ಜ್ಞಾನತರಂಗ 81 ಕಾಲೇಜುಗಳಿಗೆ ವಿಸ್ತರಣೆ
ರಾಜ್ಯದ 32 ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಜಾರಿಯಲ್ಲಿರುವ 'ಜ್ಞಾನತರಂಗ' (ಎಜುಸ್ಯಾಟ್) ಯೋಜನೆಯನ್ನು 81 ಕಾಲೇಜುಗಳಿಗೆ ವಿಸ್ತರಿಸಲಾಗುವುದು..
ಕ.ಪ್ರ.ವಾರ್ತೆ, ಬೆಂಗಳೂರು, ಸೆ.24-
ರಾಜ್ಯದ 32 ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಜಾರಿಯಲ್ಲಿರುವ 'ಜ್ಞಾನತರಂಗ'(ಎಜುಸ್ಯಾಟ್) ಯೋಜನೆಯನ್ನು 81 ಕಾಲೇಜುಗಳಿಗೆ ವಿಸ್ತರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ತಾಂತ್ರಿಕ ಶಿಕ್ಷಣ ಇಲಾಖೆ ಎಸ್‌ಜೆಪಿ ಕಾಲೇಜಿನ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿದ್ಯಾರ್ಥಿ ನಿ ನಿಲಯದ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಜ್ಞಾನದ ಮಟ್ಟ ಹೆಚ್ಚಿಸಲು ಮತ್ತು ಉಪನ್ಯಾಸಕರ ಸಂಖ್ಯೆ ಕಡಿಮೆ ಇರುವ ಕಾಲೇಜುಗಳಲ್ಲಿ ಪಠ್ಯ ಬೋಧಿಸಲು ಜ್ಞಾನತರಂಗ ಯೋಜನೆ ಜಾರಿಗೆ ತರಲಾಗಿದೆ ಎಂದರು.
ಕೇವಲ ಪಠ್ಯದ ಜ್ಞಾನ ಪಡೆದುಕೊಂಡರೆ ಸಾಲದು. ಸಾಮಾನ್ಯ ಜ್ಞಾನ ಅತ್ಯವಶ್ಯಕ ಎಂಬುದನ್ನು ತಿಳಿದುಕೊಳ್ಳಬೇಕು. ಎಲ್ಲಾ ಡಿಪ್ಲೊಮಾ ವಿದ್ಯಾರ್ಥಿಗಳು ಉದ್ಯೋಗ ಪಡೆಯುವ ಉದ್ದೇಶವಿಟ್ಟುಕೊಂಡೇ ಓದಬಾರದು. ನಾನೇ ಸ್ವಂತ ಉದ್ಯೋಗ ಪ್ರಾರಂಭಿಸುವ ಗುರಿಯೂ ಇರಬೇಕೆಂದರು.
ಡಾಟಾ ನಿರ್ವಹಿಸಿ: ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಶಿಕ್ಷಣ ನೀಡಬೇಕು. ಹೀಗಾಗಿ ಅವರನ್ನು ಕೈಗಾರಿಕಾ ಪ್ರದೇಶಗಳಿಗೆ ಕರೆದುಕೊಂಡು ಹೋಗಿ ತೋರಿಸಬೇಕು. ಇದುವರೆಗೂ ಎಷ್ಟು ಕೈಗಾರಿಕೆಗಳಿಗೆ ಕರೆದುಕೊಂಡು ಹೋಗಿದ್ದೀರಿ ಎಂದು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರಾದ ಎಚ್.ಯು.ತಳವಾರ ಅವರನ್ನು ಕೇಳಿದರು, ಅವರು ಉತ್ತರಿಸಲು ತಡವರಿಸಿದ ಕಾರಣ, ಯಾವ ಕಾಲೇಜಿನಲ್ಲಿ ಎಷ್ಟು ವಿದ್ಯಾರ್ಥಿಗಳು ಓದುತ್ತಿದ್ದಾರೆ? ವಿದ್ಯಾಭ್ಯಾಸ ಮುಗಿಸಿದ ನಂತರ ಎಲ್ಲಿ ಹೋಗುತ್ತಾರೆ? ಎಂಬ ಬಗ್ಗೆ ಡಾಟಾ ಇಟ್ಟುಕೊಳ್ಳಬೇಕು ಎಂದರು.
ವ್ಯಕ್ತಿತ್ವ ರೂಢಿಸಿಕೊಳ್ಳಿ: ಹೆಚ್ಚು ಓದಿ ಅದರ ಜತೆಗೆ ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳಿ, ವ್ಯಕ್ತಿತ್ವ ಇಲ್ಲದೆ ಇರುವ ವಿದ್ಯೆ ಪ್ರಯೋಜನಕ್ಕೆ ಬರುವುದಿಲ್ಲ. ಮೈಸೂರು ಮಹಾರಾಜರು ಮತ್ತು ಸರ್.ಎಂ.ವಿಶ್ವೇಶ್ವರಯ್ಯ ಅವರು ದೂರದೃಷ್ಟಿ ಇಟ್ಟುಕೊಂಡಿದ್ದರಿಂದಲೇ ಇಂದು ಇಂತಹ ಕಾಲೇಜುಗಳನ್ನು ನಿರ್ಮಿಸಲು ಸಾಧ್ಯವಾಯಿತು. ಪ್ರಾಂಶುಪಾಲರು ಮತ್ತು ಅಧ್ಯಾಪಕರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳು ಎಂದು ತಿಳಿದು ಗುಣಮಟ್ಟ ಶಿಕ್ಷಣ ನೀಡಬೇಕು ಎಂದು ಹೇಳಿದರು.
ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಚ್.ಯು. ತಳವಾರ ಮಾತನಾಡಿ, ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಓದುತ್ತಿರುವ ಮಹಿಳಾ ವಿದ್ಯಾರ್ಥಿನಿಯರಿಗಾಗಿ ವಿದ್ಯಾರ್ಥಿ ನಿಲಯ ನಿರ್ಮಿಲು 5 ಕೋಟಿ ಬಿಡುಗಡೆ ಮಾಡಿದೆ ಎಂದರು.
ಈ ಸಮಾರಂಭದಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್, ಪ್ರಧಾನ ವಾಸ್ತುಶಿಲ್ಪಿ ಕೆ. ಉದಯ, ವಿಧಾನ ಪರಿಷತ್ತಿನ ಸದಸ್ಯ ದಯಾನಂದ ರೆಡ್ಡಿ ಭಾಗವಹಿಸಿದ್ದರು.