ಮತ ಹಕ್ಕಿಗಾಗಿ ವೃದ್ಧ ದಂಪತಿ ದಶಕದ ನಿರಂತರ ಹೋರಾಟ
ಅವರು ವೃದ್ಧ ದಂಪತಿ. ಮತ ಹಕ್ಕಿಗಾಗಿ ಇವರು ನಡೆಸುತ್ತಿರುವ ಹೋರಾಟ ದಶಕ ದಾಟಿದೆ! ವಿಪರ್ಯಾಸ ಎಂದರೆ ಇವರಿಗೆ ಇನ್ನೂ ಗುರುತಿನ ಚೀಟಿ ಲಭ್ಯವಾಗಿಲ್ಲ. ಆದ್ರೆ ಇವರ ಹೋರಾಟ ಮಾತ್ರ ನಿಂತಿಲ್ಲ.
ಉಡುಪಿ: ಅವರು ವೃದ್ಧ ದಂಪತಿ. ಮತ ಹಕ್ಕಿಗಾಗಿ ಇವರು ನಡೆಸುತ್ತಿರುವ ಹೋರಾಟ ದಶಕ ದಾಟಿದೆ!
ವಿಪರ್ಯಾಸ ಎಂದರೆ ಇವರಿಗೆ ಇನ್ನೂ ಗುರುತಿನ ಚೀಟಿ ಲಭ್ಯವಾಗಿಲ್ಲ. ಆದ್ರೆ ಇವರ ಹೋರಾಟ ಮಾತ್ರ ನಿಂತಿಲ್ಲ.
ಅವರೇ ಉಡುಪಿ ತಾಲೂಕು ಹೆರ್ಗ ಗ್ರಾಮದ ಗೋಪಾಲ ಅಪ್ಪು ಕೋಟೆಯಾರ್ (67)- ಸುನಂದಾ ಗೋಪಾಲ ಕೋಟೆಯಾರ್ (62) ದಂಪತಿ. ಅಧಿಕಾರಿಗಳ ಈ ಬೇಜವಾಬ್ದಾರಿ ಬೇಸತ್ತ ದಂಪತಿ ಈಗ ಅಂತಿಮ ಅಸ್ತ್ರ ಪ್ರಯೋಗಿಸುತ್ತಿದ್ದು, ಏ.10ರಿಂದ ಚುನಾವಣಾಧಿಕಾರಿ ಕಚೇರಿ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹದ ಎಚ್ಚರಿಕೆ ನೀಡಿದ್ದಾರೆ.
ಪ್ರಕರಣ ಹಿನ್ನೆಲೆ: ಉದ್ಯೋಗ ನಿಮಿತ್ತ ಅನೇಕ ವರ್ಷ ಮುಂಬೈಯಲ್ಲಿದ್ದ ಈ ದಂಪತಿ ಅಲ್ಲಿ ಮತದಾನದ ಹಕ್ಕು ಪಡೆದುಕೊಂಡು ಎಲ್ಲ ಚುನಾವಣೆಗಳಲ್ಲಿ ತಪ್ಪದೆ ಮತದಾನ ಮಾಡಿದ್ದರು. 2003ರಲ್ಲಿ ಸ್ವಗ್ರಾಮ ಹೆರ್ಗಕ್ಕೆ ಆಗಮಿಸಿದರು. ಕಳೆದ 10 ವರ್ಷಗಳಲ್ಲಿ ನಡೆದ ಚುನಾವಣೆಗಳ ಸಂದರ್ಭದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಹೋದಾಗ ನಾನಾ ಕಾರಣ ನೀಡಿ ಹೆಸರು ಸೇರಿಸಲು ಅಧಿಕಾರಿಗಳು ಒಪ್ಪಿರಲಿಲ್ಲ.
ಈ ಬಾರಿ ಫೆ. 6ರಂದು ಖುದ್ದು ತಹಸೀಲ್ದಾರ್ ಕಚೇರಿಗೆ ಹೋಗಿ ಎಲ್ಲ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರು. ಮತ್ತೆ ಅದೇ ಹಾಡು. ಏ. 5ರಂದು ತಹಸೀಲ್ದಾರ್ ಕಚೇರಿಯಲ್ಲಿ ವಿಚಾರಿಸಿದಾಗ, ಹೆರ್ಗ ಗ್ರಾ.ಪಂ.ನಲ್ಲಿ ವಿಚಾರಿಸುವಂತೆ ತಿಳಿಸಿದ್ದಾರೆ. ಅಲ್ಲಿ ಕೇಳಿದರೆ ಅರ್ಜಿ ಪಡೆದ ಅಧಿಕಾರಿಯನ್ನು ವಿಚಾರಿಸುವಂತೆ ತಿಳಿಸಿದ್ದಾರೆ. ಮತ್ತೆ ಸುತ್ತಿಬಳಸಿ ತಹಸೀಲ್ದಾರ್ ಕಚೇರಿಗೆ ವಿಷಯ ಹೋಗಿದೆ. ಜಿಲ್ಲಾಧಿಕಾರಿ ಮತ್ತೆ ಭರವಸೆ ನೀಡಿದ್ದರು. ಆದರೆ ಗುರುತಿನ ಚೀಟಿ ಬಂದಿಲ್ಲ. 'ಕೊನೆಯ ಕ್ಷಣದ ಒತ್ತಡದಿಂದಾಗಿ ಕಣ್ತಪ್ಪಿನಿಂದ ನಿಮ್ಮ ಅರ್ಜಿ ದಾಖಲಾಗಿಲ್ಲ' ಎಂದು ಒಕ್ಕಣೆಇರುವ ಪತ್ರ ತಹಸೀಲ್ದಾರ್ ಕಚೇರಿಯ ಪತ್ರ ಬಂದಿದೆ.