ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಫಿಲ್ಟರ್ ಮರಳು ದಂಧೆ ಕಡಿವಾಣಕ್ಕೆ ಸರ್ಕಾರ ಕ್ರಮ

ಲೋಕೋಪಯೋಗಿ ಇಲಾಖೆ ಮೂಲಕ ನಿರ್ಮಿಸುವ ಕಟ್ಟಡಗಳಿಗೆ ಉತ್ಪಾದಿತ ಮರಳನ್ನೇ (ಜಲ್ಲಿಪುಡಿ ಮರಳು) ಬಳಸಬೇಕು ಎಂದು...

Srinivasa Murthy VN
Updated On : 17 Sept 2013, 11:59 am

ಕನ್ನಡಪ್ರಭ ವಾರ್ತೆ, ಬೆಂಗಳೂರು, ಸೆ.16-
ರಾಜ್ಯದಲ್ಲಿ ಮರಳು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರ ಲೋಕೋಪಯೋಗಿ ಇಲಾಖೆ ಮೂಲಕ ನಿರ್ಮಿಸುವ ಕಟ್ಟಡಗಳಿಗೆ ಉತ್ಪಾದಿತ ಮರಳನ್ನೇ (ಜಲ್ಲಿಪುಡಿ ಮರಳು) ಬಳಸಬೇಕು ಎಂದು ಆದೇಶ ಹೊರಡಿಸಿದೆ.
ಮರಳು ಸಮಸ್ಯೆಯಿಂದಾಗಿ ಫಿಲ್ಟರ್ ಮರಳು ದಂಧೆ ಹೆಚ್ಚಾಗಿದೆ. ಈ ಮರಳು ಬಳಸಿ ನಿರ್ಮಿಸುವ ಕಟ್ಟಡಗಳು ಬಹುಬೇಗ ಉರುಳುತ್ತವೆ. ಹೀಗಾಗಿ ಉತ್ಪಾದಿತ ಮರಳನ್ನೇ ಸರ್ಕಾರಿ ಕಟ್ಟಡಗಳ ನಿರ್ಮಾಣ ಸಂದರ್ಭದಲ್ಲಿ ಬಳಸುವಂತೆ ಆದೇಶ ಹೊರಡಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ. ಇದಕ್ಕೆ ಅನುಕೂಲವಾಗುವಂತೆ ಬಿಡದಿ ಬಳಿ ಉತ್ಪಾದಿತ ಮರಳು ಘಟಕ ಸ್ಥಾಪಿಸಲಾಗುತ್ತಿದೆ. ಅಲ್ಲದೆ, ರಾಜ್ಯದ ಸುರಕ್ಷಿತ ವಲಯಗಳಲ್ಲಿರುವ ಜಲ್ಲಿ ಕ್ರಷರ್‌ಗಳಲ್ಲಿ ಉತ್ಪಾದಿತ ಮರಳು ತಯಾರಿಕೆಗೆ ಅನುಮತಿ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.

33 ಲಕ್ಷ ಟನ್ ಬೇಕು: ರಾಜ್ಯಕ್ಕೆ ಪ್ರತಿ ತಿಂಗಳು 33 ಲಕ್ಷ ಟನ್ ಮರಳು ಅಗತ್ಯವಿದೆ. ಆದರೆ, ಲಭ್ಯವಾಗುತ್ತಿರುವ ಮರಳು ಪ್ರಮಾಣ 8ರಿಂದ 9 ಲಕ್ಷ ಟನ್ ಮಾತ್ರ. ಇದರಿಂದ ಮರಳು ಬೆಲೆ ಗಗನಕ್ಕೇರುತ್ತಿದ್ದು, ಕಟ್ಟಡ ನಿರ್ಮಾಣ ಕ್ಷೇತ್ರ ತೊಂದರೆಗೆ ಸಿಲುಕಿದೆ. ಇನ್ನೊಂದೆಡೆ ಇದರ ಲಾಭ ಪಡೆದುಕೊಳ್ಳುತ್ತಿರುವ ದಂಧೆಕೋರರು ಫಿಲ್ಟರ್ ಮರಳು ತಯಾರಿಸಿ ಸರಬರಾಜು ಮಾಡುತ್ತಿದ್ದಾರೆ.
ಇಂತಹ ಮರಳಿನಿಂದ ನಿರ್ಮಾಣವಾದ ಕಟ್ಟಡಗಳು ಬಹು ಬೇಗ ಶಿಥಿಲಗೊಂಡು ಉರುಳುತ್ತವೆ. ಇದನ್ನು ತಪ್ಪಿಸಲು ಉತ್ಪಾದಿತ ಮರಳು ಬಳಕೆಗೆ ಆದ್ಯತೆ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ಹೇಳಿದರು.

ನಿರ್ವಹಣೆ ಮಾಡುತ್ತಿಲ್ಲ: 2011ರಲ್ಲಿ ರಾಜ್ಯ ಸರ್ಕಾರ ಹೊಸ ಮರಳು ನೀತಿ ಜಾರಿಗೆ ತಂದಿತ್ತು. ಅದರಂತೆ ಮರಳು ಗಣಿಗಾರಿಕೆ ವ್ಯವಸ್ಥೆಯನ್ನು ಲೋಕೋಪಯೋಗಿ ಇಲಾಖೆ ನಿರ್ವಹಿಸಬೇಕಿತ್ತು. ಮರಳು ಇರುವ ಬ್ಲಾಕ್‌ಗಳನ್ನು ಗುರುತಿಸಿ ಅಲ್ಲಿಂದ ಮರಳು ಸಾಗಣೆಗೆ ಅವಕಾಶ ಮಾಡಿಕೊಡಬೇಕು. ಆದರೆ, ಲೋಕೋಪಯೋಗಿ ಇಲಾಖೆ ತನ್ನ ಜವಾಬ್ದಾರಿ ನಿರ್ವಹಿಸುತ್ತಿಲ್ಲ.
ರಾಜ್ಯದಲ್ಲಿ ಮರಳು ದಂಧೆ ಹೆಚ್ಚಲು ಇದು ಕೂಡ ಕಾರಣವಾಗಿದೆ. ಆದ್ದರಿಂದ ಈ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನೂತನ ಮರಳು ನೀತಿ ರೂಪಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಮರಳು, ಕ್ರಷರ್‌ಗೆ ಒಂದೇ ಕಾಯ್ದೆ
ಮರಳು ಮತ್ತು ಜಲ್ಲಿ ಕ್ರಷರ್‌ಗಳು ಸಣ್ಣ ಅದಿರು (ಮೈನರ್ ಮಿನರಲ್) ವ್ಯಾಪ್ತಿಗೆ ಬರುವುದರಿಂದ ಈ ಎರಡೂ ಗಣಿಗಾರಿಕೆಗಳಿಗೆ ಒಂದೇ ಸಮಗ್ರ ನೀತಿ ರೂಪಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ. ಈ ಕುರಿತಂತೆ ಸಚಿವ ಸಂಪುಟ ಉಪಸಮಿತಿಯಲ್ಲಿ ಚರ್ಚಿಸಲಾಗಿದೆ. ಮರಳು ಗಣಿಗಾರಿಕೆ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ಕರಡು ನಿಯಮಗಳನ್ನು ಪರಿಶೀಲಿಸಲಾಗಿದೆ. ಈ ಆಧಾರದ ಮೇಲೆ 2011ರ ಮರಳು ನೀತಿಗೆ ಬದಲಾಗಿ ಮರಳು ಮತ್ತು ಜಲ್ಲಿ ಕ್ರಷರ್‌ಗಳಿಗೆ ಸಮಗ್ರ ನೀತಿ ರೂಪಿಸಲು ನಿರ್ಧರಿಸಲಾಗಿದೆ. ಅದರಂತೆ ಕರಡು ನೀತಿ ಸಿದ್ಧಪಡಿಸಲು ವಿವಿಧ ಇಲಾಖೆ ಕಾರ್ಯದರ್ಶಿಗಳನ್ನೊಳಗೊಂಡ ಇಲಾಖಾ ಮಟ್ಟದ ಸಮಿತಿ ರಚಿಸಲಾಗಿದೆ ಎಂದು ಹೇಳಿದರು. ಈ ಸಮಿತಿ ಒಂದು ತಿಂಗಳಲ್ಲಿ ಕರಡು ನೀತಿ ಸಿದ್ಧಪಡಿಸಿ ಸಂಪುಟ ಉಪಸಮಿತಿಗೆ ಸಲ್ಲಿಸಲಿದೆ. ಇದನ್ನು ಪರಿಶೀಲಿಸಿದ ಬಳಿಕ ಸಮಗ್ರ ನೀತಿ ರೂಪಿಸಿ ಸಂಪುಟದ ಅನುಮೋದನೆ ಪಡೆಯಲಾಗುವುದು ಎಂದು ಹೇಳಿದರು. ಮರಳು ಗಣಿಗಾರಿಕೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ಕಡ್ಡಾಯ. ಆದರೆ, ಈ ಅನುಮತಿ ವಿಳಂಬವಾಗುತ್ತಿದೆ. ಆದ್ದರಿಂದ ಮರಳು ಗಣಿಗಾರಿಕೆ ಕುರಿತ ಪರಿಸರ ಅನುಮತಿ ಕುರಿತ ಅರ್ಜಿಗಳನ್ನು ಒಂದು ತಿಂಗಳೊಳಗೆ ಇತ್ಯರ್ಥಪಡಿಸುವ ಬಗ್ಗೆಯೂ ಹೊಸ ನೀತಿಯಲ್ಲಿ ಪ್ರಸ್ತಾಪಿಸಲಾಗುವುದು ಎಂದರು.

ಅಕ್ರಮ ಮರಳು ದಂಧೆಗೆ ಶಿಕ್ಷೆ
ಅಕ್ರಮ ಮರಳು ಸಾಗಣೆ ಪ್ರಕರಣದಲ್ಲಿ ಬಾಗಿಯಾದವರಿಗೆ ಶಿಕ್ಷೆ ವಿಧಿಸುವ ಕಾನೂನು ರೂಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದುವರೆಗೆ ಅಕ್ರಮ ಮರಳು ಸಾಗಣೆ ಮಾಡಿದರೆ ದಂಡ ಪಾವತಿಸಿ ಲಾರಿ ಮತ್ತು ಮರಳು ವಾಪಸ್ ಪಡೆಯಬಹುದಿತ್ತು. ಹೀಗಾಗಿ ನಿಯಮ ಜಾರಿಯಲ್ಲಿದ್ದರೂ ಅಕ್ರಮ ಮರಳು ಸಾಗಣೆ ಮುಂದುವರಿದಿದ್ದು, ದಂಡ ಪಾವತಿಸಿ ಅಕ್ರಮ ಮುಂದುವರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅಕ್ರಮದಲ್ಲಿ ಭಾಗಿಯಾದವರಿಗೆ ಶಿಕ್ಷೆ ವಿಧಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ. ವ್ಯವಸ್ಥೆ ಸರಿಯಾಗಿದ್ದರೆ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಬಹುದು. ಈ ಕಾರಣದಿಂದಾಗಿ ಅಕ್ರಮ ಮರಳು ಸಾಗಣೆ ಶಿಕ್ಷಾರ್ಹ ಅಪರಾಧ ಎಂದು ಪರಿಗಣನೆಯಾದರೆ ಅಕ್ರಮಕ್ಕೆ ಕಡಿವಾಣ ಬೀಳುತ್ತದೆ. ಆದ್ದರಿಂದ ಇಂತಹ ಪ್ರಕರಣಗಳನ್ನು ಭಾರತೀಯ ದಂಡ ಸಂಹಿತೆಯಡಿ ತರುವ ಬಗ್ಗೆ ಯೋಚಿಸಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement