ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅಡ್ಡದಾರಿ ಹಿಡಿಯಿತು ಆಧಾರ ಯೋಜನೆ

ಆಧಾರ್ ಗುರುತಿನ ಸಂಖ್ಯೆ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ವ್ಯಾಪಕ ಕಾನೂನು ಸಮರ ನಡೆಯುತ್ತಿದ್ದು, ಒಂದೆಡೆ ಸಂಸತ್‌ನಿಂದ ಗುರುತಿನ ಚೀಟಿಗೆ ಒಪ್ಪಿಗೆ ಪಡೆಯಲಾಗಿಲ್ಲ,...

Srinivasa Murthy VN
Updated On : 25 Sept 2013, 11:55 am

ಸಮಾನತೆ ಹಾಗೂ ಜೀವನದ ಹಕ್ಕನ್ನು ಸಂವಿಧಾನವು ತನ್ನ  ಪ್ರಜೆಗಳಿಗೆ ನೀಡಿದೆ.  ಈ ಆಶೋತ್ತರಗಳನ್ನು ಸಡಿಲಿಸುವ ಆಧಾರ್ ಗುರುತಿನ ಸಂಖ್ಯೆ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ವ್ಯಾಪಕ ಕಾನೂನು ಸಮರ ನಡೆಯುತ್ತಿದೆ. ಒಂದೆಡೆ ಸಂಸತ್‌ನಿಂದ ಗುರುತಿನ ಚೀಟಿಗೆ ಒಪ್ಪಿಗೆ ಪಡೆಯಲಾಗಿಲ್ಲ, ಮತ್ತೊಂದೆಡೆ  ಸಂಸದೀಯ ಸಮಿತಿಯೇ ಯೋಜನೆ ಕುರಿತಂತೆ ತಕರಾರು ಎತ್ತಿದೆ. ಎಲ್ಲವನ್ನೂ ಮುಚ್ಚಿಟ್ಟು ಕೇಂದ್ರ ಈಗಾಗಲೇ 5 ಸಾವಿರ ಕೋಟಿಗೂ ಅಧಿಕ ಹಣ ಖರ್ಚು ಮಾಡಿದೆ. ಅಮೆರಿಕ, ಬ್ರಿಟನ್ ಎನ್ನುವ  ಆಡಳಿತಗಾರರು ಒಮ್ಮೆ ಕಣ್ಣು ತೆರೆದು ನೋಡಬೇಕಿದೆ...

ಕನ್ನಡಪ್ರಭ ವಾರ್ತೆ ಬೆಂಗಳೂರು ಸೆ.24-
ಆರಂಭವಾಗಿ ಮೂರು ವರ್ಷಗಳೇ ಆದರೂ ಆಧಾರ್ ಅವಾಂತರಗಳಿಂದ ದೂರವಾಗಿಲ್ಲ. ಅದಕ್ಕೇ ಜನರೇ ಆಧಾರ್‌ನಿಂದ ದೂರವಾಗಿಬಿಡುತ್ತಿದ್ದಾರೆ.
ಅಡುಗೆ ಅನಿಲದ ಸಬ್ಸಿಡಿ ಹಣ ಪಡೆಯಲು ಆಧಾರ್ ಸಂಖ್ಯೆ ಅನಿವಾರ್ಯ ಎಂದು ಎಲ್ಲೆಡೆ ಆಧಾರ್ ಪಡೆಯಲು ಜನ ಮುನ್ನುಗ್ಗಬೇಕಿತ್ತು. ಆದರೆ, ಆಧಾರ್ ಅಲಕ್ಷ್ಯಕ್ಕೆ ಗುರಿಯಾಗುತ್ತಿದೆ. ನೋಂದಣಿ ಕೇಂದ್ರದ ಅವ್ಯವಸ್ಥೆ. ಆಧಾರ್ ಕೇಂದ್ರಗಳಲ್ಲಿ ಲಂಚವೇ ಆಧಾರವಾಗಿರುವುದು. ಜತೆಗೆ ಜನರಲ್ಲಿರುವ ತಾತ್ಸಾರ, ಅರಿವಿನ ಕೊರತೆಯೇ ಕಾರಣ.
ಆಧಾರ್ ಹೊಣೆ ಹೊತ್ತಿರುವ ಸರ್ಕಾರದ ಇ- ಆಡಳಿತ ಇಲಾಖೆ 15ಮಂದಿಗೂ ಹೆಚ್ಚು ಲಂಚಕೋರರನ್ನು ಸೇವೆಯಿಂದ ಹೊರ ಹಾಕಿದೆ. ಆಧಾರ್ ನೋಂದಾಯಿಸುವ ಗುತ್ತಿಗೆ ಪಡೆದಿದ್ದ ಕಂಪನಿಗಳಿಗೂ ಎಚ್ಚರಿಕೆ ನೀಡಿವೆ. ಆದರೂ ಲಂಚಾವತಾರ ಮಾತ್ರ ನಿಂತಿಲ್ಲ ಎಂದು ಇಲಾಖೆ ಅಧಿಕಾರಿಗಳೇ ಹೇಳುತ್ತಾರೆ.
ಇದರೊಂದಿಗೆ ಸಾವಿರಾರು ಜನರ ಹೆಸರು ನೋಂದಾಯಿಸಿ ವರ್ಷವೇ ಸಮೀಪಿಸಿದರೂ ಕಾರ್ಡ್ ಬಂದಿಲ್ಲ. ಕಾರ್ಡ್ ಬಂದವರಿಗೆ 'ಸದ್ಯದಲ್ಲೇ ಕಾರ್ಡ್‌' ಸಿಗಲಿದೆ ಎಂಬ ಸಂದೇಶ ಬರುವುದು ನಿಂತಿಲ್ಲ! ಆಧಾರ್ ನೋಂದಣಿ ಎಲ್ಲಿ ನಡೆಯುತ್ತಿದೆ ಎನ್ನುವ ಬಗ್ಗೆ ಜನರಿಗೆ ಸರಿಯಾದ ಮಾಹಿತಿಯೂ ಇಲ್ಲ. ಇದರಿಂದಾಗಿ ಕೆಲವು ನೋಂದಣಿ ಕೇಂದ್ರಗಳಲ್ಲಿ ಜನರೇ ಇಲ್ಲ.
ಇನ್ನೂ ವಿಚಿತ್ರವೆಂದರೆ, ಆಧಾರ್ ನೋಂದಣಿಯನ್ನು ಬ್ಯಾಂಕ್‌ಗಳು ಮತ್ತು ಅಂಚೆ ಇಲಾಖೆಯೂ ನಡೆಸುತ್ತಿದ್ದು, ಇಲ್ಲಿ ನೋಂದಣಿಗೆ ಜನರೇ ಬರುತ್ತಿಲ್ಲ. ಆದರೂ ಆಪಾಯಿಂಟ್‌ಮೆಂಟ್‌ಗಳೇ(ಕಾಯ್ದಿರಿಸುವುದು) ಸಿಗುತ್ತಿಲ್ಲ. ಇದರೊಂದಿಗೆ ಬೆಂಗಳೂರಿನಲ್ಲಿ ಕಾಯ್ದಿರಿಸುವ 11 ಕೇಂದ್ರಗಳಿದ್ದರೂ ಅಲ್ಲಿಗೆ ಹೋಗುವವರೇ ಗತಿ ಇಲ್ಲ.
ಇಷ್ಟೆಲ್ಲಾ ಅವಾಂತರದಲ್ಲಿರುವ ಆಧಾರ್ ಮುಂದಿನ ವರ್ಷ ಮಾರ್ಚ್ 31ರ ವೇಳೆಗೆ ಪೂರ್ಣಗೊಳ್ಳಬೇಕಿದ್ದು,  ವಷಾಂತ್ಯಕ್ಕೆ ರಾಜ್ಯದ 6.1ಕೋಟಿ ಜನರಿಗೂ ಆಧಾರ್ ಕಾರ್ಡ್ ಹಂಚಿಕೆ ಪೂರ್ಣಗೊಳಿಸಬೇಕಿದೆ. ಇದು ಹೇಗೆ ಸಾಧ್ಯ ಎಂದು ಅಧಿಕಾರಿಗಳು ಚಿಂತೆಗೆ ಸಿಲುಕಿದ್ದಾರೆ.

ಗ್ರಾಮೀಣ ಭಾಗದಲ್ಲಿ ಭಾರೀ ಕಷ್ಟ:
ಆಧಾರ್ ಕಾರ್ಡ್ ಎಲ್ಲಾ ಸೌಲಭ್ಯಗಳಿಗೂ ಆಧಾರ ಎಂದು ಕೇಂದ್ರ ಸರ್ಕಾರ 2010ರಲ್ಲಿ ಆಧಾರ್ ಪರಿಚಯಿಸಿತು. ಆರಂಭಿಕ 9 ತಿಂಗಳಲ್ಲಿ ಮೈಸೂರು ಮತ್ತು ತುಮಕೂರಿನಲ್ಲಿ ಭಾಗಶಃ ನೋಂದಣಿಯಾಗಿತ್ತು. ನಂತರ ಕೇಂದ್ರದ ಗೊಂದಲದ ನೀತಿಯಿಂದ ಯೋಜನೆ ಕೊಂಚ ಸ್ಥಗಿತವಾಗಿತ್ತು. ಮತ್ತೆ ಆರಂಭವಾಗಿದ್ದು ಕಳೆದ ಜನವರಿಯಲ್ಲಿ. ಸದ್ಯ ರಾಜ್ಯದಲ್ಲಿ 2900 ಕೇಂದ್ರಗಳಲ್ಲಿ ನೋಂದಣಿಯಾಗುತ್ತಿದೆ. ಆದರಲ್ಲಿ 500ಕ್ಕೂ ಹೆಚ್ಚು ಕೇಂದ್ರಗಳು ಬೆಂಗಳೂರಿನಲ್ಲೇ ಇವೆ. ಆದರೆ, ಗ್ರಾಮೀಣ ಭಾಗದಲ್ಲಿ ಹೋಬಳಿಗೆ ಒಂದು ಇರುವುದೂ ಕಷ್ಟ. ಹೀಗಾಗಿ ಈತನಕ ರಾಜ್ಯದಲ್ಲಿ 3.6 ಕೋಟಿ ಮಂದಿಯನ್ನು ಆಧಾರ್ ವ್ಯಾಪ್ತಿಗೆ ಸೇರಿಸಲಾಗಿದ್ದು, ಬಹುತೇಕ ಮಂದಿಗೆ ಇನ್ನೂ ಕಾರ್ಡ್ ಸಿಕ್ಕಿಲ್ಲ. ಉಳಿದ 3 ಕೋಟಿ ಜನರನ್ನು ಆಧಾರ್ ವ್ಯಾಪ್ತಿಗೆ ತಂದು ಕಾರ್ಡ್ ಹಂಚಿಕೆ ಮಾಡಬೇಕಿದೆ.

 ಇ-ಆಧಾರ್ ಗೊತ್ತಿಲ್ಲ
ಆಧಾರ್‌ಗಾಗಿ ಹೆಸರು ನೋಂದಾಯಿಸಿದ ನಂತರ ನೀವು ಕಾರ್ಡ್‌ಗಾಗಿ ಅಲೆಯಬೇಕಿಲ್ಲ. ನೀವೇ ಆಧಾರ್ ಕಾರ್ಡ್ ಪಡೆಯಬಹುದು. www.ceguid.karnataka.gov.in ಎಂಬ ಆಧಾರ್ ಪೋರ್ಟಲ್‌ಗೆ ಭೇಟಿ ನೀಡಬೇಕು. ಅಲ್ಲಿ ಇಐಡಿ ನಂಬರ್ ನಮೂದಿಸಿದರೆ ಡಿಜಿಟಲ್ ಪ್ರಿಂಟ್ ಇರುವ ಆಧಾರ್ ಪತ್ರ ಸಿಗುತ್ತದೆ. ಅದೇ ನಿಜವಾದ ಆಧಾರ್ ಕಾರ್ಡ್. ಅದನ್ನೇ ಲ್ಯಾಮಿನೇಷನ್ ಮಾಡಿಸಿ ಬಳಸಬಹುದು. ಇದು ಬಹಳ ಸುಲಭ ವಿಧಾನವಾಗಿದ್ದು, ಸೌಲಭ್ಯ ಇರುವವರು ಇದನ್ನು ಸದ್ಬಳಕೆ ಮಾಡಿಕೊಳ್ಳಬಹುದು ಎಂದು ಇ- ಆಡಳಿತದ ಮಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಆಧಾರ್ ರಿಜಿಸ್ಟ್ರಾರ್ ಆದ ಡಾ.ಡಿ.ಎಸ್. ರವೀಂದ್ರನ್ ಹೇಳಿದ್ದಾರೆ.

ಸುಳ್ಳಿನ ಕಂತೆ ಮೇಲೆ ಆಶಾಗೋಪುರ
-ರಾಜೀವ ಹೆಗಡೆ
ಬೆಂಗಳೂರು:
ಕಾನೂನು ಬದ್ಧತೆಯಿಲ್ಲ, ಆದರೆ, ಕಡ್ಡಾಯ ಎಂಬ ಗಾಸಿಪ್. ಸರ್ಕಾರದ ಯಾವುದೇ ಸೇವೆಗಳಿಗೆ ಈ ಕಾರ್ಡ್ ಇಲ್ಲದೇ ಹಣವಿಲ್ಲ, ಈ ಕಾರ್ಡ್ ಒಂದಿದ್ದರೆ ಭಾರತದಲ್ಲಿ ಯಾವುದೇ ಸೇವೆ ಪಡೆಯಬಹುದು... ಇಂತಹ ಸುಳ್ಳಿನ ಗೋಪುರದ ಮೇಲೆ ವಿಶ್ವದ ಮಹಾ ಅದ್ಭುತಗಳಲ್ಲೊಂದು ಎಂದು ಬಿಂಬಿಸಲಾಗಿದೆ. ಆದರೆ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಆಧಾರ್ ಕಾರ್ಡ್ ಯೋಜನೆ ಅಡ್ಡದಾರಿ ಹಿಡಿಯುತ್ತಿದೆ. ಈ ಸತ್ಯವು ಸುಪ್ರೀಂ ಕೋರ್ಟ್ ಮುಂದೆಯೇ ಸೋಮವಾರ ಅನಾವರಣವಾಗಿದೆ. ಆಧಾರ್ ಇಲ್ಲದೇ ಬದುಕಿಲ್ಲ ಎಂದು ಕೇಂದ್ರ ಹಾಗೂ ಬಹುತೇಕ ರಾಜ್ಯ ಸರ್ಕಾರಗಳು ಬೊಬ್ಬೆ ಹಾಕುತ್ತಿದ್ದವು. ಕೆಲ ರಾಜ್ಯಗಳಲ್ಲಿ ಎಲ್ಲ ಸರ್ಕಾರಿ ಸೇವೆಗಳಿಗೆ ಆಧಾರ್ ಗುರುತಿನ ಸಂಖ್ಯೆಯನ್ನು ಕಡ್ಡಾಯ ಮಾಡಲಾಗಿತ್ತು.
ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಇದು ತುಸು ಹೆಚ್ಚಾಗಿಯೇ ಅನುಷ್ಠಾನಕ್ಕೆ ಬಂದಿತ್ತು. ಆದರೆ ಸುಪ್ರೀಂ ಕೋರ್ಟ್‌ನ ಛಾಟಿಯೇಟಿನ ಬಳಿಕ ಆಧಾರ್ ಗುರುತಿನ ಸಂಖ್ಯೆಯ ಬಗೆಗಿನ ಸಾಕಷ್ಟು ಗೊಂದಲ ಹಾಗೂ ಅಕ್ರಮಗಳ ಬಗ್ಗೆ ಮತ್ತಷ್ಟು ರೆಕ್ಕೆಪುಕ್ಕಗಳು ಸೇರಿಕೊಳ್ಳುತ್ತಿವೆ. ಈಗಾಗಲೇ ಭಾರತದಲ್ಲಿ ಸುಮಾರು 45 ಕೋಟಿಗೂ ಅಧಿಕ ಜನರು ಆಧಾರ್ ಗುರುತಿನ ಸಂಖ್ಯೆಗೆ ನೋಂದಣಿಯಾಗಿದ್ದಾರೆ. ಇತ್ತೀಚಿನ ಬೆಳವಣಿಗೆ ನೋಡಿದರೆ ಮಾಹಿತಿ ನೀಡಿ ಜನ ಮಂಕಾದರೋ ಎಂದೆನಿಸುತ್ತಿದೆ.
ಇದಲ್ಲದೇ ಆಧಾರ್ ಗುರುತಿನ ಚೀಟಿ ಹಂಚಿಕೆ ವಿಚಾರದಲ್ಲಿ ಸಾಕಷ್ಟು ಗೋಲ್‌ಮಾಲ್ ನಡೆದಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ನಿಮಗೊಂದು ವಿಚಾರ ತಿಳಿದಿರಲಿ, ನಿಮ್ಮ ಕೈನಲ್ಲಿರುವ ಪ್ರತಿ ಆಧಾರ್ ಗುರುತಿನ ಚೀಟಿಗಾಗಿ ಕೇಂದ್ರ ಸರ್ಕಾರ 350 ಖರ್ಚು ಮಾಡುತ್ತಿದೆ. ಇದರಲ್ಲಿ 150 ನೋಂದಣಿಗಾಗಿಯೇ ಖರ್ಚಾಗುತ್ತಿದೆ! ಭಾರತದ ಸಂವಿಧಾನಕ್ಕೆ ವಿರೋಧವಾಗಿ, ಸಂಸತ್‌ನ ಅಭಿಪ್ರಾಯವನ್ನು ತಾತ್ಸಾರ ಮಾಡಿ ದೇಶದ ಜನತೆಗೆ ನೀಡಿದ 'ದೊಡ್ಡ ಉಡುಗೊರೆ' ಈ ಆಧಾರ್ ಗುರುತಿನ ಸಂಖ್ಯೆ. ಹಣಕಾಸು ಇಲಾಖೆಯ ಮೇಲಿನ ಸಂಸದೀಯ ಸಮಿತಿಯ ವಿರೋಧದ ನಡುವೆ ದೇಶದ 45 ಕೋಟಿ ಜನತೆಗೆ ಆಧಾರ್ ಸಂಖ್ಯೆ ಮೂಲಕ ಹುಚ್ಚು ಹಿಡಿಸಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಸಂವಿಧಾನದ 14 ಹಾಗೂ 21ನೇ ಕಲಂನ್ನು ಉಲ್ಲಂಘಿಸುವ ಆಧಾರ್ ಗುರುತಿನ ಸಂಖ್ಯೆ ಕುರಿತಂತೆ ಸಂಸತ್‌ನ ಆಶೋತ್ತರಗಳನ್ನು ಲಕ್ಷಿಸದೇ ಜನರಿಗೆ ಟೋಪಿ ಹಾಕುತ್ತಿರುವುದು ಬೇಸರ ತರಿಸಿದೆ. ಕೇಂದ್ರ ಸರ್ಕಾರದ ಇಂತಹ ತರಾತುರಿ ನಿರ್ಧಾರಗಳೇ ಸಂಶಯಕ್ಕೆ ಕಾರಣವಾಗಿವೆ. ಇದೇ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ಮಾಡುತ್ತಿದ್ದೇವೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರ ನ್ಯಾ.ಕೆ.ಎಸ್. ಪುಟ್ಟಸ್ವಾಮಿ ಕಿಡಿಕಾರಿದ್ದಾರೆ.

ಕಡ್ಡಾಯ ವರ್ಸಸ್ ಐಚ್ಛಿಕ: ಆಧಾರ್ ಗುರುತಿನ ಸಂಖ್ಯೆ ಇರದಿದ್ದರೇ ಸಂಬಳ ನೀಡುವುದಿಲ್ಲ. ಮದುವೆ ನೋಂದಣಿ ಮಾಡುವುದಿಲ್ಲ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹಣ ಬಿಡುಗಡೆ ಮಾಡುವುದಿಲ್ಲ. ಎಲ್‌ಪಿಜಿಯ ಸಬ್ಸಿಡಿ ಹಣ ನೀಡುವುದಿಲ್ಲ. ಸರ್ಕಾರದ ಯಾವುದೆ ಸಬ್ಸಿಡಿ ಹಣ ಪಡೆಯಲು ಆಧಾರ್ ಸಂಖ್ಯೆ ಕಡ್ಡಾಯ.
ಇಂತಹ ಹತ್ತಾರು ವಿಚಾರಗಳನ್ನು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಭರ್ಜರಿ ಪ್ರಚಾರ ನೀಡಿದವು. ಆದರೆ ಸುಪ್ರೀಂ ಕೋರ್ಟ್‌ನಲ್ಲಿ ನೀಡಿದ ಹೇಳಿಕೆ ನೋಡಿದರೆ ಆಧಾರ್ ಗುರುತಿನ ಅಗತ್ಯದ ಬಗ್ಗೆ ಗೊಂದಲ ಕಾಣುತ್ತಿದೆ ಎಂದು ಹಿರಿಯ ವಕೀಲ ಹಾಗೂ ಆಧಾರ್ ಕುರಿತಂತೆ ಅಧ್ಯಯನ ಮಾಡಿರುವ ವೆಂಕಟೇಶ್‌ಮೂರ್ತಿ ಹೇಳುತ್ತಾರೆ. ಮಹಾರಾಷ್ಟ್ರದಲ್ಲಿ ಸರ್ಕಾರಿ ನೌಕರರ ಸಂಬಳಕ್ಕಾಗಿ ಆಧಾರ್ ಕಡ್ಡಾಯ ಮಾಡಿರುವುದು ಎಲ್ಲರಿಗೂ ತಿಳಿದ ವಿಚಾರ. ವಿಪರ್ಯಾಸವೆಂದರೆ ಕರ್ನಾಟಕದಲ್ಲಿಯೂ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಹಿಂಬಾಗಿಲಿನ ಮೂಲಕ ಈಗಾಗಲೇ ಆಧಾರ್ ಗುರುತು ಸಂಖ್ಯೆಯನ್ನು ಕಡ್ಡಾಯ ಮಾಡಲಾಗಿದೆ.

ತಿದ್ದು ಪಡಿ ಅರ್ಜಿ; ಮೊಯ್ಲಿ
ನವದೆಹಲಿ:
ಆಧಾರ್ ಸಂಬಂಧ ಸೋಮವಾರ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು 'ತಿದ್ದುಪಡಿ' ಮಾಡುವ ಸಂಬಂಧ ಅರ್ಜಿ ಸಲ್ಲಿಸಲಾಗುತ್ತದೆ ಎಂದು ಕೇಂದ್ರ ತೈಲ ಸಚಿವ ವೀರಪ್ಪ ಮೊಯ್ಲಿ ಹೇಳಿದ್ದಾರೆ. ಸಾಲಿಸಿಟರ್ ಜನರಲ್ ಮೋಹನ್ ಪರಾಸರಣ್ ಅವರೊಂದಿಗೆ ಈ ಸಂಬಂಧ ಮಾತುಕತೆ ನಡೆಸಿದ್ದೇನೆ ಎಂದಿದ್ದಾರೆ. ಇದೇ ವೇಳೆ ನೇರ ನಗದು ಸೌಲಭ್ಯ ವರ್ಗಾವಣೆ ಹಾಗೆಯೇ ಮುಂದುವರಿಯುತ್ತದೆ, ಇದನ್ನು ಸ್ಥಗಿತಗೊಳಿಸುವ ಇಂಗಿತವಿಲ್ಲ ಎಂದಿದ್ದಾರೆ. ಈ ಮಧ್ಯೆ ಚಳಿಗಾಲದ ಅಧಿವೇಶನದಲ್ಲಿ ಆಧಾರ್‌ಗೆ ಸಾಂವಿಧಾನಿಕ ಮಾನ್ಯತೆಗೆ ಯತ್ನಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

 ಏನೆಲ್ಲಾ ಸುಧಾರಣೆ ಬೇಕು?

- ಶಿವಕುಮಾರ್ ಬೆಳ್ಳಿತಟ್ಟೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement