ಹೊರಗೆ ಬಂದ್ರೆ ನೋಡ್ಕೋತೀವಿ ಅಂದಿದ್ರಂತೆ!
ಅಕ್ರಮ ಗಣಿಗಾರಿಕೆ ವಿಷಯದಲ್ಲಿ ರೆಡ್ಡಿ ಸೋದರರು ತಮಗೆ ಬೆದರಿಕೆ ಒಡ್ಡಿದ್ದರು ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ತಿಳಿಸಿದರು.
ಬೆಂಗಳೂರು: 'ರಾಜಭವನದಿಂದ ಹೊರಗೆ ಬನ್ನಿ.. ನೋಡಿಕೊಳ್ಳುತ್ತೇವೆ' ಎಂಬುದಾಗಿ ಅಕ್ರಮ ಗಣಿಗಾರಿಕೆ ವಿಷಯದಲ್ಲಿ ರೆಡ್ಡಿ ಸೋದರರು ತಮಗೆ ಬೆದರಿಕೆ ಒಡ್ಡಿದ್ದರು ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ತಿಳಿಸಿದರು.
ಬೆಂಗಳೂರು ಪ್ರೆಸ್‌ಕ್ಲಬ್ ಮತ್ತು ಬೆಂಗಳೂರು ವರದಿಗಾರರ ಕೂಟ ಮಂಗಳವಾರ ಪ್ರೆಸ್‌ಕ್ಲಬ್ ಆವರಣದಲ್ಲಿ ಜಂಟಿಯಾಗಿ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಅವರು ಈ ವಿಷಯ ತಿಳಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ತಾವು ಕೈಗೊಂಡ ಕ್ರಮಗಳನ್ನು ಸಮರ್ಥಿಸಿಕೊಂಡ ಅವರು, ತಮಗೆ ಯಾರ ಮೇಲೆಯೂ ದ್ವೇಷವಿಲ್ಲ. ರಾಜ್ಯಪಾಲರಾಗಿ ಬರುವಾಗ ರೆಡ್ಡಿ ಸಹೋದರರು ಯಾರು ಅಂತಲೇ ತಿಳಿದಿರಲಿಲ್ಲ. ಆದರೆ, ಅವರು ಅಕ್ರಮ ಗಣಿಗಾರಿಕೆ ಸಂಬಂಧ ತಮ್ಮ ಬಳಿ ಸಂಘರ್ಷಕ್ಕಿಳಿದಿದ್ದಲ್ಲದೇ, ರಾಜಭವನದ ಹೊರಗೆ ಬನ್ನಿ ನೋಡಿಕೊಳ್ಳುವೆವು ಎಂಬುದಾಗಿ ಬೆದರಿಕೆ ಒಡ್ಡಿದ್ದರು. ಆಗಿನ ಸರ್ಕಾರ ಕೂಡ ತಮ್ಮ ಬಳಿ ಉತ್ತಮ ಸಂಬಂಧ ಇರಿಸಿಕೊಂಡಿರಲಿಲ್ಲ. ಅವರನ್ನು ಸಂಪುಟದಿಂದ ಕೈಬಿಡಿ ಎಂದರೂ ಕೇಳಿರಲಿಲ್ಲ. ರಾಜಭವನದಂತಹ ಪ್ರಬಲ ಸಂಸ್ಥೆಗೆ ಕಲ್ಲು ಹೊಡೆದರೆ ಏನಾಗುತ್ತದೆ ಎಂಬುದಕ್ಕೆ ಅಂದಿನ ಘಟನಾವಳಿಗಳೇ ಸಾಕ್ಷಿ. ಆದರೆ, ಈಗ ಆಗಿನ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್ ಎಲ್ಲರ ಜತೆಗೂ ಉತ್ತಮ ಬಾಂಧವ್ಯ ಇರುವುದಾಗಿ ರಾಜ್ಯಪಾಲರು ತಿಳಿಸಿದರು.
ಪತ್ನಿ ಹೇಳಿದ್ದಕ್ಕೆ ಬಂದೆ: 'ನನಗೆ ರಾಜ್ಯಪಾಲನಾಗಿ ಕರ್ನಾಟಕಕ್ಕೆ ಬರಲು ಇಚ್ಚೆ ಇರಲಿಲ್ಲ. ಸಾಮಾನ್ಯವಾಗಿ, ರಾಜ್ಯಪಾಲರೆಂದರೆ ರಬ್ಬರ್‌ಸ್ಟ್ಯಾಂಪ್ ಇದ್ದಂತೆ. ಹಾಗಾಗಿ, ರಾಜ್ಯಪಾಲನಾಗಿ ತೆರಳಲು ಸೂಚಿಸಿದಾಗ ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು 2 ದಿನ ತೆಗೆದುಕೊಂಡಿದ್ದೆ. ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವ ಬದಲು ರಾಜ್ಯಪಾಲರಾಗುವುದು ಒಳಿತು.
ಜತೆಗೆ, ಕರ್ನಾಟಕದಲ್ಲಿದ್ದರೆ ನಿಮ್ಮ ಆರೋಗ್ಯವೂ ಸುಧಾರಿಸುತ್ತದೆ ಎಂದು ಪತ್ನಿ ಹೇಳಿದ ಬಳಿಕ ರಾಜ್ಯಪಾಲನಾಗಲು ನಿರ್ಧರಿಸಿದೆ.' ಆಡಳಿತಗಾರ ಹಾಗೂ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದ ನಿಮಗೆ ಯಾವುದು ಆಪ್ತ ಎನಿಸಿತು ಎಂಬ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದ ಅವರು, ಕೊನೆಯಲ್ಲಿ 'ನಾನೀಗ ನಿವೃತ್ತಿ ಬಯಸುತ್ತಿದ್ದೇನೆ. ದೇಶಕ್ಕೆ ವಿನಾಶಕಾರಿಯಾದ ರಾಜಕಾರಣ ನನಗೆ ಇಷ್ಟವಾಗುತ್ತಿಲ್ಲ. ಅದನ್ನು ತಡೆದುಕೊಳ್ಳುವ ಶಕ್ತಿ ಕೂಡ ನನ್ನಲ್ಲಿ ಕ್ಷೀಣಿಸುತ್ತಿದೆ' ಎಂದರು.
ಪತ್ರಕರ್ತರೇ ಕಾರಣ: ಸ್ವಾತಂತ್ರ್ಯಕ್ಕೆ ಹೋರಾಡಿದ ಮಹಾತ್ಮ ಗಾಂಧಿ, ಬಾಲಗಂಗಾಧರ ತಿಲಕ್, ಜವಹರಲಾಲ್ ನೆಹರು, ಗೋಪಾಲಕೃಷ್ಣ ಗೋಖಲೆ ಎಲ್ಲರೂ ಪತ್ರಕರ್ತರೇ ಆಗಿದ್ದರು. ಅಂತಹ ಧೀರ ಪತ್ರಕರ್ತರಿಂದಾಗಿಯೇ ಸ್ವಾತಂತ್ರ್ಯ ಸಿಕ್ಕಿತು. ಹಾಗೆ ಸಾಕಷ್ಟು ತ್ಯಾಗ ಮುಖೇನ ಸಮಾಜ ಸೇವೆ ಮಾಡುವ ಪತ್ರಕರ್ತರಿಗೆ ಉತ್ತಮ ವೇತನ ಮಾತ್ರವಲ್ಲ, ಪೂರ್ಣ ಸ್ವಾತಂತ್ರ್ಯವೂ ಸಿಗಬೇಕು ಎಂದು ಅಭಿಪ್ರಾಯಪಟ್ಟರು.
ದೇಶಾದ್ಯಂತ ನರೇಂದ್ರ ಮೋದಿ ಅಲೆ ಇದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ದೇಶಾದ್ಯಂತ ಕೋಮುಸೌಹಾರ್ದತೆ ಇರಬೇಕಾದ್ದು ಮುಖ್ಯ ಎಂದುತ್ತರಿಸಿದರು.
ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶ ಅಸಾಧ್ಯ. ಸುಪ್ರೀಂಕೋರ್ಟ್ ಸೂಚನೆಯಂತೆಸರ್ಕಾರ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಅಕ್ರಮ ಗಣಿಗಾರಿಕೆ ತನಿಖೆ ಉಸ್ತುವಾರಿ ಸುಪ್ರೀಂಕೋರ್ಟ್ ವಹಿಸಿರುವ ಬಗ್ಗೆ ರಾಜ್ಯಪಾಲರು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಪ್ರೆಸ್‌ಕ್ಲಬ್ ಅಧ್ಯಕ್ಷ ರಾಮಕೃಷ್ಣ ಉಪಾಧ್ಯಾಯ, ಪ್ರಧಾನ ಕಾರ್ಯದರ್ಶಿ ಕೆ.ಸದಾಶಿವ ಶೆಣೈ, ವರದಿಗಾರರ ಕೂಟದ ಅಧ್ಯಕ್ಷ ಕೆ.ವಿ.ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಹಾಜರಿದ್ದರು.
ಬಿಎಸ್‌ವೈ ಸಲಹೆ ಪಾಲಿಸಲಿಲ್ಲ...
ಯಡಿಯೂರಪ್ಪ ಮತ್ತು ತಾವು ಸ್ನೇಹಿತರು. ಅವರು ಮುಖ್ಯಮಂತ್ರಿಯಾಗಿದ್ದಾಗ ಅವರ ಪರಿಶ್ರಮ ಮೆಚ್ಚಿದ್ದೆ. ಜತೆಗೆ ರೆಡ್ಡಿ ಸೋದರರನ್ನು ಸಂಪುಟದಿಂದ ಕೈಬಿಡಿ. ಬದಲಿಗೆ, ನೀವು ಹಿರಿಯರಿದ್ದೀರಿ, ನಿಮ್ಮ ಪುತ್ರ ಸಂಸದ ಆಗಿದ್ದಾರೆ, ಅವರನ್ನು ಬೆಳೆಸಲು ಯತ್ನಿಸಿ ಎಂದು ಸಲಹೆ ನೀಡಿದ್ದೆ. ಆದರೆ ಅವರು ಪಾಲಿಸಲಿಲ್ಲ.
ಸಿದ್ದು ತಪು ಕಾಣಿಸಿಲ್ಲ...
ಸಿದ್ದರಾಮಯ್ಯ ಅವರು ಸ್ವಸಾಮರ್ಥ್ಯದಿಂದ ಮೇಲೆ ಬಂದ ವ್ಯಕ್ತಿ. ತಮ್ಮ ಪ್ರಕಾರ ಅವರು ಬಡವರಿಗಾಗಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಕೆಲಸದಲ್ಲಿ ಇದುವರೆಗೆ ತಪ್ಪು ಕಂಡಿಲ್ಲ. ಇಬ್ಬರಲ್ಲೂ ಪರಸ್ಪರ ಗೌರವವಿದೆ.