ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನಂದೂ ತಪ್ಪು, ಮಗಂದೂ ತಪ್ಪು

ಹಿಂದೆ ಕಾಂಗ್ರೆಸ್‌ಗೆ ಬೆಂಬಲ ನೀಡಿ ಸರ್ಕಾರ ಮಾಡಲು ನೆರವಾಗಿದ್ದು ನಾನು ಮಾಡಿದ ಮೊದಲ ತಪ್ಪು. ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿದ್ದು ಕುಮಾರಸ್ವಾಮಿ ತಪ್ಪು.

Srinivasa Murthy VN
Updated On : 19 Sept 2013, 1:51 am

ಕನ್ನಡಪ್ರಭ ವಾರ್ತೆ, ಮಂಗಳೂರು, ಸೆ.18-
ಹಿಂದೆ ಕಾಂಗ್ರೆಸ್‌ಗೆ ಬೆಂಬಲ ನೀಡಿ ಸರ್ಕಾರ ಮಾಡಲು ನೆರವಾಗಿದ್ದು ನಾನು ಮಾಡಿದ ಮೊದಲ ತಪ್ಪು. ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿದ್ದು ಕುಮಾರಸ್ವಾಮಿ ತಪ್ಪು. ಆಗ ಒಳ್ಳೇ ಆಡಳಿತವೇನೋ ಕೊಟ್ಟರು, ಅದರಿಂದ ಅವರ ಪ್ರೊಫೈಲ್ ಬೆಳೆಯಿತೇ ಹೊರತು, ಪಕ್ಷ ಕೆಳಗೆ ಇಳಿಯಿತು!
ಈ ರೀತಿ ಆತ್ಮವಿಮರ್ಶೆ ಮಾಡಿಕೊಂಡಿದ್ದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ.
ಮಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಂಥ ತಪ್ಪುಗಳನ್ನು ಇನ್ನೆಂದೂ ಮಾಡುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಎಡರಂಗದ ಜತೆ ಮೈತ್ರಿ ಮಾಡಿಕೊಳ್ಳುತ್ತೇವೆ. ವಿರೋಧ ಪಕ್ಷಗಳು ಜೆಡಿಎಸ್ ಮುಖಂಡರನ್ನು ಸೆಳೆಯಲು, ಜಾತ್ಯತೀತ ಸಿದ್ಧಾಂತ ಶಿಥಿಲಗೊಳಿಸಲು ಕಾಯುತ್ತಿದ್ದವು. ಕಾಂಗ್ರೆಸ್ ಮತ್ತು ಬಿಜೆಪಿ ದುರ್ಬಲವಾಗಿರುವ ಕಡೆ ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿವೆ. ರಾಜ್ಯದಲ್ಲಿ ನಾವು ದುರ್ಬಲರಾಗಿದ್ದೇವೆ. ಮೊದಲು ನಾವು ಪಕ್ಷ ಸಂಘಟನೆ ಕಡೆ ಗಮನ ನೀಡುತ್ತೇವೆ ಎಂದರು.
ಅನೇಕ ತಪ್ಪುಗಳಾಗಿವೆ. ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತೇವೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಕಟ್ಟುತ್ತೇವೆ. ಅಕ್ಟೋಬರ್ ಅಂತ್ಯದಲ್ಲಿ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಗುರುತಿಸುತ್ತೇವೆ.
ಕರಾವಳಿಯಲ್ಲಿ 1999ರಿಂದ 2004ರ ಅವಧಿಯಲ್ಲಿ ಬಿಜೆಪಿ ಆಕ್ರಮಣ ಮಾಡಿ ಸೀಟು ಹೆಚ್ಚಿಸಿಕೊಂಡಿತು. ನಮ್ಮದು ಕರಾವಳಿಯಲ್ಲಿ ದುರ್ಬಲವಾಗಿದೆ. ಕರಾವಳಿಯಲ್ಲಿ ಪಕ್ಷ ಸಂಘಟಿಸುವಾಗ ತಪ್ಪುಗಳಾಗಿವೆ ಎಂದು ಒಪ್ಪಿಕೊಳ್ಳುತ್ತೇನೆ ಎಂದರು.

ರಾಜ್ಯಪಾಲರ ಬಗ್ಗೆ ಮಾತಾಡಲ್ಲ: ರಾಜ್ಯಪಾಲರ ಬಗ್ಗೆ ಚಕಾರ ಎತ್ತುವುದಿಲ್ಲ. ಆದರೆ ರಾಜಕೀಯ ವ್ಯಕ್ತಿಗಳನ್ನು ರಾಜ್ಯಪಾಲರನ್ನು ಮಾಡುವ ಪರಿಪಾಠ ಇಂದಿರಾ ಗಾಂಧಿ ಕಾಲದಲ್ಲಿ ಆರಂಭಗೊಂಡಿತು. ಸ್ವತಂತ್ರನ್ಯಾಯಾಂಗದ ಬಗ್ಗೆ ನಾನು ಹೋರಾಟ ನಡೆಸಿದ್ದೆ. ಇದೀಗ ನ್ಯಾಯಾಂಗವನ್ನು ರಾಜಕಾರಣ ವಶಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದರು. ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿಯರನ್ನು ಆಯ್ಕೆ ಮಾಡಿಕೊಂಡಿದ್ದು ಅವರ ಆಂತರಿಕ ವಿಷಯ. ನಾವು ಪ್ರಧಾನಿ ಅಭ್ಯರ್ಥಿ ಘೋಷಿಸುವುದಿಲ್ಲ. ನಿಜವಾದ ಜಾತ್ಯತೀತ ವ್ಯವಸ್ಥೆ ಸೇನೆಯಲ್ಲಿದೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ ಆಂತರಿಕ ವ್ಯವಸ್ಥೆಯಲ್ಲಿ ಸೌಹಾರ್ದ, ಶಾಂತಿ ಬೇಕಲ್ಲವೇ ಎಂದು ಪ್ರಶ್ನಿಸಿದರು.

ಪ್ರಧಾನಿ ಹುದ್ದೆ ಆಸಕ್ತಿ ಇಲ್ಲ: ಲೋಕಸಭೆಗೆ ನಾನು ಸ್ಪರ್ಧಿಸುತ್ತೇನೆ. ಆದರೆ ಕುಮಾರಸ್ವಾಮಿ ಸ್ಪರ್ಧಿಸುವುದಿಲ್ಲ. ನಿಮಗೆ ನಾನು ಪ್ರಧಾನಿ ಆಗಲು ಪ್ರಯತ್ನ ಮಾಡಬಹುದು ಎಂಬ ಸಂಶಯ ಇರಬಹುದು. ನನಗೆ ಅದರಲ್ಲಿ ಆಸಕ್ತಿ ಇಲ್ಲ. ಆ ರೀತಿ ಗುರುತಿಸಿಕೊಳ್ಳುವ ಪರಿಸ್ಥಿತಿಯಲ್ಲಿಯೂ ಇಲ್ಲ ಎಂದರು.

ಆಹಾರ ಭದ್ರತೆ ನೀಡಿದ್ದು ನಾನೇ!
ಆಹಾರ ಭದ್ರತೆ ಬಗ್ಗೆ ಪತ್ರಿಕೆ, ಟಿವಿಗಳಲ್ಲಿ ಜಾಹೀರಾತುಗಳು, ಕನ್ನಡ, ಹಿಂದಿ, ಇಂಗ್ಲಿಷ್ ಎಲ್ಲ ಭಾಷೆಗಳಲ್ಲಿಯೂ ಬರುತ್ತದೆ. ಇರಲಿ ಬಿಡಿ, ಮಾಧ್ಯಮದವರಿಗೆ ಆದಾಯ ಬರುತ್ತದೆ. ಬೇಡ ಎನ್ನುವುದಿಲ್ಲ. ಆದರೆ ಅದೇನು ಸ್ವರ್ಗದಿಂದ ಇಳಿದು ಬಂದ ಹಾಗೆ ವರ್ಣಿಸಿ ಆಹಾರ ಭದ್ರತೆ ಬಗ್ಗೆ ಹೇಳುತ್ತಾರೆ. ನಾನು ಪ್ರಧಾನಿಯಾಗಿದ್ದಾಗ ಕೆ.ಜಿ.ಗೆ 3ನಂತೆ 10 ಕೆ.ಜಿ. ಅಕ್ಕಿ, 2ರಂತೆ ಗೋಧಿ, ಲೀಟರ್‌ಗೆ 3ರಂತೆ ಸೀಮೆ ಎಣ್ಣೆಯನ್ನು 36 ಕೋಟಿ ಬಡಜನರಿಗೆ ನೀಡಿದ್ದೇನೆ. ಈಗ ಇವರು ತಮ್ಮದೇ ಮಹಾನ್ ಸಾಧನೆ ಎಂಬಂತೆ ಪ್ರಚಾರ ಮಾಡುತ್ತಿದ್ದಾರೆ ಎಂದು ದೇವೇಗೌಡ ಆರೋಪಿಸಿದರು.

ವಿಶ್ವನಾಥ್ ಯಾರ್ರಿ?
ಜೆಡಿಎಸ್‌ಗೆ ಕೃಷ್ಣಪ್ಪ ನಾಮ ಮಾತ್ರ ಅಧ್ಯಕ್ಷ ಎಂಬ ವಿಶ್ವನಾಥ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, 'ಅವರ್ಯಾರ್ರಿ? ಸುಮ್ನೆ ಅವರಿಗೆಲ್ಲ ಪ್ರತಿಕ್ರಿಯೆ ನೀಡಲು ಹೋಗೋದಿಲ್ಲ. ಸೋನಿಯಾ ಗಾಂಧಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಹೇಳಿಕೆ ನೀಡಿದರೆ ಪ್ರತಿಕ್ರಿಯಿಸುತ್ತೇನೆ' ಎಂದು ದೇವೆಗೌಡರು ಗುಡುಗಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement