ಸಬ್ಸಿಡಿ ಹೊರೆ ಜನರಿಗಿರಲಿ
ನವದೆಹಲಿ: 'ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿರುವಾಗ ಸಬ್ಸಿಡಿ ಬಗ್ಗೆ ಏಕೆ ತಲೆಕೆಡಿಸಿಕೊಳ್ಳುತ್ತೀರಿ? ಕೇವಲ ಸಬ್ಸಿಡಿಯನ್ನೇ ಅವಲಂಬಿಸಿ ಬದುಕುವುದು ಸಾಧ್ಯವಿಲ್ಲ. ಸಬ್ಸಿಡಿ ಇಲ್ಲದೆ ಬದುಕುವುದನ್ನು ಕಲಿಯಿರಿ. ಹೆಚ್ಚುವರಿ ಹೊರೆಯನ್ನು ಜನರ ಮೇಲೆ ಹಾಕಿ.'
ಇದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಮಾಡಿದ ಆರ್ಥಿಕತೆಯ ಪಾಠ. ಡೀಸೆಲ್ ದರವನ್ನು ನಿಯಂತ್ರಣಮುಕ್ತಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ತಡೆಯಾಜ್ಞೆ ವಿಧಿಸಿದ್ದ ಮದ್ರಾಸ್ ಹಾಗೂ ಕೇರಳ ಕೋರ್ಟ್ನ ಆದೇಶವನ್ನು ಸುಪ್ರೀಂ ಕೋರ್ಟ್ ಸೋಮವಾರ ತಳ್ಳಿಹಾಕಿತು. ಈ ಮೂಲಕ ರೇಲ್ವೆ, ರಾಜ್ಯ ಸಾರಿಗೆ ನಿಗಮ ಮುಂತಾದ ಸಂಸ್ಥೆಗಳಿಗೆ ನೀಡಲಾಗುವ ಡೀಸೆಲ್ ಸಬ್ಸಿಡಿ ರದ್ದುಮಾಡುವ ಕೇಂದ್ರ ಸರ್ಕಾರದ ಚಿಂತನೆಗೆ ಕೋರ್ಟ್ ಕೂಡ ಬೆಂಬಲ ವ್ಯಕ್ತಪಡಿಸಿತು. ಇದೇ ವೇಳೆ, ಹಳಿ ತಪ್ಪಿರುವ ಆರ್ಥಿಕತೆಯನ್ನು ಸರಿಪಡಿಸಲು ಕೆಲವು ಮಾರ್ಗಗಳನ್ನೂ ಸುಪ್ರೀಂ ಸೂಚಿಸಿತು.