ನಗರಕ್ಕೆ ಇಂದು, ನಾಳೆ ನೀರಿಲ್ಲ
ಬುಧವಾರ, ಗುರುವಾರ ನೀರು ಪೂರೈಕೆ ಇರುವುದಿಲ್ಲ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದು, ನೀರಿನ ಸಮಸ್ಯೆ ಕೆಲವು ಕಡೆ ಮಂಗಳವಾರವೇ..
ಕನ್ನಡಪ್ರಭವಾರ್ತೆ ಬೆಂಗಳೂರು ಸೆ.24-
ಜಲಮಂಡಳಿ ಕೈಗೊಂಡಿರುವ ತುರ್ತು ಕಾಮಗಾರಿ ಹಿನ್ನೆಲೆಯಲ್ಲಿ ನಗರದಲ್ಲಿ ಎರಡು ದಿನಗಳು ನೀರು ಪೂರೈಕೆ ಇರುವುದಿಲ್ಲ. ಬುಧವಾರ, ಗುರುವಾರ ನೀರು ಪೂರೈಕೆ ಇರುವುದಿಲ್ಲ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದು, ನೀರಿನ ಸಮಸ್ಯೆ ಕೆಲವು ಕಡೆ ಮಂಗಳವಾರವೇ ಕಾಣಿಸಿಕೊಂಡಿದೆ. ಇದರ ಬಿಸಿ ಜನರಿಗೆ ಬುಧವಾರದ ನಂತರ ತೀವ್ರ ಸ್ವರೂಪದಲ್ಲಿ ತಟ್ಟಲಿದೆ.
ಜಲಮಂಡಳಿ ಹಾರೋಹಳ್ಳಿ ಮತ್ತು ತಾತಗುಣಿ ಬಳಿ ವಿದ್ಯುತ್ ಕಾಮಗಾರಿ ನಡೆಸುತ್ತಿರುವುದರಿಂದ ನೀರಿನ ಪೂರೈಕೆ ವ್ಯವಸ್ಥೆ ಗಂಟೆಗಟ್ಟಲೆ ಬಂದ್ ಆಗಿದೆ. ಇದರಿಂದ ನಗರಕ್ಕೆ ಪೂರೈಕೆಯಾಗುತ್ತಿದ್ದ ನೀರಿನಲ್ಲಿ ಶೇ.50ರಷ್ಟು ಕಡಿಮೆಯಾಗಿದ್ದು, ಜನ ನೀರಿಲ್ಲದೆ ಒದ್ದಾಡುವುದು ಖಚಿತ. ಅದರಲ್ಲೂ ಮೈಸೂರು ರಸ್ತೆ, ಯಲಹಂಕ ಸುತ್ತಮುತ್ತಲ ಭಾಗದಲ್ಲಿ ನೀರಿನ ತತ್ವಾರ ಉಂಟಾಗಲಿದೆ. ಇನ್ನು ಬಿಬಿಎಂಗೆ ಹೊಸದಾಗಿ ಸೇರಿರುವ ನಗರಸಭೆ ಮತ್ತು ಪುರಸಭೆ ಪ್ರದೇಶಗಳು ನೀರನ್ನೇ ಕಾಣುವಂತಿಲ್ಲ. ಏಕೆಂದರೆ, ಮೀಟರ್ ಅಳವಡಿಸಿರುವ ನಗರದ ಕೇಂದ್ರ ಭಾಗದ ಪ್ರದೇಶಗಳಲ್ಲಿ ನೀರು ಪೂರೈಸುವುದಕ್ಕೆ ಆದ್ಯತೆ ನೀಡುತ್ತದೆ. ಉಳಿದಂತೆ ಸಿಎಂಸಿ ಪ್ರದೇಶದಲ್ಲಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಮೀಟರ್ ಅಳವಡಿಸಿಲ್ಲದ ಕಾರಣ ನಿಯಮಿತವಾಗಿ ನೀರು ಹರಿಸುತ್ತಿಲ್ಲ. ಆದರೂ ನಗರಕ್ಕೆ ಹೆಚ್ಚನ ಪ್ರಮಾಣದ ನೀರು ಲಭ್ಯ ಇರುವ ಕಾರಣ ಸಿಎಂಸಿ ಪ್ರದೇಶಕ್ಕೂ ನೀರು ಪೂರೈಸಲಾಗುತ್ತಿದೆ.
ಆದರೆ, ಸದ್ಯ ವಿದ್ಯುತ್ ಕಾಮಗಾರಿ ಕಾರಣದಿಂದ ಈ ಪ್ರದೇಶದಲ್ಲಿ ನೀರೇ ಇಲ್ಲದಂತಾಗುತ್ತದೆ. ಅಂದರೆ, ಸದ್ಯದ ಪರಿಸ್ಥಿತಿಯಲ್ಲಿ ಜಲಮಂಡಳಿ ಮೀಟರ್ ಅಳವಡಿಸಿರುವ ಕೇಂದ್ರ ಭಾಗದ ಪ್ರದೇಶಗಳಿಗೆ ನೀರು ಪೂರೈಸುವುದೇ ಕಷ್ಟವಾಗಿರುವುದರಿಂದ ಸಿಎಂಸಿ ಪ್ರದೇಶಗಳಿಗೆ ನೀರು ನೀಡಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಅಧಿಕಾರಿಗಳು.
ಏನಿದು ವಿದ್ಯುತ್ ಕಾಮಗಾರಿ?: ಕಾವೇರಿ ನೀರು ಪೂರೈಕೆ ವ್ಯವಸ್ಥೆಯಲ್ಲಿನ ವಿದ್ಯುತ್ ಉಪಕರಣಗಳನ್ನು ಮೇಲ್ದರ್ಜೆಗೇರಿಸಲು ಜಲಮಂಡಳಿ ಮುಂದಾಗಿದೆ. ಅಂದರೆ, ಈತನಕ ಟಿಜಿಹಳ್ಳಿಯ ನೀರೆತ್ತುವ ಘಟಕ ಬಿಟ್ಟರೆ ಉಳಿದ ಯಾವುದೇ ಘಟಕದಲ್ಲೂ ಟ್ರಾನ್ಸ್ಫಾರ್ಮರ್ ಸಮಾರ್ಥ್ಯ 220 ಕೆ.ವಿ.ಗೆ ಹೆಚ್ಚಾಗಿರಲಿಲ್ಲ.
ತಾತಗುಣಿ ಮತ್ತು ಹಾರೋಹಳ್ಳಿಯಲ್ಲಿರುವ ಟ್ರಾನ್ಸ್ಫಾರ್ಮರ್ಗಳು ಬರೀ 66 ಕೆ.ವಿ. ಸಾಮರ್ಥ್ಯ ಇದ್ದರಿಂದ ಆಗಾಗ ಕೈಕೊಡುತ್ತಿದ್ದವು. ಇದರಿಂದ ನೀರೆತ್ತುವ ಕಾರ್ಯಕ್ಕೆ ತೊಂದರೆಯಾಗಿ ನಗರಕ್ಕೆ ನೀರು ಪೂರೈಕೆ ವ್ಯತ್ಯಯವಾಗುತ್ತಿತ್ತು. ತೀರಾ ಅನಿವಾರ್ಯವಾದಾಗ ಈ ಘಟಕಗಳು ದೂರದ ಸೋಮನಹಳ್ಳಿ ಮತ್ತು ಸುಬ್ರಮಣ್ಯಪುರದಲ್ಲಿರುವ ಟ್ರಾನ್ಸ್ಫಾರ್ಮರ್ಗಳಿಂದ ವಿದ್ಯುತ್ ಪಡೆಯಬೇಕಿತ್ತು. ಆದ್ದರಿಂದ ಈಗ ತಾತಗುಣಿ ಮತ್ತು ಹಾರೋಹಳ್ಳಿ ಟ್ರಾನ್ಸ್ಫಾರ್ಮರ್ಗಳನ್ನು ತೆಗೆದು 220 ಕೆ.ವಿ. ಸಾಮರ್ಥ್ಯದ ಟ್ರಾನ್ಸ್ಫಾರ್ಮರ್ಗಳನ್ನು ಅಳವಡಿಸಲಾಗುತ್ತಿದೆ.
ಇನ್ನುಮುಂದೆ ವಿದ್ಯುತ್ ಸಮಸ್ಯೆ ಇರದು: ಇದರಿಂದಾಗಿ ಬೆಳಗ್ಗೆ 8ಗಂಟೆಯಿಂದ ಸಂಜೆ 7 ಗಂಟೆವರೆಗೂ ವಿದ್ಯುತ್ ಪೂರೈಕೆ ಸ್ಥಗಿತವಾಗಿದ್ದು, ನೀರು ಮೇಲೆತ್ತುವ ಕೆಲಸ ಕೂಡ ಸ್ಥಗಿತವಾಗಿದೆ.
ಇದರಿಂದ ನಿತ್ಯ ನಗರಕ್ಕೆ ಪೂರೈಕೆಯಾಗುತ್ತಿದ್ದ 2500 ದಶಲಕ್ಷ ಲೀಟರ್ ನೀರಿನಲ್ಲಿ ಬರೀ 600 ದಶಲಕ್ಷ ಲೀಟರ್ ನೀರು ಮಾತ್ರ ಪೂರೈಕೆಯಾಗಲಿದೆ. ಅಂದರೆ, ಒಟ್ಟಾರೆ ಪೂರೈಕೆಯಾಗುವ ನೀರಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಪ್ರಮಾಣದ ನೀರಿನ ಕೊರತೆ ಉಂಟಾಗಲಿದೆ. ಪರಿಣಾಮ ನಗರದ ಎಲ್ಲಾ ಭಾಗದಲ್ಲಿ ನೀರಿನ ಪೂರೈಕೆ ವ್ಯತ್ಯಯವಾಗಲಿದೆ. ಹಾಗೆ ನೋಡಿದರೆ, ನೀರಿನ ಸಮಸ್ಯೆ ಬಿಸಿ ನಗರಕ್ಕೆ ಇನ್ನೂ ತಟ್ಟಿಲ್ಲ. ಏಕೆಂದರೆ, ವಿದ್ಯುತ್ ಕಾಮಗಾರಿ ಆರಂಭವಾಗಿರುವುದು ಮಂಗಳವಾರವಷ್ಟೇ. ಇದು ಬುಧವಾರಕ್ಕೂ ವಿಸ್ತರಣೆಯಾಗುವ ಸಾಧ್ಯತೆ ಇದೆ. ಈ ದಿನಗಳಲ್ಲಿ ನೀರು ಪಂಪ್ ಮಾಡದ ಕಾರಣ ಬುಧವಾರ ಮತ್ತು ಗುರುವಾರ ನೀರು ಪೂರೈಕೆ ಬಿಸಿ ಜೋರಾಗಿಯೇ ತಟ್ಟಲಿದೆ. ಈಗ ಅಳವಡಿಸುತ್ತಿರುವ ಹೊಸ ಟ್ರಾನ್ಸ್ಫಾರ್ಮರ್ಗಳಿಂದ ವಿದ್ಯುತ್ ಪೂರೈಕೆ ಹೆಚ್ಚಾಗಿ ನೀರನ್ನು ನದಿಯಿಂದ ಪಂಪ್ ಮಾಡಲು ಅನುಕೂಲವಾಗಲಿದೆ. ಏಕೆಂದರೆ ನೀರು ಮೇಲೆತ್ತುವ ಎಲ್ಲಾ ಘಟಕಗಳ ಟ್ರಾನ್ಸ್ಫಾರ್ಮರ್ ಸಾಮರ್ಥ್ಯ ಹೆಚ್ಚಾಗಿದ್ದರಿಂದ ಆಗಾಗ ವಿದ್ಯುತ್ ಕೈಕೊಡುವ ಆತಂಕ ಇರುವುದಿಲ್ಲ. ಅಷ್ಟೇ ಅಲ್ಲದೆ ಪೂರೈಕೆಯಲ್ಲಿ ವೇಗ ಮತ್ತು ಸೇವೆಯಲ್ಲಿ ಉತ್ತಮ ಗುಣಮಟ್ಟ ಕಾಪಾಡಲು ನೆರವಾಗುತ್ತದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಭವಿಷ್ಯದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮಾಡುವುದಕ್ಕಾಗಿಯೇ ಈಗಿನ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುತ್ತಿದ್ದೇವೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು. ಸಾಧ್ಯವಾದರೆ ನೀರು ತುಂಬಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಒಂದು ದಿನ ಹೊಂದಾಣಿಕೆ ಮಾಡಿಕೊಳ್ಳಬೇಕು.
-ವೆಂಕಟರಾಜು, ಜಲಮಂಡಳಿ ಮುಖ್ಯ ಎಂಜಿನಿಯರ್