ಒಂದಂಕಿ ಲಾಟರಿ ದಂಧೆಗೆ ಅಧಿಕಾರಿಗಳದೇ ಕುಮ್ಮಕ್ಕು
ಒಂದಂಕಿ ಲಾಟರಿ ದಂಧೆ ರಾಮನಗರ ಸಹಿತ ರಾಜ್ಯದ ನಾನಾ ಕಡೆ ತಲೆ ಎತ್ತಿದೆ.
ಕ.ಪ್ರ.ವಾರ್ತೆ, ರಾಮನಗರ, ಸೆ. 16-
ಒಂದಂಕಿ ಲಾಟರಿ ದಂಧೆ ರಾಮನಗರ ಸಹಿತ ರಾಜ್ಯದ ನಾನಾ ಕಡೆ ತಲೆ ಎತ್ತಿದೆ. ಈ ಅಕ್ರಮಕ್ಕೆ ಪೊಲೀಸ್ ಅಧಿಕಾರಿಗಳೇ ಕುಮ್ಮಕ್ಕು ನೀಡಿದ್ದು, ದಂಧೆಕೋರರಿಂದ ಕಪ್ಪ-ಕಾಣಿಕೆ ವಸೂಲು ಮಾಡುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪಿಸಿದ್ದಾರೆ.
ಬಡವರು, ಕೂಲಿಕಾರ್ಮಿಕರ ಕುಟುಂಬಗಳನ್ನು ನಾಶ ಮಾಡುವಂತಹ ಈ ಅಕ್ರಮಕ್ಕೆ ಯಾರ ಶ್ರೀರಕ್ಷೆ ಇದೆ ಎನ್ನುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟನೆ ನೀಡಬೇಕು ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಒಂದಂಕಿ ಲಾಟರಿ ವ್ಯಾಮೋಹಕ್ಕೆ ಒಳಗಾಗಿ ಕೂಲಿಕಾರರು, ಬಡವರು ಸೇರಿದಂತೆ ಆರ್ಥಿಕವಾಗಿ ದುರ್ಬಲರಾದ ಅದೆಷ್ಟೋ ಕುಟುಂಬಗಳು ನಾಶವಾಗಿದ್ದವು. ಅದನ್ನು ತಡೆಯುವ ನಿಟ್ಟಿನಲ್ಲಿ ತಾವು ಒಂದಂಕಿ ಲಾಟರಿನಿಷೇಧಿಸಿದ್ದಾಗಿ ಅವರು ಹೇಳಿದರು.
ತಾವೂ ಬಡ ಕುಟುಂಬದಿಂದ ಬಂದವರು. ಎಸ್ಎಸ್ಎಲ್ಸಿವರೆಗೆ ಚಪ್ಪಲಿಯೇ ಇರಲಿಲ್ಲ, ಬೀದಿ ದೀಪದಡಿ ಓದುತ್ತಿದ್ದೆ ಎಂದೆಲ್ಲಾ ಹೇಳಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಡವರ ಬಗ್ಗೆ ಕನಿಕರವಿದ್ದರೆ ತಕ್ಷಣ ಒಂದಂಕಿ ಲಾಟರಿಗೆ ಕಡಿವಾಣ ಹಾಕಬೇಕು ಎಂದು ಅವರು ಆಗ್ರಹಿಸಿದರು.
ಸಿಎಂಗೆ ಶೀಘ್ರ ಪತ್ರ: ಒಂದಂಕಿ ಲಾಟರಿ ದಂಧೆಯ ಜಾಲದ ಕುರಿತು ಸಮಗ್ರ ವಿವರಣೆಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶೀಘ್ರವೇ ಪತ್ರ ಬರೆಯಲಾಗುವುದು. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ರೂಪಿಸಬೇಕಾಗುತ್ತದೆ ಎಂದು ಕುಮಾರಸ್ವಾಮಿ ಎಚ್ಚರಿಸಿದರು.
ಒಂದಂಕಿ ಲಾಟರಿ ಮಾರಾಟ ಜಾಲದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಈ ಅಕ್ರಮ ದಂಧೆಗೆ ಪ್ರೇರೇಪಣೆ ನೀಡಿರುವ ಪೊಲೀಸ್ ಸಹಿತ ಸರ್ಕಾರಿ ಅಧಿಕಾರಿಗಳನ್ನು ತಕ್ಷಣವೇ ಸೇವೆಯಿಂದ ಅಮಾನತುಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಕಾಂಗ್ರೆಸ್ ಗೂಂಡಾಗಿರಿ: ಪೊಲೀಸರ ಸಮ್ಮುಖದಲ್ಲೇ ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮರಿದೇವರು ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿ ದೂರು ನೀಡಿದ್ದರೂ ಪೊಲೀಸರು ಕಡೇ ಪಕ್ಷ ಎಫ್ಐಆರ್ ದಾಖಲಿಸದ ಬಗ್ಗೆ ಕುಮಾರಸ್ವಾಮಿ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಕೌಟುಂಬಿಕ ವಿವಾದ ಸಂಬಂಧ ಪೊಲೀಸ್ ಠಾಣೆಯಲ್ಲಿ ನಡೆಯುತ್ತಿದ್ದ ನ್ಯಾಯ ಪಂಚಾಯಿತಿ ವೇಳೆ ಸಂಭವಿಸಿದೆ. ಪೊಲೀಸ್ ಅಧಿಕಾರಿಯೊಬ್ಬರು ರಾಜಿ ಮಾಡಿಸುವುದಾಗಿ ಹೇಳಿ ಪ್ರಕರಣ ದಾಖಲಾಗದಂತೆ ನೋಡಿಕೊಂಡಿರುವ ಬಗ್ಗೆ ಗೃಹ ಸಚಿವರ ಗಮನ ಸೆಳೆಯುವುದಾಗಿ ಅವರು ತಿಳಿಸಿದರು. ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿ ನನ್ನ ಬಳಿ ಅವಲತ್ತುಕೊಂಡ ಹಿನ್ನೆಲೆಯಲ್ಲಿ ಖುದ್ದು ತಾವೇ ಎಸ್ಪಿ ಅನುಪಮ್ ಅಗ್ರವಾಲ್ ಜತೆ ಚರ್ಚಿಸಿದ್ದೇನೆ. ಇಷ್ಟಾಗಿಯೂ ಕ್ರಮ ಕೈಗೊಂಡಿಲ್ಲ ಎನ್ನುವುದನ್ನು ಗಮನಿಸಿದರೆ ಪೊಲೀಸ್ ಠಾಣೆ ಸಹಿತ ಸರ್ಕಾರಿ ಕಚೇರಿಗಳನ್ನು ಕಾಂಗ್ರೆಸ್ ಗೂಂಡಾಗಳು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ನನ್ನ ಆರೋಪ ರುಜುವಾತಾಗಿದೆ ಎಂದರು.
ಕ್ಷೇತ್ರದ ಕಡೆ ಗಮನ: ಈ ಹಿಂದೆ ನಾನು ಪಕ್ಷದ ರಾಜ್ಯಾಧ್ಯಕ್ಷ ಆಗಿದ್ದ ಕಾರಣಕ್ಕೆ ಸ್ವಕ್ಷೇತ್ರ ರಾಮನಗರದತ್ತ ಹೆಚ್ಚು ಗಮನ ಹರಿಸಲಾಗಿರಲಿಲ್ಲ. ಇದೀಗ ಒಬ್ಬ ಜವಬ್ದಾರಿಯುತ ಶಾಸಕನಾಗಿ ವಾರಕ್ಕೊಮ್ಮೆ ಕ್ಷೇತ್ರ ಭೇಟಿ ಮತ್ತು ಪ್ರವಾಸ ಮುಂದುವರೆಸುತ್ತಿದ್ದೇನೆ. ಇದಕ್ಕೆ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ ಗಳಿಕೆ ಕುಸಿತ ಕಾರಣವೇನಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ನಾನು ಸಂಸದನಾಗಿದ್ದಾಗ ಈ ಕ್ಷೇತ್ರದಲ್ಲಿ ನಮ್ಮದೇ ಪಕ್ಷದ ಕೆ.ರಾಜು ಶಾಸಕರಾಗಿದ್ದರು. ಆಗ ಪದೇ ಪದೇ ಮೂಗು ತೂರಿಸಿದ್ದರೆ ಸಣ್ಣತನವಾಗುತ್ತಿತ್ತು. ಈಗ ಪಕ್ಷದ ರಾಜ್ಯಾಧ್ಯಕ್ಷ ಹೊಣೆ ಎ.ಕೃಷ್ಣಪ್ಪ ಹೆಗಲಿಗೆ ಹೋಗಿದೆ. ಕೊಂಚ ಕಾರ್ಯಭಾರ ಇಳಿಸಿಕೊಂಡಿದ್ದು, ನಾನೇ ಶಾಸಕನಾಗಿರುವ ರಾಮನಗರದತ್ತ ಗಮನ ಕೇಂದ್ರೀಕರಿಸಿರುವೆ ಎಂದರು.
ಕ್ಷೇತ್ರಕ್ಕೆ ತಿಂಗಳಲ್ಲಿ 2-3 ಬಾರಿ ಕಡ್ಡಾಯ ಭೇಟಿ ನೀಡುವುದಾಗಿ ಚುನಾವಣೆಯಲ್ಲಿ ಗೆದ್ದಾಗಲೇ ಹೇಳಿದ್ದೆ. ಇದೀಗ ವಾರಕ್ಕೊಮ್ಮೆ ಭೇಟಿ ನಿಗದಿಪಡಿಸಿಕೊಂಡಿರುವೆ. ರಾಮನಗರದಲ್ಲಿ ಕುಡಿಯುವ ನೀರಿನ ಬವಣೆ ನೀಗಿಸುವ ಸಂಬಂಧ ಸೆ.17ರವರೆಗೆ ಜಲ ಮಂಡಳಿ ಅಧಿಕಾರಿಗಳು ಗಡುವು ಪಡೆದಿದ್ದಾರೆ. ಸಮಸ್ಯೆ ಪರಿಹರಿಸದಿದ್ದರೆ ಮುಂದೇನು ಎಂಬುದನ್ನು ನಾನೇ ನಿರ್ಧರಿಸಬೇಕಾಗುತ್ತದೆ ಎಂದು ಹೇಳಿದರು.
ಅವರೇ ಹಾಕಿಕೊಟ್ಟ ಮಾರ್ಗ: ನಾನು ಲೋಕಸಭೆ ಸದಸ್ಯನಾಗಿದ್ದಾಗ ಕನಕಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಾವೊಂದು ಕಾರ್ಯಕ್ರಮಕ್ಕೂ ಆಹ್ವಾನ ನೀಡುತ್ತಿರಲಿಲ್ಲ. ಈಗ ನಾನು ಶಾಸಕನಾಗಿ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಹಾಕಿಕೊಟ್ಟ ಮಾರ್ಗದಲ್ಲೇ ನಡೆಯುತ್ತಿದ್ದೇನಷ್ಟೇ ಎಂದು ಶಿಷ್ಟಾಚಾರ ಉಲ್ಲಂಘನೆ ವಿಷಯವಾಗಿ ಪ್ರಶ್ನೆಯೊಂದಕ್ಕೆ ಕುಮಾರಸ್ವಾಮಿ ಉತ್ತರಿಸಿದರು.
ಬಿಜೆಪಿ ಆಂತರಿಕ ವಿಚಾರ: ಗುಜರಾತ್ ಸಿಎಂ ನರೇಂದ್ರ ಮೋದಿ ಅವರನ್ನು ಬಿಜೆಪಿಯು ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿರುವುದು ಆ ಪಕ್ಷದ ಆಂತರಿಕ ವಿಷಯ. ಅದಕ್ಕೆ ಸಹಮತ ಇಲ್ಲವೇ ವಿರೋಧ ವ್ಯಕ್ತಪಡಿಸುವುದು ಅನವಶ್ಯಕ. ಪ್ರಧಾನಿ ಯಾರಾಗಬೇಕು ಎನ್ನುವುದನ್ನು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ತೀರ್ಮಾನಿಸುವವರು ಸಮಸ್ತ ದೇಶದ ಮತದಾರರು ಎಂದರು.
ಬೈಲಾದಲ್ಲಿ ಪ್ರಸ್ತಾಪವಿಲ್ಲ: ಜೆಡಿಎಸ್ ಬೈಲಾದಲ್ಲಿ ಕೋರ್ ಕಮಿಟಿ ಬಗ್ಗೆ ಪ್ರಸ್ತಾಪವಿಲ್ಲ. ನಮ್ಮ ಪಕ್ಷದಲ್ಲಿರುವುದು ಸಂಸದೀಯ ಮಂಡಳಿ ಮಾತ್ರವೇ. ಅದೇ ಮಂಡಳಿಯು ಕೋರ್ ಕಮಿಟಿಯ ಕೆಲಸವನ್ನು ನಿರ್ವಹಿಸಲಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಸ್ಪೀಕರ್ ತೀರ್ಮಾನಿಸುತ್ತಾರೆ
ಬಿಜೆಪಿಯೊಂದಿಗೆ ಒಂದೊಮ್ಮೆ ಕೆಜೆಪಿ ವಿಲೀನವಾದರೆ ನನ್ನ ವಿಧಾನಸಭೆಯ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಕುತ್ತು ಬರುವುದೋ ಅಥವಾ ಇಲ್ಲವೋ ಎನ್ನುವುದನ್ನು ಸ್ಪೀಕರ್ ತೀರ್ಮಾನಿಸುತ್ತಾರೆ. ಈ ಕುರಿತ ಎಲ್ಲ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದರು.