ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕನ್ನಡಕ್ಕೆ ಕೋಲೇಟು

ಕನ್ನಡಕ್ಕಾಗಿ ಕೈ ಎತ್ತು ಎಂಬ ಕವಿವಾಣಿ ಬಗ್ಗೆ ಪಾಠ ಮಾಡಬೇಕಾದ ಶಿಕ್ಷಕರೇ ಕನ್ನಡ ಮಾತನಾಡಿದ ವಿದ್ಯಾರ್ಥಿಯನ್ನು ಬಡಿದು ಶಾಲೆಯಿಂದ ಹೊರಕ್ಕೆ ಹಾಕಿದರೆ ಹೇಗೆ ?

Srinivasa Murthy VN
Updated On : 18 Sept 2013, 12:09 pm

ಕನ್ನಡಪ್ರಭ ವಾರ್ತೆ, ಬೆಂಗಳೂರು, ಸೆ.17-
ಕನ್ನಡಕ್ಕಾಗಿ ಕೈ ಎತ್ತು ಎಂಬ ಕವಿವಾಣಿ ಬಗ್ಗೆ ಪಾಠ ಮಾಡಬೇಕಾದ ಶಿಕ್ಷಕರೇ ಕನ್ನಡ ಮಾತನಾಡಿದ ವಿದ್ಯಾರ್ಥಿಯನ್ನು ಬಡಿದು ಶಾಲೆಯಿಂದ ಹೊರಕ್ಕೆ ಹಾಕಿದರೆ ಹೇಗೆ ?
ಹೌದು. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಮಾತನಾಡಿದ್ದಕ್ಕೆ ವಿದ್ಯಾರ್ಥಿಗೆ ಸಿಕ್ಕ ಬಹುಮಾನವಿದು! ತರಗತಿ ನಡೆಯುವಾಗ ಕನ್ನಡ ಮಾತನಾಡಿದ ಎಂಬ ಕಾರಣಕ್ಕೆ ಶಿಕ್ಷಕ ವಿದ್ಯಾರ್ಥಿಯನ್ನು ಆಟ್ಟಾಡಿಸಿ ಹೊಡೆದಿದ್ದಾರೆ. ತರಗತಿಯಲ್ಲಿದ್ದ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ.
ನಗರದ ಕೆಲವು ಶಾಲೆಗಳು ವಿದ್ಯಾರ್ಥಿಗಳು ಕನ್ನಡ ಮಾತನಾಡಬಾರದು ಎಂದು ಅಲಿಖಿತ ನಿಯಮ ಹೇರುತ್ತಿರುವುದು ಇದರಿಂದ ಅಧಿಕೃತವಾಗಿಯೇ ಬಹಿರಂಗಗೊಂಡಿದೆ. ಬನಶಂಕರಿ ಕತ್ರಿಗುಪ್ಪೆಯಲ್ಲಿರುವ ಶ್ರೀ ಚೈತನ್ಯ ಎಜುಕೇಷನ್ ಟ್ರಸ್ಟ್‌ಗೆ ಸೇರಿದ ಶಾಲೆಯ ತರಗತಿಯಲ್ಲಿ ಕನ್ನಡ ಮಾತನಾಡುತ್ತಿದ್ದ ಎಂಬ ಕಾರಣಕ್ಕೆ ಶಿಕ್ಷಕ ಅಜಯ್ ಕೋಲಿನಿಂದ ಹೊಡೆದಿದ್ದಲ್ಲದೇ ಬ್ಯಾಗ್‌ಗಳನ್ನು ವಿದ್ಯಾರ್ಥಿಯತ್ತ ಎಸೆದಿದ್ದಾರೆ. ಇದನ್ನು ಪಾಲಕರು ಪ್ರಶ್ನಿಸಿದಾಗ ವಿದ್ಯಾರ್ಥಿಯನ್ನು ಶಾಲೆಯಿಂದಲೇ ಹೊರಹಾಕಲಾಗಿದೆ. ಶಾಲೆಯ ಈ ಕನ್ನಡ ವಿರೋಧಿ ಧೋರಣೆಗೆ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಏನಾಗಿತ್ತು: ಕತ್ರಿಗುಪ್ಪೆ ನಿವಾಸಿಗಳಾದ ಸುಮಾ ಹಾಗೂ ಸುರೇಶ್ ದಂಪತಿ ಪುತ್ರ ಅಕ್ಷಯ್ ಶ್ರೀ ಚೈತನ್ಯ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಕಳೆದ ಗುರುವಾರ ಅಂದರೆ ಸೆ.12ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ದೈಹಿಕ ಶಿಕ್ಷಣ (ಪಿ.ಟಿ) ಕ್ಲಾಸ್ ಮುಗಿಸಿಕೊಂಡು ಎಲ್ಲಾ ವಿದ್ಯಾರ್ಥಿಗಳು ಕೊಠಡಿಗೆ ಆಗಮಿಸಿದ್ದರು. ಪಿ.ಟಿ ಕ್ಲಾಸ್‌ನಲ್ಲಿ ಕೋ ಕೋ ಆಡುವ ವೇಳೆ ಕೆಲ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬೆನ್ನಿಗೆ ಜೋರಾಗಿ ಹೊಡೆದಿದ್ದಾರೆ ಎಂದು ತರಗತಿಯಲ್ಲಿ ಮಾತನಾಡುತ್ತಿದ್ದರು. ತರಗತಿಯಲ್ಲಿದ್ದ ವಿದ್ಯಾರ್ಥಿ ಅಕ್ಷಯ್ ಕೂಡಾ ವಿದ್ಯಾರ್ಥಿನಿಯರೊಂದಿಗೆ ಪಿ.ಟಿ ಕ್ಲಾಸ್‌ನಲ್ಲಿ ನಡೆದ ಸಣ್ಣ ಪುಟ್ಟ ಕಿತ್ತಾಟಗಳ ಬಗ್ಗೆ ಕನ್ನಡದಲ್ಲಿ ಮಾತನಾಡುತ್ತಿದ್ದ.
ಈ ವೇಳೆ ಏಕಾಏಕಿ ತರಗತಿಗೆ ನುಗ್ಗಿದ ಶಿಕ್ಷಕ ಅಜಯ್, ವಿದ್ಯಾರ್ಥಿಗಳಿಗೆ ಗದರಿಸಿದ್ದಾರೆ. ಅಲ್ಲದೇ ಕನ್ನಡದಲ್ಲಿ ಮಾತನಾಡುತ್ತಿದ್ದ ಅಕ್ಷಯ್ ಕಡೆ ಶಾಲಾ ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಎರಡು ಬಾರಿ ಎಸೆದಿದ್ದಾರೆ.
ಆದರೆ ಅದರಿಂದ ಅಕ್ಷಯ್ ಹೇಗೋ ತಪ್ಪಿಸಿಕೊಂಡು ಕೊಠಡಿಯ ಮೂಲೆಯಲ್ಲಿ ಹೋಗಿ ನಿಂತಿದ್ದ. ಈ ವೇಳೆ ಅಟ್ಟಾಡಿಸಿಕೊಂಡು ಬೆಂಚ್‌ಗಳನ್ನು ಹತ್ತಿ ಮೂಲೆಗೆ ಹೋದ ಶಿಕ್ಷಕ ಅಜಯ್ ಕೊಲಿನಿಂದ ಹೊಡೆದಿದ್ದಾರೆ. ಈ ಎಲ್ಲಾ ದೃಶ್ಯಗಳು ಕೊಠಡಿಯಲ್ಲಿರಿಸಿರುವ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ಅಜಯ್ ಶಾಲೆಯ ಮುಖ್ಯಸ್ಥೆ ಧನಲಕ್ಷ್ಮೀ ಪುತ್ರ. ಬಿ.ಎಸ್ಸಿ ಮುಗಿಸಿರುವ ಅವರು ಶಿಕ್ಷಕನಾಗಿ ಕಾರ್ಯನಿರ್ವಹಿಸಲು ಬೇಕಾದ ತರಬೇತಿ ಮುಗಿಸಿಲ್ಲ. ಉಂಡಾಡಿ ಗುಂಡನಂತೆ ಓಡಾಡುತ್ತಿದ್ದ ಅಜಯ್‌ನನ್ನು ಪಾಠ ಹೇಳುವಂತೆ ತಾಯಿ ಧನಲಕ್ಷ್ಮೀ ಹೇಳಿದ್ದರು.
ಈ ಕಾರಣಕ್ಕಾಗಿ ಅಜಯ್ 6ನೇ ತರಗತಿ ಒಳಗಿನ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ ಎಂದು ಅಕ್ಷಯ್ ತಂದೆಯ ಪರಿಚಿತರಾದ ರಾಧಾಕೃಷ್ಣ ಹೇಳಿದ್ದಾರೆ. ಅಕ್ಷಯ್ ಶಾಲೆಯಲ್ಲಿ ಕನ್ನಡ ಮಾತನಾಡಿದ್ದಾನೆ ಎನ್ನುವ ಕಾರಣಕ್ಕೆ ಕೋಲಿನಿಂದ ಹೊಡೆಯಲಾಗಿದೆ. ಈ ಹಿಂದೆಯೂ ವಿದ್ಯಾರ್ಥಿಗಳ ಮೇಲೆ ಶಾಲಾ ಸಿಬ್ಬಂದಿ ದೌರ್ಜನ್ಯ ನಡೆಸಿರುವ ಬಗ್ಗೆ ದೂರುಗಳು ಬಂದಿವೆ. ಆದರೆ ಯಾರು ಹೆಚ್ಚಿಗೆ ಕೆದಕಲು ಹೋಗಿರಲಿಲ್ಲ. ಸೋಮವಾರ ಅಕ್ಷಯ್ ಪೋಷಕರು ಹಾಗೂ ಸಂಬಂಧಿಗಳು ಈ ಬಗ್ಗೆ ಕೇಳಲು ಹೋದಾಗ ನಿಮ್ಮ ಮಗನ ಟಿಸಿ ತೆಗೆದುಕೊಂಡು ಹೋಗಿ ಎಂದು ಶಾಲೆಯ ಮುಖಸ್ಥೆ ತಾಕೀತು ಮಾಡಿದ್ದಾರೆ. ಅಲ್ಲದೇ ಶಾಲೆಗೆ ಕಟ್ಟಿದ್ದ 13 ಸಾವಿರ ಶುಲ್ಕದಲ್ಲಿ 8 ಸಾವಿರ ವಾಪಸ್ ನೀಡಿ, ಟಿಸಿ ಕೊಟ್ಟು ಕಳುಹಿಸಿದ್ದಾರೆ ಎಂದು ತಂದೆ ಸುರೇಶ್ ಹೇಳಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಶಾಲೆಯ ಮುಖ್ಯಸ್ಥೆ ಧನಲಕ್ಷ್ಮೀ, ಅಕ್ಷಯ್ ಕನ್ನಡದಲ್ಲಿ ಕೆಟ್ಟ ಭಾಷೆಯಿಂದ ಸಹಪಾಠಿಗಳಿಗೆ ನಿಂದಿಸುತ್ತಿದ್ದ. ಹೀಗಾಗಿ ಶಿಕ್ಷಕ ಅಜಯ್ ಬೆದರಿಸಿದ್ದಾನೆ ಅಷ್ಟೇ ಎಂದು ಹೇಳಿದ್ದಾರೆ. ಅಲ್ಲದೇ ಕನ್ನಡವನ್ನು ನಾವು ಅಪಾರ ಗೌರವಿಸುತ್ತೇವೆ. ಕನ್ನಡಕ್ಕೆ ಯಾವುದೇ ರೀತಿ ಅವಮಾನ ಮಾಡಿಲ್ಲ ಎಂದಿದ್ದಾರೆ.

ಸಚಿವರಿಂದ ಕ್ರಮದ ಭರವಸೆ
ಕನ್ನಡ ಮಾತನಾಡಬೇಡ ಎಂದು ಹೇಳಿರುವುದು ತಪ್ಪು. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ಮಾಹಿತಿ ಪಡೆದು ಶಾಲೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು   ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ  ಸಚಿವ ಕಿಮ್ಮನೆ ರತ್ನಾಕರ್ ಭರವಸೆ ನೀಡಿದ್ದಾರೆ.

ಇಂಗ್ಲಿಷ್‌ನಲ್ಲೇ ಓದಬೇಕು. ಇಂಗ್ಲಿಷ್‌ನಲ್ಲೆ ಮಾತನಾಡಬೇಕು ಎಂದು ಒತ್ತಡ ಹೇರುತ್ತಾರೆ. ಸ್ಥಳೀಯ ಭಾಷೆ ಮಾತನಾಡಿದ ನಮ್ಮ ಮಗನ ವರ್ಗಾವಣೆ ಪ್ರಮಾಣಪತ್ರ ತೆಗೆದುಕೊಂಡು ಹೋಗಿ ಎಂದು ತಾಕೀತು ಮಾಡಿದ್ದಾರೆ.
-ಸುರೇಶ್, ಅಕ್ಷಯ್ ತಂದೆ

ವಿದ್ಯಾರ್ಥಿ ಅಕ್ಷಯ್ ಕನ್ನಡದಲ್ಲಿ ಮಾತನಾಡಬಾರದು ಎಂದು ಶಿಕ್ಷಕ ಅಜಯ್ ಅವಾಜ್ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಶಾಲೆ ಬಳಿ ಪ್ರತಿಭಟನೆ ನಡೆಸಿದಾಗ, ಶಾಲೆಯ ಮುಖ್ಯಸ್ಥರು ತಾವು ಮಾಡಿದ ತಪ್ಪಿಗೆ ಕ್ಷಮೆ ಕೋರಿದ್ದಾರೆ. ನಗರದಲ್ಲಿ ಬೇರೆ ಬೇರೆ ಶಾಲೆಗಳು ಕನ್ನಡವನ್ನು ನಿರ್ಲಕ್ಷ್ಯ ಮಾಡುತ್ತಿವೆ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಭೇಟಿ ಮಾಡಿ ದೂರು ನೀಡುತ್ತೇವೆ.
-ರಮೇಶಗೌಡ, ಅಧ್ಯಕ್ಷರು, ಕನ್ನಡ ಜನಪರ ವೇದಿಕೆ

ಕನ್ನಡದಲ್ಲಿ ಕೆಟ್ಟ ಭಾಷೆಯಿಂದ ಸಹಪಾಠಿಗಳಿಗೆ ಅಕ್ಷಯ್ ನಿಂದಿಸುತ್ತಿದ್ದ. ಹೀಗಾಗಿ ಶಿಕ್ಷಕರು ಆತನಿಗೆ ಬೆದರಿಸಿದ್ದಾರೆ. ಕನ್ನಡವನ್ನು ನಾವು ಗೌರವಿಸುತ್ತೇವೆ. ಕನ್ನಡಕ್ಕೆ ಯಾವುದೇ ರೀತಿ ಅವಮಾನ ಮಾಡಿಲ್ಲ.
-ಧನಲಕ್ಷ್ಮೀ, ಮುಖ್ಯಸ್ಥೆ, ಶ್ರೀ ಚೈತನ್ಯ ಎಜುಕೇಷನ್ ಟ್ರಸ್ಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement