ಗಣಿ ಕೇಸ್ಗೆ ಬೇಕಿಲ್ಲ ರಾಜ್ಯ ಸರ್ಕಾರದ ಒಪ್ಪಿಗೆ
ಅಕ್ರಮ ಅದಿರು ರಫ್ತು ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಮೊಕದ್ದಮೆ ದಾಖಲಿಸಲು ಸರ್ಕಾರದ ಪೂರ್ವಾನುಮತಿ ಪಡೆಯಬೇಕಿಲ್ಲ...
ನವದೆಹಲಿ: ಬೇಲೆಕೇರಿ ಬಂದರಿನಿಂದ ಅದಿರು ನಾಪತ್ತೆ ಮತ್ತು ಅಕ್ರಮ ಅದಿರು ರಫ್ತು ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕರ್ನಾಟಕ ಸರ್ಕಾರದ ಪೂರ್ವಾನುಮತಿ ಪಡೆಯಬೇಕಿಲ್ಲ ಎಂದು ಸುಪ್ರೀಂ ಕೋರ್ಟ್ನ ಹಸಿರು ಪೀಠ ಸಿಬಿಐಗೆ ತಿಳಿಸಿದೆ.
ಅಲ್ಲದೇ ಕೇಂದ್ರ ಉನ್ನತಾಧಿಕಾರ ಸಮಿತಿ(ಸಿಇಸಿ) ತನ್ನ ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಿ ಶಿಫಾರಸು ಮಾಡಿರುವ ಅಕ್ರಮ ಅದಿರು ರಫ್ತುದಾರರ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸಿಬಿಐಗೆ ಹಸಿರು ನಿಶಾನೆ ತೋರಿಸಿದೆ.
2012 ಸೆಪ್ಟೆಂಬರ್ 12ರಂದು ಸಿಇಸಿ ನೀಡಿದ್ದ ತನ್ನ ಪ್ರಾಥಮಿಕ ವರದಿಯಲ್ಲಿ 50,000 ಟನ್ ಮೇಲ್ಪಟ್ಟು ಅಕ್ರಮ ಅದಿರು ರಫ್ತು ಮಾಡಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಶಿಫಾರಸು ಮಾಡಿತ್ತು. ಸುಪ್ರೀಂ ಕೋರ್ಟ್ನ ಈ ಆದೇಶದೊಂದಿಗೆ ಅಕ್ರಮ ಗಣಿಗಾರಿಕೆ ಮತ್ತು ಅಕ್ರಮ ಅದಿರು ರಫ್ತು ಕುರಿತ ಸಿಬಿಐ ತನಿಖೆ ಮತ್ತೊಂದು ಮಜಲು ಮುಟ್ಟಿದೆ.
ಇನ್ನು ಅನುಮತಿ ಅಗತ್ಯವಿಲ್ಲ: ಡಿಎಸ್ಪಿಇ (ಡೆಲ್ಲಿ ಸ್ಪೆಷಲ್ ಪೊಲೀಸ್ ಎಸ್ಟಾಬ್ಲಿಷ್ಮೆಂಟ್) ಕಾಯ್ದೆ ಸೆಕ್ಷನ್ 6ರಡಿ ವಿಧಿಸಿರುವ ನಿರ್ಬಂಧಗಳು ಸುಪ್ರೀಂ ಕೋರ್ಟ್ ಆದೇಶದಂತೆ ನಡೆಯುತ್ತಿರುವ ತನಿಖೆಗೆ ಅನ್ವಯವಾಗುವುದಿಲ್ಲ ಎಂದು ಹಸಿರು ಪೀಠ ಸ್ಪಷ್ಟಪಡಿಸಿದೆ. ಇದರೊಂದಿಗೆ ಬೇಲೆಕೇರಿ ಬಂದರಿನಿಂದ ನಾಪತ್ತೆಯಾದ ಅದಿರು ಪ್ರಕರಣದಲ್ಲಿ ಭಾಗಿಯಾದ ಉನ್ನತಾಧಿಕಾರಿಗಳ ವಿರುದ್ಧವೂ ಸಿಬಿಐ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕರ್ನಾಟಕ ಸರ್ಕಾರದ ಅನುಮತಿ ಪಡೆಯುವ ಅಗತ್ಯ ಇಲ್ಲ. ಅಲ್ಲದೇ ಈ ಆದೇಶ ಅಕ್ರಮ ಗಣಿಗಾರಿಕೆ ಕುರಿತ ತನಿಖೆಗೂ ಅನ್ವಯವಾಗುವುದರಿಂದ ಅಕ್ರಮ ಗಣಿಗಾರಿಕೆಯಲ್ಲಿ ಪ್ರತ್ಯಕ್ಷ ಪರೋಕ್ಷವಾಗಿ ಭಾಗಿಯಾದವರ ವಿರುದ್ಧವೂ ಸಿಬಿಐ ಕ್ರಿಮಿನಲ್ ಮೊಕದ್ದಮೆ ದಾಖಲಿಸಬಹುದಾಗಿದೆ. ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ರಫ್ತುಮಾಡಿದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಸಿಬಿಐ ತನಿಖೆ ನಡೆಸುತ್ತಿದೆ. ಹೀಗಾಗಿ ನ್ಯಾಯಾಲಯದ ನಿರ್ದೇಶನದಂತೆ ನಡೆಯುತ್ತಿರುವ ಯಾವ ತನಿಖೆಗೂ ಡಿಎಸ್ಪಿಇ ಸೆಕ್ಷನ್ 6ರ ನಿರ್ಬಂಧ ಅನ್ವಯ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಡಿಪಿಎಸ್ಇ ಕಾಯ್ದೆ ಸೆಕ್ಷನ್ 6ರಡಿ ಸಿಬಿಐ, ಜಂಟಿ ಕಾರ್ಯದರ್ಶಿ ಮತ್ತು ಮೇಲ್ದರ್ಜೆ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕಾದರೆ ಸರ್ಕಾರದ ಪೂರ್ವಾನುಮತಿ ಪಡೆಯುವುದು ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ಸೋಮವಾರ ನ್ಯಾ. ಎ.ಕೆ. ಪಟ್ನಾಯಕ್, ನ್ಯಾಯಮೂರ್ತಿ ಎಸ್.ಎಸ್. ನಿಜ್ಜಾರ್ ಮತ್ತು ನ್ಯಾಯಮೂರ್ತಿ ರಂಜನಾ ಗೊಗೋಯ್ ಅವರಿದ್ದ ಹಸಿರು ಪೀಠವು ಸ್ಪಷ್ಟ ನಿರ್ದೇಶನ ನೀಡಿದೆ.
ಸಿಇಸಿ ಶಿಫಾರಸಿನಂತೆ ಕ್ರಮ: ಸಿಇಸಿ ನಡೆಸಿ ಪ್ರಾಥಮಿಕ ತನಿಖೆ ವ್ಯಾಪ್ತಿಯಲ್ಲಿ ಇಲ್ಲದ ಆದರೆ, 50,000 ಟನ್ಗಿಂತಲೂ ಕಡಮೆ ಪ್ರಮಾಣದಲ್ಲಿ ಅಕ್ರಮ ರಫ್ತು ಮಾಡಿರುವ ರಫ್ತುದಾರರ ವಿರುದ್ಧ ಕ್ರಮ ಕೈಗೊಳ್ಳಲು ಕರ್ನಾಟಕ ಸರ್ಕಾರಕ್ಕೆ ಸೂಚಿಸಿ ಆದೇಶ ನೀಡಿದೆ. 50000 ಟನ್ಗಿಂತಲೂ ಕಡಮೆ ಪ್ರಮಾಣದಲ್ಲಿ ಅಕ್ರಮವಾಗಿ ರಫ್ತು ಮಾಡಿದ ಪ್ರಕರಣಗಳಲ್ಲಿ ಸಿಇಸಿ ಶಿಫಾರಸು ಮಾಡಿರುವಂತೆ ಅಗತ್ಯ ಕಾನೂನುಗಳಡಿ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸರ್ಕಾರಕ್ಕೆ ತಿಳಿಸಿದೆ. ಅಲ್ಲದೇ, ಕರ್ನಾಟಕ ಸರ್ಕಾರ ಮತ್ತು ಸಿಬಿಐ ನಾಲ್ಕು ತಿಂಗಳಲ್ಲಿ ಅನುಸರಣೆ ವರದಿಯನ್ನು ತನಗೆ ಸಲ್ಲಿಸುವಂತೆ ಹಸಿರುಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಸಿಬಿಐಗೆ ಸೂಚಿಸಿತ್ತು: 2009 ಜನವರಿ 1ರಿಂದ 2010 ಮಾರ್ಚ್ 30ರ ನಡುವೆ ಕರ್ನಾಟಕದಲ್ಲಿ ಅರಣ್ಯ ಪ್ರದೇಶದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಮತ್ತು ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ರಫ್ತು ಮಾಡಿರುವ ಪ್ರಕರಣದ ಬಗ್ಗೆ ಸಂಪೂರ್ಣವಾಗಿ ಮತ್ತು ಸಮಗ್ರವಾಗಿ ತನಿಖೆ ನಡೆಸಿ ಎಫ್ಐಆರ್ ದಾಖಲಿಸುವಂತೆ 2012 ಸೆಪ್ಟೆಂಬರ್ 7 ರಂದು ಸಿಬಿಐಗೆ ಕೋರ್ಟ್ ಸೂಚಿಸಿತ್ತು. ಬೇಲೆಕೇರಿ ಬಂದರಿನಿಂದ 88 ಲಕ್ಷ ಟನ್ ಅದಿರನ್ನು ಅಕ್ರಮವಾಗಿ ರಫ್ತು ಮಾಡಲಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಧರಿಸಿ ಸಿಇಸಿ ನಡೆಸಿದ ತನಿಖೆಯ ವರದಿಯನ್ನಾಧರಿಸಿ ಸಿಬಿಐ ತನಿಖೆಗೆ 2012 ಸೆ.5ರಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. 73 ಕಂಪನಿಗಳು 88 ಲಕ್ಷ ಟನ್ ಅದಿರನ್ನು ಅಕ್ರಮವಾಗಿ ರಫ್ತು ಮಾಡಿವೆ ಎಂದು ಸಮಾಜ ಪರಿವರ್ತನಾ ಸಮುದಾಯ ಆರೋಪಿಸಿತ್ತು. ಬಂದರಿನಿಂದ ರಫ್ತಾದ 50 ಲಕ್ಷ ಟನ್ ಅದಿರಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅನುಮತಿಯೇ ಇರಲಿಲ್ಲ ಎಂದು ಆರೋಪಿಸಿದ ಸಮಾಜ ಪರಿವರ್ತನ ಸಮುದಾಯದ ಎಸ್.ಆರ್. ಹಿರೇಮಠ ಅಗತ್ಯ ದಾಖಲೆಗಳನ್ನು ನ್ಯಾಯಾಯಲಕ್ಕೆ ಒದಗಿಸಿದ್ದರು.
ಯಾವ ಯಾವ ಕಂಪನಿಗಳು?: ಅಕ್ರಮ ಅದಿರು ನಾಪತ್ತೆ ಪ್ರಕರಣದ ಬಗ್ಗೆ ರಾಜ್ಯ ಸರ್ಕಾರವು ಸಿಐಡಿ ತನಿಖೆಗೆ ಆದೇಶಿತ್ತು. ತನಿಖೆ ಆರಂಭಿಸಿದ್ದ ಸಿಐಡಿ ಅಧಿಕಾರಿಗಳು ರಾಜಮಹಲ್ ಸ್ಟೀಲ್, ಗ್ರೀನ್ಟೆಕ್ ಮೈನಿಂಗ್ ಇಂಡಸ್ಟ್ರಿ, ಕೋಥಾರಿ ಪ್ರಾಡಕ್ಟಸ್, ಬಳ್ಳಾರಿ ಜೀನತ್ ಟ್ರಾನ್ಸ್ಪೋರ್ಟ್ ಕಂಪನಿ, ಚಂದ್ರು ಅಸೋಸಿಯೇಟ್ಸ್, ಈಗಲ್ ಟ್ರೇಡರ್ಸ್ ್ಯಂಡ್ ಲಾಜಿಸ್ಟಿಕ್ಸ್, ಆದರ್ಶ್ ಎಕ್ಸ್ಪೋರ್ಟ್, ಶಾಲಿನಿ ಇಂಪೆಕ್ಸ್ ಎಕ್ಸ್ಪೋರ್ಟ್ ಕಂಪನಿ, ಎಸ್.ಬಿ. ಲಾಜಿಸ್ಟಿಕ್ ಎಕ್ಪೋರ್ಟ್ ಕಂಪನಿ, ಶ್ರೀ ಲಕ್ಷ್ಮಿವೆಂಕಟೇಶ್ವ ಮಿನರಲ್ಸ್, ಶ್ರೀ ವೆಂಕಟೇಶ್ವರ ಟ್ರಾನ್ಸ್ಪೋರ್ಟ್, ಗಣೇಶ್ ಮಿನರಲ್ಸ್, ಸ್ವಸ್ತಿಕ್ಸ್ ಸ್ಟೀಲ್ಸ್, ತುಂಗಭದ್ರ ಮೈನಿಂಗ್, ಐಎಲ್ಸಿ ಇಂಡಸ್ಟ್ರೀಸ್, ವಿಎಲ್ಎಲ್ ಮೈನಿಂಗ್ ಕಂಪನಿ, ಕಾವೇರಿ ಕಾಫಿ ಟ್ರೇಡರ್ಸ್ ದೀಪಾ ಮೈನಿಂಗ್ ಆ್ಯಂಡ್ ಮಿನರಲ್ಸ್, ಎಸ್ಎಸ್ಟಿಎ ಲಾಜಿಸ್ಟಿಕ್ಸ್, ಯೆಲ್ಲಾಪೂರ ಡ್ರೀಮ್ ಲಾಜಿಸ್ಟ್ರಿಕ್, ಎಎಂ ವರ್ಡ್ಲ್ ಮೈನಿಂಗ್ ಆ್ಯಂಡ್ ಎಕ್ಸ್ಪೋರ್ಟ್ ಸೇರಿದಂತೆ ಹಲವು ಕಂಪನಿಗಳ ವಿರುದ್ಧ ತನಿಖೆ ನಡೆಸಿತ್ತು.
ಶಮೀಮ್ ಬಾನುಗೆ ಜಾಮೀನು
ಬೆಂಗಳೂರು: ನಿವೃತ್ತ ಐಎಎಸ್ ಅಧಿಕಾರಿ ಶಮೀಮ್ ಬಾನು ಅವರಿಗೆ ಸಿಬಿಐ ವಿಶೇಷ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಡೆಕ್ಕನ್ ಮೈನಿಂಗ್ ಅದಿರು ಕಂಪನಿಯ ಗಣಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಕಾರಣದಿಂದ ಕಳೆದ ವಾರ ಸಿಬಿಐ ಪೊಲೀಸರು ಬಾನು ಅವರನ್ನು ಬಂಧಿಸಿದ್ದರು. ಅವರ ಅರ್ಜಿ ವಿಚಾರಣೆ ನಡೆಸಿದ ಸಿಬಿಐ ವಿಶೇಷ ಕೋರ್ಟ್ ಮಹಿಳೆ ಎಂಬ ಅನುಕಂಪದಿಂದ ಜಾಮೀನು ಮಂಜೂರು ಮಾಡಿದೆ. ಡೆಕ್ಕನ್ ಮೈನಿಂಗ್ ಕಂಪನಿಗೆ ಅಕ್ರಮವಾಗಿ ಗಣಿ ಪರವಾನಗಿಗೆ ಶಿಫಾರಸು ಮಾಡಿ ರಾಜ್ಯದ ಬೊಕ್ಕಸಕ್ಕೆ ಸುಮಾರು 1239 ಕೋಟಿ ನಷ್ಟ ಮಾಡಿದ್ದಾರೆ ಎಂದು ಸಿಬಿಐ ಆರೋಪ ಪಟ್ಟಿ ಸಲ್ಲಿಸಿತ್ತು. ಇದಾದ ಬಳಿಕ ಬಾನು ಅವರನ್ನು ಬಂಧಿಸಲಾಗಿತ್ತು. ಜಾಮೀನು ನೀಡಿರುವ ವಿಶೇಷ ಕೋರ್ಟ್, 2 ಲಕ್ಷ ಭದ್ರತಾ ಠೇವಣಿ ಹಾಗೂ ಒಬ್ಬರ ಭದ್ರತಾ ಠೇವಣಿ ಸಲ್ಲಿಸುವಂತೆ ಬಾನು ಅವರಿಗೆ ಸೂಚಿಸಿದೆ.
- ಕನ್ನಡಪ್ರಭ ಪ್ರತಿನಿಧಿಯಿಂದ