ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅಪರಾಧಿ ಜನಪ್ರತಿನಿಧಿಗಳ ಬಚಾವಿಗೆ ಸುಗ್ರೀವಾಜ್ಞೆ

'ದೋಷಿ' ಸಂಸದರು, ಶಾಸಕರು ಇನ್ನು ಮುಂದೆ ನಿರಾಳವಾಗಿರಬಹುದು! ಏಕೆಂದರೆ ಕೇಂದ್ರ ಸರ್ಕಾರ ಅವರ ರಕ್ಷಣೆಗಾಗಿ ಸುಪ್ರೀಂಕೋರ್ಟ್‌ನ ತೀರ್ಪನ್ನೇ ನಿಸ್ಸಾರಗೊಳಿಸುವ..

Srinivasa Murthy VN
Updated On : 25 Sept 2013, 11:56 am

ಪಿಟಿಐ ನವದೆಹಲಿ ಸೆ.24-
'ದೋಷಿ' ಸಂಸದರು, ಶಾಸಕರು ಇನ್ನು ಮುಂದೆ ನಿರಾಳವಾಗಿರಬಹುದು...!
ಏಕೆಂದರೆ ಕೇಂದ್ರ ಸರ್ಕಾರ ಅವರ ರಕ್ಷಣೆಗಾಗಿ ಸುಪ್ರೀಂಕೋರ್ಟ್‌ನ ತೀರ್ಪನ್ನೇ ನಿಸ್ಸಾರಗೊಳಿಸುವ ಸುಗ್ರೀವಾಜ್ಞೆ ಜಾರಿಗೆ ತಂದಿದೆ. ಮಂಗಳವಾರ ಸಂಜೆ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪ್ರಜಾಪ್ರಾತಿನಿಧ್ಯ ಮಸೂದೆಯನ್ನು ಸುಗ್ರೀವಾಜ್ಞೆಯಾಗಿ ಮಾರ್ಪಾಡು ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಪ್ರಕರಣವೊಂದರಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿ 2 ವರ್ಷಕ್ಕಿಂತ ಹೆಚ್ಚು ಶಿಕ್ಷೆಗೆ ಗುರಿಯಾಗಿದ್ದರೆ ಅಂಥವರನ್ನು ದೋಷಿ ಎಂಬ ತೀರ್ಪು ಬಂದ ತಕ್ಷಣದಿಂದಲೇ ಶಾಸಕತ್ವ ಅಥವಾ ಸಂಸದ ಸ್ಥಾನದಿಂದ ಅನರ್ಹಗೊಳಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.
ಕಳೆದ ಮುಂಗಾರು ಅಧಿವೇಶನದಲ್ಲೇ ಈ ತೀರ್ಪನ್ನು ನಿಸ್ಸಾರಗೊಳಿಸುವ ಸಲುವಾಗಿ ತರಾತುರಿಯಲ್ಲಿ ಪ್ರಜಾಪ್ರಾತಿನಿಧ್ಯ ಕಾಯ್ದೆಯ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿತ್ತಾದರೂ, ಲೋಕಸಭೆಯಲ್ಲಿ ಮಂಡನೆ ಮಾಡದೇ ಕೈಕೈ ಹಿಸುಕಿಕೊಂಡಿತ್ತು.
ಇದೀಗ ಪ್ರಕರಣವೊಂದರ ಸಂಬಂಧ ಕಾಂಗ್ರೆಸ್ ರಾಜ್ಯಸಭಾ ಸಂಸದ ರಶೀದ್ ಮಸೂದ್ ತಪ್ಪಿತಸ್ಥರೆಂದು ಸಿಬಿಐ ನ್ಯಾಯಾಲಯವೊಂದು ತೀರ್ಪು ನೀಡಿತ್ತು. ಮುಂದಿನ ತಿಂಗಳು ಇದೇ ನ್ಯಾಯಾಲಯ ಇವರ ಶಿಕ್ಷೆ ಪ್ರಮಾಣ ಘೋಷಿಸಲಿತ್ತು. ಈ ತೀರ್ಪಿನ ನಂತರ ಅವರು ಸಂಸದ ಸ್ಥಾನ ಕಳೆದುಕೊಳ್ಳಲಿದ್ದಾರೆ. ಹೀಗಾಗಿ ಇವರನ್ನು ಪಾರು ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ತಿದ್ದುಪಡಿ ಮಸೂದೆಯನ್ನು ಸುಗ್ರೀವಾಜ್ಞೆಯಾಗಿ ಜಾರಿಗೆ ತಂದು ಕಾನೂನು ಮಾಡಿದೆ.
ಹೊಸ ಸುಗ್ರೀವಾಜ್ಞೆ ಪ್ರಕಾರ 'ತಪ್ಪಿತಸ್ಥ' ಶಾಸಕರು ಮತ್ತು ಸಂಸದರು ಅನರ್ಹತೆಯ ಭಯವಿಲ್ಲದೇ ಬದುಕಬಹುದಾಗಿದೆ. ಆದರೆ ಇವರಿಗೆ ಸಂಸತ್‌ನಲ್ಲಿ ಮತದಾನದ ಅಧಿಕಾರ ಮತ್ತು ವೇತನ ಭತ್ಯೆಗಳು ದೊರೆಯುವುದಿಲ್ಲ.

ಹಿಂಬಾಗಿಲ ಯತ್ನ ನಡೆಸುತ್ತಿಲ್ಲ
ಪಕ್ಷದ ಶಾಸಕರು ಮತ್ತು ಸಂಸದರನ್ನು ಉಳಿಸುವ ಸಲುವಾಗಿ ಪ್ರಜಾಪ್ರಾತಿನಿಧ್ಯ ತಿದ್ದುಪಡಿ ಮಸೂದೆಯನ್ನು ತರಾತುರಿಯಲ್ಲಿ ಸುಗ್ರೀವಾಜ್ಞೆ ಮೂಲಕ ಕಾನೂನು ಮಾಡಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ. ರಾಜ್ಯಸಭಾ ಸದಸ್ಯ ರಶೀದ್ ಮಸೂದ್ ಅವರನ್ನು ಉಳಿಸುವ ಸಲುವಾಗಿ ಹಿಂಬಾಗಿಲ ಮೂಲಕ ಈ ನಿರ್ಧಾರ ಕೈಗೊಂಡಿಲ್ಲ ಎಂದು ಪಕ್ಷದ ವಕ್ತಾರ ಪಿ.ಸಿ. ಚಾಕೋ ಅವರು ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement