ಹೈದ್ರಾಬಾದ್ ಸ್ಫೋಟಕ್ಕೆ ಪಾಕ್ ಸೂಚನೆ: ಯಾಸಿನ್
ಹೈದರಾಬಾದ್ ಸ್ಫೋಟಕ್ಕೆ ಸಂಚು ರೂಪಿಸಿದ್ದು ಪಾಕಿಸ್ತಾನದಲ್ಲಿ ಎನ್ನುವುದನ್ನು ಬಂಧಿತ ಉಗ್ರ ಯಾಸಿನ್ ಭಟ್ಕಳ್...
ನವದೆಹಲಿ: ಹೈದರಾಬಾದ್ ಸ್ಫೋಟಕ್ಕೆ ಸಂಚು ರೂಪಿಸಿದ್ದು ಪಾಕಿಸ್ತಾನದಲ್ಲಿ ಎನ್ನುವುದನ್ನು ಬಂಧಿತ ಉಗ್ರ ಯಾಸಿನ್ ಭಟ್ಕಳ್ ಬಹಿರಂಗಪಡಿಸಿದ್ದಾನೆ. ಹೈದರಾಬಾದ್ನ ದಿಲ್ಸುಖ್ನಗರದ ವಿವಿಧೆಡೆ ಇಡಲಾಗಿದ್ದ ಬಾಂಬ್ಗಳಿಗೆ ಸ್ಫೋಟಕ ಸಾಮಗ್ರಿಗಳನ್ನು ಪೂರೈಸಿದ್ದೇ ತಾನು ಎಂದೂ ಪೊಲೀಸರ ವಿಚಾರಣೆ ವೇಳೆ ಯಾಸಿನ್ ಒಪ್ಪಿಕೊಂಡಿದ್ದಾನೆ.
ಹೈದರಾಬಾದ್ ಹಾಗೂ ದೇಶದ ಇತರೆಡೆ ವಿದೇಶಿ ಕಂಪನಿಗಳು ಹೂಡಿಕೆಗೆ ಹಿಂದೇಟು ಹಾಕಬೇಕು ಎನ್ನುವ ಉದ್ದೇಶದಿಂದಲೇ ಸ್ಫೋಟ ನಡೆಸಲಾಗಿತ್ತು. ಇದಕ್ಕಾಗಿ ತನಗೆ ಪಾಕಿಸ್ತಾನದಿಂದ ನೇರ ಸಲಹೆ, ಸೂಚನೆಗಳು ಬರುತ್ತಿತ್ತು ಎಂದು ಯಾಸಿನ್ ತಿಳಿಸಿದ್ದಾನೆ. ಕಳೆದ ಫೆಬ್ರವರಿಯಲ್ಲಿ ಹೈದರಾಬಾದ್ನಲ್ಲಿ ನಡೆದ ಅವಳಿ ಸ್ಫೋಟದಲ್ಲಿ 17 ಮಂದಿ ಮೃತಪಟ್ಟಿದ್ದರೆ, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಭಟ್ಕಳ್ ಸಹೋದರರ ಕುರಿತೂ ಮಾಹಿತಿ: ಭಟ್ಕಳದ ಇನ್ನಿಬ್ಬರು ಉಗ್ರರಾದ ಇಕ್ಬಾಲ್ ಹಾಗೂ ರಿಯಾಜ್ ಕುರಿತೂ ಯಾಸಿನ್ ಕೆಲ ಮಾಹಿತಿ ನೀಡಿದ್ದಾನೆ. ಅವರು ಭಾರತಕ್ಕೆ ಕಾಲಿಡುತ್ತಿಲ್ಲ. ಅವರ ಓಡಾಟ ನೇಪಾಳದ ವರೆಗಷ್ಟೇ ಸೀಮಿತವಾಗಿದೆ. ಈ ವರ್ಷದ ಆರಂಭದಲ್ಲಿ ಆತ ನೇಪಾಳಕ್ಕೆ ಭೇಟಿ ನೀಡಿದ್ದ. ಪಾಕ್ನಲ್ಲಿರುವ ತಮ್ಮ ಮುಖಂಡರ ಜತೆಗೆ ಆತ ಸೆಟಲೈಟ್ ಫೋನ್ ಮೂಲಕ ಮಾತನಾಡುತ್ತಾನೆ ಎಂದೂ ಯಾಸಿನ್ ಹೇಳಿದ್ದಾನೆ.