ಮೋದಿ(ವಿ)ವಾದ
ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿದ ಹಿನ್ನೆಲೆಯಲ್ಲಿ ಪರ-ವಿರೋಧದ ಹೇಳಿಕೆಗಳು ಮುಂದುವರಿದಿವೆ.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿದ ಹಿನ್ನೆಲೆಯಲ್ಲಿ ಪರ-ವಿರೋಧದ ಹೇಳಿಕೆಗಳು ಮುಂದುವರಿದಿವೆ. ರಾಜ್ಯಪಾಲ ಹಂಸರಾಜ್ ಭಾರದ್ವಾಜ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾನಾ ಪಕ್ಷಗಳ ಮುಖಂಡರು ತಮ್ಮ ಹೇಳಿಕೆಗಳನ್ನು ಮಂಗಳವಾರ ಹರಿಯಬಿಟ್ಟಿದ್ದಾರೆ. ಅವುಗಳ ಝಲಕ್ ಇಲ್ಲಿದೆ.
ಮೋದಿ ಪ್ರಧಾನಿಯಾಗುವ ದೇಶದಲ್ಲಿ ನಾನಿರಲಾರೆ ಎಂದು ಹಿರಿಯ ಸಾಹಿತಿ ಯು.ಆರ್.ಅನಂತಮೂರ್ತಿ ಹೇಳಿಕೆ ನೀಡಿರುವುದು ನಿಜವಾದ ಅಭಿವೃಕ್ತಿ ಸ್ವಾತಂತ್ರ್ಯ. ಅನಂತಮೂರ್ತಿ ಅವರು ಮೋದಿ ಬಗ್ಗೆ ನೀಡಿರುವ ಹೇಳಿಕೆಯನ್ನು ಸರಿ ಅಥವಾ ತಪ್ಪು ಎನ್ನುವುದಕ್ಕಿಂತ ಅವರು ಏಕೆ ಹೇಳಿದ್ದಾರೆ ಎನ್ನುವುದು ಮುಖ್ಯವಾದ ಪ್ರಶ್ನೆ. ಮೋದಿ ಪ್ರಧಾನಿ ಅಭ್ಯರ್ಥಿಯಾಗುವುದಕ್ಕೆ ಆಡ್ವಾಣಿಗೇ ಅಸಮಾಧಾನವಿತ್ತು. ಮೋದಿ ಇತ್ತೀಚೆಗೆ ಬೆಳಕಿಗೆ ಬಂದವರು. ಆದ್ದರಿಂದ ಮೋದಿ ಮತ್ತು ರಾಹುಲ್ ಹೋಲಿಕೆ ಸರಿಯಲ್ಲ.
-ಸಿದ್ದರಾಮಯ್ಯ
ಮುಖ್ಯಮಂತ್ರಿ
ನರೇಂದ್ರ ಮೋದಿ 'ಕೋಬ್ರಾ' ಇದ್ದಂತೆ. ಯುಪಿಎ ಸರ್ಕಾರ 'ಚೇಳು' ಇದ್ದಂತೆ. ಚೇಳು ಕುಟುಕಿದರೆ ಔಷಧಿಯಿದೆ. ಆದ್ದರಿಂದ ಯಾವ ಆಡಳಿತ ಬೇಕೆಂದು ಜನರೇ ನಿರ್ಧರಿಸಬೇಕು. ಮೋದಿ ಪ್ರಧಾನಿಯಾದರೆ ದೇಶವೇ ವಿಷ ವರ್ತುಲದೊಳಗೆ ಸಿಲುಕಿಕೊಳ್ಳುತ್ತದೆ. ಯುಪಿಎ ಸರ್ಕಾರ ಜನಸ್ನೇಹಿಯಾಗಿ ಕೆಲಸ ನಿರ್ವಹಿಸುತ್ತದೆ.
-ಶ್ರೀನಿವಾಸ ಪ್ರಸಾದ್
ಕಂದಾಯ ಸಚಿವ
ಜನ ಪಾಠ ಕಲಿಸಲಿದ್ದಾರೆ
ನರೇಂದ್ರ ಮೋದಿ ಅವರಿಗೆ ಜನರೇ ಸೂಕ್ತ ಪಾಠ ಕಲಿಸಲಿದ್ದಾರೆ. ಪ್ರಧಾನಿ ಹುದ್ದೆಗೆ ಯಾರು ಹಿತವರು ಎಂಬುದು ಜನರಿಗೆ ತಿಳಿದಿದೆ. ಪ್ರಧಾನಿ ಹುದ್ದೆಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಿಸಿರುವುದರಲ್ಲಿ ವಿಶೇಷವೇನೂ ಇಲ್ಲ.
-ರಾಜ್ಯಪಾಲ ಹಂಸರಾಜ್ ಭಾರದ್ವಾಜ್
ಕಾಂಗ್ರೆಸ್ನಲ್ಲಿ ವೀರಪ್ಪ ಮೊಯಿಲಿ ಸೇರಿದಂತೆ ಎಲ್ಲ ನಾಯಕರು ಇಂದಿರಾಗಾಂಧಿ ಕುಟುಂಬದ ಭಟ್ಟಂಗಿಗಳಾಗಿದ್ದು, ನಾಯಕತ್ವದ ದಿವಾಳಿತನದಲ್ಲಿದ್ದಾರೆ. ಅದಕ್ಕೇ ನರೇಂದ್ರ ಮೋದಿಯವರ ಬಗ್ಗೆ ಭೀತಿ ನಿರ್ಮಾಣವಾಗಿದೆ. ಪರಾವಲಂಬಿ ಜೀವಿಗಳು ಸತ್ತಕೋಶದಲ್ಲಿ ಬದುಕಿರುತ್ತವೆ. ಇಂತಹದ್ದೇ ಮನಸ್ಥಿತಿ ಹೊಂದಿರುವ ಜ್ಞಾನಪೀಠಿ ಅನಂತಮೂರ್ತಿ ಅವರು ಯಾವುದೇ ಸರ್ಕಾರ ಬಂದರೂ ಅವರ ಅನುಕೂಲಕ್ಕೆ ತಕ್ಕಂತೆ ಬದುಕುತ್ತಾರೆ.
-ಸಿ.ಟಿ.ರವಿ
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ
ಮೋದಿ ಪ್ರಧಾನಿಯಾದರೆ ತಾವು ಭಾರತದಲ್ಲಿ ನೆಲೆಸಲು ಇಷ್ಟಪಡುವುದಿಲ್ಲ ಎಂದು ಹೇಳಿಕೆ ನೀಡಿರುವ ಅನಂತಮೂರ್ತಿ ಆದಷ್ಟು ಬೇಗನೇ ಈ ದೇಶದಿಂದ ಹೊರ ನಡೆಯಲಿ. ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿದಾಗ ಈ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತು ಅಭಿಮಾನವನ್ನು ಹೊಂದಿರುವ ಪ್ರತಿಯೊಬ್ಬ ಪ್ರಜೆ ಸಂಭ್ರಮಿಸಿದ್ದಾನೆ. ಈ ಸಂದರ್ಭದಲ್ಲಿ ಜಾತ್ಯತೀತತೆಯ ತುತ್ತೂರಿ ಊದಿದರೆ ನಡೆಯುವುದಿಲ್ಲ.
-ಅನಂತಕುಮಾರ ಹೆಗಡೆ
ಬಿಜೆಪಿ ಸಂಸದ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.