3 ನಗರಸಭೆ ಪಾಲಿಕೆಗಳಾಗಿ ಮೇಲ್ದರ್ಜೆಗೆ
ಶಿವಮೊಗ್ಗ, ತುಮಕೂರು, ಬಿಜಾಪುರ ನಗರಸಭೆಗಳು ಮಹಾನಗರ ಪಾಲಿಕೆಗಳಾಗಿ ಮೇಲ್ದರ್ಜೆಗೆ, ವೈದ್ಯ ಕಾಲೇಜು ಸ್ಥಾಪನೆಗೆ ಹೊಸ ನೀತಿ..
ಕ.ಪ್ರ.ವಾರ್ತೆ, ಬೆಂಗಳೂರು, ಸೆ. 26-
ಶಿವಮೊಗ್ಗ, ತುಮಕೂರು, ಬಿಜಾಪುರ ನಗರಸಭೆಗಳು ಮಹಾನಗರ ಪಾಲಿಕೆಗಳಾಗಿ ಮೇಲ್ದರ್ಜೆಗೆ, ವೈದ್ಯ ಕಾಲೇಜು ಸ್ಥಾಪನೆಗೆ ಹೊಸ ನೀತಿ ಹಾಗೂ ಹಿಂದುಳಿದವರು-ಅಲ್ಪಸಂಖ್ಯಾತರಿಗೂ ಟ್ಯಾಕ್ಸಿ ಸಬ್ಸಿಡಿ ನೀಡುವ ನಿರ್ಧಾರವನ್ನು ರಾಜ್ಯ ಸಚಿವ ಸಂಪುಟ ಕೈಗೊಂಡಿದೆ.
ಶಿವಮೊಗ್ಗ, ತುಮಕೂರು ಹಾಗೂ ಬಿಜಾಪುರ ನಗರಸಭೆಗಳು ತಕ್ಷಣದಿಂದಲೇ ಮಹಾನಗರ ಪಾಲಿಕೆಗಳಾಗಲಿವೆ. ಅಲ್ಲದೆ, ಈಗಿರುವ ಅಧ್ಯಕ್ಷ-ಉಪಾಧ್ಯಕ್ಷರೇ ಮೇಯರ್-ಉಪಮೇಯರ್ ಆಗಲಿದ್ದಾರೆ. ನಗರಸಭೆ ಸದಸ್ಯರು ಕಾರ್ಪೊರೇಟರ್ಗಳಾಗಲಿದ್ದಾರೆ. ಈ ಹೊಸ ಮಹಾನಗರ ಪಾಲಿಕೆಗಳಿಗೆ ತಲಾ 100 ಕೋಟಿ ಹೆಚ್ಚಿನ ಅನುದಾನ ಸಿಗಲಿದೆ.
ತಜ್ಞರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ: ಮಹಾನಗರ ಪಾಲಿಕೆಗೆ ಉನ್ನತೀಕರಣವಾದ ಮೇಲೆ ನಗರಸಭೆ ವಿಸರ್ಜನೆಯಾಗಬೇಕು ಎಂಬ ಕಾನೂನಿದೆ. ಇದಕ್ಕೆ ಇನ್ನೂ ಆರು ತಿಂಗಳ ಕಾಲಾವಕಾಶವಿದ್ದು ಕಾನೂನು ತಜ್ಞರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಟಿ.ಬಿ. ಜಯಚಂದ್ರ ಸಂಪುಟ ಸಭೆ ಬಳಿಕ ತಿಳಿಸಿದರು.
50 ಕೋಟಿ ಅನುದಾನ: ರಾಜೀವ್ಗಾಂಧಿ ವಸತಿ ನಿಗಮದ ಬಡಾವಣೆಗಳಲ್ಲಿ ಮೂಲ ಸೌಕರ್ಯ ಒದಗಿಸಲು ಈಗಾಗಲೇ 50 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಇದಕ್ಕೆ ಇನ್ನು ಹೆಚ್ಚುವರಿಯಾಗಿ 50 ಕೋಟಿ ಹಣ ನೀಡಲು ನಿರ್ಧರಿಸಲಾಗಿದೆ. ಚಿಕ್ಕಮಗಳೂರಿನ ಕಡೂರಿನ ಜೋಡಿಲಿಂಗದಹಳ್ಳಿ, ಮೂಡಿಗೆರೆಯ ಹೊಸಕೆರೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ತೆರೆಯಲು ಕ್ರಮವಾಗಿ 7.40 ಹಾಗೂ 7.91 ಕೋಟಿ ವೆಚ್ಚ ಮಾಡಲು ಅನುಮತಿ ನೀಡಲಾಗಿದೆ.
ಸಬ್ಸಿಡಿ ಯೋಜನೆ: ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಟೂರಿಂಗ್ ಟ್ಯಾಕ್ಸಿ (ಪ್ರವಾಸಿ ಟ್ಯಾಕ್ಸಿ)ಗಳನ್ನು ಖರೀದಿಸಲು ನೀಡಲಾಗುತ್ತಿದ್ದ 2 ಲಕ್ಷ ಸಬ್ಸಿಡಿ ಯೋಜನೆಯನ್ನು ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಗೂ ವಿಸ್ತರಿಸಲು ತೀರ್ಮಾಸಲಾಗಿದೆ. ಖಾದಿ ಗ್ರಾಮೋದ್ಯೋಗ ಮಂಡಳಿ ನೇಕಾರರು, ನೂಲುದಾರರಿಗೆ ಹೆಚ್ಚಿನ ಸಹಾಯಧನ ನೀಡಲು, ಶೇ.9ರ ಬಡ್ಡಿ ದರದಲ್ಲಿ ಸಾಲ ಪಡೆಯಲು, ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ವಸ್ತುಪ್ರದರ್ಶನ ಆಯೋಜಿಸಲು, ಉಣ್ಣೆ ಹಾಗೂ ರೇಷ್ಮೆ ಘಟಕಕ್ಕೆ ಶೇ.20ರಷ್ಟು ವಂತಿಗೆ ನೀಡುವ ಕಾರ್ಯಕ್ರಮಗಳಿಗೆ 38.76 ಕೋಟಿ ನೀಡಲು ಅನುಮೋದನೆ ನೀಡಲಾಗಿದೆ.
2014ರ ಸಾಲಿನ ಗಣರಾಜ್ಯೋತ್ಸವದಲ್ಲಿ ನೀಡಲಾಗುವ ಪದ್ಮ ಶ್ರೇಣಿ ಪ್ರಶಸ್ತಿಗೆ ಕೇಂದ್ರಕ್ಕೆ ಹೆಸರು ಶಿಫಾರಸು ಮಾಡುವ ಅಧಿಕಾರವನ್ನು ಮುಖ್ಯಮಂತ್ರಿ ಅವರಿಗೆ ನೀಡಲಾಗಿದೆ. ಗುಲ್ಬರ್ಗಾದಲ್ಲಿ ಪಾಲಿ ಸಂಸ್ಕೃತಿ ತುಲನಾತ್ಮಕ ಅಂತಾರಾಷ್ಟ್ರೀಯ ಶಾಲೆ ಸ್ಥಾಪನೆಗೆ ಕೇಂದ್ರ ಸರ್ಕಾರ 10 ಕೋಟಿ ನೀಡುತ್ತಿದ್ದು, ರಾಜ್ಯ ಸರ್ಕಾರವೂ 10 ಕೋಟಿ ನೀಡಲು ಸಮ್ಮತಿಸಿದೆ ಎಂದು ಸಚಿವ ಟಿ.ಬಿ. ಜಯಚಂದ್ರ ವಿವರಿಸಿದರು.
ರಾಜೀವ್ಗಾಂಧಿ ಆರೋಗ್ಯ ವಿವಿ ವಿರುದ್ಧ ಕ್ರಮ
ಎಂಸಿಐ ನಿಯಮಗಳನ್ನು ಪೂರೈಸದ ಖಾಸಗಿ ವೈದ್ಯ ಕಾಲೇಜುಗಳಿಗೆ ಅನುಮತಿ ನೀಡುವಂತೆ ಶಿಫಾರಸು ಪತ್ರ ನೀಡಿರುವ ರಾಜೀವ್ಗಾಂಧಿ ಆರೋಗ್ಯ ವಿವಿ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಸಂಪುಟದ ಮುಂದಿನ ಸಭೆಯಲ್ಲಿ ನಿರ್ಧರಿಸಲಾಗುತ್ತದೆ ಎಂದು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.
ನಾಲ್ಕು ವೈದ್ಯ ಕಾಲೇಜುಗಳಿಗೆ ಅಗತ್ಯ ಪ್ರಮಾಣ ಪತ್ರ ನೀಡುವ ವಿಷಯ ಸಚಿವ ಸಂಪುಟ ಉಪಸಮಿತಿ ಸಭೆ ಮುಂದೆ ಬಂದಿತ್ತು. ಅಗತ್ಯ ಭೂಮಿ, ಕಟ್ಟಡವೇ ಇಲ್ಲ. ಹೀಗಾಗಿ ನಾಲ್ಕೂ ಕಾಲೇಜುಗಳ ಪ್ರಸ್ತಾವದ ಅರ್ಜಿ ತಿರಸ್ಕರಿಸಲಾಗಿದೆ ಎಂದರು.
ಮೂಕಾಂಬಿಕಾ ಈಸ್ಟ್ ಪಾಯಿಂಟ್ ವೈದ್ಯ ಕಾಲೇಜು, ಈಸ್ಟ್ ಪಾಯಿಂಟ್ ಕಾಲೇಜ್ ಆಫ್ ಮೆಡಿಕಲ್ ಸೈನ್ಸ್, ಲಲಿತಾಂಬಿಕಾ ವೈದ್ಯ ಕಾಲೇಜು ಎಂಬ ಹೆಸರಿನಲ್ಲಿ ಅರ್ಜಿಗಳು ಬಂದಿದ್ದವು. ಇವುಗಳಿಗೆ ರಾಜೀವ್ಗಾಂಧಿ ವಿವಿ ಕೂಡ ಪ್ರಮಾಣ ಪತ್ರ ನೀಡಿತ್ತು. ಹೀಗಾಗಿ, ವಿವಿ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು.
ಹೊಸ ವೈದ್ಯ ಕಾಲೇಜು ಸ್ಥಾಪನೆಗೆ ಹೆಚ್ಚು ಅರ್ಜಿಗಳು ಬರುತ್ತಿದ್ದು, ಎಲ್ಲರೂ ಬೆಂಗಳೂರು ಸುತ್ತಮುತ್ತಲೇ ಕೇಳುತ್ತಿದ್ದಾರೆ. ಆದರೆ, ಹಿಂದುಳಿದ ಪ್ರದೇಶದಲ್ಲಿ ವೈದ್ಯ ಕಾಲೇಜು ಸ್ಥಾಪನೆಯಾಗಬೇಕು ಎಂಬುದು ಸರ್ಕಾರದ ದ್ದೇಶ. ಇದರಿಂದ ವೈದ್ಯ ಚಿಕಿತ್ಸೆಗಳು ಅಲ್ಲಿನ ಪ್ರದೇಶದಲ್ಲಿ ಲಭ್ಯವಾಗುತ್ತದೆ. ಹೀಗಾಗಿ, ವೈದ್ಯ ಕಾಲೇಜು ಸ್ಥಾಪನೆ ಕುರಿತಂತೆ ಒಂದು ನೀತಿ ರಚಿಸಲು ನಿರ್ಧರಿಸಲಾಗಿದೆ. ಸಚಿವ ಸಂಪುಟ ಉಪ ಸಮಿತಿ ಈ ನೀತಿ ರಚನೆ ಮಾಡಲಿದ್ದು, ಮುಂದಿನ ದಿನಗಳಲ್ಲಿ ಅದರಂತೆಯೇ ಹೊಸ ಕಾಲೇಜುಗಳಿಗೆ ಅನುಮತಿ ನೀಡಲಾಗುತ್ತದೆ ಎಂದು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.
371 ಜೆ ವಿಧಿ ಅನುಷ್ಠಾನ ಕುರಿತು ಸಮಗ್ರ ಪರಿಶೀಲನೆ
ಬೆಂಗಳೂರು: ಹೈದರಾಬಾದ್-ಕರ್ನಾಟಕ ಪ್ರದೇಶ ಅಭಿವೃದ್ಧಿಗೆ ಸಂವಿಧಾನದ 371 ಜೆ ವಿಧಿಯ ಅನುಷ್ಠಾನದಲ್ಲಿ ಯಾವುದೇ ರೀತಿಯಲ್ಲಿ ಕಾನೂನು ತೊಡಕು ಉಂಟಾಗಬಾರದು ಎಂಬ ಹಿನ್ನೆಲೆಯಲ್ಲಿ ಸಮಗ್ರ ಪರಿಶೀಲನೆ ನಡೆಯುತ್ತಿದ್ದು, ಸಚಿವ ಸಂಪುಟದಲ್ಲಿ ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. 371ಜೆ ಅನುಷ್ಠಾನ ಕುರಿತಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಖಾತೆ ಸಚಿವ ಎಚ್.ಕೆ. ಪಾಟೀಲ್ ನೇತೃತ್ವದಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ. ಈ ಸಮಿತಿ ವರದಿ ತಯಾರಿಸಿದ್ದು, ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿನ ಸಮಿತಿ ಪರಾಮರ್ಶಿಸುತ್ತಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು. 371ಜೆ ಅನುಷ್ಠಾನದಲ್ಲಿ ವಿಶೇಷ ನ್ಯಾಯಾಲಯ ಸ್ಥಾಪನೆ ಸೇರಿದಂತೆ ಕೆಲವು ರೀತಿಯ ಯೋಜನೆ ಅನುಷ್ಠಾನದಲ್ಲಿ ಕಾನೂನು ತೊಡಕಾಗುವ ಸಂಭವವಿದೆ. ಇದಕ್ಕೆ ಆಸ್ಪದ ನೀಡದೆ ಹಾಗೂ ಹಾಗಾದರೆ ಕೈಗೊಳ್ಳಬೇಕಾದ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನೂ ಅಳವಡಿಸಿಕೊಳ್ಳಲು ಪರಾಮರ್ಶೆ ನಡೆದಿದೆ ಎಂದು ವಿವರಿಸಿದರು.
ಸಂಪುಟದಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳು
1. ಶಿವಮೊಗ್ಗ, ತುಮಕೂರು, ಬಿಜಾಪುರ ನಗರಸಭೆ ಇನ್ನು ಮುಂದೆ ಮಹಾನಗರ ಪಾಲಿಕೆ
2. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ- ಮೇಯರ್, ಉಪಮೇಯರ್
3. ಖಾಸಗಿ ಸಂಸ್ಥೆಗಳು ಸಲ್ಲಿಸಿದ್ದ ನಾಲ್ಕು ಹೊಸ ವೈದ್ಯ ಕಾಲೇಜು ಅರ್ಜಿ ತಿರಸ್ಕಾರ
4. ಕರ್ನಾಟಕ ಸುಸ್ಥಿರ ಅರಣ್ಯ ನಿರ್ವಹಣೆ 3ನೇ ಹಂತದ ಯೋಜನೆ ಸಮ್ಮತಿ
5. ರಾಜೀವ್ಗಾಂಧಿ ವಸತಿ ನಿಗಮದ ಬಡಾವಣೆಗಳಿಗೆ ಮೂಲಸೌಕರ್ಯಕ್ಕೆ ಹೆಚ್ಚುವರಿ 50 ಕೋಟಿ
6. ಚಿಕ್ಕಮಗಳೂರಿನಲ್ಲಿ ಎರಡು ಮೊರಾರ್ಜಿ ದೇಸಾಯಿ ವಸತಿ ಶಾಲೆ
7. ಹಿಂದುಳಿದ ವರ್ಗ, ಅಲ್ಪಸಂಖ್ಯಾತರಿಗೂ ಟೂರಿಂಗ್ ಟ್ಯಾಕ್ಸಿಗೆ 2 ಲಕ್ಷ ಸಬ್ಸಿಡಿ
8. ಖಾದಿ ಗ್ರಾಮೋದ್ಯೋಗ ಹೊಸ ಕಾರ್ಯಕ್ರಮಗಳಿಗೆ 38.76 ಕೋಟಿ
9. ಗುಲ್ಬರ್ಗಾದಲ್ಲಿ ಪಾಲಿ ಸಂಸ್ಕೃತಿ ಮತ್ತು ತುಲನಾತ್ಮಕ ಅಂತಾರಾಷ್ಟ್ರೀಯ ಶಾಲೆಗೆ 10 ಕೋಟಿ