ಶಾಸಕ ಸೈಲ್ ಬಂಧನ
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಶಾಸಕ ಸುರೇಶ್ ಬಾಬು ಅವರನ್ನು ಬಂಧಿಸಿದ್ದ ಸಿಬಿಐ,
ಕನ್ನಡಪ್ರಭ ವಾರ್ತೆ ಬೆಂಗಳೂರು ಸೆ.20
ಅಕ್ರಮ ಗಣಿಗಾರಿಕೆ ಹಗರಣದಲ್ಲಿ ಮತ್ತೊಬ್ಬ ಶಾಸಕರನ್ನು ಸಿಬಿಐ ಬಂಧಿಸಿದೆ.
ಗುರವಾರ ಕಂಪ್ಲಿ ಶಾಸಕ ಸುರೇಶ್ ಬಾಬು ಅವರನ್ನು ಬಂಧಿಸಿದ್ದ ಸಿಬಿಐ ಅಧಿಕಾರಿಗಳು, ಶುಕ್ರವಾರ ಸಂಜೆ ನಗರದಲ್ಲಿ ಕಾರವಾರದ ಪಕ್ಷೇತರ ಶಾಸಕರ ಸತೀಶ್ ಸೈಲ್ ಅವರನ್ನು ಬಂಧಿಸಿದ್ದಾರೆ.
ಬಂಧಿಸಿದ ಬಳಿಕ ಸತೀಶ್ ಸೈಲ್ ಅವರನ್ನು ಗಂಗಾ ನಗರದ ಸಿಬಿಐ ಕಚೇರಿಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಲಾಯಿತು. ನಂತರ ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ವೈದ್ಯ ತಪಾಸಣೆ ನಡೆಸಲಾಯಿತು.
ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ಮಾಲೀಕರಾದ ಸತೀಶ್ ಸೈಲ್, ಬೇಲೆಕೇರಿಯಲ್ಲಿ ದಾಸ್ತಾನು ಮಾಡಿದ್ದ 8 ಲಕ್ಷಕ್ಕೂ ಅಧಿಕ ಮೆಟ್ರಿಕ್ ಟನ್ ಅದಿರು ನಾಪತ್ತೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ.
ಅಕ್ರಮ ಗಣಿಗಾರಿಕೆಯಿಂದ ಅರಣ್ಯ ಅಧಿಕಾರಿಗಳು ವಶಪಡಿಸಿಕೊಂಡು ಬೇಲೆಕೇರಿ ಬಂದರಿನಲ್ಲಿ ಸಂಗ್ರಹಿಸಿಟ್ಟಿದ್ದ ಈ ಅದಿರಿನ ಪೈಕಿ 7.23 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ಮೂಲಕ ಅಕ್ರಮವಾಗಿ ವಿದೇಶಗಳಿಗೆ ಸಾಗಿಸಿದ ಆರೋಪವಿದೆ.
ಸುರೇಶ್ ಬಾಬು ಸಿಬಿಐ ವಶಕ್ಕೆ: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಸಂಬಂಧ ಕಂಪ್ಲಿ ಶಾಸಕ ಸುರೇಶ್ ಬಾಬು ಅವರನ್ನು ಸಿಬಿಐ ವಿಶೇಷ ನ್ಯಾಯಾಲಯ ಸೆ.27ರ ವರೆಗೆ ಸಿಬಿಐ ವಶಕ್ಕೆ ಒಪ್ಪಿಸಿದೆ.
ಅದಿರು ನಾಪತ್ತೆ ಪ್ರಕರಣದಲ್ಲಿ ಹೆಚ್ಚಿನ ವಿಚಾರಣೆ ಅಗತ್ಯ ಇರುವ ಹಿನ್ನೆಲೆಯಲ್ಲಿ ಸುರೇಶ್ ಬಾಬು ಅವರನ್ನು 15 ದಿನಗಳ ಕಾಲ ವಶಕ್ಕೆ ನೀಡುವಂತೆ ಸಿಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.ಅಧಿಕಾರಿಗಳ ಮನವಿ ಪರಿಗಣಿಸಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸೋಮರಾಜು ಅವರು ಸೆ.27ರ ವರೆಗೆ ಸಿಬಿಐ ವಶಕ್ಕೆ ಒಪ್ಪಿಸಿದ್ದಾರೆ.
ವಕೀಲರ ಸಮ್ಮುಖದಲ್ಲಿ ಸುರೇಶ ಬಾಬು ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಸಿಬಿಐ ಅಧಿಕಾರಿಗಳಿಗೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.
ಗುರುವಾರ ಮಧ್ಯಾಹ್ನ ಬಂಧಿತರಾಗಿದ್ದ ಶಾಸಕ ಸುರೇಶ ಬಾಬು ಅವರನ್ನು ರಾತ್ರಿ ಇಡೀ ವಿಚಾರಣೆಗೆ ಒಳಪಡಿಸಲಾಗಿತ್ತು. ಹೆಚ್ಚಿನ ವಿಚಾರಣೆ ಅಗತ್ಯ ಇರುವ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಶುಕ್ರವಾರ ಬಿಗಿ ಭದ್ರತೆಯಲ್ಲಿ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.
ನ್ಯಾಯಾಲಯಕ್ಕೆ ಹಾಜರಾಗುವಾಗ ಸುರೇಶ್ ಬಾಬು ಅವರು ತೀವ್ರ ಆತಂಕಕ್ಕೆ ಒಳಗಾದಂತೆ ಕಂಡು ಬಂದರು.
ಹಳೇ ದಾಖಲೆಗಳ ಆಧಾರದ ಮೇಲೆ ತಮ್ಮನ್ನು ವಶಕ್ಕೆ ನೀಡುವಂತೆ ಸಿಬಿಐ ಅಧಿಕಾರಿಗಳು ಮನವಿ ಸಲ್ಲಿಸಿದ್ದಾರೆ. ಹೀಗಾಗಿ ಸುರೇಶ ಬಾಬು ಅವರಿಗೆ ಜಾಮೀನು ಮಂಜೂರು ಮಾಡುವಂತೆ ಅವರ ಪರ ವಕೀಲರು ಮನವಿ ಮಾಡಿದರು. ಸುರೇಶ ಬಾಬು ಅವರು ಸಮಾಜದ ಜವಾಬ್ದಾರಿಯುತ ನಾಗರಿಕರಾಗಿದ್ದು ಶಾಸಕರು ಕೂಡಾ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಪರಾರಿಯಾಗಲು ಸಾಧ್ಯವಿಲ್ಲ. ಹೀಗಾಗಿ ಜಾಮೀನು ನೀಡಬೇಕು ಎಂದು ವಕೀಲರು ಮನವಿ ಮಾಡಿದರು. ಆದರೆ ಬಾಬು ಪರ ವಕೀಲರ ಮನವಿ ತಿರಸ್ಕರಿಸಿದ ನ್ಯಾಯಾಧೀಶರು ಸಿಬಿಐ ಅಧಿಕಾರಿಗಳ ಮನವಿಯಂತೆ ಅವರ ವಶಕ್ಕೆ ಒಪ್ಪಿಸಿದರು.