ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಲೋಪಸೇವೆ 8 ಮಂದಿ ವಿರುದ್ಧ ಚಾರ್ಜ್‌ಶೀಟ್

ಕೆಪಿಎಸ್‌ಸಿಯಲ್ಲಿ ಆಗಿರುವ ಅಕ್ರಮಗಳ ಸಂಬಂಧ ಆಯೋಗದ ಮಾಜಿ ಅಧ್ಯಕ್ಷ ಗೋನಾಳ್ ಭೀಮಪ್ಪ ಸೇರಿ 8 ಮಂದಿ ವಿರುದ್ಧ ಸಿಐಡಿ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ.

Srinivasa Murthy VN
Updated On : 24 Sept 2013, 2:07 am

6,144 ಪುಟಗಳ ಆರೋಪ ಪಟ್ಟಿ
2ತಿಂಗಳು 10ದಿನದಲ್ಲಿ ಹಗರಣದ ತನಿಖೆ ಪೂರ್ಣ
ಸಿಐಡಿ ಡಿಜಿಪಿ ಬಿಪಿನ್ ಗೋಪಾಲಕೃಷ್ಣ  ತನಿಖೆ ನೇತೃತ್ವ

ಕನ್ನಡಪ್ರಭ ವಾರ್ತೆ ಬೆಂಗಳೂರು ಸೆ.23
ಕರ್ನಾಟಕ ಲೋಕಸೇವಾ ಆಯೋಗದ ವಿವಿಧ ಹುದ್ದೆಗಳಿಗೆ ನಡೆಸಿದ ಪರೀಕ್ಷೆಯಲ್ಲಿ ಆಗಿರುವ ಅಕ್ರಮಗಳ ಸಂಬಂಧ ಆಯೋಗದ ಮಾಜಿ ಅಧ್ಯಕ್ಷ ಗೋನಾಳ್ ಭೀಮಪ್ಪ ಸೇರಿದಂತೆ 8 ಮಂದಿ ವಿರುದ್ಧ ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ.
ಈ ಮೂಲಕ ಕೆಪಿಎಸ್‌ಸಿ ನೇಮಕ ಹಗರಣಕ್ಕೆ ತಾರ್ಕಿಕ ಅಂತ್ಯ ಲಭಿಸಿದ್ದು, ಈ ಶಾಸನಾತ್ಮಕ ಸಂಸ್ಥೆಯ ಅಧ್ಯಕ್ಷರು ಹಾಗೂ ಸದಸ್ಯರ ವಿರುದ್ಧ ಕ್ರಿಮಿನಲ್ ವಿಚಾರಣೆಗೆ ಅನುಮತಿ ನೀಡುವಂತೆ ಸಿಐಡಿ ರಾಜ್ಯ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರಿಗೆ ಶನಿವಾರ ವರದಿ ಸಲ್ಲಿಸಿದೆ.
ಈ ಹಗರಣದಲ್ಲಿ ಅಧ್ಯಕ್ಷ ಗೋನಾಳ್ ಭೀಮಪ್ಪ ಹಾಗೂ ಮಾಜಿ ಸದಸ್ಯೆ ಮಂಗಳಾ ಶ್ರೀಧರ್ ಅವರ ಪಾತ್ರ ಇರುವುದು ನಿಚ್ಚಳವಾಗಿದೆ. ಅಗತ್ಯ ದಾಖಲೆಗಳು ಹಾಗೂ ವೈಜ್ಞಾನಿಕ ಸಾಕ್ಷಿಗಳನ್ನು ಆರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ.
ಗೋನಾಳ್ ಭೀಮಪ್ಪ ಮೊದಲ ಆರೋಪಿಯಾಗಿದ್ದು, ಕೆ.ಆರ್.ಸುಂದರ್, ಅರುಣಾಚಲಂ, ಬಿಬಿಎಂಪಿ ಮಾಜಿ ಸದಸ್ಯೆ ಮಂಗಳಾ ಶ್ರೀಧರ್, ಅಶೋಕ್ ಕುಮಾರ್, ಸುಧೀರ್ ಅಲಿಯಾಸ್ ಶ್ರೀಧರ್, ಸೋಮೇಶ್ ಅಲಿಯಾಸ್ ಸೋಮನಾಥ್ ಚಿಕ್ಕಮಠ್ ಹಾಗೂ ರಾಜಶೇಖರ್ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ.
6144 ಪುಟ : ಸಿಐಡಿ ತನಿಖೆಗೆ ಒಪ್ಪಿಸಿದ ಇತ್ತೀಚಿನ ಭಾರಿ ಹಗರಣಗಳ ಪೈಕಿ ಅತ್ಯಂತ ತ್ವರಿತವಾಗಿ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದೆ. ಸಿಐಡಿ ಪೊಲೀಸ್ ಮಹಾನಿರ್ದೇಶಕ ಬಿಪಿನ್ ಗೋಪಾಲಕೃಷ್ಣ ಅವರ ನೇರ ನಿರ್ದೇಶನದಲ್ಲಿ ಕೇವಲ ಎರಡು ತಿಂಗಳು ಹತ್ತು ದಿನದಲ್ಲಿ ಪ್ರಕರಣದ ತನಿಖೆ ಮುಗಿದಿದೆ. ದೂರವಾಣಿ ಕರೆ, ಎಸ್‌ಎಂಎಸ್, ಸಿಸಿಟಿವಿ ದೃಶ್ಯಾವಳಿಗಳು, ಲಿಖಿತ ದಾಖಲೆಗಳು, ಲಿಖಿತ ಮತ್ತು ಮೌಖಿಕ ಪರೀಕ್ಷೆ ವಿವರಗಳು, ಸ್ಥಳ ಪರಿಶೀಲನಾ ವರದಿ ಸೇರಿದಂತೆ ಹಲವು ವಿವರಗಳನ್ನು ಸಂಗ್ರಹಿಸಲಾಗಿದ್ದು, 6144 ಪುಟಗಳ ಬೃಹತ್ ಆರೋಪ ಪಟ್ಟಿಯನ್ನು ತಯಾರಿಸಲಾಗಿದೆ.
ಅಧ್ಯಕ್ಷರು ನೇರ ಭಾಗಿ: ಇದೆಲ್ಲಕ್ಕಿಂತ ಹೆಚ್ಚಾಗಿ ಗೋನಾಳ್ ಭೀಮಪ್ಪ ಹಾಗೂ ಮಂಗಳಾ ಶ್ರೀಧರ್ ಸೇರಿದಂತೆ ಹಲವರು ಈ ಹಗರಣದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ಸಿಐಡಿ ಆರೋಪಿಸಿದೆ. ಲಿಖಿತ ಹಾಗೂ ಮೌಖಿಕ ಪರೀಕ್ಷೆ ನಡೆಯುವ ಮುನ್ನಾ ದಿನ ಆಯ್ಕೆಗೊಂಡವರ ಪೈಕಿ ಹಲವರ ಜತೆ ಗೋನಾಳ್ ಭೀಮಪ್ಪ ಹಾಗೂ ಇತರೆ ಸದಸ್ಯರು ದೂರವಾಣಿಯಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ಮಾತನಾಡಿದ್ದಾರೆ. ಅಧ್ಯಕ್ಷರ ಕಚೇರಿ, ಆಪ್ತಸಹಾಯಕರ ದೂರವಾಣಿಗೂ ಈ ಕರೆಗಳು ಬಂದಿವೆ. ಪರೀಕ್ಷೆ ಮುನ್ನಾ ದಿನ ಪರೀಕ್ಷಾರ್ಥಿಯ ಜತೆ ಪರೀಕ್ಷೆ ನಡೆಸುವವರು ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ್ದಕ್ಕಿಂತ ಬೇರೆ ಸಾಕ್ಷಿ ಅವ್ಯವಹಾರ ನಡೆದಿದೆ ಎಂಬುದನ್ನು ಸಾಬೀತು ಮಾಡಲು ಬೇಕಿಲ್ಲ ಎಂದು ಸಿಐಡಿ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಅಭಿಪ್ರಾಯಪಡಲಾಗಿದೆ.
ಇದೆಲ್ಲಕ್ಕಿಂತ ಕುತೂಹಲಕಾರಿ ಸಂಗತಿ ಎಂದರೆ ಲಿಖಿತ ಪರೀಕ್ಷೆ ದಿನ ಪರೀಕ್ಷಾ ಕೊಠಡಿಯಲ್ಲಿ ಇಲ್ಲದೇ ಇರುವ ವ್ಯಕ್ತಿಗೂ ಕೆಲಸ ಸಿಕ್ಕಿದೆ. ಪರೀಕ್ಷೆ ನಡೆದ ಅವಧಿಯಲ್ಲಿ ಆ ವ್ಯಕ್ತಿ ಬೆಂಗಳೂರಿನ ಮಲ್ಲೇಶ್ವರದಲ್ಲಿ ಇದ್ದರು ಎಂಬ ವಿವರವನ್ನು ಮೊಬೈಲ್ ಫೋನ್ ಟವರ್ ಪತ್ತೆ ಹಚ್ಚುವ ಮೂಲಕ ಸಂಗ್ರಹಿಸಲಾಗಿದೆ.
ಜಾತಿ ಮತ್ತು ದುಡ್ಡು : ಆರೋಪಪಟ್ಟಿಯ ಪ್ರಕಾರ ಕೆಪಿಎಸ್‌ಸಿ ನೇಮಕ ಅವ್ಯವಹಾರದಲ್ಲಿ ದುಡ್ಡು ಹಾಗೂ ಜಾತಿ ಭಾರಿ ಪ್ರಮಾಣದಲ್ಲಿ ಕೆಲಸ ಮಾಡಿದೆ. ಬಹು ವರ್ಷಗಳಿಂದ ಕೆಪಿಎಸ್‌ಸಿಯಲ್ಲಿ ಈ ಸಂಪ್ರದಾಯ ಬೆಳೆದು ಬಂದಿದ್ದು, ಇದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ತನಿಖಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಸಿಐಡಿಯ ಉನ್ನತ ಮೂಲಗಳ ಪ್ರಕಾರ ಒಟ್ಟಾರೆಯಾಗಿ ಈ ಹಗರಣದಲ್ಲಿ ಅನಧಿಕೃತವಾಗಿ ರು. 150 ಕೋಟಿ ಕೈ ಬದಲಾಗಿದೆ. ಸ್ವಜನ ಪಕ್ಷಪಾತಿಗಳು, ಅಕಾಡೆಮಿಕ್ ಜ್ಞಾನ ಇಲ್ಲದವರು, ರಾಜಕೀಯ ಪ್ರಭಾವದಿಂದ ಸದಸ್ಯರಾದವರು ಇಂಥ ಅಪಸವ್ಯಕ್ಕೆ ಕಾರಣಾಗಿದ್ದಾರೆ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.

ವಾಪಸಾಯ್ತು ದುಡ್ಡು
ಸಿಐಡಿ ಸಲ್ಲಿಸಿರುವ ವರದಿ ಮತ್ತು ಶಿಫಾರಸನ್ನು ಸರ್ಕಾರ ಒಪ್ಪಿಕೊಳ್ಳುತ್ತಿದ್ದಂತೆಯೇ ಅಕ್ರಮಕ್ಕೆ ಕಾರಣರಾದವರು ಅಭ್ಯರ್ಥಿಗಳಿಂದ ಪಡೆದ ಹಣವನ್ನು ರಹಸ್ಯವಾಗಿ ವಾಪಸ್ ಮಾಡುತ್ತಿದ್ದಾರೆ. ಸರ್ಕಾರ ಮರು ಮೌಲ್ಯಮಾಪನ ಹಾಗೂ ಮರು ಸಂದರ್ಶನಕ್ಕೆ ಒಪ್ಪಿಗೆ ನೀಡಿದೆ. ಆದರೆ ಅವ್ಯವಹಾರದಲ್ಲಿ ಹಣ ಕಳೆದುಕೊಂಡವರು ಈ ಬಗ್ಗೆ ಸಿಐಡಿಗೆ ಇದುವರೆಗೆ ಯಾವುದೇ ದೂರು ನೀಡಿಲ್ಲ. ರಹಸ್ಯವಾಗಿ ಪಡೆದ ಹಣವನ್ನು ವಾಪಸ್ ಮಾಡಲಾಗುತ್ತಿದೆ ಎಂಬ ಮಾಹಿತಿ ಈಗ ಸಿಐಡಿ ಅಧಿಕಾರಿಗಳಿಗೆ ಲಭಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement