ರುಪಾಯಿ ಬಿದ್ದದ್ದಕ್ಕೆ ಪೆಟ್ರೋಲ್, ಚಿನ್ನಕ್ಕೆ ಸರ್ಕಾರದ ಕತ್ತರಿ?
ಪಾತಾಳಕ್ಕಿಳಿಯುತ್ತಿರುವ ರುಪಾಯಿ ಮೌಲ್ಯದಿಂದ ಕಂಗೆಟ್ಟಿರುವ ಸರ್ಕಾರ ಅನೇಕ ಕಠಿಣ ನಿಯಂತ್ರಣ ಕ್ರಮಗಳನ್ನು ಸಾರ್ವಜನಿಕರ ಮೇಲೆ ಹೇರಲು ಹೊರಟಿದೆ.
ಪಿಟಿಐ ನವದೆಹಲಿ/ಮುಂಬೈ ಸೆ.1
ಪಾತಾಳಕ್ಕಿಳಿಯುತ್ತಿರುವ ರುಪಾಯಿ ಮೌಲ್ಯದಿಂದ ಕಂಗೆಟ್ಟಿರುವ ಸರ್ಕಾರ ಅನೇಕ ಕಠಿಣ ನಿಯಂತ್ರಣ ಕ್ರಮಗಳನ್ನು ಸಾರ್ವಜನಿಕರ ಮೇಲೆ ಹೇರಲು ಹೊರಟಿದೆ. ಅದರಂತೆ ಚಿನ್ನ ಖರೀದಿ ಮೇಲಿನ ನಿಯಂತ್ರಣವನ್ನು ಇನ್ನಷ್ಟು ಬಿಗಿಗೊಳಿಸಿರುವ ಸರ್ಕಾರ, ಪೆಟ್ರೋಲ್ ಬಳಕೆ ಮೇಲೆ ಕಡಿವಾಣ ಹೇರಲು ಹೊರಟಿದೆ.
ದೇಶದ ಆಯಾತ- ನಿರ್ಯಾತ ಅಂತರ ಹೆಚ್ಚಳಕ್ಕೆ ತೈಲ ಆಮದು ಬಹುದೊಡ್ಡ ಕೊಡುಗೆ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ತೈಲ ಬಳಕೆಯನ್ನು ನಿಯಂತ್ರಿಸಲು ಮುಂದಾಗಿರುವ ಸರ್ಕಾರ ಈ ನಿಟ್ಟಿನಲ್ಲಿ ರಾತ್ರಿ ವೇಳೆ ಪೆಟ್ರೋಲ್ ಪಂಪ್ಗಳಿಗೆ ಬಾಗಿಲೆಳೆಯಲು ಚಿಂತನೆ ನಡೆಸಿದೆ. ಸರ್ಕಾರದ ಈ ಹೊಸ ಚಿಂತನೆಯಂತೆ ಪೆಟ್ರೋಲ್ ಪಂಪ್ಗಳು ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆವರೆಗೆ ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದೆ. ಆದರೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಪೆಟ್ರೋಲ್ ಪಂಪ್ಗಳಿಗೆ ಈ ನಿಯಮ ಅನ್ವಯ ಆಗುವುದು ಅನುಮಾನ.
16ರಿಂದ ಆಂದೋಲನ: ಇದೇ ವೇಳೆ, ಪೆಟ್ರೋಲ್ ಉಳಿತಾಯಕ್ಕೆ ಸಂಬಂಧಿಸಿ ಸೆ. 16ರಿಂದ ದೇಶದ ಪ್ರಮುಖ ನಗರಗಳಲ್ಲಿ ಆರು ವಾರಗಳ ಆಂದೋಲನಕ್ಕೂ ಪೆಟ್ರೋಲಿಯಂ ಸಚಿವಾಲಯ ಕೈ ಹಾಕುವ ಚಿಂತನೆ ನಡೆಸಿದೆ. ಈ ಮೂಲಕ ಜನರಲ್ಲಿ ಪೆಟ್ರೋಲ್ ಬಳಕೆ ಬಗ್ಗೆ ಅರಿವು ಮೂಡಿಸುವುದು ಸರ್ಕಾರದ ಉದ್ದೇಶ. ಈ ಆಂದೋಲನಕ್ಕಾಗಿ ಸರ್ಕಾರ 17.5 ಕೋಟಿ ವೆಚ್ಚ ಮಾಡಲಿದೆ. ಸಮೂಹ ಮಾಧ್ಯಮಗಳು, ಬೀದಿನಾಟಕ ಸೇರಿದಂತೆ ಎಲ್ಲ ವಿಧದ ಮಾಧ್ಯಮಗಳ ಮೂಲಕ ಜನರನ್ನು ತಲುಪುವ ಉದ್ದೇಶ ಇಟ್ಟುಕೊಳ್ಳಲಾಗಿದೆ. ಈ ಮೂಲಕ ತೈಲ ಬಳಕೆ ಪ್ರಮಾಣ ಶೇ. 3ರಷ್ಟು ಇಳಿಯಲಿದೆ.
ಇದರ ಪರಿಣಾಮವಾಗಿ ದೇಶದಿಂದ ಹೊರ ಹೋಗುತ್ತಿದ್ದ 16,000 ಕೋಟಿ ಉಳಿತಾಯ ಆಗಲಿದೆ ಎಂಬುದು ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿ ಅವರ ಅಭಿಪ್ರಾಯ. ಸದ್ಯದ ಹಣಕಾಸು ವರ್ಷದಲ್ಲಿ ತೈಲ ಆಮದು ಬಿಲ್ನಲ್ಲಿ 25 ಶತಕೋಟಿ ಡಾಲರ್ ಉಳಿಸಬೇಕೆನ್ನುವ ಪ್ರಧಾನಿ ಮನಮೋಹನ ಸಿಂಗ್ ಅವರ ಸೂಚನೆಯಂತೆ ಪೆಟ್ರೋಲಿಯಂ ಸಚಿವಾಲಯ ಈ ಕ್ರಮಕ್ಕೆ ಕೈ ಹಾಕಿದೆ.
ಚಿನ್ನ ಖರೀದಿಸದಂತೆ ಷರತ್ತು ಹೇರುತ್ತಿರುವ ಬ್ಯಾಂಕ್ಗಳು: ಚಿನ್ನದ ಮೇಲೆ ಸಾರ್ವಜನಿಕರಲ್ಲಿ ಹೆಚ್ಚುತ್ತಿರುವ ಮೋಹಕ್ಕೆ ಮಿತಿ ಹಾಕಲು ಮುಂದಾಗಿರುವ ಬ್ಯಾಂಕ್ಗಳು ಈಗ ಷರತ್ತಿನ ಮೇಲಷ್ಟೇ ಸಾಲ ನೀಡಲು ಮುಂದಾಗಿವೆ. ಮಿತಿಗಿಂತ ಹೆಚ್ಚು ಚಿನ್ನ ಖದೀಸದಿರುವ ಷರತ್ತಿಗೆ ಒಪ್ಪಿದರಷ್ಟೇ ಸಾಲ ನೀಡಲು ಬ್ಯಾಂಕ್ಗಳು ನಿರ್ಧರಿಸಿವೆ. ವೈಯಕ್ತಿಕ ಸಾಲದ ಮೇಲೂ ಈ ನಿಯಮ ಅನ್ವಯವಾಗುತ್ತದೆ ಎಂದು ಖಾಸಗಿ ಬ್ಯಾಂಕ್ವೊಂದರ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಎಲ್ಲ ಬ್ಯಾಂಕ್ಗಳು ಹಾಗೂ ಎನ್ಬಿಎಫ್ಸಿಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೀಡಿದ ಸೂಚನೆಯಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆಯಾತ ಮತ್ತು ನಿರ್ಯಾತದ ನಡುವಿನ ವ್ಯತ್ಯಾಸವನ್ನು ಕಿರಿದುಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಆರ್ಬಿಐ ಚಿನ್ನದ ಆಮದಿನ ಮೇಲೆ ಈಗಾಗಲೇ ನಿರ್ಬಂಧಗಳನ್ನು ಹೇರಿವೆ. ಅದರ ಮುಂದುವರಿದ ಭಾಗವೇ ಈ ಷರತ್ತುಬದ್ಧ ಸಾಲ.
ರು. ಉಳಿಸಲು ಮೊಯ್ಲಿ ಸೂತ್ರ
ಬೆಳಗ್ಗೆ 8ರಿಂದ ರಾತ್ರಿ 8 ಗಂಟೆ ವರೆಗಷ್ಟೇ ಪೆಟ್ರೋಲ್ ಪಂಪ್ಗಳು ತೆರೆದಿಡಲು ಚಿಂತನೆ
ಈ ನಿಯಮ ನಗರಗಳೊಳಗಿರುವ ಪೆಟ್ರೋಲ್ ಪಂಪ್ಗಳಿಗಷ್ಟೇ ಅನ್ವಯ
ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಪೆಟ್ರೋಲ್ ಪಂಪ್ಗಳಿಗೆ ಇದು ಅನ್ವಯವಾಗುವುದಿಲ್ಲ
ಆಯಾತ- ನಿರ್ಯಾತ ಅಂತರವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಶಿಫಾರಸು ಮಾಡಲಾಗಿದೆ. ಅವುಗಳಲ್ಲಿ ಪೆಟ್ರೋಲ್ ಪಂಪ್ಗಳನ್ನು ರಾತ್ರಿ ವೇಳೆ ಬಂದ್ ಮಾಡುವುದೂ ಒಂದು. ಆದರೆ, ಈ ಕುರಿತು ಈವರೆಗೂ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ.
-ವೀರಪ್ಪ ಮೊಯ್ಲಿ, ಪೆಟ್ರೋಲಿಯಂ ಸಚಿವ