ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಾಂಗ್ರೆಸ್‌ನ ವಂಶವಾಹಿಯಲ್ಲೇ ಭ್ರಷ್ಟಾಚಾರ

ಲೋಕಸಭೆ ಚುನಾವಣೆ 'ರಣಕಹಳೆ' ಜೋರಾಗಿದ್ದು ಕಾಂಗ್ರೆಸ್ ವಿರುದ್ಧ ಬಿಜೆಪಿ..

Srinivasa Murthy VN
Updated On : 9 Apr 2014, 10:26 am
ಬಾಗಲಕೋಟೆ, ಕೊಪ್ಪಳ, ಮೈಸೂರು, ಬೆಂಗಳೂರಿನಲ್ಲಿ ಭಾರತ್ ವಿಜಯ್ ರ್ಯಾಲಿ  ಮೋದಿ ದಾಳಿ
ಬಾಗಲಕೋಟೆ/ಕೊಪ್ಪಳ/ಮೈಸೂರು: ಲೋಕಸಭೆ ಚುನಾವಣೆ 'ರಣಕಹಳೆ' ಜೋರಾಗಿದ್ದು ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ಬಾಗಲಕೋಟೆ, ಕೊಪ್ಪಳ ಹಾಗೂ ಮೈಸೂರಿನಲ್ಲಿ ನಡೆದ 'ಭಾರತ್ ವಿಜಯ್‌' ರ್ಯಾಲಿಯಲ್ಲಿ ಮಾತನಾಡಿ, 10 ವರ್ಷದ ಆಡಳಿತದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ 100 ಉದ್ಯೋಗವನ್ನು ಸೃಷ್ಟಿಸಲಾಗಿಲ್ಲ. ಭ್ರಷ್ಟಾಚಾರ ಕಾಂಗ್ರೆಸ್ ಡಿಎನ್‌ಎನಲ್ಲಿಯೇ ಇದೆ. 60 ವರ್ಷವಾದರೂ ಗಾಂಧಿ ಕನಸು ಸಾಕಾರಗೊಳಿಸಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದ್ದಾರೆ.

Advertisement

Advertisement

  ಯಾರ ಕೈ ಸೇರಿತ್ತು ಹಣ?
ರಾಜೀವ್ ಗಾಂಧಿ ಪ್ರಧಾನಿ ಆಗಿದ್ದ ವೇಳೆ ದೆಹಲಿಯಲ್ಲಿ ಬಿಡುಗಡೆ ಆಗುವ 1ನಲ್ಲಿ ಗ್ರಾಪಂ ಮುಟ್ಟುವ ವೇಳೆಗೆ 15 ಪೈಸೆ ಆಗಿರುತ್ತದೆ ಎಂದಿದ್ದರು. ಅವರ ಆಡಳಿತದಲ್ಲಿ ಗ್ರಾಪಂ, ತಾಪಂ, ಜಿಪಂ, ನಗರಸಭೆ, ನಗರ ಪಾಲಿಕೆ, ರಾಜ್ಯ ಮತ್ತು ಕೇಂದ್ರದಲ್ಲಿಯೂ ಕಾಂಗ್ರೆಸ್ ಆಡಳಿತ ಇತ್ತು. ಅಂದ ಮೇಲೆ 1ನ್ನು ಸವೆಸಿದ ಕೈ ಯಾವುದು?
  ಗಾಂಧಿ ಮಾತು ಧಿಕ್ಕರಿಸಿದರು
ಸ್ವಾತಂತ್ರ್ಯ ನಂತರ ಕಾಂಗ್ರೆಸ್ಸನ್ನು ವಿಸರ್ಜಿಸುವಂತೆ ಗಾಂಧಿ ಹೇಳಿದ್ದರು. ಆದರೆ ಕಾಂಗ್ರೆಸ್‌ನವರು ಗಾಂಧಿ ಮಾತು ಧಿಕ್ಕರಿಸಿದರು. ಸ್ವಾತಂತ್ರ್ಯ ನಂತರ ಕಾಂಗ್ರೆಸ್‌ನಿಂದ ಆಗುವ ಪರಿಣಾಮ ಗಾಂಧೀಜಿಗೆ ತಿಳಿದಿತ್ತು. ಗಾಂಧಿ ಅನಿಸಿಕೆಯಂತೆ ಕಾಂಗ್ರೆಸ್ ವಿಸರ್ಜಿಸಿದ್ದರೆ ಇಂದು ದೇಶ ಇಷ್ಟು ಲೂಟಿ ಆಗುತ್ತಿರಲಿಲ್ಲ.
  ಹಾಲಿನ ರಕ್ಷಣೆಗೆ ಬೆಕ್ಕು
ಕಾಂಗ್ರೆಸ್‌ನ ಯುವರಾಜ ತನ್ನ ಒಂದು ಭಾಷಣದಲ್ಲಿ ದೇಶಕ್ಕೆ ಒಬ್ಬ ಸೈನಿಕ ಅಲ್ಲ. 125 ಕೋಟಿ ಮಂದಿ ಇದ್ದಾರೆ ಎನ್ನುತ್ತಾರೆ. ಆ 125 ಕೋಟಿಯಲ್ಲಿ ಅವರ ಭಾವ (ವಾದ್ರಾ) ಇದ್ದಾರೆ. ಮಹಾರಾಷ್ಟ್ರದ ಆದರ್ಶ ಹೌಸಿಂಗ್ ಹಗರಣದ ರೂವಾರಿ ಅಶೋಕ್ ಚವಾಣ್ ಇದ್ದಾರಾ? ಇವರೆಲ್ಲ ಕಾಂಗ್ರೆಸ್‌ನಲ್ಲಿ ಇದ್ದರೆ ಹಾಲಿನ ರಕ್ಷಣೆಗೆ ಬೆಕ್ಕುಗಳನ್ನು ಕೂರಿಸಿದಂತೆ.
  ಮೈಸೂರಿಗೆ ಪ್ಯಾರಿಸ್ ಮಾದರಿ
ಮೈಸೂರು, ಹಂಪಿ, ಕೊಡಗು ಹೊಂದಿರುವ ಕರ್ನಾಟಕವನ್ನು ಪ್ರವಾಸೋದ್ಯಮ ಕ್ಷೇತ್ರವಾಗಿ ಅಭಿವೃದ್ಧಿಪಡಿಸಲು ಏನು ಕೊರತೆ ಇದೆ? ಮೈಸೂರನ್ನು ಪ್ಯಾರೀಸ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವಂಥ ಯೋಜನೆ ನಮ್ಮ ಬಳಿ ಇವೆ. ನಾನು ಒಮ್ಮೆ ಮೈಸೂರು ದಸರಾದಲ್ಲಿ ಭಾಗವಹಿಸಿದ್ದೇನೆ. ಇಂಥ ಸ್ಥಳವನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಿದರೆ ಇಡ್ಲಿ, ದೋಸೆ, ಕಡ್ಲೆಕಾಯಿ ಮಾರುವವರಿಗೆ ಬಹಳ ಅನುಕೂಲವಾಗಲಿದೆ. 
  ಸೋನಿಯಾರಿಂದ ಬಡವರ ಗೇಲಿ 
ದೇಶದಲ್ಲಿರುವ ಬಡತನವನ್ನು ತೊಲಗಿಸುತ್ತೇವೆ ಎನ್ನುತ್ತಲೇ ಸೋನಿಯಾ ಗಾಂಧಿ ಬಡವರನ್ನು ಗೇಲಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಆಡಳಿತದಿಂದ ದೇಶದ ಜನ, ಸೈನಿಕ, ರೈತ, ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ. ದೇಶಕ್ಕೆ ಅನ್ನ ಹಾಕುವ ರೈತ ಸಾಲಗಾರನಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ದೇಶದಲ್ಲಿ ಗಡಿ ಕಾಯುವ ಸೈನಿಕರು ಸುರಕ್ಷತೆ ಇಲ್ಲದೆ ಸಾಯುತ್ತಿದ್ದಾರೆ.
  300 ಕಮಲ ಅರಳಿಸಿ ಕೊಡಿ
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮುನ್ನೂರು ಕಮಲವನ್ನು (ಅಭ್ಯರ್ಥಿಗಳನ್ನು) ಗೆಲ್ಲಿಸಿ ನನಗೆ ಕೊಡಿ. ಐದು ವರ್ಷ ಈ ದೇಶದ ಸಮರ್ಥ ಕಾವಲುಗಾರನಾಗಿ ಕೆಲಸ ಮಾಡುತ್ತೇನೆ. ದೇಶದ ಬೊಕ್ಕಸ ಸವೆಸಲು ಯಾವ ಕೈಗೂ ನಾನು ಅವಕಾಶ ನೀಡುವುದಿಲ್ಲ. ಹದಗೆಟ್ಟಿರುವ ಆಡಳಿತವನ್ನು ಸುಸ್ಥಿರ ಮಾಡಲು ಸ್ಥಿರ ಸರ್ಕಾರವೇ ಬೇಕು. 
  ಆರ್‌ಟಿಐನಿಂದ ಏನು ಲಾಭ?
ಯುವರಾಜ 'ನಾವು ಆರ್‌ಟಿಐ ತಂದಿದ್ದೇವೆ, ಜನರ ಕೈಗೆ ಹಕ್ಕು ಕೊಟ್ಟಿದ್ದೇವೆ' ಎನ್ನುತ್ತಾರೆ. ಇದರಿಂದ ಜನರ ಬದುಕು ಬದಲಾಗಿದೆಯೇ? ರೈತ ಪರಿವಾರಕ್ಕೆ ಅನುಕೂಲವಾಗಿದೆಯೇ? ಕಾರ್ಮಿಕರಿಗೆ ಒಳಿತಾಗಿದೆಯೇ? 
  ಮೈಸೂರು ಶಾಯಿ ಬೆಲೆ ಗೊತ್ತಿಲ್ಲ
ಇಡೀ ದೇಶದ ಚುನಾವಣೆಗೆ ಅಳಿಸಲಾಗದ ಮೈಸೂರು ಶಾಯಿಯನ್ನು ಬಳಸಲಾಗುತ್ತದೆ. ಸರ್ಕಾರಕ್ಕೆ ಅದರ ಮಹತ್ವ ತಿಳಿದಿಲ್ಲ. ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿ ಚಿತ್ರವನ್ನು ನೋಟಿನ ಮೇಲೆ ಮುದ್ರಿಸಲು ವಿದೇಶದಿಂದ ಶಾಯಿ ತರಿಸುತ್ತಾರೆ.
  ಮನುಷ್ಯರನ್ನೂ ತಿನ್ನುತ್ತಾರೆ
ಮನೆ ಮುಂದೆ ಅಥವಾ ರಸ್ತೆಯಲ್ಲಿ ಹಾಕಿರುವ ಕಲ್ಲಿದ್ದಲನ್ನು ಭಿಕ್ಷುಕನೂ ತೆಗೆದುಕೊಳ್ಳುವುದಿಲ್ಲ, ಕಳ್ಳನೂ ಕದಿಯುವುದಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರದಲ್ಲಿ ಅದನ್ನು ಕದ್ದಿದ್ದಾರೆ. ಇವರು ಕಳ್ಳರಿಗಿಂತಲೂ ಕೀಳು. ಕೊಪ್ಪಳದಲ್ಲಿ ಶೌಚಾಲಯ ಕಳ್ಳತನವಾಗಿದೆ. ಅವರು ಅದನ್ನೂ ಬಿಡುವುದಿಲ್ಲ. ಮುಂದೊಂದು ದಿನ ಜನರನ್ನೇ ತಿಂದರೂ ಅಚ್ಚರಿ ಪಡಬೇಕಾಗಿಲ್ಲ.
  ರೋಗಿ ಸತ್ತ ಮೇಲೆ ರಕ್ತ 
ಕೊಪ್ಪಳ ಬಳಿ ತುಂಗಭದ್ರಾ ನದಿ ಇದೆ. ಆದರೂ ಇಲ್ಲಿಯ ಜನರ ಬವಣೆ ತೀರಿಲ್ಲ. ರೈತರು ಕೃಷಿ ಮಾಡುತ್ತ ಸಾಲಗಾರರಾಗಿದ್ದಾರೆ. ಕಾರಣ ಗುಣಮಟ್ಟದ ಬೀಜ, ಗೊಬ್ಬರವನ್ನು ಸಕಾಲಕ್ಕೆ ಕೊಡುವುದಿಲ್ಲ. ಸರ್ಕಾರದ ನೀತಿ ಹೇಗಿದೆ ಎಂದರೆ, ರೋಗಿ ಸತ್ತ ಮೇಲೆ ರಕ್ತ ನೀಡುತ್ತದೆ. ಸಕಾಲಕ್ಕೆ ಬೀಜ, ಗೊಬ್ಬರ ನೀಡಿದರೆ ರೈತನಿಗೆ ಯಾವ ಸಹಾಯಧನವೂ ಬೇಕಿಲ್ಲ. ಆತನೇ ದಾನ ಮಾಡುವಷ್ಟು ಸಿರಿವಂತನಾಗುತ್ತಾನೆ.
  ಪಿಂಕ್ ಕ್ರಾಂತಿ ಮಾಡುತ್ತಿದ್ದಾರೆ
ಕೊಪ್ಪಳದಲ್ಲಿ ಪಿಂಕ್ (ನಸುಗೆಂಪು) ಖನಿಜ ಸಂಪತ್ತು ಇದೆ. ಪಿಂಕ್ ಗ್ರಾನೈಟ್ ರಫ್ತು ಮಾಡಿದರೆ ಹೇರಳ ಬೇಡಿಕೆ ಇದೆ. ಅದರ ಬದಲು ಇವರು ಪಿಂಕ್ ಕ್ರಾಂತಿ ಮಾಡುತ್ತಿದ್ದಾರೆ. ದನದ ಮಾಂಸ ರಫ್ತುಮಾಡುವುದರಲ್ಲೇ ಅವರಿಗೆ ಸಂತೋಷ.
ನಾಮಪತ್ರ ಹಿಂತೆಗೆದ ಆಪ್ ಅಭ್ಯರ್ಥಿ
ರಾಯ್‌ಬರೇಲಿ ಕ್ಷೇತ್ರದಿಂದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸಬೇಕಿದ್ದ ಆಪ್ ಅಭ್ಯರ್ಥಿ ನಿವೃತ್ತ ನ್ಯಾಯಾಧೀಶ ಫಕ್ರುದ್ದೀನ್ ತಮ್ಮ ನಾಮಪತ್ರ ಹಿಂಪಡೆದಿದ್ದಾರೆ. ದೆಹಲಿ ಜಾಮಾ ಮಸೀದಿ ಮುಖ್ಯಸ್ಥ ಸಯ್ಯದ್ ಅಹಮದ್ ಬುಖಾರಿ, ಮುಸ್ಲಿಮರೆಲ್ಲರೂ ಕಾಂಗ್ರೆಸ್‌ಗೆ ಮತಹಾಕಬೇಕು ಎಂದು ಕರೆ ನೀಡಿದ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಸಾಮಾಜಿಕ ಕಾರ್ಯಕರ್ತೆ ಅರ್ಚನಾ ಶ್ರೀವಾಸ್ತವರನ್ನು ಆಪ್‌ನಿಂದ ಕಣಕ್ಕಿಳಿಸುವ ಸಾಧ್ಯತೆ ಇದೆ.
ಮೋದಿ ವಿರುದ್ಧ ಸ್ಥಳೀಯ ಹುರಿಯಾಳು
ವಾರಾಣಸಿಯಿಂದ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ನಿಂದ ಪ್ರಿಯಾಂಕಾ ವಾದ್ರಾ,  ದಿಗ್ವಿಜಯ ಸಿಂಗ್ ಸ್ಪರ್ಧಿಸುತ್ತಿಲ್ಲ. ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿರುವ ಕಾಂಗ್ರೆಸ್ ವರಿಷ್ಠ ಮಂಡಳಿ ವಾರಾಣಸಿಯಿಂದ ಕಾಂಗ್ರೆಸ್‌ನ ಹಾಲಿ ಶಾಸಕ ಅಜಯ್ ರಾಯ್ ಅವರನ್ನೇ ಕಣಕ್ಕೆ ಇಳಿಸಿದೆ. ಮೇ 12ರಂದು ಮತದಾನ ನಡೆಯಲಿದೆ. 
ದೀದಿಗೆ ಡೆಡ್‌ಲೈನ್
ಪಶ್ಚಿಮ ಬಂಗಾಳದಲ್ಲಿ ತಾರಕಕ್ಕೆ ಏರಿದ್ದ 8 ಅಧಿಕಾರಿಗಳ ವರ್ಗಾವಣೆ ವಿವಾದ ಕೊನೆಗೂ ತಣ್ಣಗಾಗಿದೆ. ಬುಧವಾರ ಬೆಳಗ್ಗೆ 10 ಗಂಟೆ ಒಳಗೆ ವರ್ಗಾಯಿಸಬೇಕು. ಇಲ್ಲದಿದ್ದರೆ ಆ ಕ್ಷೇತ್ರಗಳ ಚುನಾವಣೆ ರದ್ದು ಮಾಡುವುದಾಗಿಯೂ ಆಯೋಗ ಬೆದರಿಕೆ ಹಾಕಿತ್ತು. ಕ್ರುದ್ಧರಾಗಿದ್ದ ಮುಖ್ಯಮಂತ್ರಿ ಮಮತಾ 'ಆಯೋಗದ ಕ್ರಮದಿಂದ ರಾಜ್ಯಕ್ಕೆ ಅವಮಾನವಾಗಿದೆ. ನನಗೂ ಸಂವಿಧಾನದ ಅರಿವು ಇದೆ' ಎಂದಿದ್ದರು. ಕೊನೆಗೂ ವರ್ಗಾವಣೆಗೆ ದೀದಿ ಒಪ್ಪಿದ್ದಾರೆ.
ಇಂದು 2ನೇ ಹಂತ
ನಾಲ್ಕು ಈಶಾನ್ಯ ರಾಜ್ಯಗಳಲ್ಲಿನ ಒಟ್ಟು ಆರು ಲೋಕಸಭಾ ಕ್ಷೇತ್ರಗಳಲ್ಲಿ ಬುಧವಾರ ಮತದಾನ ನಡೆಯಲಿದೆ. ಮಣಿಪುರ, ನಾಗಾಲ್ಯಾಂಡ್‌ನ ತಲಾ 1 ಸ್ಥಾನ, ಅರುಣಾಚಲಪ್ರದೇಶ ಮತ್ತು ಮೇಘಾಲಯದಲ್ಲಿನ ತಲಾ 2 ಸ್ಥಾನಗಳಿಗೆ ಹಕ್ಕು ಚಲಾವಣೆ ನಡೆಯಲಿದೆ. ಅರುಣಾಚಲಪ್ರದೇಶದ ವಿಧಾನಸಭೆಗೂ ಇದೇ ಸಂದರ್ಭದಲ್ಲಿ ಮತದಾನ ನಡೆಯಲಿದೆ.  ಆದರೆ ಮಿಜೋರಾಮ್‌ನಲ್ಲಿರುವ ಏಕೈಕ ಕ್ಷೇತ್ರಕ್ಕೆ ಏ.11ರಂದು ಮತದಾನ ನಡೆಯಲಿದೆ. ಕೆಲ ಸಂಘಟನೆಗಳು ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಆಯೋಗ ಈ ನಿರ್ಧಾರ ಕೈಗೊಂಡಿದೆ. ವೇಳಾಪಟ್ಟಿ ಪ್ರಕಾರ ಏ.9ರಂದು ಹಕ್ಕು ಚಲಾವಣೆ ನಡೆಯಬೇಕಿತ್ತು.
ಅಭ್ಯರ್ಥಿಗಳ ಬಗ್ಗೆ ಗೂಗಲ್ ಸರ್ಚ್
ಚುನಾವಣೆ ಹಿನ್ನೆಲೆಯಲ್ಲಿ ಸರ್ಚ್ ಎಂಜಿನ್ ಗೂಗಲ್ ಸೋಮವಾರ ಆಯಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಗ್ಗೆ ತಿಳಿದುಕೊಳ್ಳುವ ವಿಶೇಷ ವ್ಯವಸ್ಥೆ ಆರಂಭಿಸಿದೆ. 'ನೋ ಯುವರ್ ಕ್ಯಾಂಡಿಡೇಟ್‌' ಎಂಬ ಶೀರ್ಷಿಕೆ ಅಡಿಯಲ್ಲಿ ದೇಶದ 543 ಕ್ಷೇತ್ರಗಳ ಅಭ್ಯರ್ಥಿಗಳ ವಿವರವೂ ಗೊತ್ತಾಗಲಿದೆ. ಎಸೋಸಿಯೇಶನ್ ಫಾರ್ ಡೆಮಾಕ್ರಾಟಿಕ್ ರಿಫಾರ್ಮ್ಸ್ ಸೇರಿದಂತೆ ಪ್ರಮುಖ ಸಂಸ್ಥೆಗಳ ಜತೆ ಸೇರಿ 5 ತಿಂಗಳಿನಿಂದ ಈ ಮಾಹಿತಿ ಸಿದ್ಧಪಡಿಸಲಾಗಿದೆ ಎಂದು ಗೂಗಲ್ ಇಂಡಿಯಾದ ಉಪಾಧ್ಯಕ್ಷ ರಾಜನ್ ಆನಂದನ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement