ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮನರಂಜನೆ ತಾಣಗಳಿಗೆ 32 ಮಾರ್ಗಸೂಚಿ

ಸಾರ್ವಜನಿಕ ಮನರಂಜನೆ ತಾಣಗಳಲ್ಲಿ ಅನುಸರಿಸಬೇಕಾದ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದ್ದು, ಅದನ್ನು 60 ದಿನದಲ್ಲಿ ಅಳವಡಿಸಿಕೊಳ್ಳುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Srinivasa Murthy VN
Updated On : 21 Sept 2013, 11:45 am

ಬೆಂಗಳೂರು: ರಾಜ್ಯದಲ್ಲಿರುವ ಸಾರ್ವಜನಿಕ ಮನರಂಜನೆ ತಾಣಗಳಲ್ಲಿ ಅನುಸರಿಸಬೇಕಾದ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದ್ದು, ಅದನ್ನು 60 ದಿನದಲ್ಲಿ ಅಳವಡಿಸಿಕೊಳ್ಳುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮನರಂಜನೆ ಕೇಂದ್ರಗಳಲ್ಲಿ ಉತ್ತಮ ಗುಣಮಟ್ಟದ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು ಹಾಗೂ ಕೇಂದ್ರದಲ್ಲಿರುವ ಎಲ್ಲಾ ಚಟುವಟಿಕೆಗಳ ಮೇಲೆ ನಿಗಾ ಇರಿಸಬೇಕು. ಸಿಸಿ ಕ್ಯಾಮೆರಾದ ದೃಶ್ಯಗಳು ಕನಿಷ್ಠ ಮೂರು ತಿಂಗಳವರೆಗೂ ಸಂಗ್ರಹಿಸಿಡುವ ಸಾಮರ್ಥ್ಯ ಹೊಂದಿರಬೇಕು.
ನೂತನ ಮಾರ್ಗಸೂಚಿ ಪ್ರಕಾರ, ಯಾವುದೇ ಸಾರ್ವಜನಿಕ ಮನರಂಜನೆ ತಾಣಗಳು ಧಾರ್ಮಿಕ ಕೇಂದ್ರಗಳಿಂದ ಕನಿಷ್ಠ 200 ಮೀಟರ್ ದೂರದಲ್ಲಿರಬೇಕು. ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಬಾರದು. ಸ್ಥಳೀಯರಿಗೆ ಕಿರಿಕಿರಿ, ಅಪಾಯ, ಅಸಹನೆ, ಧಕ್ಕೆ ಉಂಟು ಮಾಡಬಾರದು.

ಶಬ್ದಮಾಲಿನ್ಯಕ್ಕೆ ಅವಕಾಶವಿಲ್ಲ:
ಕೇಂದ್ರಗಳ ಒಳಹೋಗುವ, ಹೊರ ಬರುವ ದಾರಿಗಳು ಸುರಕ್ಷಿತವಾಗಿರಬೇಕು. ತುರ್ತು ಸಂದರ್ಭಗಳಲ್ಲಿ ತಪ್ಪಿಸಿಕೊಳ್ಳಲು ಅನುಕೂಲಕರವಾಗಿರಬೇಕು. ಶುದ್ಧ ಗಾಳಿ ಓಡಾಡಲು ಸಾಕಷ್ಟು ಸ್ಥಳಾವಕಾಶ ಇರಬೇಕು. ಕೇಂದ್ರವೂ ಶಬ್ದಮಾಲಿನ್ಯಕ್ಕೆ ಅವಕಾಶ ನೀಡಬಾರದು ಹಾಗೂ ನಿಗದಿಪಡಿಸಿದಕ್ಕಿಂತ ಹೆಚ್ಚು ಶಬ್ದಕ್ಕೆ ಅವಕಾಶ ನೀಡಬಾರದು.
ಮಹಿಳೆಯರು, ವಿಕಲಚೇತನರು ಹಾಗೂ ಕೆಲಸಗಾರರಿಗೆ ಪ್ರತ್ಯೇಕ ಶೌಚಾಲಯಗಳು ಇರಬೇಕು. ನೀಲಿಚಿತ್ರಗಳು, ಆಶ್ಲೀಲ ಚಿತ್ರಗಳು, ವಿಡಿಯೋಗಳು, ಆಕ್ಷೇಪಾರ್ಹ ಫೋಟೋ ಪ್ರದರ್ಶನ ಮಾಡಬಾರದು. ಕಂಪ್ಯೂಟರ್ ಇಂಟರ್ನೆಟ್ ಮೂಲಕ ಮಹಿಳೆಯರಿಗೆ ಅಗೌರವ ಉಂಟು ಮಾಡುವ, ಮಕ್ಕಳು ಹಕ್ಕುಗಳಿಗೆ ಧಕ್ಕೆ ಉಂಟು ಮಾಡುವ, ಮಾವನೀಯತೆಗೆ ಧಕ್ಕೆ ತರುವಂತಹ ವೆಬ್‌ಸೈಟ್‌ಗಳನ್ನು ಬ್ಲಾಕ್ ಮಾಡುವ ಸಾಫ್ಟ್‌ವೇರ್‌ಗಳನ್ನು ಕೇಂದ್ರಗಳು ಹೊಂದಿರಬೇಕು.

ಸಮಗ್ರ ವ್ಯವಹಾರ ಲೆಕ್ಕ:
ಮದ್ಯ, ಮಾದಕ ವಸ್ತುಗಳ ಬಳಕೆ, ಜೂಜಾಟಕ್ಕೆ ಅವಕಾಶ ನೀಡಬಾರದು. ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಇರಿಸಬೇಕು. ಸ್ನೂಕರ್, ಬಿಲಿಯರ್ಡ್, ಪೂಲ್ ಪಾರ್ಲರ್ ಹೀಗೆ ಯಾವುದೇ ಆಟಗಳಾಗಿದ್ದರೂ ಜೂಜಿಗೆ ಅವಕಾಶ ನೀಡಬಾರದು. ಎಲ್ಲಾ ಆಟಗಳು ಬರೀ ನಿಪುಣತೆಯ ಮೇಲೆ ಮಾತ್ರ ಇರಬೇಕು. ಲಾಟರಿ, ಅದೃಷ್ಟದ ಆಟವಾಗಿರಬಾರದು. ಗ್ರಾಹಕರು ಭೇಟಿ ನೀಡುವ ವೆಬ್‌ಸೈಟ್‌ಗಳ ಮೇಲೆ ನಿಗಾ ಇರಿಸಲು ಟ್ರ್ಯಾಕಿಂಗ್ ಸಾಫ್ಟ್‌ವೇರ್ ಅಳವಡಿಸಿಕೊಳ್ಳಬೇಕು. 16 ವರ್ಷ ಒಳಗಿನ ಮಕ್ಕಳನ್ನು ಹಿರಿಯರು, ಪೋಷಕರ ಮೇಲ್ವಿಚಾರಣೆ ಇಲ್ಲದೇ ಬರಲು ಅವಕಾಶ ನೀಡಬಾರದು.
ಕೇಂದ್ರದ ಪ್ರತಿ ಉದ್ಯೋಗಿ ಹಾಗೂ ಕ್ಯಾಷ್ ಕೌಂಟರ್ ಕೇಂದ್ರ ಆರಂಭವಾಗುವ ವೇಳೆ ಹೊಂದಿರುವ ಹಣದ ಲೆಕ್ಕವನ್ನು ಹೊಂದಿರಬೇಕು. ಕೇಂದ್ರವನ್ನು ಮುಚ್ಚುವ ವೇಳೆ ಆಗಿರುವ ವ್ಯವಹಾರದ ಬಗ್ಗೆ ಸಮಗ್ರವಾಗಿ ಗಣಕೀಕೃತ ಅಥವಾ ಕೈಯಿಂದ ಮಾಡಿದ ಲೆಕ್ಕವನ್ನು ಹೊಂದಿರಬೇಕು.

ಪೊಲೀಸರಿಗೆ ಮಾಹಿತಿ: ಕೇಂದ್ರದ ಲೈಸನ್ಸ್ ಹೊಂದಿರುವ ವ್ಯಕ್ತಿ ಮೃತಪಟ್ಟಲ್ಲಿ ಆತನ ಸಂಬಂಧಿಗಳು, ಪೋಷಕರು ಒಂದು ತಿಂಗಳ ಒಳಗಾಗಿ ಕೇಂದ್ರ ಮುಂದುವರೆಸಲು ಲೈಸನ್ಸ್‌ಗಾಗಿ ಅರ್ಜಿ ಸಲ್ಲಿಸಬೇಕು. ಕೇಂದ್ರದಲ್ಲಿ ಎಲ್ಲಾ ಮಾರ್ಗಸೂಚಿಗಳು ಪಾಲನೆಯಾಗುತ್ತಿದ್ದಲ್ಲಿ ಲೈಸನ್ಸ್ ನೀಡಲಾಗುತ್ತದೆ. ಲೈಸನ್ಸ್ ನೀಡುವ ಸಂಬಂಧಪಟ್ಟ ಪ್ರಾಧಿಕಾರಿಗಳು ಆಗಾಗ ಇಂತಹ ಕೇಂದ್ರಗಳಿಗೆ ನೀಡಿ ಮಾರ್ಗದರ್ಶಿ ಸೂಚನೆಗಳು ಪಾಲನೆಯಾಗುತ್ತಿರುವ ಬಗ್ಗೆ ನಿಗಾ ಇರಿಸಬೇಕು.
ಕೇಂದ್ರಗಳು ಸಂಬಂಧಪಟ್ಟ ಪ್ರಾಧಿಕಾರಿಗಳು, ಪೊಲೀಸರು, ದಿಢೀರ್ ಪರಿಶೀಲನೆ ಬಂದಾಗ ಸಹಕಾರ ನೀಡಬೇಕು. ಸಮಾಜ ವಿರೋಧಿ, ಅನೈತಿಕ ಚಟುವಟಿಕೆಗಳು ಕಂಡು ಬಂದಲ್ಲಿ ಕೇಂದ್ರದ ಮುಖ್ಯಸ್ಥರು ಪೊಲೀಸರಿಗೆ ಮಾಹಿತಿ ನೀಡಬೇಕು.
ಒಟ್ಟಾರೆ 37 ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದ್ದು, ಈಗಾಗಲೇ ಇರುವ ಕೇಂದ್ರಗಳು ಈ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಲು 60 ದಿನಗಳ ಕಾಲಾವಕಾಶ ನೀಡಲಾಗಿದೆ.

ಮನರಂಜನೆ ತಾಣಗಳೆಂದರೆ...
ಸಂಗೀತ, ನೃತ್ಯ, ಆಟಗಳು. ಅಂದರೆ ರೇಸ್‌ಕೋರ್ಸ್, ಸರ್ಕಸ್, ಚಿತ್ರಮಂದಿರ, ಸಂಗೀತ ಶಾಲೆ, ಬಿಲಿಯರ್ಡ್ಸ್ ಕೇಂದ್ರ, ಜಿಮ್ನಾಶಿಯಂ, ಫೆನ್ಸಿಂಗ್ ಸ್ಕೂಲ್, ಈಜು ಕೊಳ ಹಾಗೂ ನೃತ್ಯ ಕೇಂದ್ರ ಮುಂತಾದವುಗಳು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement