ನೌಕರರ ಮೂಗಿಗೆ ತುಪ್ಪ
5 ರಾಜ್ಯಗಳ ವಿಧಾನಸಭೆ ಚುನಾವಣೆ ಹಾಗೂ 2014ರ ಲೋಕಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರ್ಕಾರ ತನ್ನ ನೌಕರರ...
ನವದೆಹಲಿ: 5 ರಾಜ್ಯಗಳ ವಿಧಾನಸಭೆ ಚುನಾವಣೆ ಹಾಗೂ 2014ರ ಲೋಕಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರ್ಕಾರ ತನ್ನ ನೌಕರರ ಮನವೊಲಿಸಲು ಸಜ್ಜಾಗಿದೆ. ಕೇಂದ್ರ ಸರ್ಕಾರಿ ನೌಕರರಿಗಾಗಿ 7ನೇ ವೇತನ ಆಯೋಗ ರಚಿಸುವುದಾಗಿ ಸರ್ಕಾರ ಬುಧವಾರ ಘೋಷಿಸಿರುವುದೇ ಇದಕ್ಕೆ ಸಾಕ್ಷಿ.
ಸುಮಾರು 80 ಲಕ್ಷ ನೌಕರರು ಹಾಗೂ ಪಿಂಚಣಿದಾರರ ವೇತನ, ಭತ್ಯೆ ಹಾಗೂ ಪಿಂಚಣಿಗೆ ಸಂಬಂಧಿಸಿ 7ನೇ ವೇತನ ಆಯೋಗವು ಶಿಫಾರಸು ಮಾಡಲಿದೆ. ಪ್ರಧಾನಿ ಮನಮೋಹನ್‌ಸಿಂಗ್ ಅವರು ಈ ಆಯೋಗದ ರಚನೆಗೆ ಹಸಿರು ನಿಶಾನೆ ತೋರಿದ್ದಾರೆ.
2016ರಿಂದ ಜಾರಿ: ಕೇಂದ್ರ ಸರ್ಕಾರಿ ನೌಕರರ ವೇತನ ಶ್ರೇಣಿಗೆ ಸಂಬಂಧಿಸಿದ ಶಿಫಾರಸುಗಳನ್ನು ಸಲ್ಲಿಸಲು ವೇತನ ಆಯೋಗಕ್ಕೆ 2 ವರ್ಷಗಳ ಕಾಲಾವಕಾಶ ನೀಡಲಾಗುವುದು. ಬಳಿಕ ಶಿಫಾರಸುಗಳನ್ನು 2016ರ ಜನವರಿ 1ರಿಂದ ಅನ್ವಯವಾಗುವಂತೆ ಜಾರಿ ಮಾಡಲಾಗುವುದು ಎಂದು ಕೇಂದ್ರ ವಿತ್ತ ಸಚಿವ ಪಿ. ಚಿದಂಬರಂ ತಿಳಿಸಿದ್ದಾರೆ.
ರಕ್ಷಣೆ ಹಾಗೂ ರೇಲ್ವೆ ಇಲಾಖೆಯಲ್ಲಿರುವವರು ಸೇರಿದಂತೆ ಕೇಂದ್ರ ಸರ್ಕಾರದ 50 ಲಕ್ಷ ನೌಕರರು ಮತ್ತು ಸುಮಾರು 30 ಲಕ್ಷ ಪಿಂಚಣಿದಾರರು 7ನೇ ವೇತನ ಆಯೋಗದ ಶಿಫಾರಸಿನ ಲಾಭ ಪಡೆಯಲಿದ್ದಾರೆ. 7ನೇ ವೇತನ ಆಯೋಗದ ಮುಖ್ಯಸ್ಥರು ಹಾಗೂ ಸದಸ್ಯರ ಹೆಸರುಗಳನ್ನು ಸದ್ಯದಲ್ಲಿಯೇ ಅಂತಿಮಗೊಳಿಸಲಾಗುವುದು ಎಂದೂ ಚಿದು ಮಾಹಿತಿ ನೀಡಿದ್ದಾರೆ.
ಸರ್ಕಾರವು ಪ್ರತಿ 10 ವರ್ಷಗಳಿಗೊಮ್ಮೆ ವೇತನ ಆಯೋಗವನ್ನು ರಚಿಸಿ, ನೌಕರರ ವೇತನ ಶ್ರೇಣಿಯನ್ನು ಪರಿಷ್ಕರಿಸುತ್ತದೆ. ಇದೇ ಶಿಫಾರಸುಗಳಿಗೆ ಸ್ವಲ್ಪ ಬದಲಾವಣೆ ಮಾಡಿ ರಾಜ್ಯ ಸರ್ಕಾರಗಳು ತಮ್ಮ ನೌಕರರ ವೇತನವನ್ನೂ ಪರಿಷ್ಕರಿಸುತ್ತವೆ. 6ನೇ ವೇತನ ಆಯೋಗದ ಶಿಫಾರಸುಗಳನ್ನು 2006ರ ಜ.1ರಿಂದ ಜಾರಿ ಮಾಡಲಾಗಿತ್ತು. ಇದಕ್ಕೂ ಮುನ್ನ 5ನೇ ವೇತನ ಆಯೋಗದ ಶಿಫಾರಸನ್ನು 1996ರ ಜ.1ರಿಂದ ಹಾಗೂ ನಾಲ್ಕನೇ ಆಯೋಗದ ಶಿಫಾರಸನ್ನು 1986ರ ಜ.1ರಿಂದ ಅನುಷ್ಠಾನಕ್ಕೆ ತರಲಾಗಿತ್ತು.
ಕಾರ್ಮಿಕ ಸಂಘಗಳ ಸ್ವಾಗತ: 7ನೇ ವೇತನ ಆಯೋಗ ರಚನೆಗೆ ಮುಂದಾಗಿರುವ ಸರ್ಕಾರದ ಕ್ರಮವನ್ನು ಕಾರ್ಮಿಕ ಸಂಘಗಳು ಸ್ವಾಗತಿಸಿವೆ. ಆದರೆ, ಆಯೋಗದ ಶಿಫಾರಸುಗಳನ್ನು 2011ರ ಜ.1ರಿಂದ ಪೂರ್ವಾನ್ವಯವಾಗುವಂತೆ ಜಾರಿ ಮಾಡಬೇಕೆಂದು ಒತ್ತಾಯಿಸಿವೆ.
ಭಾರತೀಯ ಸೇನೆಗೂ ಪ್ರತ್ಯೇಕ ವೇತನ ಆಯೋಗ: ಸ್ವಾತಂತ್ರ್ಯಾನಂತರ ಪ್ರಪ್ರಥಮ ಬಾರಿಗೆ ಭಾರತೀಯ ಸೇನೆಗೂ ಪ್ರತ್ಯೇಕ ವೇತನ ಆಯೋಗ ರಚನೆಯಾಗಲಿದೆ. ಭೂಸೇನೆ, ವಾಯುಸೇನೆ ಹಾಗೂ ನೌಕಾಸೇನೆಯ ಮುಖ್ಯಸ್ಥರು ಕಳೆದ ವರ್ಷವೇ ರಕ್ಷಣಾ ಸಚಿವರಿಗೆ ಪತ್ರ ಬರೆದು, ವೇತನ ಆಯೋಗದ ಬೇಡಿಕೆಯಿಟ್ಟಿದ್ದರು. ಸಶಸ್ತ್ರ ಪಡೆಗಳು ಕೂಡ 'ಸಮಾನ ಹುದ್ದೆಗೆ ಸಮಾನ ಪಿಂಚಣಿ' ಹಾಗೂ 'ಸಮಾನ ಹುದ್ದೆಗೆ ಸಮಾನ ವೇತನ' ನೀತಿ ಜಾರಿಗೆ ತರುವಂತೆ ಒತ್ತಾಯಿಸಿವೆ. ಅಷ್ಟೇ ಅಲ್ಲದೆ, ಜವಾನರಿಗೆ ಹಾಗೂ ಜೂನಿಯರ್ ಕಮಿಷನ್ಡ್ ಆಫೀಸರ್‌ಗಳಿಗೂ ವೇತನ ಶ್ರೇಣಿ ನಿಗದಿ ಮಾಡುವಂತೆ ಕೋರಿಕೊಂಡಿವೆ. ವೇತನದಲ್ಲಿನ ತಾರತಮ್ಯದ ಬಗ್ಗೆ ಸೇನಾ ಸಿಬ್ಬಂದಿಯಲ್ಲಿ ಅಸಮಾಧಾನ ಹೆಚ್ಚುತ್ತಿರುವ ಬಗ್ಗೆ ಕಳೆದ ವರ್ಷವಷ್ಟೇ ಕೇಂದ್ರ ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ಅವರು ಪ್ರಧಾನಿ ಮನಮೋಹನ್‌ಸಿಂಗ್‌ಗೆ ಪತ್ರ ಬರೆದಿದ್ದರು.
ವೇತನ ಆಯೋಗವು ನೌಕರರ ಹಕ್ಕು: ಶರ್ಮಾ
ವೇತನ ಆಯೋಗವು ಪ್ರತಿಯೊಬ್ಬ ನೌಕರನ ಹಕ್ಕು ಎಂದು ವಾಣಿಜ್ಯ ಸಚಿವ ಆನಂದ್ ಶರ್ಮಾ ಹೇಳಿದ್ದಾರೆ. ಜತೆಗೆ, ಮುಂದಿನ ಸರ್ಕಾರವು ಖಂಡಿತವಾಗಿ ಆಯೋಗದ ಶಿಫಾರಸನ್ನು ಅನುಷ್ಠಾನಕ್ಕೆ ತರಲು ಸಾಕಷ್ಟು ಹಣವನ್ನು ಹೊಂದಿರುತ್ತದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ. ದೇಶದ ಆರ್ಥಿಕತೆಯ ಆಧಾರವು ಬಲಿಷ್ಠವಾಗಿದ್ದು, ಪರಿಸ್ಥಿತಿ ಸುಧಾರಣೆಯಾಗಲಿದೆ. ಹಾಗಾಗಿ ಆಯೋಗದ ಶಿಫಾರಸು ಜಾರಿ ಮಾಡಲು ಹಣಕಾಸಿನ ಕೊರತೆ ಎದುರಾಗದು ಎಂದೂ ಶರ್ಮಾ ತಿಳಿಸಿದ್ದಾರೆ.
ಮುಖ್ಯಾಂಶಗಳು
ವರದಿ ಸಲ್ಲಿಕೆಗೆ ಕಾಲಾವಕಾಶ 2 ವರ್ಷ
2016, ಜ.1ರಿಂದ ಶಿಫಾರಸು ಜಾರಿ
ಫಲಾನುಭವಿಗಳು
50 ಲಕ್ಷ ಕೇಂದ್ರ ಸರ್ಕಾರಿ ನೌಕರರು
30 ಲಕ್ಷ ಪಿಂಚಣಿದಾರರು
ಸದಸ್ಯರ ಹೆಸರು- ಘೋಷಣೆಯಾಗಿಲ್ಲ