ಭಾರಿ ಮಳೆಗೆ ಇಬ್ಬರು ಸಾವು
ಬೆಂಗಳೂರು: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ಕೆಲವೆಡೆ ತನ್ನ ಆರ್ಭಟವನ್ನು ನಿಲ್ಲಿಸಿದ್ದರೂ, ಗುಲ್ಬರ್ಗ, ಯಾದಗಿರಿ, ಉಡುಪಿ, ದಕ್ಷಿಣ ಕನ್ನಡ ಹಾಗೂ ಕೊಡಗಿನಲ್ಲಿ ಉತ್ತಮ ವರ್ಷಧಾರೆಯಾಗಿದೆ. ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಗುರುವಾರ ರಾತ್ರಿ ಸುರಿದ ಮಳೆಗೆ ವ್ಯಕ್ತಿಯೊಬ್ಬ ನೀರಿನಲ್ಲಿ ಕೊಚ್ಚಿ ಹೋದರೆ, ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಸಿಡಿಲು ಬಡಿದು ಮಹಿಳೆಯೊಬ್ಬರು ಅಸುನೀಗಿದ್ದಾರೆ.
ಅಣವಾರ ಗ್ರಾಮದ ಬಾಬಣ್ಣ ವಾಲಿಕಾರ್ (55) ಎತ್ತುಗಳನ್ನು ಮನೆಗೆ ಹೊಡೆದುಕೊಂಡು ಬರುತ್ತಿರುವಾಗ ನೀರಲ್ಲಿ ಕೊಚ್ಚಿ ಹೋದರೆ, ಬಸವಕಲ್ಯಾಣ ತಾಲೂಕಿನ ಖೇರ್ಡಾ (ಕೆ) ಗ್ರಾಮದ ಹೊಲದಲ್ಲಿ ದೊಂಡುಬಾಯಿ (50) ಧಾರಾಕಾರ ಮಳೆಯಿಂದ ಆಶ್ರಯ ಪಡೆಯಲು ಗಿಡದ ನೆರಳಲ್ಲಿ ನಿಂತಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ.ದೇವರಾಜ ಕೊಳ್ಳೂರ (60) ಹಾಗೂ ಬಂಡೆಪ್ಪ ಜಗನ್ನಾಥ (35) ಎಂಬವರಿಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮನೆಗೆ ನೀರು: ಚಿಂಚೋಳಿ ತಾಲೂಕಿನ ಸುಲೇಪೇಟ್ ಗ್ರಾಮದಲ್ಲಿ 80ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ತಾಲೂಕಿನ ಚಂದ್ರಂಪಳ್ಳಿ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದ್ದು, ಮೂರು ಗೇಟ್ಗಳ ಮೂಲಕ ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ.