ಮೀನುಗಾರರಿಗೆ ಸೀಮೆಎಣ್ಣೆ ಪೂರೈಕೆ ನಿಲ್ಲಿಸಲ್ಲ: ಸಚಿವ 'ಅಭಯ'
ಕ.ಪ್ರ. ವಾರ್ತೆ, ಬೆಂಗಳೂರು, ಸೆ. 18-
ಕರಾವಳಿ ಭಾಗದ ನಾಡದೋಣಿ ಮೀನುಗಾರರಿಗೆ ಸಬ್ಸಿಡಿಯಲ್ಲಿ ನೀಡಲಾಗುತ್ತಿರುವ ಸೀಮೆಎಣ್ಣೆಯನ್ನು ಮುಂದುವರಿಸಲಾಗುತ್ತದೆ ಎಂದು ಮೀನುಗಾರಿಕೆ ರಾಜ್ಯ ಸಚಿವ ಕೆ. ಅಭಯಚಂದ್ರ ಜೈನ್ ತಿಳಿಸಿದ್ದಾರೆ.
ಆಹಾರ ಇಲಾಖೆಗೆ ಹೊಸ ಆಯುಕ್ತರು ಬಂದಿದ್ದು, ಮುಖ್ಯಮಂತ್ರಿ ಅಥವಾ ಇಲಾಖೆ ಸಚಿವರ ಗಮನಕ್ಕೆ ತಾರದೆ ಮೀನುಗಾರರಿಗೆ ಸೀಮೆಎಣ್ಣೆ ವಿತರಿಸುವುದನ್ನು ನಿಲ್ಲಿಸಿದ್ದರು. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆಹಾರ ಖಾತೆ ಸಚಿವ ದಿನೇಶ್ ಗುಂಡೂರಾವ್ ಗಮನಕ್ಕೆ ತಂದಿದ್ದು, ಇನ್ನೆರಡು ದಿನದಲ್ಲಿ ಸೀಮೆಎಣ್ಣೆ ವಿತರಿಸುವ ಆದೇಶ ಹೊರಬೀಳಲಿದೆ ಎಂದು ಸುದ್ದಿಗಾರರಿಗೆ ಬುಧವಾರ ಹೇಳಿದರು.
ಸರ್ಕಾರ ಈ ಬಜೆಟ್ನಲ್ಲಿ ನಾಡದೋಣಿಗೆ ಪ್ರತಿ ತಿಂಗಳು 400 ಲೀಟರ್ ಸೀಮೆಎಣ್ಣೆಯನ್ನು ಸಬ್ಸಿಡಿಯಲ್ಲಿ ನೀಡಲು ಪ್ರಕಟಿಸಿದೆ. ಇದನ್ನು ಇನ್ನೊಂದೆರಡು ತಿಂಗಳಲ್ಲಿ ಪ್ರಾರಂಭಿಸಲಾಗುತ್ತದೆ. ಸುಮಾರು 65 ಕೋಟಿ ರುಪಾಯಿ ಸರ್ಕಾರಕ್ಕೆ ಹೊರೆಯಾಗಲಿದೆ ಎಂದರು. ಮೀನುಗಾರರಿಗೆ ಸುಮಾರು ನಾಲ್ಕು ಸಾವಿರ ಮನೆಗಳನ್ನು ನೀಡುವ ಉದ್ದೇಶವಿದ್ದು, ಫಲಾನುಭವಿಗಳನ್ನು ಗುರುತಿಸಲಾಗುತ್ತಿದೆ ಎಂದರು. ಕಾರವಾರದಲ್ಲಿರುವ ಕರ್ನಾಟಕ ಮೀನು ಅಭಿವೃದ್ಧಿ ನಿಗಮದ ಫಿಷರ್ ಮಿಲ್ ಇಂಡಸ್ಟ್ರಿ ಕಳೆದ ನಾಲ್ಕೂವರೆ ವರ್ಷದಿಂದ ಬಾಡಿಗೆ ನೀಡಿಲ್ಲ. ಪ್ರತಿ ವರ್ಷ ಎರಡು ಕೋಟಿ ರುಪಾಯಿ ನೀಡಬೇಕು. ಈ ಬಾಕಿಯನ್ನು ಕೂಡಲೇ ವಸೂಲಿ ಮಾಡಲು ಸೂಚಿಸಲಾಗಿದೆ ಎಂದರು.
ಬಿಜಾಪುರದಲ್ಲಿ ಏಳು ಕೋಟಿ ವೆಚ್ಚದಲ್ಲಿ ಸೈಕಲ್ ಟ್ರ್ಯಾಕ್ (ವೆಲ್ಲೋಡ್ರಮ್) ನಿರ್ಮಿಸಲಾಗುತ್ತಿದ್ದು, ಒಂದು ವರ್ಷದಲ್ಲಿ ಪೂರ್ಣಗೊಳ್ಳುತ್ತದೆ. ಸುಮಾರು ನಲವತ್ತು ಫಲಾನುಭವಿಗಳಿಗೆ ಸೈಕಲ್ ವಿತರಿಸಲಾಗಿದೆ ಎಂದರು.
20ರಿಂದ ಕಲಾಮಹೋತ್ಸವ
ಬೆಂಗಳೂರು: 'ಏಮ್' ಸಂಸ್ಥೆ ವತಿಯಿಂದ ಸೆ.20ರಿಂದ ಅ.6ರವರೆಗೆ 9 ದಿನಗಳ ಕಾಲ 'ಬೆಂಗಳೂರು ಅಂತಾರಾಷ್ಟ್ರೀಯ ಕಲಾ ಮಹೋತ್ಸವ' ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ನಡೆಸಲಿದೆ.
ವಿದುಷಿ ಡಾ. ಸುಮಾ ಸುಧೀಂಧ್ರ ಹಾಗೂ ಕೂಚಿಪುಡಿ ಕಲಾವಿದೆ ವೀಣಾ ವಿಜಯ್ ನಿರ್ದೇಶನದ ಏಮ್ ಸಂಸ್ಥೆ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರಿಂದ ಕಾರ್ಯಕ್ರಮ ನಡೆಸುತ್ತಿದ್ದು, ಅಂತಾರಾಷ್ಟ್ರೀಯ ಕಲಾಮಹೋತ್ಸವವು ದೇಶದ 10 ಪ್ರಮುಖ ಕಲಾಮಹೋತ್ಸವಗಳಲ್ಲಿ ಒಂದೆಂದು ಕೇಂದ್ರ ಸಂಸ್ಕೃತಿ ಸಚಿವಾಲಯದಿಂದ ಗುರುತಿಸಲ್ಪಟ್ಟಿದೆ. ಬೆಂಗಳೂರು ಅಂತಾರಾಷ್ಟ್ರೀಯ ಕಲಾ ಮಹೋತ್ಸವವು ಸಂಗೀತ, ನೃತ್ಯ, ನಾಟಕಗಳು ಮತ್ತು ಶಾಸ್ತ್ರೀಯ ಹಾಗೂ ಸಮಕಾಲೀನ ಕಲಾವಿದರ ಕಾರ್ಯಕ್ರಮಗಳನ್ನು ಒಳಗೊಂಡಿದ್ದು, ಈ ವರ್ಷ ನೂತನವಾಗಿ 'ಮಲ್ಲೇಶ್ವರಂ ಯುವೋತ್ಸವ'ವನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಪದವಿ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಕಾರ್ಯಕ್ರಮ ನಿರ್ದೇಶಕಿ ವೀಣಾ ಮೂರ್ತಿ ವಿಜಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.