ಸಿಡಿಲಿಗೆ ಮಹಿಳೆ ಬಲಿ
ಕ.ಪ್ರ.ವಾರ್ತೆ ಬೆಂಗಳೂರು ಸೆ. 17-
ವರುಣ ರಾಜ್ಯದ ಅಲ್ಲಲ್ಲಿ ತನ್ನ ಆರ್ಭಟವನ್ನು ಮುಂದುವರಿಸಿದ್ದು, ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಜಕ್ಕನಾಯಕನ ಕೊಪ್ಪದಲ್ಲಿ ಸಿಡಿಲು ಬಡಿದು ಮೃತಪಟ್ಟರೆ, ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನಲ್ಲಿ ಮಳೆಯಿಂದ 14 ಕುರಿ ಮತ್ತು ಎರಡು ಆಡುಗಳು ಮೃತಪಟ್ಟಿವೆ. ಬೈಲಹೊಂಗಲ ತಾಲೂಕಿನ ಜಕ್ಕನಾಯಕನಕೊಪ್ಪದ ಈರವ್ವ ಸವಪ್ಪ ಹಣಮನಿ (50) ಎಂಬ ಮಹಿಳೆ ಸಿಡಿಲು ಬಿಡಿದು ಮೃತಪಟ್ಟವರು. ಹೊಲದಲ್ಲಿ ಶೇಂಗಾ ಬೆಳೆ ತೆಗೆಯುವ ಕೆಲಸದಲ್ಲಿ ನಿರತರಾಗಿದ್ದಾಗ ಈ ಅವಘಡ ಸಂಭವಿಸಿದೆ.
ಬಾಗಲಕೋಟೆ ಜಿಲ್ಲೆಯಲ್ಲಿಯೂ ಉತ್ತಮ ಮಳೆ ಸುರಿದಿದೆ. ಬೀಳಗಿ, ಮುಧೋಳ, ಹುನಗುಂದ ತಾಲೂಕಿನಲ್ಲಿ ಹದ ಮಳೆಯಾಗಿದೆ. ಸತತ 15 ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಸಜ್ಜೆ, ಹೆಸರು, ಮುಸುಕಿನ ಜೋಳ ಬೆಳೆ ನಾಶವಾಗಿದೆ. ಮಡಿಕೇರಿ ಸೇರಿದಂತೆ ಕೊಡಗು ಜಿಲ್ಲೆಯಲ್ಲಿಯೂ ಮಂಗಳವಾರ ಉತ್ತಮ ಮಳೆಯಾಗಿದೆ.