ಖೋಟಾದಲ್ಲಿ ನೇತಾರ
ಐಎಸ್ಐ ನಿರ್ದೇಶಿತ ನಕಲಿ ನೋಟುಗಳ ವ್ಯವಹಾರದಲ್ಲಿ ಭಾರತದ ಅನೇಕ ರಾಜಕಾರಣಿಗಳೂ ಭಾಗಿಯಾಗಿದ್ದಾರೆ ಎಂಬ ವಿಚಾರ ಇದೀಗ ಬಹಿರಂಗವಾಗಿದೆ.
ನವದೆಹಲಿ: ಪಾಕ್ ಗುಪ್ತಚರ ಸಂಸ್ಥೆ ಐಎಸ್ಐ ನಿರ್ದೇಶಿತ ನಕಲಿ ನೋಟುಗಳ ವ್ಯವಹಾರದಲ್ಲಿ ಭಾರತದ ಅನೇಕ ರಾಜಕಾರಣಿಗಳೂ ಭಾಗಿಯಾಗಿದ್ದಾರೆ ಎಂಬ ವಿಚಾರ ಇದೀಗ ಬಹಿರಂಗವಾಗಿದೆ.
ಈ ವಿಚಾರವನ್ನು ಸ್ವತಃ ಬಂಧಿತ ಇಂಡಿಯನ್ ಮುಜಾಹಿದೀನ್ ಉಗ್ರ ಯಾಸೀನ್ ಭಟ್ಕಳ್ ಬಹಿರಂಗಪಡಿಸಿದ್ದಾನೆ. ಭಾರತ- ನೇಪಾಳ ಗಡಿಯಲ್ಲಿ 200ಕ್ಕೂ ಹೆಚ್ಚು ನಕಲಿ ನೋಟು ಡೀಲರ್ಗಳು ಸಕ್ರಿಯರಾಗಿದ್ದಾರೆ. ಇದರಲ್ಲಿ ಎರಡೂ ದೇಶಗಳ ರಾಜಕಾರಣಿಗಳೂ ಇದ್ದಾರೆ. ಈ ದಂಧೆಗೆ ಮಾರುವೇಷದಲ್ಲಿರುವ ಅನೇಕ ಐಎಸ್ಐ ಏಜೆಂಟ್ಗಳು ಬೆನ್ನೆಲುಬಾಗಿ ನಿಂತಿದ್ದಾರೆ. ಇವರಲ್ಲಿ ಪಾಕ್ ಸೇನೆಯ ಹಿರಿಯ ಅಧಿಕಾರಿಗಳು ಇದ್ದಾರೆ. ಆದರೆ, ಇವರು ರಾಯಭಾರ ಕಚೇರಿ ಸಿಬ್ಬಂದಿಯೇನಲ್ಲ. ರಾಯಭಾರ ಕಚೇರಿಯ ಹೊರಗಿದ್ದುಕೊಂಡೇ ನಕಲಿ ನೋಟು ಜಾಲದ ಮೇಲೆ ಕಣ್ಗಾವಲು ಇಟ್ಟಿರುತ್ತಾರೆ ಎಂದು ಭಟ್ಕಳ್ ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಹವಾಲಾ ಹಣ: ಭಾರತದಲ್ಲಿರುವ ಉಗ್ರರು ಹಾಗೂ ಬಂಡುಕೋರರಿಗೆ ಹವಾಲ ಜಾಲದ ಮೂಲಕ ಹಣಕಾಸು ಪೂರೈಸಿದರೆ, ಬಾಂಗ್ಲಾದೇಶ ಮತ್ತು ಈಶಾನ್ಯ ರಾಜ್ಯಗಳ ಮೂಲಕ ಶಸ್ತ್ರಾಸ್ತ್ರ ಪೂರೈಸಲಾಗುತ್ತದೆ.
ನಕಲಿ ನೋಟೇ ಆಧಾರ: ಪಾಕಿಸ್ತಾನ ಪ್ರಾಯೋಜಿತ ಉಗ್ರಚಟುವಟಿಕೆಗಳಿಗೆ ನಕಲಿ ನೋಟು ಮೂಲ ಆಧಾರವಾಗಿದೆ. ಇದಲ್ಲದೆ, ದಾವೂದ್ ಬಂಟರು ದೇಶಾದ್ಯಂತ ನಡೆಸುತ್ತಿರುವ ಇನ್ಫೊಟೈನ್ಮೆಂಟ್, ಮರಳು ಮಾಫಿಯಾ, ಸುಲಿಗೆ, ಬೆಟ್ಟಿಂಗ್, ಮಾಧಕ ವಸ್ತುಗಳ ಸಾಗಣೆ ದಂಧೆ ಮೂಲಕ ಸಂಗ್ರಹಿಸಿದ ಆದಾಯದಲ್ಲೂ ಒಂದು ಭಾಗವನ್ನು ಉಗ್ರಕೃತ್ಯಗಳಿಗೆ ಬಳಸಲಾಗುತ್ತದೆ.
ನೇಪಾಳ ಕೇಂದ್ರ: ಪಾಕಿಸ್ತಾನದಲ್ಲಿ ಮುದ್ರಣವಾಗುವ ನಕಲಿ ನೋಟುಗಳನ್ನು ಭಾರತಕ್ಕೆ ರವಾನಿಸುವ ನಿಟ್ಟಿನಲ್ಲಿ ಐಎಸ್ಐ ನೇಪಾಳವನ್ನೇ ಪ್ರಮುಖ ಕೇಂದ್ರವನ್ನಾಗಿ ಮಾಡಿಕೊಂಡಿದೆ. ನೇಪಾಳದ ಬಿರ್ಗಂಜ್, ಪೊಖಾರ, ವಿರಾಟ್ನಗರ್ ಮತ್ತು ಗವುರ್ನಲ್ಲಿ ಈ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ. ಯುಎಇ ಮತ್ತು ಮಲೇಷ್ಯಾ ಮೂಲಕವೂ ನಕಲಿ ನೋಟುಗಳ ಚಲಾವಣೆ ಕಾರ್ಯ ನಡೆಯುತ್ತದೆ. ದಾವೂದ್ ಇಬ್ರಾಹಿಂ ಕೂಡ ಈ ನಕಲಿ ನೋಟು ಚಲಾವಣೆಯಲ್ಲಿ ಮುಖ್ಯಪಾತ್ರವಹಿಸಿದ್ದಾನೆ. ಈತ ತನ್ನ ಬಂಟರ ಮೂಲಕ ಈ ಜಾಲವನ್ನು ದೇಶದ ಮೂಲೆ ಮೂಲೆಗೂ ತಲುಪಿಸುತ್ತಾನೆ ಎಂದು ಯಾಸೀನ್ ಬಾಯ್ಬಿಟ್ಟಿದ್ದಾನೆ.
ಉಲ್ಫಾ ಉಗ್ರರಿಗೂ ನೆರವು: ಅಸ್ಸಾಂನಲ್ಲಿ ಹಿಂಸಾಚಾರ ನಡೆಸುತ್ತಿರುವ ಉಲ್ಫಾ ಉಗ್ರರಿಗೂ ಐಎಸ್ಐ ಶಾಸ್ತ್ರಾಸ್ತ್ರ ಸರಬರಾಜು ಮಾಡುತ್ತಿದೆ. ಅಲ್ಲದೆ, ಬಾಂಗ್ಲಾದೇಶದಲ್ಲಿರುವ ಶಿಬಿರಗಳಲ್ಲಿ ತರಬೇತಿ ನೀಡುತ್ತಿದೆ.
24 ಮಂದಿ ಜಿಹಾದಿಗಳು!
ನೇಪಾಳದಲ್ಲಿ 24ಕ್ಕೂ ಹೆಚ್ಚು ಜಿಹಾದಿಗಳು ನೆಲವೂರಿದ್ದಾರೆ. ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಇವರು ಐಎಸ್ಐ ನಿರ್ದೇಶನವನ್ನು ಎದುರು ನೋಡುತ್ತಿದ್ದಾರೆ ಎಂದೂ ಭಟ್ಕಳ್ ತಿಳಿಸಿದ್ದಾನೆ.
ಭಟ್ಕಳ್ನನ್ನು ಗೋವಾಗೆ ಕರೆದೊಯ್ದ ಎನ್ಐಎ!
ಗೋವಾದಲ್ಲಿ ಉಗ್ರರ ನೆಲೆಯ ಕುರಿತು ಮಾಹಿತಿ ಕಲೆಹಾಕುವ ನಿಟ್ಟಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಯಾಸೀನ್ ಭಟ್ಕಳ್ನನ್ನು ಗೋವಾಗೆ ಕರೆದೊಯ್ದಿದಿದೆ. ಅಂಜುನಾ ಬೀಚ್, ಮಾಪುಸಾ, ಪಣಜಿ ಮತ್ತು ವಾಸ್ಕೋದಲ್ಲಿ ಉಗ್ರರ ಸಂಪರ್ಕಕ್ಕೆ ಸಂಬಂಧಿಸಿ ಮಾಹಿತಿ ಕಲೆಹಾಕಿದೆ. ಈ ಹಿಂದೆ ಯಾಸೀನ್ ಗೋವಾಗೆ ಪದೇ ಪದೆ ಭೇಟಿ ನೀಡಿದ್ದ.
ಭಟ್ಕಳ್ ಕಸ್ಟಡಿ ಅವಧಿ ವಿಸ್ತರಣೆ
ಉಗ್ರ ಯಾಸೀನ್ ಭಟ್ಕಳ್ನನ್ನು ಸೆ.22ರ ವರೆಗೆ ಕಸ್ಟಡಿಯಲ್ಲಿಟ್ಟುಕೊಳ್ಳಲು ದೆಹಲಿ ನ್ಯಾಯಾಲಯ ಮಂಗಳವಾರ ಎನ್ಐಎಗೆ ಅನುಮತಿ ನೀಡಿದೆ. ಈ ನಡುವೆ, ಭಟ್ಕಳ್ ಸಹಚರ ಅಸಾದುಲ್ಲ ಅಖ್ತರ್ನನ್ನು ಹೈದರಾಬಾದ್ಗೆ ಕರೆದೊಯ್ಯಲು ನ್ಯಾಯಾಲಯ ಅನುಮತಿ ನೀಡಿದೆ. ದಿಲ್ಸುಖ್ನಗರ ಸ್ಫೋಟಕ್ಕೆ ಸಂಬಂಧಿಸಿ ವಿಚಾರಣೆ ನಡೆಸಲು ಎನ್ಐಎ ಹೈದರಾಬಾದ್ ಘಟಕ ಈ ಅನುಮತಿ ಕೋರಿತ್ತು.