ಶೂನ್ಯ ಬಡ್ಡಿದರಕ್ಕೆ ಇನ್ನು ಏನೂ ಸಿಗಲ್ಲ
ಶೂನ್ಯ ಬಡ್ಡಿದರ (0ರ್)ದ ಸೋಗಿನಲ್ಲಿ ನಡೆಯುವ ಗ್ರಾಹಕರ ವಂಚನೆಗೆ ಕಡಿವಾಣ ಹಾಕಲು ಆರ್ಬಿಐ ಮಹತ್ವದ ಕ್ರಮ ಕೈಗೊಂಡಿದೆ.
ಮುಂಬೈ: ಶೂನ್ಯ ಬಡ್ಡಿದರ (0ರ್)ದ ಸೋಗಿನಲ್ಲಿ ನಡೆಯುವ ಗ್ರಾಹಕರ ವಂಚನೆಗೆ ಕಡಿವಾಣ ಹಾಕಲು ಆರ್ಬಿಐ ಮಹತ್ವದ ಕ್ರಮ ಕೈಗೊಂಡಿದೆ. ಗೃಹೋಪಯೋಗಿ ವಸ್ತುಗಳ ಮೇಲಿನ ಶೂನ್ಯ ಬಡ್ಡಿದರ(0ರ್) ಯೋಜನೆಗಳನ್ನು ಬುಧವಾರ ನಿಷೇಧಿಸಿದೆ.
ಅದರಂತೆ ಚಿಲ್ಲರೆ ಉತ್ಪನ್ನಗಳನ್ನು ಕ್ರೆಡಿಟ್ ಕಾರ್ಡ್ ಮೂಲಕ ಕೊಂಡಾಗ ಇಎಂಐಗಳಿಗೆ ಏಕರೀತಿಯ ಬಡ್ಡಿದರ ಹಾಗೂ ಪ್ರೊಸೆಸಿಂಗ್ ಶುಲ್ಕವನ್ನು ವಿಧಿಸಬೇಕು ಎಂದು ಎಲ್ಲಾ ಬ್ಯಾಂಕ್ಗಳಿಗೆ ಆರ್ಬಿಐ ಸೂಚಿಸಿದೆ. ಗ್ರಾಹಕರ ಹಿತದೃಷ್ಟಿಯಿಂದ ತೆಗೆದುಕೊಳ್ಳಲಾಗಿರುವ ಈ ನಿರ್ಧಾರ ಮಾತ್ರ ಹಬ್ಬದ ಹುಮ್ಮಸ್ಸಿನಲ್ಲಿರುವ ವ್ಯಾಪಾರಿಗಳ ಪಾಲಿಗೆ ಆಘಾತ ನೀಡಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಸ್ತಿತ್ವದಲ್ಲೇ ಇಲ್ಲ: ಶೂನ್ಯ ಬಡ್ಡಿದರ ಎನ್ನುವುದು ಅಸ್ತಿತ್ವದಲ್ಲೇ ಇಲ್ಲ. ಇಂಥ ಯೋಜನೆಗಳು ಗ್ರಾಹಕರನ್ನು ಶೋಷಿಸುವ ಮತ್ತು ವಸ್ತುಗಳನ್ನು ಕೊಳ್ಳುವಂತೆ ಉತ್ತೇಜಿಸುವ ಯೋಜನೆ ಅಲ್ಲದೆ ಮತ್ತಿನ್ನೇನೂ ಅಲ್ಲ. ಈ ರೀತಿಯ ಯೋಜನೆಗಳಲ್ಲಿ ಬಡ್ಡಿದರವನ್ನು ಪ್ರೊಸೆಸಿಂಗ್ ಶುಲ್ಕದ ಮೂಲಕ ಗ್ರಾಹಕರ ಮೇಲೆ ವರ್ಗಾಯಿಸಲಾಗುತ್ತದೆ. ಹಾಗಾಗಿ ನ್ಯಾಯಯುತ ವ್ಯವಹಾರದಂತೆ ಪ್ರೊಸೆಸಿಂಗ್ ಶುಲ್ಕ ಹಾಗೂ ಬಡ್ಡಿದರವನ್ನು ಉತ್ಪನ್ನಗಳು ಅಥವಾ ವರ್ಗಕ್ಕೆ ಅನುಗುಣವಾಗಿ ಏಕರೀತಿಯಲ್ಲಿ ವಿಧಿಸಬೇಕು ಎಂದು ಆರ್ಬಿಐ ಹೇಳಿದೆ.