ಬರುತ್ತೆ ಬುಲೆಟ್ ರೈಲು
ಬೆಂಗಳೂರು - ಮೈಸೂರು ಮಧ್ಯೆ ಹೈಸ್ಪೀಡ್ ಬುಲೆಟ್ ರೈಲು ಸಂಚಾರ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.
- ಜಪಾನ್ನ ಆರ್ಥಿಕ, ತಾಂತ್ರಿಕ ನೆರವು ಪಡೆಯಲು ಸಿದ್ಧತೆ: ಸಿದ್ದು
ಬೆಂಗಳೂರು: ಬೆಂಗಳೂರು - ಮೈಸೂರು ಮಧ್ಯೆ ಹೈಸ್ಪೀಡ್ ಬುಲೆಟ್ ರೈಲು ಸಂಚಾರ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ತಮ್ಮ ಚೀನಾ ಪ್ರವಾಸ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಮಹತ್ವದ ಯೋಜನೆಗೆ ವೇದಿಕೆ ನಿರ್ಮಿಸಿದ್ದು ಇದಕ್ಕಾಗಿ ಜಪಾನ್ ದೇಶದ ಆರ್ಥಿಕ ಹಾಗೂ ತಾಂತ್ರಿಕ ನೆರವು ಪಡೆಯಲು ಸಿದ್ಧತೆ ನಡೆಸಿದ್ದಾರೆ.
ಚೀನಾ ಪ್ರವಾಸದ ಫಲಶೃತಿ ಬಗ್ಗೆ ವಿವರ ನೀಡಲು ಕರೆದ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಈ ವಿಷಯ ತಿಳಿಸಿರುವ ಅವರು, ಮೂಲ ಸೌಕರ್ಯ ಕಾರಿಡಾರ್ ಹಾಗೂ ಬುಲೆಟ್ ರೈಲು ಸಂಚಾರ ರಾಜ್ಯಕ್ಕೆ ತೀರಾ ಅಗತ್ಯವಾಗಿದೆ. ಮೊದಲ ಹಂತದಲ್ಲಿ ಬೆಂಗಳೂರು- ಮೈಸೂರು ಮಧ್ಯೆ ಈ ವ್ಯವಸ್ಥೆ ಕಲ್ಪಿಸಲು ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಜಪಾನ್ನ ಶಿಕ್ಷಣ ಹಾಗೂ ವಿಜ್ಞಾನ ಖಾತೆ ಸಚಿವ ಹಕೂಬನ್ ಶಿಮೋಮೂರ್ ಅವರನ್ನು ಬೆಂಗಳೂರಿಗೆ ಆಹ್ವಾನಿಸಿದ್ದೇನೆ ಎಂದು ಹೇಳಿದರು.
ಗಂಟೆಗೆ 250 ಕಿಮೀ ವೇಗದಲ್ಲಿ ಚಲಿಸುವ ಬುಲೆಟ್ ರೈಲು ಯೋಜನೆ ಜಾರಿಗೆ ಬಂದರೆ, ಬೆಂಗಳೂರಿನಿಂದ ಮೈಸೂರಿಗೆ ಕೇವಲ 30 ನಿಮಿಷದಲ್ಲಿ ತಲುಪುವುದಕ್ಕೆ ಸಾಧ್ಯ. ಮೈಸೂರು, ಬೆಂಗಳೂರಿನ ನಂತರದ ದೊಡ್ಡ ನಗರವಾಗಿರುವುದರಿಂದ ಮೊದಲು ಇಲ್ಲಿ ಯೋಜನೆ ಆರಂಭಿಸಲಾಗುವುದು. ನಂತರ ಹಂತಹಂತವಾಗಿ ಬೇರೆ ನಗರಗಳಿಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ ಎಂದರು.
ಸಭಾಂಗಣ: ಶಾಂಘೈ ನಗರದಲ್ಲಿ ನಿರ್ಮಿಸಿರುವ ಅಂತಾರಾಷ್ಟ್ರೀಯ ಸಮ್ಮೇಳನ ಸಭಾಂಗಣ ಅದ್ಭುತವಾಗಿದೆ. ಕೇವಲ 10 ತಿಂಗಳಲ್ಲಿ ಈ ಸಭಾಂಗಣವನ್ನು ನಿರ್ಮಿಸಲಾಗಿದೆ. ಇದೇ ಮಾದರಿಯಲ್ಲಿ ಬೆಂಗಳೂರಿನ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಸಭಾಂಗಣ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದರು. ಸುಮಾರು 400 ಕೋಟಿ ವೆಚ್ಚದಲ್ಲಿ ಈ ಸಭಾಂಗಣ ನಿರ್ಮಿಸಲಾಗುವುದು. ಪಿಪಿಪಿಯಡಿಯಲ್ಲಿ ಆದಷ್ಟು ಬೇಗ ಇದಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಜಿಮ್ 3ಗೆ ಆಹ್ವಾನ
ವಿಶ್ವ ಆರ್ಥಿಕ ವೇದಿಕೆ ಆಶ್ರಯದಲ್ಲಿ ನಡೆದ ಈ ಸಮಾವೇಶದಲ್ಲಿ ರಾಜ್ಯದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಲವು ರಾಷ್ಟ್ರಗಳ ಮುಖ್ಯಸ್ಥರು ಹಾಗೂ ಔದ್ಯಮಿಕ ದಿಗ್ಗಜರ ಜತೆ ನಾನು ಹಾಗೂ ನಮ್ಮ ನಿಯೋಗ ಮಾತುಕತೆ ನಡೆಸಿದೆ. ಮೂಲಸೌಕರ್ಯ, ಪವನ, ಸೌರ ವಿದ್ಯುತ್ ಉತ್ಪಾದನೆ, ಆಹಾರ ಸಂಸ್ಕರಣೆ, ಮಾಹಿತಿ ತಂತ್ರಜ್ಞಾನ, ಏರೋಸ್ಪೇಸ್, ಪ್ರವಾಸೋದ್ಯಮ, ಉತ್ಪಾದನಾ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ಅವರನ್ನು ಆಹ್ವಾನಿಸಿದ್ದೇನೆ ಎಂದು ಹೇಳಿದರು. ಸಮಾವೇಶದ ಭಾಗವಾಗಿ ದಾಲಿಯಾನ ನಗರದ ಕೆಂಪನ್ಸ್ಕಿ ಹೊಟೇಲ್ನಲ್ಲಿ ರಾಜ್ಯ ಸರ್ಕಾರದ ಪರವಾಗಿ ರೋಡ್ ಶೋ ಆಯೋಜಿಸಲಾಗಿತ್ತು. ಇದರಲ್ಲಿ ನಾನಾ ರಾಷ್ಟ್ರಗಳ 150 ಉದ್ಯಮಿಗಳು ಭಾಗವಹಿಸಿದ್ದರು.
'ನನಗೆ ಸೂಟ್ಗಿಂತ ಪಂಚೆಯೇ ಕಂಫರ್ಟು, ಚೀನಾದಲ್ಲಿ ರೋಡ್ಗಳು ಬೆಸ್ಟು, ಆದರೆ ಆ ದೇಶದವರ ಹೆಸರು ಹೇಳುವಾಗ ಆಗ್ತಿತ್ತು ಎಡವಟ್ಟು..!'
- ಸಿದ್ದರಾಮಯ್ಯ, ಮುಖ್ಯಮಂತ್ರಿ