ಹೈ.ಕ. ಮಂಡಳಿಗೆ ರಾಷ್ಟ್ರಪತಿ ಅಂಕಿತ
-ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಹೈದರಾಬಾದ್ - ಕರ್ನಾಟಕಕ್ಕೆ ಸಂವಿಧಾನದ 371(ಜೆ) ವಿಧಿಯಡಿಯಲ್ಲಿ ದಕ್ಕಿರುವ ವಿಶೇಷ ಸ್ಥಾನಮಾನದಡಿ ಅಭಿವೃದ್ಧಿ ಮಂಡಳಿ ರಚಿಸಲು ರಾಜ್ಯಪಾಲರಿಗೆ ಪರಮಾಧಿಕಾರ ನೀಡುವ ಕೇಂದ್ರ ಸರ್ಕಾರದ ಅಧಿಸೂಚನೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಗುರುವಾರ ಅಂಕಿತ ಹಾಕಿದ್ದಾರೆ.
ಇದರೊಂದಿಗೆ ಹೈ- ಕ ಪ್ರದೇಶ ಅಭಿವೃದ್ಧಿ ಸಂಬಂಧಿತ ಕೇಂದ್ರದ ಎಲ್ಲ ಸಾಂವಿಧಾನಿಕ ಔಪಚಾರಿಕ ಪ್ರಕ್ರಿಯೆಗಳು ಪೂರ್ಣಗೊಂಡಿವೆ.
ಅಧಿಸೂಚನೆಗೆ ರಾಷ್ಟ್ರಪತಿ ಅಂಕಿತ ಬಿದ್ದಿರುವುದರಿಂದ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಹೈ. ಕ.ಪ್ರದೇಶ ಅಭಿವೃದ್ಧಿ ಮಂಡಳಿ ರಚನೆ ಪ್ರಕ್ರಿಯೆ ತಕ್ಷಣದಿಂದಲೇ ಪ್ರಾರಂಭವಾಗಲಿದೆ. ಸಂವಿಧಾನದತ್ತವಾಗಿ ದಕ್ಕಿರುವ ಅಧಿಕಾರ ಬಳಸಿಕೊಂಡು ಹೈದರಾಬಾದ್ ಕರ್ನಾಟಕ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಚಾಲನೆ ನೀಡುವುದು ರಾಜ್ಯ ಸರ್ಕಾರದ ಹೊಣೆ.
ಕರ್ನಾಟಕ ರಾಜ್ಯ(ಹೈದರಾಬಾದ್ ಕರ್ನಾಟಕ ಪ್ರದೇಶಕ್ಕಾಗಿ ರಾಜ್ಯಪಾಲರ ವಿಶೇಷಾಧಿಕಾರ) ಆದೇಶ ಎಂದು ಕರೆಯಲಾಗುವ ಅಧ್ಯಕ್ಷೀಯ ಆದೇಶದ ಅಧಿಸೂಚನೆಗೆ ಕೇಂದ್ರ ಸಂಪುಟ ಅಕ್ಟೋಬರ್ 8ರಂದು ಅನುಮೋದನೆ ನೀಡಿ ರಾಷ್ಟ್ರಪತಿಗಳ ಅಂಕಿತಕ್ಕೆ ರವಾನಿಸಿತ್ತು.
ಹೆಚ್ಚಿನ ಅನುದಾನ ಲಭ್ಯ: ಗಲ್ಬರ್ಗ, ಬೀದರ್, ಯಾದಗಿರಿ, ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳ ಶೈಕ್ಷಣಿಕ ಹಾಗೂ ಮೂಲಭೂತ ಸೌಲಭ್ಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಸಂವಿಧಾನದತ್ತವಾಗಿ ಲಭ್ಯವಾಗಲಿದೆ.
ರಾಜ್ಯ ಸರ್ಕಾರದ ವಿವಿಧ ಹುದ್ದೆಗಳಿಗೆ ಮೀಸಲಾತಿ, ಜತೆಗೆ ಶಿಕ್ಷಣ ಮತ್ತು ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲೂ ವಿಶೇಷ ಮೀಸಲಾತಿ ದೊರೆಯಲಿದೆ.
ಸಂವಿಧಾನದ 371(ಜೆ)ವಿಧಿಗೆ ಕಳೆದ ಡಿಸೆಂಬರ್ 20ರಂದು ಸಂಸತ್ತಿನ ಉಭಯ ಸದನಗಳು ಅನುಮೋದನೆ ನೀಡಿದ್ದವು. ನಂತರ ಮೀಸಲಾತಿ ಸ್ವರೂಪ ಹೇಗಿರಬೇಕೆಂದು ತಿಳಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿತ್ತು. ಸಚಿವ ಎಚ್.ಕೆ.ಪಾಟೀಲ್ ನೇತೃತ್ವದ ಸಂಪುಟ ಉಪಸಮಿತಿ ಈ ಬಗ್ಗೆ ಅಧ್ಯಯನ ಮಾಡಿ ವರದಿ ಸಲ್ಲಿಸಿತ್ತು. ವರದಿಯನ್ನಾಧರಿಸಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿತ್ತು. ರಾಜ್ಯ ಸರ್ಕಾರದ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರ ಒಪ್ಪಿ ಅಧಿಸೂಚನೆ ಹೊರಡಿಸಿದೆ. ಈಗ ಅಧಿಸೂಚನೆಗೆ ರಾಷ್ಟ್ರಪತಿಗಳ ಅಂಕಿತವೂ ಬಿದ್ದಿದೆ.
ಹೈ-ಕ ಪ್ರದೇಶಕ್ಕೆ ದಕ್ಕುವ ಸೌಲಭ್ಯ
-ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲು
ವೃತ್ತಿಪರ ಕಾಲೇಜುಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಶೇ.70ರಷ್ಟು ಮೀಸಲು ದೊರೆಯಲಿದೆ. ಹೈ-ಕ ಶಿಕ್ಷಣ ಸಂಸ್ಥೆಗಳಿಗೆ ವಿಶೇಷ ಅನುದಾನ ಲಭ್ಯವಾಗಲಿದೆ. ರಾಜ್ಯಮಟ್ಟದ ಶೈಕ್ಷಣಿಕ ಸಂಸ್ಥೆಗಳು ವಿಶ್ವವಿದ್ಯಾಲಯಗಳಲ್ಲಿ ಶೇ. 8ರಷ್ಟು ಮೀಸಲು.
-ಉದ್ಯೋಗ, ಬಡ್ತಿಯಲ್ಲಿ ಮೀಸಲು
ಸ್ಥಳೀಯ ಸರ್ಕಾರಿ, ನಿಗಮ ಮಂಡಳಿಗಳ ಖಾಲಿ ಹುದ್ದೆಗಳಿಗೆ ತ್ವರಿತ ನೇರ ನೇಮಕಾತಿ. ಬಡ್ತಿಯಲ್ಲಿ ವಿಶೇಷ ಮೀಸಲಾತಿ, ಎ ಮತ್ತು ಬಿ ವರ್ಗದ ಹುದ್ದೆಗಳಿಗೆ ಶೇ.75ರಷ್ಟು, ಸಿ ವರ್ಗಕ್ಕೆ ಶೇ. 80 ಮತ್ತು ಡಿ ವರ್ಗಕ್ಕೆ ಶೇ. 85ರಷ್ಟು ಮೀಸಲು. ರಾಜ್ಯಮಟ್ಟದಲ್ಲಿ ಶೇ. 8ರಷ್ಟು ಮೀಸಲು.
-ಇತರೆ ಸೌಲಭ್ಯ
ಮಹಿಳೆಯರು, ಮಕ್ಕಳಿಗೆ ಆರೋಗ್ಯ ಪೌಷ್ಟಿಕತೆಗೆ ವಿಶೇಷ ಕಾರ್ಯಕ್ರಮ. ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ವಿಶೇಷ ಕಾರ್ಯಕ್ರಮ. ಜನಸಂಖ್ಯೆಗೆ ಅನುಗಣವಾಗಿ ಪರಿಶಿಷ್ಟಜಾತಿ, ಪಂಗಡದವರಿಗೆ ವಿಶೇಷ ಘಟಕ ಉಪಯೋಜನೆ ವಿಸ್ತರಣೆ. ಮಂಡಳಿ ಅಧ್ಯಕ್ಷರ ವಿವೇಚನೆಗನುಗುಣವಾಗಿ ಮೂಲಭೂತ ಸೌಲಭ್ಯಗಳಿಗೆ ವಿಶೇಷ ಅನುದಾನ.
'ತಿಂಗಳಲ್ಲಿ ಆರಂಭ'
ಬೆಂಗಳೂರು: ಹೈದರಾಬಾದ್-ಕರ್ನಾಟಕ ಪ್ರದೇಶ ಅಭಿವೃದ್ಧಿಗೆ ಸಂಬಂಧಿಸಿದಂತೆ 371ಜೆಗೆ ರಾಷ್ಟ್ರಪತಿಯವರು ಅಂಕಿತ ಹಾಕಿರುವುದರಿಂದ ಇನ್ನೊಂದು ತಿಂಗಳಲ್ಲಿ ಅದರ ಅನುಷ್ಠಾನ ಪ್ರಕ್ರಿಯೆ ಆರಂಭವಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು. 371ಜೆ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರ ಕರಡು ಪ್ರತಿಯನ್ನು ರಚಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿತ್ತು. ಅದಕ್ಕೆ ಕೇಂದ್ರ ಸಚಿವ ಸಂಪುಟದ ಅನುಮತಿ ದೊರೆತು, ರಾಷ್ಟ್ರಪತಿಯವರಿಂದ ಒಪ್ಪಿಗೆ ಸಿಕ್ಕಿದೆ. ಇನ್ನು ಮುಂದೆ ರಾಜ್ಯಪಾಲರು ಇದರ ಅನುಷ್ಠಾನಕ್ಕೆ ಅಗತ್ಯವಾದ ಅಧಿಸೂಚನೆಗಳನ್ನು ಹೊರಡಿಸುತ್ತಾರೆ. ಎಲ್ಲ ಪ್ರಕ್ರಿಯೆಗಳು ಶೀಘ್ರವೇ ಪ್ರಾರಂಭವಾಗುತ್ತವೆ ಎಂದು 371ಜೆ ಅನುಷ್ಠಾನದ ಸಚಿವ ಸಂಪುಟ ಉಪಸಮಿತಿ ಅಧ್ಯಕ್ಷರೂ ಆಗಿರುವ ಎಚ್.ಕೆ. ಪಾಟೀಲ್ ಹೇಳಿದರು.