5 ಮಹಾನಗರಗಳ ಸುರಕ್ಷತೆಗೆ 150 ಕೋಟಿ: ಸಿದ್ದರಾಮಯ್ಯ
ರಾಜ್ಯದ ಐದು ಮಹಾನಗರಗಳನ್ನು ಸುರಕ್ಷಿತ ನಗರಗಳನ್ನಾಗಿ ಪರಿವರ್ತಿಸಲು ರಾಜ್ಯ ಸರ್ಕಾರ 150 ಕೋಟಿ ಮೊತ್ತದ ಯೋಜನೆ ರೂಪಿಸಿದೆ.
ನವದೆಹಲಿ: ರಾಜ್ಯದ ಐದು ಮಹಾನಗರಗಳನ್ನು ಸುರಕ್ಷಿತ ನಗರಗಳನ್ನಾಗಿ ಪರಿವರ್ತಿಸಲು ರಾಜ್ಯ ಸರ್ಕಾರ 150 ಕೋಟಿ ಮೊತ್ತದ ಯೋಜನೆ ರೂಪಿಸಿದೆ. ಐದು ನಗರಗಳ ಸುರಕ್ಷತಾ ಮೂಲಭೂತ ಸೌಲಭ್ಯಗಳಿಗಾಗಿ ಈ ಮೊತ್ತವನ್ನು ಮುಂದಿನ ಐದು ವರ್ಷಗಳಲ್ಲಿ ವಿನಿಯೋಗಿಸಲಿದೆ.
ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ ಮತ್ತು ಹುಬ್ಬಳ್ಳಿ- ಧಾರವಾಡ ನಗರಗಳು ಸುರಕ್ಷಿತ ನಗರಗಳಾಗಲಿವೆ. ರಾಷ್ಟ್ರೀಯ ಏಕತಾ ಮಂಡಳಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಧಾರ್ಮಿಕ ಮೂಲಭೂತವಾದ ಮತ್ತು ಭಯೋತ್ಪಾದನೆಯನ್ನು ನಿಗ್ರಹಿಸಲು ರಾಜ್ಯ ಸರ್ಕಾರ ಅತ್ಯಗತ್ಯ ಕ್ರಮ ಕೈಗೊಂಡಿದೆ. ಪೊಲೀಸ್ ಇಲಾಖೆಯ ಆಂತರಿಕ ಸುರಕ್ಷತಾ ವಿಭಾಗವನ್ನು ಸಬಲಗೊಳಿಸಲಾಗಿದ್ದು, ಭಯೋತ್ಪಾದನಾ ಚಟುವಟಿಕೆಗಳಂಥ ಕೃತ್ಯಗಳನ್ನು ತಡೆಯಲು, ಪರಿಸ್ಥಿತಿ ನಿಭಾಯಿಸಲು ಭಯೋತ್ಪಾದನಾ ನಿಗ್ರಹ ದಳದಿಂದ ತರಬೇತಿ ನೀಡಲಾಗಿದೆ.
ಹೆಚ್ಚುತ್ತಿರುವ ಭಯೋತ್ಪಾದಕ ಬೆದರಿಕೆಗಳನ್ನು, ಮುಖ್ಯವಾಗಿ ಹೊರಗಿನ ಶಕ್ತಿಗಳಿಂದ ಧನಸಹಾಯ, ಬೆಂಬಲ ಪಡೆಯುತ್ತಿರುವ ಭಯತ್ಪಾದಕತೆ ಎದುರಿಸಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಸಕ್ರಿಯ ಸಹಾಯ ನೀಡಬೇಕು ಎಂದು ಮುಖ್ಯಮಂತ್ರಿಗಳು ಸಲಹೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಗುಪ್ತಚರ ಸಂಸ್ಥೆಗಳ ನಡುವೆ ಹೆಚ್ಚಿನ ಸಮನ್ವಯತೆ ಅತ್ಯಗತ್ಯ. ಕರ್ನಾಟಕವು ದೇಶದ ಏಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಎಲ್ಲ ಆಗತ್ಯ ನೆರವು ಮತ್ತು ಬೆಂಬಲ ನೀಡಲಿದೆ ಎಂದರು.
ತುಮಕೂರು ಮತ್ತು ದಾವಣಗೆರೆ ನಗರಗಳಲ್ಲಿ ಭಾರತೀಯ ಮೀಸಲು ಪಡೆ (ಬಿಆರ್‌ಬಿ) ಸ್ಥಾಪಿಸಲಾಗುತ್ತದೆ. ಪೊಲೀಸ್ ಪಡೆ ಬಲಪಡಿಸಲು ಪ್ರಸಕ್ತ ಸಾಲಿನಲ್ಲಿ 8500 ಪೊಲೀಸ್ ಕಾನ್‌ಸ್ಟೇಬಲ್‌ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಪೊಲೀಸ್ ಇಲಾಖೆಯ ಗುಪ್ತಚರದಳ ಬಲಪಡಿಸುವ ಅಗತ್ಯವಿದೆ. ಗುಪ್ತಚರ ವಿಭಾಗದಲ್ಲಿ ಕಾರ್ಯನಿರ್ವಹಿಸಲು ಸಹಾಯಕ ಸಬ್‌ಇನ್‌ಸ್ಪೆಕ್ಟರ್ ನೇಮಕ ಮಾಡಿಕೊಳ್ಳಲಾಗುತ್ತದೆ. ಗುಪ್ತಚರ ವಿಭಾಗ ಬಲಪಡಿಸಲು ಅತ್ಯಾಧುನಿಕ ಪರಿಕರಗಳು ಹಾಗೂ ಅಗತ್ಯ ಸಿಬ್ಬಂದಿಯನ್ನು ಒದಗಿಸಲಾಗುತ್ತದೆ. ಗುಪ್ತಚರ ತರಬೇತಿ ಕೇಂದ್ರ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗದ ಮೇಲಿನ ಅಪರಾಧಗಳ ಸಂಖ್ಯೆ ಪ್ರಸಕ್ತ ವರ್ಷದಲ್ಲಿ ಇಳಿದಿದೆ. 2010ರಲ್ಲಿ 1466 ಅಪರಾಧ ಪ್ರಕರಣಗಳು ದಾಖಲಾಗಿದ್ದರೆ, 2011ರಲ್ಲಿ 1568 ಮತ್ತು 2012ರಲ್ಲಿ 1527 ಅಪರಾಧ ಪ್ರಕರಣಗಳು ನಡೆದಿವೆ. ಪ್ರಸಕ್ತ ಸಾಲಿನಲ್ಲಿ ಜುಲೈ ಅಂತ್ಯದವರೆಗೆ 691 ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಗೈರು ಹಾಜರಿಯಲ್ಲಿ ಅವರ ಭಾಷಣವನ್ನು ಗೃಹ ಸಚಿವ ಕೆ.ಜೆ. ಜಾರ್ಜ್ ಓದಿದರು.