ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬೇಲೆಕೇರಿ ಬಂದರು, ಸಿಬಿಐನಲ್ಲಿ ಶಾಸಕರು, ಅಧಿಕಾರಿಗಳ ಲಂಗರು

ಸುರೇಶ್ ಬಾಬು, ಸತೀಶ್ ಸೈಲ್ ಆಯ್ತು, ಇದೀಗ ಆನಂದ್ ಸಿಂಗ್ ಸರದಿ.ಸಿಬಿಐ ಅಧಿಕಾರಿಗಳು ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.

Srinivasa Murthy VN
Updated On : 21 Sept 2013, 10:50 am

ಸುರೇಶ್ ಬಾಬು, ಸತೀಶ್ ಸೈಲ್ ಆಯ್ತು, ಇದೀಗ ಆನಂದ್ ಸಿಂಗ್ ಸರದಿ. ಭಾನುವಾರ ಕಚೇರಿಗೆ ಹಾಜರಾಗುವಂತೆ ಸೂಚಿಸಿರುವ ಸಿಬಿಐ ಅಧಿಕಾರಿಗಳು ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಇವರ ಜೊತೆಗೆ 97 ಐಪಿಎಸ್, 25 ಅರಣ್ಯಾಧಿಕಾರಿಗಳಿಗೂ ಸದ್ಯದಲ್ಲೇ ಸಿಬಿಐ ವಿಚಾರಣೆಯ ಬಿಸಿ ತಾಗಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು ಸೆ.21
ಶಾಸಕರಾದ ಸುರೇಶ್‌ಬಾಬು ಮತ್ತು ಸತೀಶ್ ಸೈಲ್ ಅವರು ಬಂಧನಕ್ಕೆ ಒಳಗಾದ ಬೆನ್ನಲ್ಲೇ ಬೇಲೆಕೇರಿ ಬಂದರಿನಲ್ಲಿ ಅದಿರು ನಾಪತ್ತೆ ಪ್ರಕರಣದಲ್ಲಿ ಬಳ್ಳಾರಿ ಜಿಲ್ಲೆ ವಿಜಯನಗರ ಶಾಸಕ ಆನಂದ್‌ಸಿಂಗ್ ಅವರಿಗೆ ಭಾನುವಾರದೊಳಗೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಅಧಿಕಾರಿಗಳು ತಾಕೀತು ಮಾಡಿದ್ದಾರೆ.
ವಿಚಾರಣೆಗೆ ಹಾಜರಾಗಲು ಸೂಚಿಸಿ ಆನಂದ್ ಸಿಂಗ್ ಅವರಿಗೆ ಸಿಬಿಐ ಅಧಿಕಾರಿಗಳು ಈಗಾಗಲೇ ಸಮನ್ಸ್ ಜಾರಿ ಮಾಡಿದ್ದಾರೆ. ಅವರಿಗೆ ನೀಡಿರುವ ಗಡುವು ಭಾನುವಾರಕ್ಕೆ ಅಂತ್ಯಗೊಳ್ಳಲಿದೆ.
ಈ ಮಧ್ಯೆ ವಿದೇಶ ಪ್ರವಾಸದಲ್ಲಿದ್ದ ಆನಂದ್ ಸಿಂಗ್ ಶನಿವಾರ ಬೆಳಗ್ಗೆ ಬೆಂಗಳೂರಿಗೆ ಬಂದು ಸಿಬಿಐ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ ಎಂಬ ಸುದ್ದಿಯೂ ಹಬ್ಬಿತ್ತು.
ಆರೋಪವೇನು?: ಶಾಸಕ ಆನಂದ್ ಸಿಂಗ್ ಅವರು ವ್ಯವಸ್ಥಾಪಕ ನಿರ್ದೇಶಕ, ಮಾಲೀಕರಾಗಿರುವ ಎಸ್.ಬಿ ಲಾಜಿಸ್ಟಿಕ್ಸ್ ಕಂಪನಿ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಿ ತೆಗೆಯಲಾಗಿದ್ದ ಅದಿರನ್ನು ನಕಲಿ ಪರ್ಮಿಟ್‌ಗಳ ಮೂಲಕ ಅಕ್ರಮವಾಗಿ ಬೇಲೆಕೇರಿ ಬಂದರಿಗೆ ಸಾಗಿಸಲಾಗಿದೆ ಎನ್ನುವ ಆರೋಪವಿದೆ.
ಸತೀಶ್ ಸೈಲ್ ಸಿಬಿಐ ವಶಕ್ಕೆ: ಬೇಲೆಕೇರಿ ಬಂದರಿನಲ್ಲಿ ಅದಿರು ನಾಪತ್ತೆ ಪ್ರಕರಣ ಸಂಬಂಧ ಶುಕ್ರವಾರ ಬಂಧಿತರಾಗಿರುವ ಕಾರವಾರದ ಪಕ್ಷೇತರ ಶಾಸಕ ಸತೀಶ್ ಸೈಲ್ ಅವರನ್ನು ಸೆ.27ರವರೆಗೆ ಸಿಬಿಐ ಅಧಿಕಾರಿಗಳ ವಶಕ್ಕೆ ಒಪ್ಪಿಸಿ ಸಿಬಿಐ ವಿಶೇಷ ನ್ಯಾಯಾಲಯ ಆದೇಶಿಸಿದೆ. ಹೆಚ್ಚಿನ ವಿಚಾರಣೆ ಅಗತ್ಯ ಇರುವ ಕಾರಣ ಶಾಸಕರನ್ನು ತಮ್ಮ ವಶಕ್ಕೆ ನೀಡುವಂತೆ ಸಿಬಿಐ ಅಧಿಕಾರಿಗಳು ಮನವಿ ಮಾಡಿದ್ದರು. ಇದೇ ವೇಳೆ ಸತೀಶ್ ಸೈಲ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯದ ನ್ಯಾಯಾಧೀಶರು ವಿಚಾರಣೆಯನ್ನು ಸೆ.24ಕ್ಕೆ ಮುಂದೂಡಿದ್ದಾರೆ.  ಇದೇ ಪ್ರಕರಣದಲ್ಲಿ ಕಂಪ್ಲಿ ಶಾಸಕ ಟಿ.ಸುರೇಶ್ ಬಾಬು ಅವರನ್ನು ಗುರುವಾರ ಸಿಬಿಐ ಅಧಿಕಾರಿಗಳು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯ ಸೆ.27ರವರೆಗೆ ಅವರನ್ನು ಸಿಬಿಐ ವಶಕ್ಕೆ ಒಪ್ಪಿಸಿದೆ.

ಸಿಬಿಐ ಎದುರು ಆನಂದ್ ಸಿಂಗ್
ಸುರೇಶ ಬಾಬು ಅವರನ್ನು ಸಿಬಿಐ ಅಧಿಕಾರಿಗಳು ಶನಿವಾರವೂ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ನಾಗೇಂದ್ರ ಹಾಜರಾಗಿಲ್ಲ. ಬಿಎಸ್‌ಆರ್ ಪಕ್ಷದ ಕೂಡ್ಲಿಗಿ ಕ್ಷೇತ್ರದ ಶಾಸಕ ನಾಗೇಂದ್ರ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದಾರೆ. ಸಮನ್ಸ್ ಜಾರಿ ಮಾಡಿ ಎರಡು ದಿನಗಳ ಕಳೆದರೂ ನಾಗೇಂದ್ರ ಸಿಬಿಐ ವಿಚಾರಣೆಗೆ ಹಾಜರಾಗಿಲ್ಲ. ಬಂಧನ ಭೀತಿಯಲ್ಲಿರುವ ನಾಗೇಂದ್ರ ಅವರು ಎಲ್ಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ.  ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಸಿಇಸಿ ವರದಿ ತಯಾರಿಸಿತ್ತು. 2009 ಜನವರಿ 1 ರಿಂದ 2010ರ ಮೇ 31ರವರೆಗಿನ ಅವಧಿಯಲ್ಲಿ 73 ಗಣಿ ಸಂಸ್ಥೆಗಳು ಬೇಲಿಕೇರಿ ಬಂದರಿನಿಂದ 88.06 ಲಕ್ಷ ಮೆಟ್ರಿಕ್ ಟನ್ ಅದಿರು ವಿದೇಶಕ್ಕೆ ರಫ್ತು ಮಾಡಿವೆ. ಈ ಪೈಕಿ 38.22 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಮಾತ್ರ ರಾಜ್ಯ ಸರ್ಕಾರ ನೀಡುವ ಅದಿರು ಪರವಾನಗಿ ಪತ್ರದ ಅನ್ವಯ ರಫ್ತು ಮಾಡಲಾಗಿದೆ. 50.79 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಕಳ್ಳಸಾಗಣೆ ಮಾಡಲಾಗಿದೆ ಎಂದು ಸಿಇಸಿ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸಿಬಿಐ ಅಧಿಕಾರಿಗಳು ಪ್ರಕರಣ ದಾಖಲಿಸಿ ಒಬ್ಬೊಬ್ಬರಾಗಿ ಜನಪ್ರತಿನಿಧಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುತ್ತಿದ್ದಾರೆ.
ಸಿಬಿಐಗೆ ಶ್ರೀರಾಮುಲು: ಬಂಧಿತನಾಗಿರುವ ಅಳಿಯ ಸುರೇಶ ಬಾಬು ಅವರನ್ನು ಭೇಟಿ ಮಾಡಲು ಬಿಎಸ್‌ಎರ್ ಶಾಸಕ ಶ್ರೀರಾಮುಲು ಗಂಗಾನಗರ ಸಿಬಿಐ ಕಚೇರಿಗೆ ಆಗಮಿಸಿದ್ದರು.  ರಾಯಚೂರು ಸಂಸದ ಸಣ್ಣಫಕೀರಪ್ಪ ಅವರೊಂದಿಗೆ ಸಂಜೆ 5.30ರ ಸುಮಾರಿಗೆ ಸಿಬಿಐ ಕಚೇರಿಗೆ ಆಗಮಿಸಿದ ಶ್ರೀರಾಮುಲು ಸುಮಾರು 20 ನಿಮಿಷ ಸಿಬಿಐ ಕಚೇರಿ ಒಳಗಿದ್ದರು. ಈ ವೇಳೆ ಸುರೇಶಬಾಬು ಅವರಿಗೆ  ಶ್ರೀರಾಮುಲು ಸಮಾಧಾನ ಹೇಳಿದ್ದಾರೆ ಎನ್ನಲಾಗಿದೆ.

ಅಕ್ರಮ ಗಣಿಗಾರಿಕೆ; 97 ಪೊಲೀಸ್ ಸಿಬ್ಬಂದಿ ವಿಚಾರಣೆ
ಬೆಂಗಳೂರು:
ಬಳ್ಳಾರಿ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ನೀಡಿರುವ ಆರೋಪ ಎದುರಿಸುತ್ತಿರುವ 97 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಸರ್ಕಾರ ಶೀಘ್ರವೇ ವಿಚಾರಣೆ ಆರಂಭಿಸಲಿದೆ. ಅಧಿಕಾರಿಗಳ ಮೇಲಿನ ಆರೋಪಗಳ ಬಗ್ಗೆ ವಿಚಾರಣೆ ನಡೆಸುವಂತೆ ಲೋಕಾಯುಕ್ತ ಹೆಚ್ಚುವರಿ ಡಿಜಿಪಿಗೆ ಗೃಹ ಇಲಾಖೆ ಪತ್ರ ಬರೆದಿರುವುದಾಗಿ ತಿಳಿದು ಬಂದಿದೆ. ಐಪಿಎಸ್ ಅಧಿಕಾರಿಗಳನ್ನು ಲೋಕಾಯುಕ್ತರು, ಅದಕ್ಕಿಂತ ಕೆಳಗಿನ ಹುದ್ದೆಯ ಅಧಿಕಾರಿಗಳನ್ನು ಉಪಲೋಕಾಯುಕ್ತರು ವಿಚಾರಣೆ ನಡೆಸುವಂತೆ ಪತ್ರದಲ್ಲಿ ಸೂಚಿಸಿರುವುದಾಗಿ ಗೃಹ ಲಾಖೆ ಮೂಲಗಳು ದೃಢಪಡಿಸಿವೆ.
ಕಳೆದವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಲೋಕಾಯುಕ್ತ ವರದಿ ಆದಾರದ ಮೇಲೆ ಕ್ರಮಕ್ಕೆ ಕಾನೂನು ಸಚಿವ ಡಿ.ಬಿ. ಜಯಚಂದ್ರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚನೆಯಾಗಿದೆ. ಇದರ ಆಧಾರವದ ಮೇಲೆ ಗೃಹ ಇಲಾಖೆ ಪೊಲೀಸ್ ಅಧಿಕಾರಿಗಳ ವಿಚಾರಣೆಗೆ ಮುಂದಾಗಿದೆ.  ಒಟ್ಟು 731 ಸರ್ಕಾರಿ ಅಧಿಕಾರಿಗಳು, ನೌಕರರು ಅಕ್ರಮದಲ್ಲಿ ಪಾಲ್ಗೊಂಡಿರುವ ಬಗ್ಗೆ ಲೋಕಾಯುಕ್ತರು ವರದಿಯಲ್ಲಿ ಹೇಳಿದ್ದು, ಇದರಲ್ಲಿ 97 ಪೊಲೀಸ್ ಅಧಿಕಾರಿಗಳು ಮತ್ತು ನೌಕರರು ಸೇರಿದ್ದರೆ ಇತರರು ಐಎಎಸ್, ಗಣಿ, ಕಂದಾಯ, ಸಾರಿಗೆ, ಅರಣ್ಯ ಇಲಾಖೆಗಳಿಗೆ ಸೇರಿದ ಅಧಿಕಾರಿಗಳಾಗಿದ್ದಾರೆ.

ನ್ಯಾಯಾಂಗ ಬಂಧನಕ್ಕೆ ಶಿವಲಿಂಗಮೂರ್ತಿ
ಬೆಂಗಳೂರು: ಜನಾರ್ದನರೆಡ್ಡಿ ಮತ್ತು ಪತ್ನಿ ಅರುಣಾ ಲಕ್ಷ್ಮೀ ಒಡೆತನದ ಅಸೋಸಿಯೇಟೆಡ್ ಮೈನಿಂಗ್ ಕಂಪನಿಗೆ (ಎಎಂಸಿ) ಗಣಿಗಾರಿಕೆ ನಡೆಸಲು ಅಕ್ರಮವಾಗಿ ಅನುಮತಿ ನೀಡಿದ ಆರೋಪ ಎದುರಿಸುತ್ತಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕರಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಶಿವಲಿಂಗಮೂರ್ತಿ ಅವರನ್ನು ಸಿಬಿಐ ವಿಶೇಷ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಎಎಂಸಿ ಅಕ್ರಮ ಗಣಿಗಾರಿಕೆ ಸಂಬಂಧ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಿಬಿಐ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಹೆಸರಿಸಲಾಗಿರುವ 21 ಆರೋಪಿಗಳ ಪೈಕಿ ಶಿವಲಿಂಗಮೂರ್ತಿ 6ನೇ ಆರೋಪಿಯಾಗಿದ್ದಾರೆ.

ಅರಣ್ಯಾಧಿಕಾರಿಗಳ ವಿಚಾರಣೆ
-ಶಶಿಧರ ಮೇಟಿ
ಕನ್ನಡಪ್ರಭ ವಾರ್ತೆ ಬಳ್ಳಾರಿ ಸೆ. 21

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರು, ಅಧಿಕಾರಿಗಳ ಬಂಧನದ ಸರಣಿ ಶುರುವಾಗಿದ್ದರೆ, ಇತ್ತ ಅರಣ್ಯ ಇಲಾಖೆಯಲ್ಲಿ ಲೋಕಾಯುಕ್ತ ವರದಿಯಲ್ಲಿರುವ ಅಧಿಕಾರಿಗಳ ಮೇಲಿನ ಇಲಾಖೆಯ ವಿಚಾರಣೆಯೂ ಆರಂಭವಾಗಿದೆ.  ಹಿರಿಯ ಅಧಿಕಾರಿ ಜಮಾದಾರ್ ಅವರು ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ್ದ ಅರಣ್ಯಾಧಿಕಾರಿಗಳು ಇಲಾಖೆಯ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಈಗಾಗಲೇ ಇಬ್ಬರು ಅಧಿಕಾರಿಗಳು ಬಂಧಿತರಾಗಿದ್ದರೆ, ಇನ್ನಿಬ್ಬರು ಡಿಎಫ್‌ಒ ಹಾಗೂ ನಾಲ್ವರು ಎಸಿಎಫ್‌ಗಳ ಮೇಲೆ ಇಲಾಖೆ ವಿಚಾರಣೆ ಪ್ರಗತಿಯಲ್ಲಿದೆ. ಅಕ್ರಮ ಗಣಿಗಾರಿಕೆ ಕುರಿತು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ನೀಡಿದ ವರದಿ ಗಣಿ ವಲಯದಲ್ಲಿ ತಲ್ಲಣ ಸೃಷ್ಟಿಸಿತ್ತು.
ಇನ್ನು ಲೋಕಾಯುಕ್ತ ವರದಿಯನ್ನು ಅನುಷ್ಠಾನಗೊಳಿಸಬೇಕೆಂಬ ಒತ್ತಾಯ ಸರ್ಕಾರದ ಮೇಲಿರುವುದರಿಂದ ಇದೀಗ ಲೋಕಾಯುಕ್ತ ವರದಿಯಲ್ಲಿ ಹೆಸರಿರುವ ಅಧಿಕಾರಿಗಳ ಮೇಲೆ ಅರಣ್ಯ ಇಲಾಖೆಯು ವಿಚಾರಣೆಗೆ ಮುಂದಾಗಿದೆ. ಲೋಕಾಯುಕ್ತ ವರದಿ ಅನುಷ್ಠಾನವಾದರೆ, ಬಹುತೇಕ ಅಧಿಕಾರಿಗಳಿಗೂ ಅಕ್ರಮ ಗಣಿಗಾರಿಕೆ ಉರುಳವಾಗುವ ಸಾಧ್ಯತೆ ಇದೆ.
ಪ್ರಭಾವಕ್ಕೆ ಅವಕಾಶವಿಲ್ಲ: ಶಾಸಕರೆಂಬುದನ್ನೂ ಲೆಕ್ಕಿಸದೆ ಬೇಲೆಕೇರಿ ಅದಿರು ಪ್ರಕರಣದಲ್ಲಿ ಇದೀಗ ಸಿಬಿಐ ಅಧಿಕಾರಿಗಳು ಬಂಧಿಸುತ್ತಿದ್ದಾರೆ. ಈಗಾಗಲೇ ಡೆಕ್ಕನ್ ಮೈನಿಂಗ್ ಸಿಂಡಿಕೇಟ್‌ಗೆ ಸಂಬಂಧಿಸಿದಂತೆ ಹಿರಿಯ ಐಎಎಸ್ ಅಧಿಕಾರಿಗಳಾದ ವಿಶ್ವನಾಥ್, ಶಮೀನು ಭಾನು (ಜಾಮೀನಿನ ಮೇಲೆ ಬಿಡುಗಡೆಯಾಗಿದೆ) ಬಂಧಿಸಲಾಗಿತ್ತು. ಇನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದ ಎಂ.ಇ. ಶಿವಲಿಂಗಮೂರ್ತಿ ಅವರನ್ನು ಜನಾರ್ದನ ರೆಡ್ಡಿ ಅವರ ಅಸೋಸಿಯೇಟೆಡ್ ಮೈನಿಂಗ್ ಕಂಪನಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ. ಇದರಿಂದಾಗಿ ಇತರೆ ಇಲಾಖೆಯ ಅಧಿಕಾರಿಗಳಿಗೆ ನಡುಕ ಹುಟ್ಟಿಸಿದೆ.
ವಿಚಾರಣೆ ಎದುರಿಸುತ್ತಿರುವ ಅರಣ್ಯಾಧಿಕಾರಿಗಳು: ಒಂದು ಕಾಲದಲ್ಲಿ ಬಳ್ಳಾರಿಯ ಅರಣ್ಯ ಇಲಾಖೆಗೆ ಬರಬೇಕೆಂದರೆ ಅಧಿಕಾರಿಗಳು ತುದಿಗಾಲಲ್ಲಿ ನಿಲ್ಲುತ್ತಿದ್ದರು. ಆಗ ಆ ಅಧಿಕಾರಿಗಳು ಅಕ್ರಮ ಗಣಿಗಾರಿಕೆಯೂ ಸಹಕರಿಸಿದ್ದರು. ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪವು ಇದೀಗ ಅವರಿಗೆ ಉರುಳಾಗಿ ಪರಿಣಮಿಸಲಿದೆ. ಈಗಾಗಲೇ ಬಳ್ಳಾರಿಯಲ್ಲಿ ಕಾರ್ಯನಿರ್ವಹಿಸಿದ್ದ ಅರಣ್ಯಾಧಿಕಾರಿಗಳಾದ ಮನೋಜ್‌ಕುಮಾರ್ ಶುಕ್ಲ ಸೇರಿದಂತೆ ಇಬ್ಬರು ಅಧಿಕಾರಿಗಳನ್ನು ಬಂಧಿಸಿದ್ದರೆ, ಇದೀಗ ಡಿಎಫ್‌ಒ ಆಗಿ ಕಾರ್ಯನಿರ್ವಹಿಸಿದ್ದ ರಾಜಶೇಖರ್, ಎಸಿಎಫ್ ಆಗಿ ಕಾರ್ಯನಿರ್ವಹಿಸಿದ ಪೂವಯ್ಯ, ಶ್ರೀನಿವಾಸನ್, ಶ್ರೀನಿವಾಸ್ ಮೂರ್ತಿ ಅವರ ಮೇಲೆ ಇಲಾಖೆಯ ವಿಚಾರಣೆ ನಡೆಯುತ್ತಿದೆ. ಇನ್ನು ಸ್ವಯಂ ನಿವೃತ್ತಿ ಪಡೆದಿರುವ ರಂಗರಾಜನ್ ಮೇಲೆ ಕ್ರಿಮಿನಲ್ ದೂರು ದಾಖಲಿಸಲು ಸಿದ್ಧತೆ ನಡೆದಿದೆ. ಈಗಾಗಲೇ ಹಿರಿಯ ಅಧಿಕಾರಿ ಜಮಾದಾರ್ ಅವರ ನೇತೃತ್ವದಲ್ಲಿ ಮೇಲಧಿಕಾರಿಗಳ ಮೇಲೆ ಇಲಾಖೆಯ ವಿಚಾರಣೆ ನಡೆಯುತ್ತಿದೆ.
ಅಧಿಕಾರಿಗಳ ಮೇಲೆ ತೂಗುಕತ್ತಿ: ಇನ್ನು ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲೆಯ ಫಾರೆಸ್ಟ್ ಹಾಗೂ ಗಾರ್ಡ್‌ಗಳು ಸೇರಿದಂತೆ ಲೋಕಾಯುಕ್ತ ವರದಿಯಲ್ಲಿ  25 ಜನರ ಹೆಸರಿದ್ದು, ಇವರ ಮೇಲೆ ಇಲಾಖೆಯ ವಿಚಾರಣೆ ನಡೆಸಲು ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ. ಆದರೆ ಆರೋಪಿತ ಗಾರ್ಡ್ಸ್ ಮತ್ತು ಫಾರೆಸ್ಟರ್‌ಗಳು ಸಿಬಿಐಗೆ ಹೇಳಿಕೆ ನೀಡಿರುವುದರಿಂದ ಸಿಬಿಐ ಅನುಮತಿ ಬಂದ ನಂತರ ಇವರ ಮೇಲೆ ಇಲಾಖೆಯ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಇದೀಗ ಕೇವಲ ಅರಣ್ಯ ಇಲಾಖೆಗೆ ಮಾತ್ರವಲ್ಲದೆ, ಪೊಲೀಸ್ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೇರಿದಂತೆ ಗಣಿ ಸಂಬಂಧಿಸಿದ ಇಲಾಖೆಯಲ್ಲಿ ಬಳ್ಳಾರಿಯಲ್ಲಿ ಕಾರ್ಯನಿರ್ವಹಿಸಿ, ಅಕ್ರಮಕ್ಕೆ ಸಹಕರಿಸಿದ ಅಧಿಕಾರಿಗಳ ಮೇಲೆ ತನಿಖೆಯ ತೂಗಕತ್ತಿ ನೇತಾಡುತ್ತಿದೆ.

ಕನಸಲ್ಲೂ ಕಾಡುತ್ತಿದೆ ಬೇಲೆಕೇರಿ..!
ಕನ್ನಡಪ್ರಭ ವಾರ್ತೆ ಬೆಂಗಳೂರು ಸೆ.21

ಬೇಲೆಕೇರಿ ಬಂದರು...!
ಗಣಿ ವ್ಯವಹಾರದಲ್ಲಿ ತೊಡಗಿದ್ದ ರಾಜಕಾರಣಿಗಳು, ಅದಕ್ಕೆ ಬೆಂಬಲ ನೀಡಿದ ಅಧಿಕಾರಿಗಳಿಗೆಲ್ಲಾ ನಡುಕ ಹುಟ್ಟಿಸಿದ ಹೆಸರಿದು.
ಹೌದು, ಈ ಒಂದು ಸಣ್ಣ ಬಂದರು ಇದೀಗ ದೇಶವ್ಯಾಪಿ ಹೆಸರು ಮಾಡುತ್ತಿದೆ. ಅಷ್ಟೇ ಏಕೆ ಅದೆಷ್ಟೋ ಮಂದಿ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುವಂತೆ ಮಾಡುತ್ತಿದೆ. ಬೇಲೆಕೇರಿ ಬಂದರು ಎಲ್ಲಿದೆ ಎಂದು ಗೊತ್ತಿಲ್ಲದವರೂ ಆ ಕುರಿತು ಗಂಟೆಗಟ್ಟಲೆ ಚರ್ಚೆ ಮಾಡುವಂತಾಗಿದೆ.
ಎಲ್ಲಿದೆ ಬಂದರು?: ಕಾರವಾರದಿಂದ ದಕ್ಷಿಣಕ್ಕೆ 26 ಕಿ.ಮೀ. ದೂರದಲ್ಲಿರುವ ಬೇಲೆಕೇರಿ ಎಂಬ ಸಣ್ಣ ಪ್ರದೇಶದ ಪುಟ್ಟ ಬಂದರಿನ ಬಗ್ಗೆ 2010ರವರೆಗೆ ಬಹುತೇಕರಿಗೆ ಗೊತ್ತೇ ಇರಲಿಲ್ಲ. ಅಂತಹದ್ದೊಂದು ಪ್ರದೇಶವಿದೆ ಎಂಬುದರ ಅರಿವೂ ಇರಲಿಲ್ಲ. ಇದರ ಅನುಕೂಲ ಪಡೆದೇ ಗಣಿಗಾರಿಕೆ ನಡೆಸುವವರು ಮತ್ತು ಅದಿರು ಸಾಗಣೆ ಮಾಡುವವರು ತಮ್ಮ ಅಕ್ರಮಗಳಿಗೆ ಇದನ್ನು ಬಳಸಿಕೊಂಡರು. ಹೀಗಾಗಿಯೇ ಬೇಲೆಕೇರಿ ಬಂದರು ಎಂದರೆ ಬೆಚ್ಚಿಬೀಳುವಂತಾಗಿದೆ.
    
ಬೇಲಿ ದಾಟಿದವರಿಗೆ ಭೂತವಾಗಿ ಕಾಟ
ಕ.ಪ್ರ.ವಾರ್ತೆ ಬೆಂಗಳೂರು ಸೆ. 21

ಬೇಲೆಕೇರಿ ಬಂದರು ಮೂಲಕ ಅಕ್ರಮವಾಗಿ ಅದಿರು ರಫ್ತಾಗುತ್ತಿರುವುದನ್ನು ಬೆಳಕಿಗೆ ತಂದದ್ದು ಲೋಕಾಯುಕ್ತ ಸಂಸ್ಥೆ. ಅಕ್ರಮ ಗಣಿಗಾರಿಕೆ ಕುರಿತಂತೆ ತನಿಖೆ ನಡೆಸುತ್ತಿದ್ದ ಸಂದರ್ಭದಲ್ಲಿ ಗಣಿಗಳಿಂದ ಅಕ್ರಮವಾಗಿ ಸಾಗಣೆಯಾಗುತ್ತಿದ್ದ ಅದಿರು ಬೇಲೆಕೇರಿ ಬಂದರು ಮೂಲಕ ಅಕ್ರಮವಾಗಿಯೇ ರಫ್ತಾಗುತ್ತಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಬೇಲೆಕೇರಿ ಬಂದರು ಆವರಣದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 8 ಲಕ್ಷ ಮೆಟ್ರಿಕ್ ಟನ್‌ಗೂ ಹೆಚ್ಚು ಅದಿರನ್ನು ಲೋಕಾಯುಕ್ತ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದರು. ಆದರೆ, ರಾತ್ರೋರಾತ್ರಿ ಈ ಮುಟ್ಟುಗೋಲು ಹಾಕಿಕೊಂಡ ಅದಿರು ನಾಪತ್ತೆಯಾದಾಗಲೇ ಈ ಬಂದರಿನ ವ್ಯವಹಾರದ ನಿಜ ಬಣ್ಣ ಬಯಲಾದದ್ದು.
ಈ ವಿಚಾರವನ್ನು ಅಕ್ರಮ ಗಣಿಗಾರಿಕೆ ಕುರಿತ ತಮ್ಮ ವರದಿಯಲ್ಲಿ ಪ್ರಸ್ತಾಪಿಸಿದ್ದರಲ್ಲದೆ, ಹೆಚ್ಚಿನ ತನಿಖೆಗೂ ಶಿಫಾರಸು ಮಾಡಿದ್ದರು. ಈ ಮಧ್ಯೆ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತಾದರೂ ಅದು ಹೆಚ್ಚು ಪರಿಣಾಕಾರಿಯಾಗಲಿಲ್ಲ.
ನಿಜ ವ್ಯವಹಾರ ಬಿಚ್ಚಿಟ್ಟ ಸಿಇಸಿ:  ಈ ಮಧ್ಯೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಅಕ್ರಮ ಗಣಿಗಾರಿಕೆ ಕುರಿತಂತೆ ತನಿಖೆ ನಡೆಸಿದ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಬೇಲೆಕೇರಿ ಬಂದರಿನಲ್ಲಿ ನಡೆಯುತ್ತಿದ್ದ ಅಕ್ರಮ ಅದಿರು ರಫ್ತಿನ ನಿಜವಾದ ವ್ಯವಹಾರವನ್ನು ಬಿಚ್ಚಿಟ್ಟಿತು. 2009ರ ಜ. 1ರಿಂದ 2010ರ ಮೇ 31ರವರೆಗೆ ಬೇಲೆಕೇರಿ ಬಂದರಿನಿಂದ 73 ಕಂಪನಿಗಳು 88.06 ಲಕ್ಷ ಮೆಟ್ರಿಕ್ ಟನ್ ಅದಿರು ರಫ್ತು ಮಾಡಿವೆ. ಈ ಪೈಕಿ 50.79 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಅಕ್ರಮವಾಗಿ ರಫ್ತು ಮಾಡಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿತ್ತು. ಇದಕ್ಕೂ ಮುನ್ನವೇ ಲೋಕಾಯುಕ್ತರು ಇಲ್ಲಿಂದ ಅಕ್ರಮವಾಗಿ ಅದಿರು ರಫ್ತಾಗುತ್ತಿದೆ ಎಂದು ಹೇಳಿದ್ದರೂ ಅದು ಅಷ್ಟೊಂದು ಗಂಭೀರ ಸ್ವರೂಪದ ಪ್ರಕರಣ ಎಂದು ಯಾರೂ ನಂಬಿರಲಿಲ್ಲ.
ಬೆವರಿಳಿಸಿದ ಸಿಬಿಐ: ಸಿಇಸಿ ವರದಿ ಆಧರಿಸಿ ಸುಪ್ರೀಂ ಕೋರ್ಟ್ ನೀಡಿದ ಆದೇಶದಂತೆ ಈ ಅಕ್ರಮ ರಫ್ತಿನ ಕುರಿತು ಸಿಬಿಐ ತನಿಖೆ ಆರಂಭಿಸಿತು. ಆಗ ಇದರ ಹಿಂದೆ ಇರುವ 'ಗಣ್ಯ' ವ್ಯಕ್ತಿಗಳ ಮುಖವಾಡ ಕಳಚಿ ಬಿತ್ತು. ಲೋಕಾಯುಕ್ತರು ತಮ್ಮ ವರದಿಯಲ್ಲಿ ಪ್ರಸ್ತಾಪಿಸದ ಹೆಸರುಗಳೂ ಒಂದೊಂದಾಗಿ ಬೆಳಕಿಗೆ ಬರತೊಡಗಿದವು. ಇದರ ಪರಿಣಾಮವೇ ಇದೀಗ ಶಾಸಕರಾದ ಸುರೇಶ್ ಬಾಬು, ಸತೀಶ್ ಸೈಲ್ ಸಿಬಿಐನಿಂದ ಬಂಧನಕ್ಕೊಳಗಾಗಿದ್ದಾರೆ.
ಆನಂದ್ ಸಿಂಗ್ ಮತ್ತು ನಾಗೇಂದ್ರ ಕೂಡ ಸಿಬಿಐ ವಿಚಾರಣೆ ಎದುರಿಸುತ್ತಿದ್ದು, ಯಾವುದೇ ಕ್ಷಣದಲ್ಲೂ ಬಂಧನಕ್ಕೊಳಗಾಗಬಹುದು. ಇದರ ಜತೆಗೆ ಕೆಲವು ನಿವೃತ್ತ ಮತ್ತು ಹಾಲಿ ಅಧಿಕಾರಿಗಳದ್ದೂ ಇದೇ ಸ್ಥಿತಿ. ಹೀಗಾಗಿ ಬೇಲೆಕೇರಿ ಬಂದರು ಎಂಬ ಹೆಸರೆತ್ತಿದರೆ ಗಣಿ ಅಕ್ರಮದಲ್ಲಿ ಲಾಭ ಪಡೆದವರು ಬೆದರಿ ಬೆವರುತ್ತಿದ್ದಾರೆ.
ಇನ್ನಷ್ಟು ಆಳ- ಅಗಲ ಬಯಲಿಗೆ: ಬೇಲೆಕೇರಿ ಬಂದರಿನಿಂದಾಗಿ ರಾಜ್ಯದ ಅಕ್ರಮ ಗಣಿಗಾರಿಕೆಯ ಒಂದು ಭಾಗ ಮಾತ್ರ ಇದುವರೆಗೆ ಕಾಣಿಸಿಕೊಂಡಿದೆ. ಸಿಬಿಐ ತನ್ನ ವಿಚಾರಣೆ ಮುಂದುವರಿದರೆ ಅಕ್ರಮದ ಇನ್ನಷ್ಟು ಆಳ- ಅಗಲಗಳು ಬೆಳಕಿಗೆ ಬರುವುದು ಖಚಿತ. ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ರಫ್ತಾಗಿರುವ ತನಿಖೆ ನಡೆಸುತ್ತಿರುವ ಸಿಬಿಐ ಈ ಅದಿರು ಎಲ್ಲಿಂದ ಬಂತು ಎಂಬ ಬಗ್ಗೆಯೂ ವಿಚಾರಣೆ ನಡೆಸಲಿದೆ.
ಆ ಸಂದರ್ಭದಲ್ಲಿ ಅದು ಯಾವ ಗಣಿಯಿಂದ ಬಂತು? ಅದರ ಮಾಲಿಕರಾರು? ಇದರ ಹಿಂದೆ ಇದ್ದ ರಾಜಕಾರಣಿಗಳು, ಅಧಿಕಾರಿಗಳು ಯಾರು? ಎಂಬಿತ್ಯಾದಿ ಅಂಶಗಳು ಬೆಳಕಿಗೆ ಬರಲಿದ್ದು, ಸಚ್ಚಾರಿತ್ರರು ಎಂದು ಹೇಳಿಕೊಳ್ಳುತ್ತಿರುವವರ ಬಂಡವಾಳ ಬಯಲಾಗಲಿದೆ. ಹೀಗಾಗಿಯೇ ಬೇಲೆಕೇರಿ ಬಂದರು ಗಣಿಗಾರಿಕೆಯಲ್ಲಿ ತೊಡಗಿದ್ದವರ ಪಾಲಿಗೆ ಖಳನಾಯಕನಂತೆ ಕಾಣಿಸುತ್ತಿದೆ.

ನ್ಯಾ. ಸಂತೋಷ್ ಹೆಗ್ಡೆ ಷಡ್ಯಂತ್ರಕ್ಕೆ ನಾನು ಬಲಿಪಶು
ಕ.ಪ್ರ.ವಾರ್ತೆ ಬೆಂಗಳೂರು ಸೆ. 21

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಇದೀಗ ಸಿಬಿಐನಿಂದ ಬಂಧನಕ್ಕೊಳಗಾಗಿರುವವರ ಹೆಸರು ನೀವು ಕೊಟ್ಟ ವರದಿಯಲ್ಲಿತ್ತೇ? ತನಿಖೆ ಪೂರ್ಣವಾಗಿಲ್ಲ ಎಂದು ಇದಕ್ಕೆ ಉತ್ತರಿಸಿದರೆ ತರಾತುರಿಯಲ್ಲಿ ವರದಿ ಕೊಡುವ ಅಗತ್ಯವೇನಿತ್ತು? ನನ್ನನ್ನು ಬಲಿಪಶು ಮಾಡುವ ಷಡ್ಯಂತ್ರವಿತ್ತೇ?
ಅಕ್ರಮ ಗಣಿಗಾರಿಕೆ ಕುರಿತಂತೆ ತನಿಖೆ ನಡೆಸಿ ವರದಿ ನೀಡಿರುವ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೇಳಿರುವ ಪ್ರಶ್ನೆಗಳಿವು.
ಅಕ್ರಮ ಗಣಿಗಾರಿಕೆ ಕುರಿತಂತೆ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಕ್ರಮ ಗಣಿಗಾರಿಕೆಗೆ ಅವಕಾಶ ಕೊಟ್ಟಿದ್ದರೆ, ಯಾರಿಗಾದರೂ ಗಣಿ ಪರವಾನಗಿ ಕೊಟ್ಟಿದ್ದರೆ ಅಥವಾ ಜಿಂದಾಲ್ ಕಂಪನಿಗೆ ಗಣಿ ಆರಂಭಿಸಲು ಅನುಮತಿ ಕೊಟ್ಟು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದರೆ ಲೋಕಾಯುಕ್ತರು ತಮ್ಮ ವರದಿಯಲ್ಲಿ ನನ್ನ ವಿರುದ್ಧ ಮಾಡಿದ್ದ ಆರೋಪಗಳು ಸರಿಯಿದೆ ಎನ್ನಬಹುದಿತ್ತು. ಆದರೆ, ಅಕ್ರಮ ಮಾಡಿದವರನ್ನು ಬಿಟ್ಟು ನನ್ನ ಕುಟುಂಬ ಸದಸ್ಯರ ಟ್ರಸ್ಟ್‌ಗೆ ಜಿಂದಾಲ್ ಕಂಪನಿಯಿಂದ ದೇಣಿಗೆ ಬಂದಿದೆ ಎಂಬ ಕಾರಣಕ್ಕೆ ನನ್ನ ಬಗ್ಗೆ ಸಂಶಯಪಟ್ಟು ವರದಿ ಸಲ್ಲಿಸಿದ್ದೇಕೆ ಎಂದು ಕೇಳಿದರು.
ಇದೀಗ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಬಿಐನವರು ಹಲವರನ್ನು ಬಂಧಿಸುತ್ತಿದ್ದಾರೆ. ಲೋಕಾಯುಕ್ತರು ನೀಡಿದ್ದ ವರದಿಯಲ್ಲಿ ಇವರ ಹೆಸರು ಏಕೆ ಇರಲಿಲ್ಲ. ಅದೇ ರೀತಿ ಹಿಂದಿನ ಮುಖ್ಯಮಂತ್ರಿಗಳ ಬಗ್ಗೆ ಕೇಳಿದರೆ ಅವರು ರಾಜಿನಾಮೆ ಕೊಟ್ಟಿದ್ದಾರೆ ಎಂದು ಹೇಳಿದರು. ಹಾಗಿರುವಾಗ ನಾನು ರಾಜಿನಾಮೆ ಕೊಡುತ್ತೇನೆ ಎಂದು ಗೊತ್ತಿದ್ದರೂ ತರಾತುರಿಯಲ್ಲಿ ರಾಜ್ಯಪಾಲರಿಗೆ ವರದಿ ನೀಡುವ ಅಗತ್ಯವೇನಿತ್ತು? ತನಿಖೆ ಪೂರ್ಣಗೊಳಿಸದೆ ಏಕೆ ವರದಿ ಸಲ್ಲಿಸಬೇಕಿತ್ತು. ಇದೆಲ್ಲವನ್ನೂ ಗಮನಿಸಿದಾಗ ಅಕ್ರಮ ಗಣಿಗಾರಿಕೆಯಲ್ಲಿ ನನ್ನನ್ನು  'ಫಿಕ್ಸ್‌' ಮಾಡುವ ಷಡ್ಯಂತ್ರ ಬಿಟ್ಟರೆ ಇನ್ನೇನಿದೆ ಸತ್ಯಾಂಶ ಎಂದು ಪ್ರಶ್ನಿಸಿದರು.
ಇನ್ನಷ್ಟು ಜನರ ಬಣ್ಣ ಬಯಲಾಗಲಿದೆ: ಅಕ್ರಮ ಗಣಿಗಾರಿಕೆ ಕುರಿತಂತೆ ಲೋಕಾಯುಕ್ತರ ವರದಿಯಲ್ಲಿ ಇಲ್ಲದವರೂ ಇದೀಗ ಸಿಬಿಐ ತನಿಖೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಿಷ್ಟೇ ಅಲ್ಲ, ತನಿಖೆ ಇನ್ನಷ್ಟು ಆಳಕ್ಕೆ ಹೋದಂತೆಲ್ಲಾ ಅಕ್ರಮದಲ್ಲಿ ತೊಡಗಿದ್ದವರ ಬಣ್ಣ ಬಯಲಾಗಲಿದೆ. ಅಕ್ರಮ ಗಣಿಗಾರಿಕೆ, ಅದಿರು ರಫ್ತಿಗೆ ಕಡಿವಾಣ ಹಾಕಲು ಮುಂದಾದ ನನ್ನನ್ನು ಅಧಿಕಾರದಿಂದ ಕೆಳಗಿಳಿಸಿದ್ದಲ್ಲದೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ ಎಲ್ಲರಿಗೂ ಈ ತನಿಖೆಯಿಂದ ಉತ್ತರ ಸಿಗಲಿದೆ ಎಂದು ಹೇಳಿದರು.
ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ನನ್ನ ವಿರುದ್ಧ ಹೋರಾಟ ಮಾಡಿದ್ದರು. ಬಳ್ಳಾರಿವರೆಗೆ ಪಾದಯಾತ್ರೆಯನ್ನೂ ಕೈಗೊಂಡಿದ್ದರು.
ಇದೀಗ ಅವರೇ ಮುಖ್ಯಮಂತ್ರಿಯಾಗಿದ್ದು, ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದವರು ಅವರ ಸುತ್ತಲೂ ಇದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಮೌನ ವಹಿಸಿದ್ದಾರೆ ಎಂದು ಆರೋಪಿಸಿದರು.

ಸಚಿವ ಸಂತೋಷ್ ಲಾಡ್‌ರನ್ನು ಸಂಪುಟದಿಂದ ಕೈ ಬಿಡುವುದು ನೈತಿಕ ದೃಷ್ಟಿಯಿಂದ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ  ವಿವೇಚನೆಗೆ ಬಿಟ್ಟ ವಿಚಾರ. ರಾಜಕಾರಣಿಗಳು ಜೈಲಿಗೆ ಹೋದರೆ ನಾನು ಅಯ್ಯೋ ಅನ್ನಲ್ಲ.
-ದೇವೇಗೌಡ, ಮಾಜಿ ಪ್ರಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement