ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮೋದಿ ವಿರುದ್ಧ ಟೀಕೆ: ಸಿದ್ದುಗೆ ಆಯೋಗ ಛೀಮಾರಿ

ನರೇಂದ್ರ ಮೋದಿಗೆ 'ನರಹಂತಕ' ಪದ ಬಳಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Srinivasa Murthy VN
Updated On : 11 Apr 2014, 2:01 am

-ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ:
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ 'ನರಹಂತಕ' ಪದ ಬಳಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಂದ್ರ ಚುನಾವಣಾ ಆಯೋಗ ವಾಗ್ದಂಡನೆ ವಿಧಿಸಿದೆ.
'ಇನ್ನು ಮುಂದೆ ಇಂತಹ ಪದಬಳಕೆ ಮಾಡಬಾರದು. ಇದರಿಂದ ನೀತಿ ಸಂಹಿತೆ ಉಲ್ಲಂಘನೆ ಆಗುತ್ತದೆ' ಎಂದೂ ಎಚ್ಚರಿಕೆ ನೀಡಿದೆ. 'ಮತ್ತೆ ನೀವು ನೀತಿ ಸಂಹಿತೆ ಉಲ್ಲಂಘಿಸಿದರೆ ನಿಯಮಾನುಸಾರ ಕ್ರಮ ಜರುಗಿಸಲಾಗುತ್ತದೆ' ಎಂದು ತಿಳಿಸಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್‌ಗಾಂಧಿ  ರಾಜ್ಯದಲ್ಲಿ ಚುನಾವಣಾ ಪ್ರಚಾರ ಮಾಡುವ ವೇಳೆ, ತಾವೂ ಪ್ರಚಾರ ಭಾಷಣ ಮಾಡಿದ್ದ ಮುಖ್ಯಮಂತ್ರಿ  ಸಿದ್ದರಾಮಯ್ಯ ನರೇಂದ್ರ ಮೋದಿ ವಿರುದ್ಧ ನರಹಂತಕ ಎಂಬ ಪದ ಬಳಸಿದ್ದರು. ಕಳೆದ ತಿಂಗಳ 23ರಂದು ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನಲ್ಲಿ ಪ್ರಚಾರ ಭಾಷಣ ವೇಳೆ ಅವರು ಈ ಹೇಳಿಕೆ ನೀಡಿದ್ದರು.
ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ರಾಜ್ಯ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತ್ತು. ದೂರಿನೊಂದಿಗೆ ವಿಡಿಯೋ ಪ್ರತಿಯನ್ನು ಸಲ್ಲಿಸಲಾಗಿತ್ತು.   ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರೂ ನರೇಂದ್ರ ಮೋದಿ ನರಹಂತಕ ಎಂದು ಹೇಳಿರುವ ಸಿದ್ದರಾಮಯ್ಯ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದರು.
ಈ ನಡುವೆ  ಬಿಜೆಪಿ ದೂರಿಗೆ ಸ್ಪಷ್ಟೀಕರಣ ನೀಡಿರುವ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ತಾವು ನರೇಂದ್ರಮೋದಿ ಸರ್ಕಾರ ನರಹಂತಕ ಸರ್ಕಾರ ಎಂದು ಹೇಳಿದ್ದಾಗಿಯೂ ನರೇಂದ್ರ ಮೋದಿ ಅವರಿಗೆ ನರಹಂತಕ ಎಂದು ಹೇಳಿಲ್ಲ ಎಂದು ತಿಳಿಸಿದ್ದಾರೆ.

ಗುಜರಾತ್ ಸಿಎಂ ನರೇಂದ್ರ ಮೋದಿ ಅವರನ್ನು  ವೈಯಕ್ತಿಕವಾಗಿ ನರಹಂತಕ ಎಂದು ಟೀಕಿಸಿಲ್ಲ. ಮೋದಿ ಸರ್ಕಾರದ ಅವಧಿಯಲ್ಲಿ ಗುಜರಾತ್‌ನಲ್ಲಿ 2000ಕ್ಕೂ ಹೆಚ್ಚು ಜನ ಬಲಿಯಾಗಿದ್ದರಿಂದ ಮೋದಿ ಸರ್ಕಾರವನ್ನು ನರಹಂತಕ ಎಂದಿದ್ದೇನೆ. ಅವರ ಸರ್ಕಾರ ಇದ್ದಾಗ ಘಟನೆ ನಡೆದಿದ್ದರಿಂದ ಜವಾಬ್ದಾರಿ ಅವರದೇ. ಬಿಜೆಪಿ ಅಧ್ಯಕ್ಷರಾಜನಾಥ್‌ಸಿಂಗ್ ಹೇಳಿದಂತೆ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ.
-ಸಿದ್ದರಾಮಯ್ಯ, ಸಿಎಂ

ಮೋದಿ ನರಹಂತಕ. ಗಾಂಧಿ ಕೊಂದ ಆರ್‌ಎಸ್‌ಎಸ್‌ನ ಹಾರ್ಡ್‌ಕೋರ್ ಸದಸ್ಯರಾಗಿರುವ ಅವರು ದೇಶದ ಪ್ರಧಾನಿಯಾಗಲಾರರು. ಆರ್‌ಎಸ್‌ಎಸ್‌ಗೆ ಗೋಡ್ಸೆಯೇ ಆರಾಧ್ಯ ದೈವ. ನನ್ನ ಅಪ್ಪನಾಣೆ ಮೋದಿ ಈ ದೇಶದ ಪ್ರಧಾನಿಯಾಗಲ್ಲ.
-ಸಿದ್ದರಾಮಯ್ಯ
(ಮಾ.23 ಎಚ್.ಡಿ. ಕೋಟೆಯಲ್ಲಿ ನೀಡಿದ್ದ ಹೇಳಿಕೆ)


ಮೋದಿ ಅವರು ಈ ದೇಶದ ದೊಡ್ಡ ಹುದ್ದೆಯನ್ನು ಅಲಂಕರಿಸಲು ಹೊರಟಿದ್ದಾರೆ. ಹೀಗಾಗಿ ಗುಜರಾತ್ ಚುನಾವಣೆ  ಸಂದರ್ಭದಲ್ಲಿ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದ ಅವರು ಈಗ ಸತ್ಯ ಒಪ್ಪಿಕೊಂಡಿರಬೇಕು. ಮೊದಲ ಬಾರಿಗೆ ಮದುವೆಯಾಗಿದೆ ಎಂದು ಹೇಳಿಕೊಂಡಿರುವುದರಿಂದ ಶುಭಾಶಯ ಹೇಳುತ್ತೇನೆ.
-ಆನಂದ್ ಶರ್ಮಾ, ಕೇಂದ್ರ ವಾಣಿಜ್ಯ ಸಚಿವ (ಬೆಂಗಳೂರಿನಲ್ಲಿ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement