ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಭದ್ರತೆ ನಾಸ್ತಿ, ಸೈಕೋ ಪರಾರಿ

ಜೈಶಂಕರ ಅಲಿಯಾಸ್ ಸೈಕೋ ಶಂಕರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಭಾನುವಾರ ನಸುಕಿನಲ್ಲಿ ಪರಾರಿಯಾಗಿದ್ದಾನೆ.

Srinivasa Murthy VN
Updated On : 1 Sept 2013, 11:22 am

ಕನ್ನಡಪ್ರಭ ವಾರ್ತೆ ಬೆಂಗಳೂರು ಸೆ.1
ಇಪ್ಪತ್ತಕ್ಕೂ ಹೆಚ್ಚು ಕೊಲೆ, ಅತ್ಯಾಚಾರ, ಡಕಾಯಿತಿ ಪ್ರಕರಣಗಳ ಆರೋಪಿ ಜೈಶಂಕರ ಅಲಿಯಾಸ್ ಸೈಕೋ ಶಂಕರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಭಾನುವಾರ ನಸುಕಿನಲ್ಲಿ ಪರಾರಿಯಾಗಿದ್ದಾನೆ. ಭದ್ರತಾ ವೈಫಲ್ಯದ ಲಾಭ ಪಡೆದು ಜೈಶಂಕರ್ ಪರಾರಿಯಾಗಿದ್ದಾನೆ. ಮತ್ತೊಂದೆಡೆ ಭದ್ರತಾ ಸಿಬ್ಬಂದಿ ಪೈಕಿ ಕೆಲವರು ಆತನಿಗೆ ನೆರವಾಗಿರುವ ಅನುಮಾನವೂ ಇದೆ. ಕಾರಾಗೃಹದ ಆಸ್ಪತ್ರೆಯ ನೆಲಮಾಳಿಗೆಯಲ್ಲಿರುವ ಮಾನಸಿಕ ಚಿಕಿತ್ಸಾ ವಿಭಾಗದ ವಿಶೇಷ ಸೆಲ್ಲರ್‌ನಲ್ಲಿದ್ದ ಸೈಕೋ ಶಂಕರ, ಕಾರಾಗೃಹದ ಪಶ್ಚಿಮ ಭಾಗದ, ಮೊನಚಾದ ಗಾಜಿನ ಚೂರುಗಳನ್ನು ಅಳವಡಿಸಿರುವ 30 ಅಡಿ ಎತ್ತರದ ಗೋಡೆ ಹತ್ತಿ ವಿದ್ಯುತ್ ಬೇಲಿಯನ್ನು ಹಾರಿ ಪರಾರಿಯಾಗಿದ್ದಾನೆ ಎಂಬುದು ಸಿಬ್ಬಂದಿ ವಿವರಣೆ. ಇದು ಒಬ್ಬನಿಂದ ಸಾಧ್ಯವೇ ಎಂಬ ಅನುಮಾನ ಮೂಡಿದೆ. ಪರಾರಿಯಾಗುವ ವೇಳೆ ಜೈಶಂಕರನಿಗೆ ಗಾಯಗಳಾಗಿವೆ. ಜೈಲಿನ ಗೋಡೆ ಹಾಗೂ ಕೆಳಗಿಳಿದ ಜಾಗದಲ್ಲಿ ರಕ್ತದ ಕಲೆ ಬಿದ್ದಿರುವುದರಿಂದ ಪೊಲೀಸರು ಈ ಅನುಮಾನ ವ್ಯಕ್ತಪಡಿಸಿದ್ದಾರೆ. 11 ಸಿಬ್ಬಂದಿ ಅಮಾನತು: ಭಾನುವಾರ ಬೆಳಗಿನ 2 ಗಂಟೆಯಿಂದ 4 ಗಂಟೆಯ ನಡುವೆ ಜೈಶಂಕರ ಪರಾರಿಯಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿರುವ ಕಾರಾಗೃಹ ಎಡಿಜಿಪಿ ಗಗನ್‌ದೀಪ್, ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಸಹಾಯಕ ಅಧೀಕ್ಷಕ ಸಿ.ವಿ. ಮಠ್, 3 ಜೈಲರ್‌ಗಳು, ಒಬ್ಬ ಮುಖ್ಯ ವಾರ್ಡರ್ ಹಾಗೂ 6 ವಾರ್ಡರ್‌ಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ 20ಕ್ಕೂ ಹೆಚ್ಚು ಕೊಲೆ, ಅತ್ಯಾಚಾರ ಹಾಗೂ ಡಕಾಯಿತಿ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಜೈಶಂಕರನ ಮೇಲಿವೆ. ಈಗಾಗಲೇ ತಮಿಳುನಾಡಿನ ಸೇಲಂ ತ್ವರಿತಗತಿ ನ್ಯಾಯಾಲಯ ಹಾಗೂ ಚಿತ್ರದುರ್ಗದ ಹಿರಿಯೂರಿನ ನ್ಯಾಯಾಲಯದಲ್ಲಿ ಅತ್ಯಾಚಾರ, ಕೊಲೆ ಪ್ರಕರಣ ಸಂಬಂಧ ತಲಾ 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ಇನ್ನೂ ಹಲವು ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದಲೇ ಜೈಶಂಕರನನ್ನು ನ್ಯಾಯಾಲಯ ವಿಚಾರಣೆಗೆ ಕರೆದೊಯ್ಯಲಾಗುತ್ತಿತ್ತು. ಅತ್ಯಾಚಾರ ಮಾಡಿ ಕೊಲೆ ಮಾಡುವುದು, ಪತಿ ಎದುರೇ ಆತನ ಪತ್ನಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡುವುದು ಸೇರಿದಂತೆ ವಿಕೃತ ಕೃತ್ಯಗಳನ್ನು ಜೈಶಂಕರ ಎಸಗುತ್ತಿದ್ದ. ಈ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಆಸ್ಪತ್ರೆಯ ನೆಲ ಮಳಿಗೆಯಲ್ಲಿರುವ ಮಾನಸಿಕ ಚಿಕಿತ್ಸಾ ಸೆಲ್ಲರ್‌ನಲ್ಲಿ ಜೈಶಂಕರನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. 2011, ಮೇ 4ರಂದು ಬಿಜಾಪುರ ಜಿಲ್ಲೆ ಝಳಕಿ ಪೊಲೀಸರು ಜೈಶಂಕರನನ್ನು ಬಂಧಿಸಿದ್ದರು. ಬಳಿಕ ಕೊಲೆ ಪ್ರಕರಣದ ವಿಚಾರಣೆ ಸಂಬಂಧ ಚಿತ್ರದುರ್ಗ ಪೊಲೀಸರ ವಶಕ್ಕೆ ನೀಡಲಾಗಿತ್ತು. ಆತನ ವಿಕೃತ ಮನೋಸ್ಥಿತಿಗೆ ಚಿಕಿತ್ಸೆ ನೀಡಲು ಜೈಶಂಕರನನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು.

ಅತ್ಯಾಚಾರಿ ಪರಾರಿಯಾಗಿದ್ದು ಹೇಗೆ?
ಮಾನಸಿಕ ಚಿಕಿತ್ಸಾ ಸೆಲ್ಲರ್ ವಿಭಾಗದ 26ನೇ ನಂಬರ್‌ನ ಕೊಠಡಿಯನ್ನು ನಕಲಿ ಕೀಲಿಕೈಯಿಂದ ತೆಗೆದು ಹೊರ ಬಂದ ಜೈಶಂಕರ ನಂತರ ಜೈಲಿನ ಆವರಣದಲ್ಲಿ ಮೊಬೈಲ್ ಜಾಮರ್‌ಗಳನ್ನು ಅಳವಡಿಸಲೆಂದೆ ಇಟ್ಟಿರುವ ಕಬ್ಬಿಣದ ಕಂಬಿಗಳನ್ನು ಬಳಸಿ 15 ಅಡಿ ಎತ್ತರದ ಗೋಡೆ ಹತ್ತಿದ್ದಾನೆ. ಈ ಗೋಡೆ 30 ಅಡಿ ಎತ್ತರದ ಇನ್ನೊಂದು ಗೋಡೆಯೊಂದಿಗೆ ಸಂಪರ್ಕ ಹೊಂದಿದೆ. ಹೀಗಾಗಿ ಜೈಶಂಕರ ಅದೇ ಗೋಡೆಯ ಮೂಲಕ ದೊಡ್ಡ ಗೋಡೆಯನ್ನು ಹತ್ತಿದ್ದಾನೆ. ದೊಡ್ಡ ಗೋಡೆಗೆ ವಿದ್ಯುತ್ ಬೇಲಿ ಇದೆಯಾದರೂ ವಿದ್ಯುತ್ ಹರಿಯುತ್ತಿರಲಿಲ್ಲ. ಹೀಗಾಗಿ ಸುಲಭವಾಗಿ ಪರಾರಿಯಾಗಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement