ಅಮೆರಿಕಕ್ಕೆ ಪ್ರಧಾನಿ ಸಿಂಗ್
ನವದೆಹಲಿ: ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ತಮ್ಮ ಒಂದು ವಾರದ ಅಮೆರಿಕ ಪ್ರವಾಸವನ್ನು ಬುಧವಾರ ಆರಂಭಿಸಿದ್ದಾರೆ. ಭೇಟಿ ವೇಳೆ ಪ್ರಧಾನಿ ಸಿಂಗ್ ಅವರು ಅಮೆರಿಕ ಅಧ್ಯಕ್ಷ ಒಬಾಮ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಬಳಿಕ ವಿಶ್ವಸಂಸ್ಥೆಯ 68ನೇ ಮಹಾಸಭೆಯಲ್ಲಿ ಪಾಲ್ಗೊಳ್ಳಲು ನ್ಯೂಯಾರ್ಕ್ಗೆ ತೆರಳುವ ಅವರು ಸಭೆಯಲ್ಲಿ ಭಾಷಣವನ್ನೂ ಮಾಡಲಿದ್ದಾರೆ. ಇದೇ ವೇಳೆ, ಭಾರತ-ಪಾಕ್ ನಡುವಿನ ಸಂಬಂಧ ಹಳಸಿರುವ ನಡುವೆಯೂ ನ್ಯೂಯಾರ್ಕ್ನಲ್ಲಿ ಸೆ.29ರಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಅವರನ್ನು ಭೇಟಿಯಾಗುತ್ತೇನೆ ಎಂದು ಪ್ರಧಾನಿ ಮನಮೋಹನ್ಸಿಂಗ್ ಬುಧವಾರ ದೃಢಪಡಿಸಿದ್ದಾರೆ. ನ್ಯೂಯಾರ್ಕ್ ಪ್ರವಾಸ ಆರಂಭಿಸುವ ಮುನ್ನ ನವದೆಹಲಿಯಲ್ಲಿ ಮಾತನಾಡಿದ ಪ್ರಧಾನಿ ಸಿಂಗ್ ಈ ವಿಚಾರ ತಿಳಿಸಿದ್ದಾರೆ.