ಹೊರೆ ಇಳಿಸಿ ಕೈ ಹಿಡಿದ ಬೆಳಗಾವಿಯ ಅಭ್ಯರ್ಥಿ
ಬೆಳಗಾವಿ ಜೆಡಿಎಸ್ ಅಭ್ಯರ್ಥಿ ನಾಸೀರ ಬಾಗವಾನ್ ಚುನಾವಣೆಗೆ ಕೇವಲ 9 ದಿನ ಇರುವಾಗ 'ಹೊರೆ'
ಬೆಳಗಾವಿ: ಜೆಡಿಎಸ್ಗೆ ಮತ್ತೊಂದು ಮರ್ಮಾಘಾತ. ಬೆಳಗಾವಿ ಲೋಕಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಸೀರ ಬಾಗವಾನ್ ಚುನಾವಣೆಗೆ ಕೇವಲ 9 ದಿನ ಬಾಕಿ ಇರುವಾಗ 'ಹೊರೆ' ಕಿತ್ತೆಸೆದು 'ಕೈ' ಹಿಡಿದಿದ್ದಾರೆ.
ಕಿತ್ತೂರಿನಲ್ಲಿ ಮಂಗಳವಾರ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಹಿರಂಗ ಪ್ರಚಾರ ಸಭೆಯ ಕೊನೆಯಲ್ಲಿ ಈ ಕ್ಲೈಮ್ಯಾಕ್ಸ್ ನಡೆಯಿತು. ಸಭೆ ಇನ್ನೇನು ಮುಕ್ತಾಯವಾಗಬೇಕು ಎನ್ನುವ ಹೊತ್ತಿಗೆ ಜೆಡಿಎಸ್ ಶಾಲು ಹೊದ್ದೇ ವೇದಿಕೆಗೆ ಆಗಮಿಸಿದ ನಾಸೀರ ಬಾಗವಾನ್ ಹಾಗೂ ಇನ್ನೋರ್ವ ಜೆಡಿಎಸ್ ಮುಖಂಡ, ಚಿತ್ರ ನಿರ್ಮಾಪಕ, ಕಳೆದ ಬಾರಿ ಕಿತ್ತೂರಿನಿಂದ ಸ್ಪರ್ಧಿಸಿ ಸೋತಿದ್ದ ಆನಂದ ಅಪ್ಪುಗೋಳ ಕಾಂಗ್ರೆಸ್ ಸೇರಿದರು. ಸಿಎಂ ಸಿದ್ದರಾಮಯ್ಯ ಇಬ್ಬರನ್ನೂ ಪಕ್ಷದ ಶಾಲು ಹೊದೆಸಿ, ಧ್ವಜ ನೀಡಿ ಪಕ್ಷಕ್ಕೆ ಬರ ಮಾಡಿಕೊಂಡರು.
ಮೂಲತಃ ಖಾನಾಪುರದವರಾದ ನಾಸೀರ ಬಾಗವಾನ ಅವರ ಪಕ್ಷಾಂತರದ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಅವರ 'ಕೈ'ವಾಡ ಇದೆ ಎನ್ನಲಾಗಿದೆ. ಅವರ ಪುತ್ರ ಪ್ರಶಾಂತ ದೇಶಪಾಂಡೆ ಉತ್ತರ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ. ನಾಸೀರ ಬಾಗವಾನರ ಖಾನಾಪುರ ಈ ಕ್ಷೇತ್ರದ ವ್ಯಾಪ್ತಿಗೆ ಬರಲಿದ್ದು, ಅವರ ಸೇರ್ಪಡೆಯಿಂದ ಅಲ್ಲಿ ಕಾಂಗ್ರೆಸ್ ಇನ್ನಷ್ಟು ಬಲಗೊಳ್ಳಲಿದೆ. ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಶಿವಾನಂದ ನಾಯ್ಕ ನಾಮಪತ್ರ ವಾಪಸ್ ಪಡೆದು ಬಿಜೆಪಿ ಸೇರಿದ್ದರು. ಅಲ್ಲಿಯೂ ದೇಶಪಾಂಡೆ 'ತಂತ್ರ' ಕೆಲಸ ಮಾಡಿದೆ ಎನ್ನುವ ಮಾತು ಕೇಳಿಬಂದಿತ್ತು.