ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕ್ಷುಲ್ಲಕ ಕಾರಣ ಜೋಡಿ ಕೊಲೆ

ಬಾಣಸವಾಡಿ ಲಿಂಗರಾಜಪುರದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ನೃತ್ಯದ ವೇಳೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಯುವಕರನ್ನು ಚಾಕುವಿನಿಂದ ಇರಿದು ಹತ್ಯೆಗೈಯ್ಯಲಾಗಿದೆ.

Srinivasa Murthy VN
Updated On : 24 Sept 2013, 7:08 am

ಬೆಂಗಳೂರು: ಬಾಣಸವಾಡಿ ಲಿಂಗರಾಜಪುರದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ನೃತ್ಯದ ವೇಳೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಯುವಕರನ್ನು ಚಾಕುವಿನಿಂದ ಇರಿದು ಹತ್ಯೆಗೈಯ್ಯಲಾಗಿದೆ.
ಜಾನಕಿರಾಮ ಬಡಾವಣೆ ಎ ಬ್ಲಾಕ್ ನಿವಾಸಿಗಳಾದ ಕಾರ್ತಿಕ್ (19) ಹಾಗೂ ಕೇಶವ್ (18) ಕೊಲೆಯಾದವರು. ಜಾನಕಿರಾಮ ಬಡಾವಣೆ ಬಿ ಬ್ಲಾಕ್‌ನಲ್ಲಿ ಯುವಕರು ಗಣೇಶಮೂರ್ತಿ ಪ್ರತಿಷ್ಠಾಪಿಸಿದ್ದರು. ಭಾನುವಾರ ಗಣೇಶಮೂರ್ತಿ ವಿಸರ್ಜಿಸಲು ಮೆರವಣಿಗೆ ಮೂಲಕ ತೆರಳುತ್ತಿದ್ದರು. ಮೆರವಣಿಗೆ ರಾತ್ರಿ 11ಕ್ಕೆ ಸೇಂಟ್ ಪಾಲ್ ಇಂಗ್ಲಿಷ್ ಶಾಲೆ ಎದುರು ಆಗಮಿಸಿತು.
ಈ ಸಂದರ್ಭದಲ್ಲಿ ಸ್ಥಳೀಯ ಯುವಕರು ಹಾಗೂ ಹುಡುಗರು ಮೆರವಣಿಗೆಯಲ್ಲಿ ನೃತ್ಯ ಮಾಡಲು ಮುಂದಾದರು. ಎರಡು ಗುಂಪುಗಳು ನೃತ್ಯ ಮಾಡುತ್ತಿದ್ದ ವೇಳೆ ಪರಸ್ಪರರ ಕಾಲುಗಳು ತಾಕಿದ ವಿಚಾರವಾಗಿ ಜಗಳ ಶುರುವಾಯಿತು. ಈ ವೇಳೆ ಎ ಬ್ಲಾಕ್ ಯುವಕನಾದ ಕೇಶವನನ್ನು ಮತ್ತೊಂದು ಗುಂಪಿನ 8 ರಿಂದ 10 ಯುವಕರು ಗಲ್ಲಿಗೆ ಎಳೆದುಕೊಂಡು ಹೋಗಿದ್ದರು. ನೃತ್ಯ ಮಾಡುವಾಗ ಕಾಲು ತುಳಿದಿದ್ದೀಯಾ ಎಂದು ಜಗಳ ತೆಗೆದು ಕೇಶವನ ಮೇಲೆ ಹಲ್ಲೆ ಮಾಡಿದ್ದಾರೆ. ಇದನ್ನು ಗಮನಿಸಿದ ಸ್ನೇಹಿತ ಕಾರ್ತಿಕ್ ಕೇಶವನ ಮೇಲೆ ಹಲ್ಲೆ ಮಾಡುತ್ತಿರುವುದನ್ನು ಪ್ರಶ್ನಿಸಿದ್ದಾನೆ. ಆಗ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಜಗಳ ಸಂಭವಿಸಿದೆ. ಈ ವೇಳೆ ಒಂದು ಗುಂಪಿನ ಭೀಮರಾಜ್, ಪಪ್ಪಿ, ಭರತ್, ದಿಲೀಪ್, ಸುರೇಶ್, ಆನಂದ್, ಸರವಣ, ಚಂದ್ರಶೇಖರ್ ಹಾಗೂ ವಿಜಯ್ ಸೇರಿದಂತೆ ಇತರರು ಕೇಶವ್ ಹಾಗೂ ಕಾರ್ತಿಕ್ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಕತ್ತಿಗೆಗೆ ಇರಿದು ಪರಾರಿಯಾಗಿದ್ದಾರೆ. ಘಟನೆಯಿಂದ ಗಾಬರಿಗೊಂಡ ಯುವಕರು ಗಣೇಶನನ್ನು ರಸ್ತೆಯಲ್ಲೇ ಬಿಟ್ಟು ಚೆಲ್ಲಾಪಿಲ್ಲಿಯಾಗಿದ್ದಾರೆ. ಕಾರ್ತಿಕ್ ಹಾಗೂ ಕೇಶವ್ ಇಬ್ಬರು ಕಟ್ಟಡ ನಿರ್ಮಾಣ ಕಾರ್ಯ ಹಾಗೂ ಕೂಲಿ ಕೆಲಸ ಮಾಡುತ್ತಿದ್ದರು.
ಕೊಲೆಯಾದ ಯುವಕರು ಹಾಗೂ ಆರೋಪಿಗಳ ವಿರುದ್ಧ ಸದ್ಯದವರೆಗೂ ಯಾವುದೇ ಅಪರಾಧ ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಬಾಣಸವಾಡಿ ಪೊಲೀಸರು ತಿಳಿಸಿದ್ದಾರೆ.

ಪೂರ್ವಯೋಜಿತ ಸಂಚು: ಕೊಲೆ ಆರೋಪಿಗಳು ಚಾಕು ಹಾಗೂ ಇತರ ಆಯುಧಗಳನ್ನು ತಮ್ಮ ಜತೆಗೆ ತಂದಿದ್ದು ಕಾರ್ತಿಕ್ ಹಾಗೂ ಕೇಶವನ ಹತ್ಯೆಗೆ ಮೊದಲೇ ಯೋಜಿಸಿದಂತಿದೆ ಎಂದು ಕಾರ್ತಿಕ್ ಸಹೋದರ ಮದಿ ಎಂಬಾತ ಆರೋಪಿಸಿದ್ದಾನೆ. ಗಣೇಶ ವಿರ್ಸಜನೆ ವೇಳೆ ಕೊಲೆಗೆ ಸಂಚು ರೂಪಿಸಿರಬಹುದು ಎಂದು ಮದಿ ಆರೋಪಿಸಿದ್ದಾನೆ. ಜೋಡಿ ಕೊಲೆ ಸಂಬಂಧ ಈಗಾಗಲೇ ನಾಲ್ವರನ್ನು ವಶಕ್ಕೆ ತೆಗೆದುಕೊಂಡಿರುವ ಬಾಣಸವಾಡಿ ಪೊಲೀಸರು ಇತರ ಆರೋಪಿಗಳಿಗಾಗಿ ಜಾಲ ಬೀಸಿದ್ದಾರೆ. ಕೊಲೆ ಆರೋಪಿಗಳೆಲ್ಲರೂ ಸ್ಥಳೀಯರಾಗಿದ್ದು ಕೂಲಿ ಕೆಲಸ ಹಾಗೂ ಇತರ ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿರುತ್ತಿದ್ದರು. ನೃತ್ಯದ ವೇಳೆ ಕಾಲು ತುಳಿದಿದ್ದರಿಂದಲೇ ಜೋಡಿ ಕೊಲೆ ನಡೆದಿದೆಯೋ ಅಥವಾ ದ್ವೇಷದ ಹಿನ್ನೆಲೆಯಲ್ಲಿ ನಡೆದಿದೆಯೋ ಎನ್ನುವುದರ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ತನಿಖಾಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement