ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ವಿದ್ಯುತ್ ತಂತಿ ತಗುಲಿ 4 ಸಾವು

ಗಣೇಶ ಮೂರ್ತಿ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಹೈಟೆನ್ಶನ್ ತಂತಿಗೆ ತಗುಲಿದ್ದರಿಂದ ನಾಲ್ವರು ಮೃತಪಟ್ಟು ಎಂಟು ಮಂದಿ ಗಾಯಗೊಂಡಿರುವ ಘಟನೆ ಬುಧವಾರ ಸಂಜೆ ಇಲ್ಲಿ ನಡೆದಿದೆ.

Srinivasa Murthy VN
Updated On : 19 Sept 2013, 12:06 pm

ಕನ್ನಡಪ್ರಭ ವಾರ್ತೆ, ಬೆಳಗಾವಿ, ಸೆ.18-
ಗಣೇಶ ಮೂರ್ತಿ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಹೈಟೆನ್ಶನ್ ತಂತಿಗೆ ತಗುಲಿದ್ದರಿಂದ ನಾಲ್ವರು ಮೃತಪಟ್ಟು ಎಂಟು ಮಂದಿ ಗಾಯಗೊಂಡಿರುವ ಘಟನೆ ಬುಧವಾರ ಸಂಜೆ ಇಲ್ಲಿ ನಡೆದಿದೆ.
ಸದಾಶಿವ ನಗರದಿಂದ ಹೊರಟ ಗಣೇಶ ಮೂರ್ತಿಯ ಮೆರವಣಿಗೆ ಚನ್ನಮ್ಮ ವೃತ್ತದ ಕಡೆಗೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ. ವಿಜಯ ಬೇಕರಿ ಹತ್ತಿರ ಪ್ರತಿಷ್ಠಾಪಿಸಿದ್ದ ಸಾರ್ವಜನಿಕ ಗಣೇಶ ವಿಗ್ರಹವನ್ನು ಮೆರವಣಿಗೆಯಲ್ಲಿ ತರುತ್ತಿದ್ದಾಗ ಲಕ್ಷ್ಮೀ ಚೇಂಬರ್ ಎದುರು ಹಾದು ಹೋಗಿರುವ ಹೈಟೆನ್ಶನ್ ತಂತಿಗೆ ಗಣೇಶ ಮೂರ್ತಿ ಇದ್ದ ಟ್ರ್ಯಾಕ್ಟರ್‌ನ ಮೇಲ್ಭಾಗ ತಾಗಿದೆ. ಇದರಿಂದ ಪ್ರಜ್ವಲ ಅನಿಲ ಮಾಳಿ (16) ಎಂಬ ಯುವಕ ಸ್ಥಳದಲ್ಲೇ ಮೃತನಾಗಿದ್ದಾನೆ. ಆತನ ಜೊತೆಗಿದ್ದ ಗಂಗಪ್ಪ ಮಡ್ಲಿ(52), ಗೀತಾ ಗಜಾನನ ಸ್ವಪಲೆ (42), ಸುಜನ ಗಜಾನನ ಸ್ವಪಲೆ (10) ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇನ್ನೂ 8 ಜನ ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆ ಹಾಗೂ ಕೆಎಲ್‌ಇ ಆಸ್ಪತ್ರೆಗೆ ಸೇರಿಸಲಾಗಿದೆ.
ಗಾಯಾಳುಗಳನ್ನು ಅಪ್ಪಾಜಿ ಮಳವಾಡಕರ(55), ಬಸವರಾಜ ಕೊಲಕಾರ(45), ಸೋಮೇಶ ಮಡಿವಾಳರ, ಗೋಕಾಕಿನ ಸಚಿನ ಕುಂಟೆ(18), ಸಾಹಿಲ್ ಕಾಜುಕರ(18), ಸಂತೋಷ ಕಾಳೆ(12) ಎಂದು ಗುರುತಿಸಲಾಗಿದೆ. ಇವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಘಟನೆಯಿಂದ ಸದಾಶಿವ ನಗರದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಮೆರವಣಿಗೆ ಸ್ಥಗಿತಗೊಂಡಿತ್ತು. ಸ್ಥಳದಲ್ಲಿ ಬಿಗುವಿನ ವಾತಾವರಣ ಕಂಡು ಬಂದಿತ್ತು ನಂತರ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಮೆರವಣಿಗೆ ನಡೆಸಲು ಅನುವು ಮಾಡಿಕೊಟ್ಟರು. ಜಿಲ್ಲಾ ಆಸ್ಪತ್ರೆ ಹಾಗೂ ಕೆಎಲ್‌ಇ ಆಸ್ಪತ್ರೆ ಬಳಿಯೂ ಭಾರಿ ಪ್ರಮಾಣದಲ್ಲಿ ಜನ ಸೇರಿದ್ದರು. ಮೃತರ ಹಾಗೂ ಗಾಯಗೊಂಡವರ ಹತ್ತಿರದ ಬಂಧುಗಳು ಸೇರಿದ್ದು ಅವರ ಆಕ್ರಂದನ ಮುಗಿಲು ಮುಟ್ಟಿತ್ತು.
ಘಟನಾ ಸ್ಥಳದಲ್ಲೇ ಇದ್ದ ಸಂಸದ ಸುರೇಶ ಅಂಗಡಿ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿ ಮೆರವಣಿಗೆ ಚಾಲನೆ ನೀಡಿದ ವೇಳೆ ಈ ಘಟನೆ ಸಂಭವಿಸಿದೆ. ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಅವರು ನೆರವಾದರು.
ಸ್ಥಳಕ್ಕೆ ಸಚಿವ ಪ್ರಕಾಶ ಹುಕ್ಕೇರಿ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಸಂಸದ ಸುರೇಶ ಅಂಗಡಿ, ಜಿಲ್ಲಾಧಿಕಾರಿ ಎನ್. ಜಯರಾಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಗುಪ್ತ, ಪಾಲಿಕೆ ಆಯುಕ್ತೆ ಪ್ರಿಯಾಂಕಾ ಫ್ರಾನ್ಸಿಸ್, ಅನಿಲ ಬೆನಕೆ, ಶಾಸಕ ಸಂಭಾಜಿ ಪಾಟೀಲ. ಸಂಜಯ ಪಾಟೀಲ, ಮತ್ತಿತರರು ಭೇಟಿ ನೀಡಿದರು. ಮೃತರ ಕುಟುಂಬದ ಸದಸ್ಯರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದು ಎಂದು ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದ್ದಾರೆ.

ಪರಿಹಾರಕ್ಕೆ ಆಗ್ರಹ: ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ ರು. 10 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ರು. 1 ಲಕ್ಷ ಪರಿಹಾರ ನೀಡುವಂತೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement