ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಾಂಗ್ರೆಸ್ ಬತ್ತಲಾರದ ಪಾವನಗಂಗೆ

ಕಾಂಗ್ರೆಸ್ ಬತ್ತಲಾರದ ಗಂಗೆ ಇದ್ದಂತೆ. ಆ ನದಿಯಲ್ಲಿ ಎಷ್ಟೇ ಕಲ್ಮಶ ಇದ್ದರೂ ಪವಿತ್ರ ಎಂದು ಭಾವಿಸಿ ಅದರಲ್ಲಿ ಮುಳುಗಿ ಏಳುವ ಜನರ ಸಂಖ್ಯೆ ಕಡಿಮೆಯಾಗದು. ಕಾಂಗ್ರೆಸ್ ಸಹ ಅದೇ ರೀತಿ.

ಡಾ.ಯು.ಆರ್.ಅನಂತಮೂರ್ತಿ
Srinivasa Murthy VN
Updated On : 25 Sept 2013, 12:00 pm

- ಹಗರಣ ನಡೆದರೂ ಬಡವರ ಪ್ರೀತಿ ಕೇಂದ್ರ ಸರ್ಕಾರದ ಮೇಲೆಯೇ ಇದೆ

ಕನ್ನಡಪ್ರಭವಾರ್ತೆ ಬೆಂಗಳೂರು ಸೆ. 24
-
ಕಾಂಗ್ರೆಸ್ ಬತ್ತಲಾರದ ಗಂಗೆ ಇದ್ದಂತೆ. ಆ ನದಿಯಲ್ಲಿ ಎಷ್ಟೇ ಕಲ್ಮಶ ಇದ್ದರೂ ಪವಿತ್ರ ಎಂದು ಭಾವಿಸಿ ಅದರಲ್ಲಿ ಮುಳುಗಿ ಏಳುವ ಜನರ ಸಂಖ್ಯೆ ಕಡಿಮೆಯಾಗದು. ಕಾಂಗ್ರೆಸ್ ಸಹ ಅದೇ ರೀತಿ. ಕೇಂದ್ರದಲ್ಲಿನ ಯುಪಿಎ ನೇತೃತ್ವದ ಸರ್ಕಾರ ನಾನಾ ಹಗರಣಗಳಲ್ಲಿ ಭಾಗಿಯಾಗಿದ್ದರೂ ಬಡವರ ಬಗ್ಗೆ ಆ ಪಕ್ಷಕ್ಕೆ ಪ್ರೀತಿ ಇದೆ. ಜನರಿಗೂ ಒಲವಿದೆ...
ಇದು ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಅವರ ಅಭಿಪ್ರಾಯ. ಕಾಂಗ್ರೆಸ್‌ಗೆ ತನ್ನದೇ ಆದ ಇತಿಹಾಸವಿದೆ. ಆದರೆ, ಬಿಜೆಪಿಯಲ್ಲಿ ಯಾವ ನೆನಪುಗಳೂ ಇಲ್ಲ ಎಂಬುದು ಅವರ ಅನಿಸಿಕೆ.
ಬೆಂಗಳೂರು ಪ್ರೆಸ್ ಕ್ಲಬ್ ಹಾಗೂ ವರದಿಗಾರರ ಕೂಟ ಆಯೋಜಿಸಿದ್ದ ಜಂಟಿ ಮಾಧ್ಯಮ ಸಂವಾದದಲ್ಲಿ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿರುವ ಅವರು ಎಂದಿನಂತೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಮೋದಿಯವರನ್ನು ಟೀಕಿಸಿದ್ದಾರೆ. ಈಗಿನ ಸನ್ನಿವೇಶದಲ್ಲಿ ನಾನು ಕಾಂಗ್ರೆಸ್‌ನ್ನು ಸಮರ್ಥಿಸಲಾರೆ. ಆದರೆ, ಕಾಂಗ್ರೆಸ್ ಬತ್ತಲಾರದ ಗಂಗೆ ಎಂದಿದ್ದಾರೆ.

ಇದರಲ್ಲಿ ಕೊಳೆಯೂ ಇದೆ. ಪಾವಿತ್ರ್ಯವೂ ಇದೆ. ಜತೆಗೆ ಬಡವರ ಬಗ್ಗೆ ಕಾಂಗ್ರೆಸ್‌ಗೆ ಪ್ರೀತಿ ಇದೆ. ಎಷ್ಟೇ ಗೊಂದಲಗಳಿದ್ದರೂ ಬದಲಾವಣೆಯನ್ನು ಇಲ್ಲಿಂದಲೇ ನಿರೀಕ್ಷಿಸಬಹುದು' ಎನ್ನುವ ಮೂಲಕ ಕಾಂಗ್ರೆಸ್‌ಗೆ ಪಾವಿತ್ರ್ಯತೆಯ ಬಿರುದು ನೀಡಿದ್ದಾರೆ.
ನಾಯಕತ್ವವಿಲ್ಲ: ಹಾಗಂತ ನಾನು ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರನ್ನೂ ಸಮರ್ಥಿಸಿಕೊಳ್ಳುವುದಿಲ್ಲ. ಕಳೆದ 9 ವರ್ಷಗಳಿಂದ ಕಾಂಗ್ರೆಸ್ ಆಡಳಿತಾವಧಿ ಕಾಲದಲ್ಲಿ ನಡೆದ ಭ್ರಷ್ಟಾಚಾರವನ್ನು ಸಮರ್ಥಿಸುವುದಿಲ್ಲ. ನಿಜ ಹೇಳಬೇಕೆಂದರೆ ದೇಶಕ್ಕೆ ಬೇಕಾದ ರಾಷ್ಟ್ರೀಯ ನಾಯಕತ್ವ ಯಾವ ಪಕ್ಷದಲ್ಲೂ ಇಲ್ಲ. ಸರ್ದಾರ್ ವಲ್ಲಭ್ ಬಾಯ್ ಪಟೇಲ್, ಜವಾಹರಲಾಲ್ ನೆಹರೂ, ಸುಭಾಷ್‌ಚಂದ್ರ ಬೋಸ್‌ರಂಥ ನಾಯಕತ್ವವಿಲ್ಲ. ಅಷ್ಟೇ ಏಕೆ ಮುಸ್ಲಿಮರು ಹಾಗೂ ದಲಿತರಿಗೂ ಸೂಕ್ತ ನಾಯಕತ್ವವಿಲ್ಲ. ಅಂಬೇಡ್ಕರ್ ನಂತರ ದಲಿತರಿಗೆ ಸೂಕ್ತ ನಾಯಕತ್ವವೇ ದೊರಕಿಲ್ಲ ಎಂದು ವ್ಯಾಖ್ಯಾನಿಸಿದರು.
ನಾನು ಮೋದಿ ಈ ದೇಶದ ಪ್ರಧಾನಿಯಾಗುವುದನ್ನು ವಿರೋಧಿಸುತ್ತೇನೆ. ಈ ಕಾರಣಕ್ಕಾಗಿಯೇ ಮೋದಿ ಪ್ರಧಾನಿಯಾಗುವ ದೇಶದಲ್ಲಿ ನಾನು ಬದುಕುವುದಕ್ಕೆ ಇಚ್ಛಿಸುವುದಿಲ್ಲ ಎಂದಿದ್ದೇನೆ. ಆದರೆ ದೇಶ ಬಿಟ್ಟು ಹೋಗುತ್ತೇನೆ ಎಂದಿಲ್ಲ. ಅದೇ ರೀತಿ ರಾಹುಲ್ ಗಾಂಧಿ, ಜಯಲಲಿತಾ ಅವರಿಗೂ ದೇಶದ ಪ್ರಧಾನಿಯಾಗುವ ಅರ್ಹತೆ ಇಲ್ಲ ಎಂದು ಅಭಿಪ್ರಾಯಪಟ್ಟರು.
ಮೋದಿ ಪ್ರಧಾನಿ ಹುದ್ದೆ ಏರುವುದಕ್ಕೆ ವಿಳಂಬ ಮಾಡುತ್ತಿಲ್ಲ. ಹೀಗಾಗಿ ಅವರನ್ನು ಟೀಕಿಸುವುದಕ್ಕೂ ನಾನು ವಿಳಂಬ ಮಾಡುವುದಿಲ್ಲ. ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ಚುನಾವಣೆ ನಡೆದು ಬಹುಮತ ಬಂದ ನಂತರ ಪ್ರಧಾನಿ ಆಯ್ಕೆ ಪ್ರಕ್ರಿಯೆ ನಡೆಯಬೇಕು. ಆದರೆ ಅಧ್ಯಕ್ಷಿಯ ಚುನಾವಣೆಯ ರೀತಿಯಲ್ಲಿ ಮೋದಿಯನ್ನು ಬಿಂಬಿಸಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಮಾಧ್ಯಮಗಳೂ ವಿಪರೀತವಾಗಿ ಬಲಪಂಥೀಯ ಧೋರಣೆಯನ್ನು ತಾಳುತ್ತಿರುವುದು ನನ್ನಲ್ಲಿ ಕಳವಳ ಸೃಷ್ಟಿಸಿದೆ. ಈ ಎಲ್ಲ ಸತ್ಯವನ್ನು ಹೇಳುವುದಕ್ಕೆ ನನಗೆ ಯಾವ ಭಯವೂ ಇಲ್ಲ. ಧನವಂತರು ಸತ್ಯ ಹೇಳುವುದಿಲ್ಲ. ಸತ್ಯ ಹೇಳುವುದಕ್ಕಾಗಿ ನಾನು ಮರ್ಯಾದೆ ಬಿಡುತ್ತೇನೆ. ಹಲವು ಸಂದರ್ಭದಲ್ಲಿ ನಾನು ಪೆಕರನಂತೆ ಸತ್ಯವನ್ನು ಹೇಳುತ್ತೇನೆ. ಇದನ್ನೆಲ್ಲ ಲೇಖಕರು ಹೇಳದೆ ಇನ್ಯಾರು ಹೇಳಬೇಕು ಎಂದು ಅಭಿಪ್ರಾಯಪಟ್ಟರು.
ನನಗೆ ಮೋದಿಯ ಬಗ್ಗೆ ಭಯವಿಲ್ಲ. ಅವರ ಬಗ್ಗೆ ಮಾತನಾಡುವುದಕ್ಕೆ ಅಂಜಿಕೆಯೂ ಇಲ್ಲ. ಆದರೆ ಅತ್ಯಂತ ಸಣ್ಣ ಗಾಣಿಗ ಜನಾಂಗದಿಂದ ಬಂದ ಮೋದಿ ಈ ದೇಶದ ಪ್ರಧಾನಿ ಅಭ್ಯರ್ಥಿಯಾಗಿ ಬೆಳೆದಿರುವ ಬಗ್ಗೆ ಹೆಮ್ಮೆ ಇದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಕ್ಕೂ ನನಗೆ ಇದೆ ಬಗೆಯ ಪ್ರೀತಿ ಇದೆ. ಇದು ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಸೊಬಗು ಎಂದರು.

ದೀನ ದಲಿತರನ್ನು ತಲುಪಬೇಕು: ಸರ್ಕಾರದ ಯೋಜನೆಗಳು ದೀನದರಿದ್ರರನ್ನು ತಲುಪಬೇಕು. ನಿಜವಾದ ರಾಜಕೀಯ ಅನ್ವೇಷಣೆ ಇರುವುದು ಇಂಥದ್ದರಲ್ಲಿ. ರಾಜಕಾರಣಿಯಲ್ಲದವನು ರಾಜಕಾರಣಕ್ಕೆ ಬಂದಾಗ ಇಂಥದ್ದು ಸಾಧ್ಯ. ಆದರೆ ಮೋದಿಯದು ಇಂಥ ರಾಜಕಾರಣವಲ್ಲ. ಅವರದ್ದು ವಿಭಜಕ ನೀತಿ. ಸರ್ಕಾರದ ಪರಿಧಿಯಲ್ಲಿ ಬಡವರು ಬರಬೇಕೆ ವಿನಾ ದೊಡ್ಡ ದೊಡ್ಡ ಕಟ್ಟಡಗಳು, ಉದ್ದಿಮೆಗಳ ನಿರ್ಮಾಣವಲ್ಲ. ಮೋದಿಯ ಅಭಿವೃದ್ಧಿಯ ಕಲ್ಪನೆ ಈ ತೆರದ್ದಾಗಿದೆ ಎಂದರು.
ನಮಗೆ ಬೇಕಾಗಿರುವುದು ಅಭಿವೃದ್ಧಿಯಲ್ಲ, ಸರ್ವೋದಯ. ಕೆಲವೊಮ್ಮೆ ಸಂಪತ್ತು, ಅಭಿವೃದ್ಧಿ ಹತಾಶೆಯನ್ನು ಮೂಡಿಸುತ್ತದೆ. ಮನುಷ್ಯತವ್ವವನ್ನು ಕೊಲ್ಲುತ್ತದೆ. ಭೂಮಿ ನಾಶವಾಗುತ್ತದೆ. ಬೆಂಗಳೂರು ಹಾಳಾಗಿರುವುದು ಇಂಥ ಸಂಪತ್ತನ್ನು ನೀಡುವ ಐಟಿ ಉದ್ಯಮದಿಂದ. ಜಡಭರತತ್ವವನ್ನು ಕೊಂಡಾಡಿದ ದೇಶದಲ್ಲಿ ಸುಖಕ್ಕಿಂತ ನೆಮ್ಮದಿ ಮುಖ್ಯ. ಮೋದಿಯ ಅಭಿವೃದ್ಧಿ ಪಥದಲ್ಲಿ ಇದನ್ನು ನಿರೀಕ್ಷಿಸುವುದಕ್ಕೆ ಸಾಧ್ಯವಿಲ್ಲ . ಇಂಥ ನೆಮ್ಮದಿ ತರುವ ಮುಖ ಕಾಂಗ್ರೆಸ್‌ನಲ್ಲಿದ್ದರೂ ಬಹಳ ಸಂತೋಷ ಎಂದು ಅಭಿಪ್ರಾಯಪಟ್ಟರು.

ಹೆಣ್ಣು ಮಕ್ಕಳೆಂದರೆ ಇಷ್ಟ: ನಮ್ಮ ದೇಶದಲ್ಲಿ ಸಾಮೂಹಿಕ ಹತ್ಯಾಕಾಂಡವಾದಾಗ ಅದಕ್ಕೆ ಕಾರಣರಾದವರಿಗೆ ಶಿಕ್ಷೆಯಾಗುವುದಿಲ್ಲ. ಸಾಮೂಹಿಕ ಹಿಂಸೆಯ ಮೂಲಕ ತಮ್ಮ ಮನಸ್ಸಿನ ಹಿಂಸೆ ತೀರಿಸಿಕೊಳ್ಳುವುದನ್ನು ಒಪ್ಪಬಾರದು. ಇದನ್ನು ಯಾರು ಮಾಡಿದರೂ ತಪ್ಪೇ. ಈ ಕಾರಣಕ್ಕಾಗಿಯೇ ನಾನು ನರೇಂದ್ರ ಮೋದಿಯನ್ನು ಟೀಕಿಸಿದ್ದೇನೆ. ಈ ಸತ್ಯ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಗೊತ್ತಿತ್ತು. ಹೀಗಾಗಿ ಮೋದಿಗೆ ರಾಜಧರ್ಮ ಪಾಲಿಸು ಎಂದಿದ್ದರು. ರಾಜ್ಯದಲ್ಲಿ ನಡೆಯುವ ಸಣ್ಣ ತಪ್ಪಿಗೂ ರಾಜನೇ ಹೊಣೆಯಾಗುತ್ತಾನೆ ಎನ್ನುವ ಮೂಲಕ ಗುಜರಾತ್ ನರಮೇಧಕ್ಕೆ ಮೋದಿಯೇ ಕಾರಣ ಎಂದು ಪರೋಕ್ಷವಾಗಿ ಹೇಳಿದರು.
ನನಗೆ ಹೆಣ್ಣು ಮಕ್ಕಳೆಂದರೆ ಇಷ್ಟ. ಆದರೆ, ಮೋದಿ ಅವರಿಗೆ ಏನು ಇಷ್ಟವೋ ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರವಾಗಿ ಅನಂತಮೂರ್ತಿ ತಿಳಿಸಿದರು.

ಕಾಂಗ್ರೆಸ್ಸೇತರ ಮುಖ ಸಿಎಂ ಆಗಿದ್ದು ಸಂತೋಷ
ನಾನು ನನ್ನ ಜೀವಮಾನದಲ್ಲಿ ಕಾಂಗ್ರೆಸ್ ಪರವಾಗಿರಲಿಲ್ಲ. ನಾನು ಕಾಂಗ್ರಸ್ಸೇತರ ಶಕ್ತಿಗಳ ಜತೆ ರಾಜಕಾರಣದಲ್ಲಿ ಗುರುತಿಸಿಕೊಂಡವ. ಆದರೂ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಿ ಎಂದು ಹೇಳುವ ನೈತಿಕ ಅಗತ್ಯವಿತ್ತು. ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದಿತು. ಮಾತ್ರವಲ್ಲ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದು ಸಂತೋಷ ತಂದಿದೆ ಎಂದು ಡಾ. ಯು.ಆರ್.ಅನಂತಮೂರ್ತಿ ಹೇಳಿದರು. ಒಂದು ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ದರಾಮಯ್ಯನವರಂಥ ಕಾಂಗ್ರೆಸ್ಸೇತರ ವ್ಯಕ್ತಿ ಮುಖ್ಯಮಂತ್ರಿಯಾಗಿರುವುದೇ ಸಂತೋಷ ಎಂದು ಅಭಿಪ್ರಾಯಪಟ್ಟರು.

ಗೋಮಾಂಸ ತಿನ್ನುತ್ತಿದ್ದರು
ಬ್ರಾಹ್ಮಣರು ಗೋಮಾಂಸವನ್ನು ತಿನ್ನುತ್ತಿದ್ದರು ಎಂದು ವೇದಗಳಲ್ಲಿ ಹೇಳಲಾಗಿದೆ ಎಂದು ಡಾ.ಅನಂತಮೂರ್ತಿ ಹೇಳಿದ್ದಾರೆ. ಮಹಾಭಾರತದ ಭೀಷ್ಮಪರ್ವ ಪ್ರಸಂಗವನ್ನು ಉಲ್ಲೇಖಿಸುತ್ತಾ ಈ ಮಾತನ್ನು ಹೇಳಿರುವ ಅವರು, ಯಜ್ಞದ ಸಲುವಾಗಿ ಸಾವಿರಾರು ಗೋವುಗಳನ್ನು ವಧಿಸಲು ಬ್ರಾಹ್ಮಣರು ಆಯುಧ ಹಿಡಿದು ನಿಂತಿದ್ದಾಗ, ಧರ್ಮರಾಯ ನಾನು ಏನು ಮಾಡಲಿ ಎಂದು ಕೇಳಿದನಂತೆ. ಆಗ ಭೀಷ್ಮರು ಅಯ್ಯೋ ಪಾಪ ಎನ್ನಬಹುದಷ್ಟೇ ಎಂದರಂತೆ. ವೇದಗಳಲ್ಲಿ ಬ್ರಾಹ್ಮಣರು ಗೋವನ್ನು ತಿನ್ನುತ್ತಿದ್ದರೆಂಬ ಉಲ್ಲೇಖವಿದೆ. ಭೀಷ್ಮರಿಗೆ ಗೋವುಗಳ ಬಗ್ಗೆ ಕರುಣೆ ಮೂಡಿತೇ ಹೊರತು ಯಜ್ಞವನ್ನು ತಡೆಯಲು ಸಾಧ್ಯವಾಗಲಿಲ್ಲ. ಅವರು ಪ್ರಗತಿಪರರಾಗಿದ್ದರೂ ಯಜ್ಞವನ್ನು ತಡೆಯುವಷ್ಟು ಶಕ್ತರಿರಲಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement