪ್ರಗತಿ ಬಗ್ಗೆ ಜನರಿಗೆ ಮಾಹಿತಿ ನೀಡುವ ಕೆಲಸದಲ್ಲೂ ಸಚಿವರು ತೊಡಗಿಸಿಕೊಂಡಿಲ್ಲ.
ಅಷ್ಟು ಮಾತ್ರವಲ್ಲ ಬಿಜೆಪಿ ಮುಖಂಡರು ಇದೊಂದು ಘೋಷಣೆಯ ಸರ್ಕಾರ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡುವುದರಲ್ಲಿ ನಿಸ್ಸೀಮರು ಎಂದು ಟೀಕಿಸಿದರೂ ಸಚಿವರು ತುಟಿ ಪಿಟಿಕ್ ಎಂದಿಲ್ಲ. ಮಂತ್ರಿಗಿರಿ ನಿಭಾಯಿಸುವುದು ಮಾತ್ರವಲ್ಲ ಸರ್ಕಾರವನ್ನು ಸಮರ್ಥಿಸುವ ಜವಾಬ್ದಾರಿಯೂ ತಮ್ಮ ಮೇಲಿದೆ ಎಂಬುದನ್ನು ಸಚಿವರು ಮರೆತಿದ್ದಾರೆ ಎಂದು ಕಿಡಿಕಾರಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಪಕ್ಷಗಳಿಗೆ ಟೀಕೆ ಮಾಡುವ ಅಧಿಕಾರವಿದೆ. ಅದನ್ನು ನಾನು ಪ್ರಶ್ನಿಸುವುದಿಲ್ಲ. ಅದೇ ಕಾಲಕ್ಕೆ ಸರ್ಕಾರವನ್ನು ಸಮರ್ಥಿಸುವ ಹೊಣೆಗಾರಿಕೆ ಸಚಿವರು ಹಾಗೂ ಮುಖಂಡರ ಮೇಲೆ ಇರುತ್ತದೆ. ಆ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲರಾಗುತ್ತಿರುವುದು ಏಕೆ ಎಂಬುದಾಗಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ ಎಂದು ಮೂಲಗಳಿಂದ ಗೊತ್ತಾಗಿದೆ.