ಸುವರ್ಣ ವಿಧಾನಸೌಧದ ಮೇಲೆ ಪಾಚಿ
ಉತ್ತರ ಕರ್ನಾಟಕದ ಜನರ ಆತ್ಮಸಾಕ್ಷಿಯ ಪ್ರತೀಕ, ಉತ್ತರಾಧಿಕಾರಕ್ಕೆ ಮುನ್ನುಡಿ, ಬೆಳಗಾವಿಯ ಮುಕುಟ ಎಂಬೆಲ್ಲ ವಿಶೇಷಣಗಳನ್ನು ಹೊತ್ತು...
- 1 ವರ್ಷದ ಅವಧಿಯಲ್ಲಿ ನಡೆದಿದ್ದು 7 ದಿನದ ಅಧಿವೇಶನ
- ಪ್ರತಿ ತಿಂಗಳು ನಿರ್ವಹಣೆಗೆ ಬೇಕು 25 ಲಕ್ಷ
ಕ.ಪ್ರ.ವಾರ್ತೆ ಬೆಳಗಾವಿ ಸೆ. 27-
ಉತ್ತರ ಕರ್ನಾಟಕದ ಜನರ ಆತ್ಮಸಾಕ್ಷಿಯ ಪ್ರತೀಕ, ಉತ್ತರಾಧಿಕಾರಕ್ಕೆ ಮುನ್ನುಡಿ, ಬೆಳಗಾವಿಯ ಮುಕುಟ ಎಂಬೆಲ್ಲ ವಿಶೇಷಣಗಳನ್ನು ಹೊತ್ತು ಬೆಳಗಾವಿ ನಗರದಿಂದ ಕೇವಲ 10 ಕಿ.ಮೀ. ದೂರದಲ್ಲಿರುವ ಸುಮಾರು 400 ಕೋಟಿ ವೆಚ್ಚದ ಸುವರ್ಣ ವಿಧಾನಸೌಧ ಉದ್ಘಾಟನೆಗೊಂಡು ವರ್ಷವಾಗುತ್ತ ಬಂದಿದೆ. ಈ ಅವಧಿಯಲ್ಲಿ ನಿರ್ವಹಣೆಗೆಂದು ಸುಮಾರು 3 ಕೋಟಿ ವ್ಯಯಿಸಿದರೂ ಸುಂದರ ಶ್ವೇತವರ್ಣದ ಸೌಧದ ಗೋಡೆಗಳ ಮೇಲೆ ಪಾಚಿ ಬೆಳೆದು, ಕಟ್ಟಡ ಹಸಿರು ಬಣ್ಣಕ್ಕೆ ತಿರುಗಿದೆ!
ಈ ಭಾಗದ ಭಾಗ್ಯವೆಂದು ವರ್ಣಿಸಲಾಗಿದ್ದ ಈ ಸುವರ್ಣ ವಿಧಾನಸೌಧದಲ್ಲಿ 2012ರ ಡಿ.5 ರಿಂದ 13ರವರೆಗೆ 7 ದಿನಗಳ ಅಧಿವೇಶನ ನಡೆದಿದ್ದು ಬಿಟ್ಟರೆ, ವರ್ಷವಿಡೀ ಯಾವುದೇ ಕಾರ್ಯಕ್ರಮವಿಲ್ಲದೇ ಬಿಕೋ ಎನ್ನುತ್ತಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗಬೇಕಿದ್ದ ಸೌಧ, ರಾಜಕಾರಣಿಗಳು, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ, ಮುಂದಾಲೋಚನೆ ಇಲ್ಲದ ನಿರ್ಧಾರಗಳಿಂದ ನಿಷ್ಪ್ರಯೋಜಕವಾಗುತ್ತಿದೆ.
ಉದ್ಘಾಟನೆ ಆದಾಗಿನಿಂದಲೂ ಜನಪ್ರತಿನಿಧಿಗಳು ಕೆಲವು ಸರ್ಕಾರಿ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸುತ್ತೇವೆ. ಇಲ್ಲಿಂದಲೇ ಕೆಲವು ನಿಗಮ, ಮಂಡಳಿ ಕಾರ್ಯ ನಿರ್ವಹಿಸುತ್ತವೆ. ಇದರ ಕುರಿತು ನಮ್ಮ ಬಳಿ ಸ್ಪಷ್ಟ ಚಿಂತನೆ ಇದೆ ಎಂದು ಹೇಳುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಹಸಿರಾಗಿದೆ ಶ್ವೇತವರ್ಣದ ಗೋಡೆಗಳು: ಈ ಕಟ್ಟಡಕ್ಕೆ ನೆಲಮಂಗಲದ ಬಳಿ ಸಿಗುವ ಬಿಳಿಹಾಲಿನಂಥ ಕಲ್ಲನ್ನು ಬಳಸಲಾಗಿದ್ದು, ಪ್ರತ್ಯೇಕವಾಗಿ ಬಣ್ಣ ಹಚ್ಚಿಲ್ಲ. ಶ್ವೇತವರ್ಣದ ಕಲ್ಲುಗಳಿಂದಲೇ ಕಟ್ಟಡ ಹೊಳೆಯುತ್ತಿತ್ತು. ಆದರೆ, ಇದೀಗ ಸುರಿದ ಮಳೆಗೆ ಕಟ್ಟಡದ ಬಹು ಭಾಗದಲ್ಲಿ ಪಾಚಿ ಕಟ್ಟಿಕೊಂಡಿದೆ.
ನಿರ್ವಹಣಾ ವೆಚ್ಚ ಅಧಿಕ: ಯಾವುದೇ ಕಾರ್ಯಕ್ರಮ ನಡೆಯದಿದ್ದರೂ ಈ ಸೌಧದ ನಿರ್ವಹಣಾ ವೆಚ್ಚ ತಿಂಗಳಿಗೆ ಕನಿಷ್ಠ 25 ಲಕ್ಷ ನಿರ್ವಹಣೆಗೆ ಬೇಕಾಗುತ್ತದೆ. ಪ್ರತಿ ದಿನ ರಾತ್ರಿ ವಿದ್ಯುತ್ ದೀಪ ಬೆಳಗಿಸಲೇ ಬೇಕು. ಲಿಫ್ಟ್‌ಗಳನ್ನು ಕನಿಷ್ಠ 1 ಗಂಟೆ ಚಾಲನೆಯಲ್ಲಿಡಬೇಕಾಗುತ್ತದೆ. ಹವಾನಿಯಂತ್ರಿತ ವ್ಯವಸ್ಥೆ, ಧ್ವನಿವರ್ಧಕ, ಮೈಕ್‌ಗಳನ್ನು ವಾರದಲ್ಲಿ ಒಮ್ಮೆಯಾದರೂ ಚಾಲು ಮಾಡಿ ಪರಿಶೀಲಿಸಬೇಕಾಗುತ್ತದೆ. ಇದಕ್ಕಾಗಿ ಪ್ರತಿ ತಿಂಗಳೂ ಹೆಚ್ಚಿನ ಮೊತ್ತದ ವಿದ್ಯುತ್ ಬಿಲ್ ತುಂಬುವುದು ಅನಿವಾರ್ಯ. ಸೌಧದ ಸುತ್ತ ನಿರ್ಮಿಸಿದ ಉದ್ಯಾನ ನಿರ್ವಹಣೆ ಹಾಗೂ ಭದ್ರತಾ ವ್ಯವಸ್ಥೆಗಾಗಿ ನೇಮಿಸಿಕೊಂಡಿರುವ 100 ಕಾರ್ಮಿಕರಿಗಾಗಿ 10.3 ಲಕ್ಷ ವ್ಯಯಿಸಲಾಗುತ್ತಿದೆ. ಸೌಧದ ಒಳಗೂ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು. ಹೀಗೆ ಸಾರ್ವಜನಿಕರಿಗೆ ಯಾವುದೇ ಪ್ರಯೋಜನ ಇಲ್ಲದಿದ್ದರೂ ವಾರ್ಷಿಕವಾಗಿ ಸರ್ಕಾರದ ಸುಮಾರು 3 ಕೋಟಿ ವ್ಯರ್ಥವಾಗುತ್ತಿದೆ.
ಇದೀಗ ನವೆಂಬರ್ 11ರಿಂದ ಹತ್ತು ದಿನಗಳ ಕಾಲ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಳ ಅಧಿವೇಶನ ನಡೆಯುವ ಹಿನ್ನೆಲೆಯಲ್ಲಿ ಸೌಧವನ್ನು ಸಜ್ಜುಗೊಳಿಸಲಾಗುತ್ತಿದೆ. ಕೂಲಿಕಾರ್ಮಿಕರು ಸೌಧದ ಕಟ್ಟಡ ಸೇರಿದಂತೆ ಆವರಣದ ಸ್ವಚ್ಛತಾ ಕಾರ್ಯದಲ್ಲಿ ಮಗ್ನರಾಗಿದ್ದಾರೆ.
ಸುವರ್ಣ ವಿಧಾನಸೌಧದ ಸ್ವಚ್ಛತೆ, ಭದ್ರತಾ ಕಾರ್ಯಕ್ಕಾಗಿ ಸದ್ಯ ನೂರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಪ್ರತಿ ತಿಂಗಳು ವಿದ್ಯುತ್, ನೀರು, ಸ್ವಚ್ಛತೆಗೆಗಾಗಿ 25 ಲಕ್ಷ ವೆಚ್ಚ ತಗುಲುತ್ತದೆ. ಸೌಧದ ಹೊರಭಾಗದ ಗೋಡೆಗಳ ಮೇಲೆ ಪಾಚಿ ಬೆಳೆದಿದೆ. ಬೇಸಿಗೆಯಲ್ಲಿ ಇದನ್ನು ಸ್ವಚ್ಛಗೊಳಿಸಲಾಗುವುದು.
- ವಿ.ಎಸ್. ಹಿರೇಮಠ, ಲೋಕೋಪಯೋಗಿ ಇಲಾಖೆಯ ಸೆಕ್ಷನ್ ಅಧಿಕಾರಿ
- ಶ್ರೀಶೈಲ ಮಠದ